ಜೀವನ ಸಂಭ್ರಮ : ಸಂಚಿಕೆ - 23
Sunday, February 13, 2022
Edit
ಸಂತಸದ ಜೀವನಕ್ಕಾಗಿ
ಸದಾ ನೆನಪಿಡಬೇಕಾದ ಹಾಗೂ ಮರೆಯಬೇಕಾದ
ಎರಡು ಪದಗಳು
----------------------------------------
ಮಕ್ಕಳೇ, ಈ ಘಟನೆಯನ್ನು ಓದಿ.
ರಮೇಶ, ಬೆಂಗಳೂರಿನ ಒಂದು ಗ್ರಾನೈಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನೌಕರ. ಈತನ ತಂದೆ ನಿವೃತ್ತ ಸರ್ಕಾರಿ ನೌಕರ. ಅಣ್ಣ ವೈದ್ಯ, ತಮ್ಮ ವಿದ್ಯಾವಂತ ನಿರುದ್ಯೋಗಿ, ಮತ್ತು ವಿದ್ಯಾವಂತ ತಂಗಿ. ರಮೇಶ ನ ತಂಗಿಯನ್ನು ಒಬ್ಬ ವೈದ್ಯನಿಗೆ ಮದುವೆ ಮಾಡಿಕೊಡಲಾಗಿತ್ತು. ಆ ವೈದ್ಯನ ತಂಗಿಯನ್ನು ರಮೇಶನಿಗೆ ಮದುವೆ ಮಾಡಿತರಲಾಗಿತ್ತು. ಏಕಕಾಲದಲ್ಲಿ ಅಣ್ಣ-ತಂಗಿ ವಿವಾಹ ನಡೆದಿತ್ತು. ಸ್ವಲ್ಪ ಸಮಯದ ನಂತರ ಸಂಬಂಧಗಳಲ್ಲಿ ಬಿರುಕು ಉಂಟಾಗಿ ರಮೇಶ ನ ತಂಗಿ ರಮೇಶನ ಮನೆಯಲ್ಲೂ, ವೈದ್ಯರ ತಂಗಿ ವೈದ್ಯರ ಮನೆಯಲ್ಲಿ ಉಳಿದುಕೊಂಡರು.
ಆದರೆ ರಮೇಶ ಶ್ರಮಜೀವಿ. ಗ್ರಾನೈಟ್ ಕಲ್ಲಿನ ಗುಣಮಟ್ಟ ಪರೀಕ್ಷಿಸಲು ಊರೂರು ತಿರುಗುತ್ತಿದ್ದ. ಒಳ್ಳೆಯ ಸಂಪಾದನೆ ಮಾಡಿ ಒಂದು ಎರಡು ಕಾರು ಖರೀದಿಸಿದ್ದ. ಒಳ್ಳೆಯ ಜೀವನ ಸಾಗುತ್ತಿತ್ತು. ಅದೇ ಸಮಯಕ್ಕೆ ಪ್ರಾಣೇಶ ನ ಪರಿಚಯವಾಯಿತು. ಪರಿಚಯ ಗೆಳೆತನವಾಯಿತು. ಪ್ರಾಣೇಶ ಸರ್ಕಾರಿ ನೌಕರ. ಪ್ರಾಣೇಶ ನ ಪತ್ನಿಯ ತಮ್ಮ ದಿವಾಕರ ನಿರುದ್ಯೋಗಿ. ರಮೇಶ ತಾನು ಕೆಲಸ ಮಾಡುತ್ತಿದ್ದ ಕಂಪನಿ ಬಿಟ್ಟು ತಾನೇ ಸ್ವತಃ ವ್ಯಾಪಾರ ಶುರು ಮಾಡಿದ್ದ. ಆ ಸಮಯದಲ್ಲಿ ರಮೇಶ ತನ್ನ ತಮ್ಮನನ್ನು ಹಾಗೂ ದಿವಾಕರ ನನ್ನು ತಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಕೆಲಸಕ್ಕೆ ಸೇರಿಸಿದ. ದಿವಾಕರ , ಕಂಪನಿ ವಹಿಸಿಕೊಂಡ ಕೆಲಸದಲ್ಲಿ ಗ್ರಾನೈಟ್ ಅಳವಡಿಸುವ ಮೇಲ್ವಿಚಾರಕ ಕೆಲಸವಾಗಿತ್ತು. ರಮೇಶ ನ ತಮ್ಮನದು ಅಂಗಡಿಯಲ್ಲಿ ಗ್ರಾನೈಟ್ ವ್ಯಾಪಾರ ಮಾಡುವುದು.
