-->
ಅಕ್ಕನ ಪತ್ರ : ಸಂಚಿಕೆ -17

ಅಕ್ಕನ ಪತ್ರ : ಸಂಚಿಕೆ -17

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 17

         ನಮಸ್ತೆ ಮಕ್ಕಳೇ....... ಎಲ್ಲರೂ ಚೆನ್ನಾಗಿದ್ದೀರಿ ಅಲ್ವಾ....? ಹಸಿರಿನೊಂದಿಗೆ ಒಡನಾಡಬೇಕೆನ್ನುವ ಕಾಳಜಿಗೆ ನೀವು ನೀಡಿದ ಪ್ರತಿಕ್ರಿಯೆ ಅದ್ಭುತವಾದದ್ದು. ನಮ್ಮ ನಾಳೆಗಳ ಚಿಂತೆಯನ್ನು ನಾವೇ ಮಾಡಿಕೊಳ್ಬೇಕು ಅಲ್ವಾ...? ಈ ನಡುವೆ ಯಾರಾದರೂ ಹುಟ್ಟುಹಬ್ಬದಂದು ಗಿಡ ನೆಟ್ಟು ಸಂಭ್ರಮಿಸಿದ್ದರೆ ಆ ನೆನಪಿನ ಚಿತ್ರಗಳನ್ನೂ ನಮ್ಮೊಂದಿಗೆ ಹಂಚಿಕೊಳ್ಳಿ.
       ನಮ್ಮ ಬೆಳವಣಿಗೆಯ ಎಲ್ಲ ಹೆಜ್ಜೆಗಳನ್ನೂ ಆನಂದಿಸುವವರು ನಮ್ಮ ಸುತ್ತ ನಮಗರಿವಿಲ್ಲದಂತೆ ಬೆಳೆಸಿದ ಹಿರಿಯರು , ಅಮ್ಮನ ಅಕ್ಕರೆ , ಅಪ್ಪನ ಕಾಳಜಿಯ ಜೊತೆ , ಅಕ್ಕ , ಅಣ್ಣ , ಅಜ್ಜ , ಅಜ್ಜಿ , ಅತ್ತೆ , ಮಾವ, ಚಿಕ್ಕಪ್ಪ , ಚಿಕ್ಕಮ್ಮ , ದೊಡ್ಡಪ್ಪ , ದೊಡ್ಡಮ್ಮ......... ಅಬ್ಬಾ!  ಸಂಬಂಧಗಳು ಇಷ್ಟಕ್ಕೇ ಸೀಮಿತ ಗೊಳ್ಳುವುದಿಲ್ಲ. ಅತ್ತಾಗ ಸಮಾಧಾನಿಸುವ, ಗೆದ್ದಾಗ ಖುಷಿಪಡುವ, ಸೋತಾಗ ಧೈರ್ಯ ತುಂಬುವ , ತಪ್ಪಿದಾಗ ತಿಳಿಹೇಳುವ... ಈ ಎಲ್ಲರೂ ನಮ್ಮ ಹಿತೈಷಿಗಳು ಅಲ್ವಾ......?
         ಆದರೆ ಈಗ ಮನೆಗಳು ದೊಡ್ಡದಾಗಿವೆ. ಅದರೊಳಗೆ ಇರುವವರ ಸಂಖ್ಯೆ ಕಡಿಮೆಯಾಗಿದೆ. ಒಮ್ಮೊಮ್ಮೆ ಅನ್ನಿಸುವುದ್ದಿದೆ... ನಮ್ಮೊಂದಿಗೆ ಅಜ್ಜಿಯೋ ಅಜ್ಜನೋ ಇರಬೇಕಿತ್ತು ಅಂತಾ... ಅಪ್ಪ ಅಮ್ಮ ಗದರಿದಾಗಲೆಲ್ಲಾ ಅಜ್ಜಿಯ ಮಡಿಲು, ಅಜ್ಜನ ಸಮಾಧಾನದ ಮಾತುಗಳು... ಪ್ರತಿ ತುತ್ತಿನಲ್ಲಿಯೂ ಅಕ್ಕರೆಯನ್ನು ಬೆರೆಸಿ ಬಾಯಿಗಿತ್ತಾಗ ಅವರ ಕಣ್ಣು... ಮನಸ್ಸಿನ ತುಂಬಾ ನಾವೇ ಇರುತ್ತಿದ್ದೆವು.. ನಮಗಾಗಿಯೇ ನೋವು ಮರೆತು ಕಥೆ ಹೇಳ್ತಿರ್ತಾರೆ... ಆಟ ಆಡುತ್ತಾ ಮಕ್ಕಳೊಂದಿಗೆ ಸಂಭ್ರಮಿಸುವ ಆ ಹಿರಿಯ ಜೀವಗಳಿಗೆ ಅದೆಷ್ಟು ನಿರಾಳತೆ ಸಿಕ್ಕಿರಬಹುದು.. ನಮ್ಮಿಂದಾಗಿ...! 
        ನೆನಪಾದಾಗಲೆಲ್ಲಾ ಅವರನ್ನು ನೋಡಿ ಬರೋದಿರಲಿ... ಕೈಯಲ್ಲಿ ಫೋನ್ ಇದ್ದರೂ ಮಾತನಾಡಿಸುವಷ್ಟು ಮನಸ್ಸನ್ನು ತೆರೆದುಕೊಂಡಿಲ್ಲ.. ಬಹಳಷ್ಟು ಸಲ ನನ್ನ ಬಗ್ಗೆನೇ ಬೇಸರವಾದದ್ದಿದೆ. ವಾರದ ಹಿಂದೆ, ವರ್ಷಗಳ ನಂತರ ನನ್ನ ಚಿಕ್ಕಮ್ಮನಲ್ಲಿ ಮಾತನಾಡಿದೆ. ಖುಷಿಪಟ್ರು.. ನನಗೆ ದೊಡ್ಡ ಸಮಾಧಾನವಾಯಿತು... ಸಣ್ಣದಿರುವಾಗ ಎತ್ತಿ ಆಡಿಸಿದ, ಪ್ರೀತಿಯ ತುತ್ತನಿತ್ತ ಇನ್ನೊಂದು ಅಮ್ಮನನ್ನು ಈಗಲಾದರೂ ಮಾತನಾಡಿಸಿದೆನಲ್ಲಾ...! ಹೀಗೆಯೇ ನನ್ನ ಪಟ್ಟಿಯಲ್ಲಿ ಇನ್ನೂ ಕೆಲವರಿದ್ದಾರೆ... ಎಲ್ಲರನ್ನೂ ಮಾತನಾಡಿಸಬೇಕು.. ಅವರ ಆ ದಿನದ ಸಂತಸಕ್ಕೆ ನಾನು ಕಾರಣವಾಗಬೇಕು. ನನ್ನ ಒಂದು ಕರೆ ಹಲವಾರು ನೆನಪುಗಳನ್ನು ಬಿಚ್ಚಿಟ್ಟು ಮನಸ್ಸನ್ನು ನಿರಾಳವಾಗಿಸಬೇಕು... ಅವರೂ, ಹೇಳಿ ಹಗುರವಾಗಬಹುದಾದ, ಹಂಚಿಕೊಂಡು ಸಂಭ್ರಮಿಸಬಹುದಾದ ಸಂದರ್ಭಗಳಿಗೆ ಕಾಯುತ್ತಿರಬಹುದು. ಕಟ್ಟಿಕೊಂಡ ಪ್ರೀತಿಯನ್ನು, ಗೌರವವನ್ನು , ಆಪ್ತತೆಯನ್ನು ಒಂದು ಫೋನ್ ಕರೆ ಅನಾವರಣಗೊಳಿಸಬಹುದು.. ಹೇಗಿದ್ದೀರಿ...?ಎನ್ನುವ ಆಂತರ್ಯದ ಕಾಳಜಿ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಬಹುದು.
