-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 29

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 29

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 29

                       ಶೂನ್ಯ ಕೊಟ್ಟ ಮಾನ್ಯ
      ಮಾನವನ ನಾಗರೀಕತೆಯ ವಿಕಾಸದಲ್ಲಿ ಬೆಂಕಿಯ ಆವಿಷ್ಕಾರ, ಚಕ್ರದ ಹುಡುಕಾಟ , ಹೇಗೆ ಬೃಹತ್ ಬದಲಾವಣೆಗಳನ್ನು ಸ್ಥಿತ್ಯಂತರಗಳನ್ನು ಉಂಟುಮಾಡಿದವೋ ಹಾಗೆ ಜ್ಞಾನದ ವಿಷಯದಲ್ಲಿ ಗಣಿತದಲ್ಲಿ ಶೂನ್ಯ ಅಥವಾ 0 ಪರಿಕಲ್ಪನೆ ಹಾಗೂ ಸಂಕೇತವನ್ನು ನಮ್ಮ ದೇಶ ಕೊಟ್ಟಿರುವುದರಿಂದ ಇಡೀ ವಿಶ್ವದಲ್ಲಿ ಖಗೋಳಶಾಸ್ತ್ರ , ಆಧುನಿಕ ಭೌತಶಾಸ್ತ್ರ , ಕಂಪ್ಯೂಟರ್ ಎಲ್ಲಾ ಶಾಖೆಗಳಲ್ಲಿ ಜ್ಞಾನ ಸ್ಫೋಟ ಉಂಟಾಯಿತು. ಭಾರತದ ತತ್ವಜ್ಞಾನದೊಂದಿಗೆ ಬೆಸೆದಿರುವ ಶೂನ್ಯದ ಪರಿಕಲ್ಪನೆಯನ್ನು ಗಣಿತದ ಲೆಕ್ಕಾಚಾರಗಳಿಗೆ ಸಮರ್ಥವಾಗಿ ಬಳಸಿದ ಶ್ರೇಷ್ಠ ಗಣಿತಜ್ಞ ಗುಪ್ತರ ಕಾಲದವ. ಅವನೊಬ್ಬ ಭಟ. ಆರನೆಯ ಶತಮಾನ ಗುಪ್ತರ ಸುವರ್ಣಯುಗ. ಪ್ರತಿಭಾವಂತರಿಗೆ ಪ್ರೋತ್ಸಾಹ ಮಾನ-ಸನ್ಮಾನ ನೀಡುತ್ತಿದ್ದ ರಾಜರ ಯುಗ. ಆ ಕಾಲದಲ್ಲಿ ಪಾಟಲಿಪುತ್ರ ಈ ಗಣಿತಜ್ಞ , ಖಗೋಳಶಾಸ್ತ್ರಜ್ಞರಿಗೆ ಒಂದು ಆಶ್ರಯತಾಣವಾಗಿತ್ತು. ಇತರ ರಾಜ್ಯ ಮತ್ತು ದೇಶಗಳಿಗೆ ಸಂಪರ್ಕ ಕೊಂಡಿಯಾಗಿದ್ದ ಪಾಟಲಿಪುತ್ರದಿಂದ ಭಾರತದ ಜ್ಞಾನ ಸಾಗರದಾಚೆ ಪಸರಿಸುವಂತೆ ಆಯಿತು. ಆ ಕಾಲದಲ್ಲಿ ಕುಸುಮಪುರ ಮತ್ತು ಉಜ್ಜಯಿನಿಯಲ್ಲಿ ಖಗೋಳ ಶಾಸ್ತ್ರ ಅಧ್ಯಯನ ಕೇಂದ್ರಗಳಿದ್ದವು. ದೇಶದ ಪ್ರಪ್ರಥಮ ನಲಂದ ವಿಶ್ವವಿದ್ಯಾನಿಲಯದಲ್ಲಿ ನಮ್ಮ ಮೇಧಾವಿ ಗಣಿತಜ್ಞ ಖಗೋಳಶಾಸ್ತ್ರ ಹಾಗೂ ಗಣಿತಶಾಸ್ತ್ರವನ್ನು ಅಭ್ಯಸಿಸಿದ ಬೋಧಿಸಿದ. ಮುಖ್ಯಸ್ಥನೂ ಆಗಿದ್ದ. ಈತ ಬಿಹಾರದ ಸೂರ್ಯ ದೇವಾಲಯದಲ್ಲಿ ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಿದ್ದ.
           ತನ್ನ ಇಪ್ಪತ್ಮೂರನೆಯ ವಯಸ್ಸಿನಲ್ಲಿ 'ಆರ್ಯಭಟೀಯ' ಮತ್ತು 'ಆರ್ಯ ಸಿದ್ಧಾಂತ 'ಎಂಬ ಮೇರು ಕೃತಿಗಳನ್ನು ರಚಿಸಿರಬೇಕಾದರೆ ಆತ ತನ್ನ ಜೀವನದಲ್ಲಿ ಅದೆಷ್ಟು ಜ್ಞಾನಾರ್ಜನೆ ಪ್ರಯೋಗಗಳನ್ನು ಶ್ರದ್ಧೆಯಿಂದ ತಪಸ್ಸಿನೋಪಾದಿಯಲ್ಲಿ ಮಾಡಿರಬೇಕು. ಆತ ಅತಿ ಶೀಘ್ರ ಗ್ರಾಹಿ ಅತ್ಯಂತ ಬುದ್ಧಿವಂತ, ಕುಶಾಗ್ರಮತಿ. ಈಗಿನಂತೆ ಆಧುನಿಕ ಉಪಕರಣಗಳು 
ಅಲಭ್ಯವಿರುವಾಗಲೂ ತನ್ನ ಆಳವಾದ ಗಣಿತದ ಜ್ಞಾನದಿಂದಾಗಿ ಭೂಮಿಯ ಮೇಲಿದ್ದುಕೊಂಡು ಪರೋಕ್ಷವಾಗಿ ಆಕಾಶಕಾಯಗಳ ಬಗ್ಗೆ ಅಧ್ಯಯನ ಮಾಡಿದ. ವಿವಿಧ ನಿಖರ ಸಿದ್ಧಾಂತಗಳ ತಳಹದಿಯ ಲೆಕ್ಕಾಚಾರಗಳ ಮೂಲಕ ಗ್ರಹಗಳ ಚಲನೆ, ಸೂರ್ಯ, ಭೂಮಿಯ ವ್ಯಾಸ , ಚಲನೆಗೆ ತೆಗೆದುಕೊಳ್ಳುವ ಸಮಯ ಇತ್ಯಾದಿಗಳನ್ನು ಕಂಡು ಹಿಡಿದ. ಅಸಾಧಾರಣವಾದ ಪರಿವೀಕ್ಷಣಾ ಸಾಮರ್ಥ್ಯದಿಂದ ಭೂಮಿ ತನ್ನ ಕಕ್ಷೆಯಲ್ಲಿ ಪರಿಭ್ರಮಣ ಮಾಡುತ್ತಾ ಸೂರ್ಯನ ಸುತ್ತ ತಿರುಗುತ್ತದೆ ಎಂದು ಆ ಕಾಲದಲ್ಲೇ ತಿಳಿಸಿದ. ಬೆಳದಿಂಗಳ ತಂಪೆರೆಯುವ ತಂಗದಿರ, ಚಂದಿರನ ಹಿಮಾಂಶುವಿಗೆ ಕಾರಣ ಆತನ ಪ್ರತಿಫಲಿತ ಬೆಳಕು ಅಂದ. ಸೂರ್ಯನ ಬೆಳಕನ್ನೇ ಚಂದ್ರ ಪ್ರತಿಫಲಿಸುವುದು ಎಂದು ಸೂಕ್ಷ್ಮವಾಗಿ ಗ್ರಹಿಸಿದ್ದ. 