ರಮೇಶ ಒಳ್ಳೆಯ ಹಣ ಸಂಪಾದಿಸಿ ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಯಲ್ಲಿ ಮನೆ ಖರೀದಿಸಿ ಇಡೀ ಕುಟುಂಬವನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿಕೊಂಡ. ಮೊದಲಿದ್ದ ಮನೆ ಮಾರಾಟ ಮಾಡಿ ಆ ಹಣವನ್ನು ಹೊಸ ಮನೆಗೆ ಖರೀದಿಗೆ ಬಳಸಿಕೊಳ್ಳಲಾಗಿತ್ತು. ಅದೇ ವೇಳೆಗೆ ರಮೇಶನಿಗೆ ಬೇರೊಂದು ವಿಚ್ಛೇದಿತ ಮಹಿಳೆಯ ಜೊತೆ ವಿವಾಹವಾಯಿತು. ಸ್ವಲ್ಪ ದಿನ ಚೆನ್ನಾಗಿ ಜೀವನ ಸಾಗಿತ್ತು. ಕ್ರಮೇಣ ಅತ್ತೆ-ಸೊಸೆ ಜಗಳ ತಾರಕಕ್ಕೇರಿ ರಮೇಶ ತನ್ನ ಪತ್ನಿಯೊಡನೆ ಮನೆ ತೊರೆದ.
ಪ್ರಾಣೇಶ ಹೊಸ ಮನೆ ಕಟ್ಟಲು ಪ್ರಾರಂಭಿಸಿದ. ರಮೇಶ ಗ್ರಾನೈಟ್ ಕಲ್ಲನ್ನು ರಿಯಾಯಿತಿ ದರದಲ್ಲಿ ಪ್ರಾಣೇಶ ನಿಗೆ ಒದಗಿಸಿದ್ದ. ದಿವಾಕರ ತನ್ನ ಕೆಲಸದ ಆಳುಗಳ ನೆರವಿನಿಂದ ರಿಯಾಯಿತಿ ದರದಲ್ಲಿ ಹೊಸಮನೆಗೆ ಗ್ರಾನೈಟ್ ಅಳವಡಿಸಿದ. ಹೀಗೆ ಜೀವನ ನಡೆಯುತ್ತಿರ ಬೇಕಾದರೆ ಈ ನಡುವೆ ದಿವಾಕರ ಕೆಲಸದಲ್ಲಿ ಪ್ರಗತಿ ಹೊಂದುತ್ತಿದ್ದ. ಇದನ್ನು ಕಂಡು ರಮೇಶನಿಗೆ ಸಹಿಸಲಾಗಲಿಲ್ಲ. ಕೂಡಲೇ ಕಂಪನಿ ಮಾಲೀಕರಿಗೆ ದೂರು ನೀಡಿ ಕೆಲಸದಿಂದ ತೆಗೆಸಿದ. ಆಗ ದಿವಾಕರ ಬಂದು ಪ್ರಾಣೇಶ ನ ಬಳಿ ವಿಚಾರ ತಿಳಿಸಿದ. ಆಗ ಪ್ರಾಣೇಶ , ದಿವಾಕರ್ ಗೆ ಹೇಳಿದ್ದು ಆತ ನಿನ್ನನ್ನು ಕೆಲಸಕ್ಕೆ ಸೇರಿಸಿದ್ದಾನೆ. ಇದರಿಂದ ಕೆಲಸದ ಅನುಭವ ನಿನಗೆ ಆಗಿದೆ. ಆ ಅನುಭವದಿಂದ ನೀನು ಪ್ರತ್ಯೇಕವಾಗಿ ವ್ಯವಹಾರ ಮಾಡಬಹುದು. ರಮೇಶ ನ ಬಗ್ಗೆ ಎಂದೂ ಬೇಜಾರು ಮಾಡಿಕೊಳ್ಳಬೇಡ. ಆತನಿಗೆ ಕೆಟ್ಟದು ಬಯಸಬೇಡ. ಈಗ ನಿನ್ನ ಜ್ಞಾನದಿಂದ ಮುಂದುವರಿ ಎಂಬುದಾಗಿ ಸಲಹೆ ನೀಡಲು, ದಿವಾಕರ , ರಮೇಶನ ಸಂಪರ್ಕ ಬಿಟ್ಟು ಪ್ರತ್ಯೇಕ ವ್ಯವಹಾರ ಪ್ರಾರಂಭಿಸಿದ.