      ಏನನ್ನಿಸ್ತಿದೆ ನಿಮ್ಗೆ.....?ನೀವು ಯಾರಿಗೆಲ್ಲಾ ಕರೆ ಮಾಡ್ತೀರಿ.....? ಗುರುತು ಸಿಗದಷ್ಟು ಬಾಹ್ಯ ಬದಲಾವಣೆಗಳು, ನಮ್ಮ ಮಾತನಾಡುವ ರೀತಿ, ಎತ್ತರ, ತೂಕ ಎಲ್ಲವನ್ನೂ ಕುತೂಹಲದಿಂದ ಎದುರು ನೋಡುತ್ತಿರುವ ನಮ್ಮ ಸಂಬಂಧಿಕರಿಗೆ ಈ ಪತ್ರದ ಕಾರಣದಿಂದಲಾದರೂ ಒಂದಷ್ಟು ಕರೆಗಳು ಹೋಗಲಿ.. ಇದುವರೆಗೆ ಮರೆತದ್ದಕ್ಕೆ ಒಂದು ಸಣ್ಣ ಗದರಿಕೆಯೂ ಅವರ ಪ್ರೀತಿಯ ದ್ಯೋತಕವೇ... ಕರೆ ಮಾಡಿ... ನಿಮ್ಮ ಆಪ್ತರಿಗೆ. ಅವರು ನಿಮ್ಮ ಧ್ವನಿಯನ್ನು ಖಂಡಿತವಾಗಿಯೂ ಸಂಭ್ರಮಿಸುತ್ತಾರೆ..! ನಿಮ್ಮ ಪ್ರೀತಿಯ ಜೋಳಿಗೆಯಲ್ಲಿ ಅವರೆಲ್ಲರ ಹಾರೈಕೆ, ಕಾಳಜಿಯೂ ತುಂಬಿಕೊಳ್ಳಲಿ...!
        ಸಂಬಂಧಗಳು ಮರೆತು ಹೋಗುವ ಮುನ್ನ... ದೂರ ಸರಿಯದಂತೆ ಕಾಪಾಡಿಕೊಳ್ಳುವಲ್ಲಿ ಜಾಗೃತರಾಗೋಣ. ನಮ್ಮ ದೇಶದ ಸಂಸ್ಕೃತಿಯ ಸೊಬಗು ಈ ಬಾಂಧವ್ಯಗಳಲ್ಲಿದೆ. ಕಳೆದುಕೊಳ್ಳಬಾರದು... ಯಾವುದಾದರೊಂದು ಕಾರಣಕ್ಕೆ ಯಾರದ್ದಾದರೂ ಆಸರೆ... ಬದುಕಿಸಿದ ಉದಾಹರಣೆಗಳು, ಜೀವನದಲ್ಲಿ ಮತ್ತೆ ಚೈತನ್ಯ ತುಂಬಿ ಮರುಹುಟ್ಟು ಪಡೆದವರಿದ್ದಾರೆ... ಎಲ್ಲಕ್ಕಿಂತಲೂ ಮಿಗಿಲಾಗಿ ಕೃತಜ್ಞತಾ ಭಾವದಿಂದ ನಮ್ಮವರನ್ನು ನೆನಪಿಸಿಕೊಳ್ಳೋಣ.. ಪ್ರೀತಿಯನ್ನು ಹಂಚೋಣ.... 
          ಗೆಳೆಯ - ಗೆಳತಿಯರೊಂದಿಗೆ, ಶಿಕ್ಷಕರೊಂದಿಗೆ.. ಮತ್ತೆ...... ಜಗಲಿಯಲ್ಲಿ ಕುಳಿತು ನಿಮಗಾಗಿ ಕಾಯುತ್ತಿರುವ ನಮ್ಮೊಂದಿಗೆ... ಅನುಭವಗಳನ್ನು ಹಂಚಿಕೊಳ್ಳಿ..
     ನನಗಂತೂ ತುಂಬಾ ಕುತೂಹಲ.. ನಿಮ್ಮ ಪತ್ರವನ್ನು ಓದಲು. ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
****************************************





Ads on article

Advertise in articles 1

advertising articles 2

Advertise under the article