      ಸಾಪೇಕ್ಷ ಚಲನೆಯ ಬಗ್ಗೆ ಐನ್ಸ್ಟೀನ್ ಗಿಂತಲೂ ಮೊದಲು ಹೇಳಿದವ. ಆತನ ವಿಚಕ್ಷಣ ಸಾಮರ್ಥ್ಯದಿಂದ ಹೀಗೆ ಹೇಳುತ್ತಿದ್ದ. ನದಿಯಲ್ಲಿ ದೋಣಿ ಚಲಿಸುವಾಗ ದಡದ ಗಿಡಮರಗಳು ಹಿಮ್ಮುಖವಾಗಿ ಚಲಿಸುವಂತೆ ಭಾಸವಾಗುತ್ತವೆ. ಹಾಗೆಯೇ ಸ್ಥಿರವಾಗಿರುವ ನಕ್ಷತ್ರಗಳು ಭೂಮಿಯ ಚಲನೆಯಿಂದಾಗಿ ಪಶ್ಚಿಮದ ಕಡೆ ಚಲಿಸುವಂತೆ ಗೋಚರಿಸುತ್ತವೆ. ಭೂಮಿಯಿಂದ ಇತರ ಗ್ರಹಗಳ ಸ್ಥಾನದ ಅನುಕ್ರಮತೆಯನ್ನು ಕಂಡುಹಿಡಿದ. ಗ್ರಹಗಳ ವೇಗ ವನ್ನು ಲೆಕ್ಕಾಚಾರ ಮಾಡಿದ. ನಕ್ಷತ್ರ ರಾಶಿಗಳ ಜ್ಞಾನವನ್ನು ಕೊಟ್ಟ.
       ನಮ್ಮ ದಿನಚರಿಯ ನಾಯಕ ದಿನಪ, ದಿವಾಕರ, ಸೂರ್ಯ. ಸಕಲ ಜೀವಿಗಳ ಹುಟ್ಟು-ಸಾವು ಸರ್ವವು ಉದಯಾಸ್ತಗಳ ಮೇಲೆ ನಿಂತಿದೆ. ಸೂರ್ಯ ಸಿದ್ಧಾಂತದ ತಳಹದಿಯಲ್ಲಿ ದಿನ, ತಿಥಿ, ಮಾಸ, ಅಧಿಕ ಮಾಸ, ವರ್ಷಗಳ ಬಗ್ಗೆ ಈತ ಮಾಡಿದ ಕರಾರುವಾಕ್ ಲೆಕ್ಕಾಚಾರವೇ ಪಂಚಾಂಗಗಳಿಗೆ ಆಧಾರವಾಯಿತು. ಸಮಭಾಜಕ ವೃತ್ತದ ಲಂಕ ಎಂಬ ಸ್ಥಾನದಿಂದ ಉದಯಕಾಲದಲ್ಲಿ ಮಾಡುವ ಲೆಕ್ಕಾಚಾರ ಔದ್ಯಂತ ಪದ್ಧತಿ, ಇದರ ಜನಕನೀತ. ಇಂತಹ ಅಪೂರ್ವ ಖಗೋಳ ಜ್ಞಾನ ನೀಡಿದ ಮಹಾಜ್ಞಾನಿ ಹೆಸರನ್ನು ಯುಕ್ತವಾಗಿಯೇ ಭಾರತ ತನ್ನ ಪ್ರಪ್ರಥಮ ಕೃತಕ ಉಪಗ್ರಹಕ್ಕೆ ನೀಡಿ ಗೌರವಿಸಿದೆ.
        ಹಗಲಿರುಳು ಗಣಿತದ ಕ್ರಿಯೆಗಳಲ್ಲೇ ಮುಳುಗಿ ಅಪಾರ ಸಾಧನೆಗೈದ ಗಣಿತಜ್ಞ ಆರ್ಯಭಟೀಯ ಎಂಬ ಗ್ರಂಥದ ಮೂಲಕ ತನ್ನ ಸಾಗರ ಸದೃಶ ಜ್ಞಾನ ಸಂಪತ್ತನ್ನು ಮುಂದಿನ ತಲೆಮಾರುಗಳಿಗೆ ಕೊಟ್ಟು ಹೋಗಿದ್ದಾನೆ. ಈತ ಹಂಚಿದ ಜ್ಞಾನದಿಂದಾಗಿ ಇಂದು ಭಾರತ ವಿಶ್ವದಲ್ಲಿ ಅಗ್ರಗಣ್ಯವೆನಿಸಿದೆ.