ರಮೇಶ ಈ ನಡುವೆ ಬೇರೆ ಬೇರೆ ದೇಶಗಳಿಗೆ ಗ್ರಾನೈಟ್ ಕಲ್ಲು ಕಳುಹಿಸುತ್ತಿದ್ದ. ತನ್ನ ದುರಹಂಕಾರದಿಂದ , ಹಣದ ದುರಾಸೆಯಿಂದ ಕೈಚಳಕ ತೋರಿಸಲು ಮುಂದಾದ. ಈ ವಿಷಯ ಖರೀದಿದಾರರಿಗೆ ತಿಳಿದು ರಮೇಶ ನಿಂದ ಕಲ್ಲನ್ನು ಖರೀದಿಸಲು ತಿರಸ್ಕರಿಸಿದರು. ಇದರಿಂದ ರಮೇಶನ ವ್ಯವಹಾರ ಕುಂಠಿತವಾಯಿತು. ಜೀವನ ಕಷ್ಟಕರವಾಯಿತು. ರಮೇಶನಿಗೆ ತಂದೆ-ತಾಯಿ ಜೊತೆಗಿಲ್ಲ , ಇತ್ತಕಡೆ ಆದಾಯವೂ ಇಲ್ಲ. ಹಾಗಾಗಿ ಜೀವನ ರೋಸಿ ಹೋಯಿತು. ರಮೇಶ ಕಂಡಕಂಡವರಲ್ಲಿ , "ನಾನು ಎಲ್ಲರಿಗೂ ಸಹಾಯ ಮಾಡಿದೆ , ಈಗ ಯಾರೂ ಇಲ್ಲ" ಎಂದು ಹೇಳಲು ಶುರುಮಾಡಿದ. ತನ್ನಲ್ಲಿದ್ದ ವಾಹನಗಳನ್ನು ಮಾರಿ , ಸಾಲ ಮಾಡಿ ಜೀವನ ಸಾಗಿಸ ಬೇಕಾಯಿತು. ತಾನು ಪಡೆದ ಸಹಾಯಕ್ಕಿಂತ ತಾನು ಮಾಡಿದ ಸಹಾಯವೇ ದೊಡ್ಡದೆಂದು ಭಾವಿಸಿದ. ಸಹಾಯ ಪಡೆದವರು ಸಾಕಷ್ಟು ನೀಡಿದರೂ ಅರಿವೇ ಇಲ್ಲದ ಹಾಗೆ ವರ್ತಿಸಿದ. ತನ್ನ ಸಹಾಯವೇ ದೊಡ್ಡದೆಂದು ಪದೇಪದೆ ಹೇಳಿಕೊಂಡು ಕೊರಗಿದುದರಿಂದ ಜೀವನ ಸಂಕಟಮಯವಾಯಿತು.
ಪ್ಲೇಟೋ ಹೇಳಿದ್ದು "ನಾವು ಜೀವನದಲ್ಲಿ ಸಂತೋಷದಿಂದ ಇರಬೇಕಾದರೆ ಎರಡು ವಿಷಯ ಮರೆಯಬೇಕು".
1. ನಾವು ಬೇರೆಯವರಿಗೆ ಮತ್ತು ಸಮಾಜಕ್ಕೆ ಮಾಡಿದ ಒಳ್ಳೆಯ ಸಹಾಯವನ್ನು ಮರೆಯಬೇಕು.
2. ಬೇರೆಯವರು ನಮಗೆ ಮಾಡಿದ ಕೆಡುಕನ್ನು ಮರೆಯಬೇಕು.
ಎರಡು ವಿಷಯವನ್ನು ಸದಾ ನೆನಪಿಡಬೇಕು.
------------------------------------------
1. ನಾನು ದೊಡ್ಡವನಲ್ಲ ಎನ್ನುವುದನ್ನು ಸದಾ ನೆನಪಿನಲ್ಲಿಡಬೇಕು.
2. ನನ್ನೊಂದಿಗೆ ಯಾವುದೇ ವ್ಯಕ್ತಿ ಮತ್ತು ವಸ್ತು ಸದಾ ಇರುವುದಿಲ್ಲ ಎನ್ನುವ ಸತ್ಯವನ್ನು ಸದಾ ನೆನಪಿನಲ್ಲಿಡಬೇಕು.
ಈ ಮೇಲ್ಕಂಡ ಹೇಳಿಕೆಯನ್ನು ಪಾಲಿಸಿದರೆ ಜೀವನ ಸಂತೋಷವಾಗುತ್ತದೆ. ಮಕ್ಕಳೇ ಮೇಲಿನ ಘಟನೆಯನ್ನು ಪರಿಶೀಲಿಸಿದಾಗ
1. ರಮೇಶ ಬೇರೆಯವರಿಗೆ ಮಾಡಿದ ಸಹಾಯವನ್ನು ಮರೆಯಲಿಲ್ಲ .
2. ತಾನು ದೊಡ್ಡವನು ಎನ್ನುವುದು ಸದಾ ಕಾಡುತ್ತಿತ್ತು .
3. ತಂದೆ , ತಾಯಿ , ಸಹೋದರ , ಸಹೋದರಿ ಯರನ್ನು ಬಿಟ್ಟು ದೂರವಾದದ್ದು.
4. ದಿವಾಕರ, ರಮೇಶ ಮಾಡಿದ ಕೆಡುಕನ್ನು ಮರೆತು ಜೀವನವನ್ನು ಸಂತೋಷವಾಗಿ ಮಾಡಿಕೊಂಡಿದ್ದನು.
(ಪ್ಲೇಟೋ ಹೇಳಿಕೆಯನ್ನು ಶ್ರೀಶ್ರೀಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರ ಭಾಷಣದಿಂದ ಎರವಲು ಪಡೆದಿದೆ)
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
*******************************************