         ಈತನ ಆರ್ಯಭಟೀಯ ದಲ್ಲಿ 4 ಅಧ್ಯಾಯಗಳಲ್ಲಿ 108 ಶ್ಲೋಕಗಳು ಸೂತ್ರಪ್ರಾಯವಾಗಿವೆ. ಗೀತಿಕಾ ಪದ, ಗಣಿತ ಪದ, ಕಾಲ ಕ್ರಿಯಾಪದಗಳೆಂಬ ಮನೋಹರವಾದ, ಚಿತ್ತಾಕರ್ಷಕವಾದ ಹೆಸರುಗಳ ಅಧ್ಯಾಯಗಳು ಒಂದಕ್ಕಿಂತ ಒಂದು ಭಿನ್ನವಾದ ಶಿಸ್ತಿಗೆ ಸಂಬಂಧಪಟ್ಟಿವೆ.
    ಶುದ್ಧ ಗಣಿತಶಾಸ್ತ್ರದಲ್ಲಿ ಕ್ಲಿಷ್ಟವಾದ ವರ್ಗಗಳು, ವರ್ಗ ಮೂಲಗಳು, ಘನ ಮೂಲಗಳ ಬಗ್ಗೆ ವಿವರಿಸಿದ್ದಾನೆ . ಜ್ಯಾಮಿತಿಯ ಆಕಾರಗಳು, ವಿಸ್ತೀರ್ಣ, ಘನಫಲಗಳು, ಕ್ಷೇತ್ರ ಫಲಗಳನ್ನು ವಿಶ್ಲೇಷಿಸಿದ್ದಾನೆ. ವೃತ್ತದ ಸುತ್ತಳತೆ ಹಾಗೂ ವ್ಯಾಸದ ಅನುಪಾತವನ್ನು ಅಂದರೆ ಪೈ ಒಂದು ಸ್ಥಿರಾಂಕ ಎಂದು ಗುರುತಿಸುವುದರೊಂದಿಗೆ ಅದರ ಬೆಲೆಯನ್ನು ನಾಲ್ಕನೇ ದಶಮಾಂಶ ಸ್ಥಾನದವರೆಗೆ ಕಂಡುಹಿಡಿದ ಪ್ರಥಮ ಗಣಿತಜ್ಞ.
         ಬೀಜಗಣಿತದಲ್ಲಿ ಸಮೀಕರಣಗಳನ್ನು ಬಹಳ ಸುಂದರವಾಗಿ ಚಿತ್ರದಂತೆ ವಿವರಿಸಿದ್ದಾನೆ.
ಈತನ ಗಣಿತ ಮತ್ತು ಖಗೋಳ ಶಾಸ್ತ್ರಗಳ ವಿನೂತನ ಆವಿಷ್ಕಾರಗಳು ಆತನ ನಂತರ ಹಲವು ಶತಮಾನಗಳವರೆಗೆ ಪಾಶ್ಚಿಮಾತ್ಯರ ಮೇಲೂ ಪ್ರಭಾವ ಬೀರಿದ್ದಾವೆ. ಅದ್ಭುತ ಅಪ್ರತಿಮ, ಅಪ್ರತಿಮ ಧೀಶಕ್ತಿಯ ಗಣಿತಜ್ಞ ಭಾರತದ ಕೀರ್ತಿ ಆಗಸದಲ್ಲಿ ಒಂದು ಉಜ್ವಲ ತಾರೆ." ಶೂನ್ಯ " ಕೊಟ್ಟು ದೇಶಕ್ಕೆ ಮಾನ್ಯತೆ ತಂದ ಅಸಾಮಾನ್ಯ ಪ್ರತಿಭೆ.
     ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************



Ads on article

Advertise in articles 1

advertising articles 2

Advertise under the article