-->
ಅಣಬೆ ಅಣಬೆ ಅಣಬೆ....

ಅಣಬೆ ಅಣಬೆ ಅಣಬೆ....

             ಈ ಅಣಬೆಗಳು ಶಿಲೀಂದ್ರ ಮಾದರಿಯಲ್ಲಿ ಬೆಳೆಯುತ್ತವೆ. ಆದರೆ ಇವು ನಿಯಮಿತವಾಗಿ ವಾರ್ಷಿಕವಾಗಿ ಒಂದು ಸ್ಥಳದಲ್ಲಿ ಒಮ್ಮೆ ಮಾತ್ರ ಎದ್ದೇಳುತ್ತವೆ. ಅಣಬೆಗಳಿಗೂ ಮತ್ತು ಮಳೆಯ ನಕ್ಷತ್ರಗಳಿಗೆ ಅವಿನಾಭಾವ ಸಂಬಂಧವಿದೆ.


                     ಅಣಬೆ ಅಣಬೆ ಅಣಬೆ....
           ನನಗೆ ಸರಿಯಾಗಿ ನೆನಪಿದೆ ಆಗ ನನಗೆ ಎಂಟೊಂಬತ್ತು ವರ್ಷ ಇತ್ತು.  ಅಮ್ಮ ಅಮ್ಮ ಎಂದು ಮಲಗಿದ್ದವರನ್ನು ಎಬ್ಬಿಸಿದೆ..... ಏನಪ್ಪ ? ಎಂದರು ಅಮ್ಮ ... ಅಮ್ಮ ಹೊಟ್ಟೆ ಹಸಿತಿದೆ. ತಡಬಡಿಸಿ ಎದ್ದ ಅಮ್ಮ ರಾತ್ರಿ ಉಳಿದಿದ್ದ ಅನ್ನವೋ ಮುದ್ದೆಯೋ ಹಾಕಿ ಅಣಬೆ ಸಾರು ಹಾಕಿ ಕೊಟ್ಟಿದ್ದರು‌.
        ನನಗೆ ಅಂದು ನಿಜವಾಗಲೂ ಹೊಟ್ಟೆ ಹಸಿವಾಗಿರಲಿಲ್ಲ. ಅಂದು ರಾತ್ರಿ ತಿಂದಿದ್ದ ಅಣಬೆ ತೃಪ್ತಿಯಾಗಿರಲಿಲ್ಲ......  ಅದಕ್ಕೆ ಮಧ್ಯರಾತ್ರಿ ಕೇಳಿ ತಿಂದಿದ್ದೆ!
       ಬಾರೀ ಇದೀರಾ ನೀವು. ಎರಡು ಅಣಬೆ ತಿನ್ನಲು ಮದ್ಯರಾತ್ರಿ ಅಮ್ಮನಿಗೆ ಇಷ್ಟೆಲ್ಲಾ ಕಾಟ ಕೊಟ್ಟಿರಾ ಎಂದು ಹೇಳುತ್ತಿರಲ್ಲಾ??
       ಹೌದು ಮಾರ್ರೆ ಆಗಲೂ ಈಗಲೂ ಈ ಅಣಬೆಗಳು ಅಂದರೆ ನನಗೆ ಭಲೇ ಇಷ್ಟ. ಅದಕ್ಕಾಗಿ ನಾನು ಕಳೆದ ಹತ್ತುವರ್ಷಗಳ ಹಿಂದಿನವರೆಗೆ  ಮಳೆಗಾಲದಲ್ಲಿ ನಿರಂತರವಾಗಿ ಅಣಬೆಗಳನ್ನು ಹುಡುಕಿಕೊಂಡು ಹೋಗುತ್ತಿದ್ದೆ. ನನ್ನವು ಅದ್ಯಾವ ಕಣ್ಣುಗಳೋ ಗೊತ್ತಿಲ್ಲ ಕೆಲವರು ಅವುಗಳ  ಮಗ್ಗುಲಲ್ಲಿ ಹೋದರೂ, ಅಷ್ಟೇ ಏಕೆ ಕೆಲವರು  ಅವುಗಳನ್ನು ತುಳಿದುಕೊಂಡು ಹೋಗಿದ್ದರೂ ಅವರ ಕಣ್ಣಿಗೆ ಬೀಳದ ಈ ಅಣಬೆಗಳು ನನ್ನ ಕಣ್ಣಿಗೆ ಮಾತ್ರ ಸಲೀಸಾಗಿ ದೂರದಿಂದಲೇ ಕಾಣುತ್ತಿದ್ದವು. ನಾನು ಅಣಬೆ ಹುಡುಕಲು ಹೋದರೆ  ಅಂದು ಬಹುತೇಕ ಅಣಬೆಗಳು ಅಂದು ಸಿಕ್ಕೇ ಸಿಗುತ್ತಿದ್ದವು.
ಈ ಅನುಭವದಲ್ಲಿ ಅಣಬೆಗಳ ಬಗ್ಗೆ ಒಂದಷ್ಟು ಮಾಹಿತಿ..
         ಈ ಅಣಬೆಗಳು ಶಿಲೀಂದ್ರ ಮಾದರಿಯಲ್ಲಿ ಬೆಳೆಯುತ್ತವೆ. ಆದರೆ ಇವು ನಿಯಮಿತವಾಗಿ ವಾರ್ಷಿಕವಾಗಿ ಒಂದು ಸ್ಥಳದಲ್ಲಿ ಒಮ್ಮೆ ಮಾತ್ರ ಎದ್ದೇಳುತ್ತವೆ. ಅಣಬೆಗಳಿಗೂ ಮತ್ತು ಮಳೆಯ ನಕ್ಷತ್ರಗಳಿಗೆ ಅವಿನಾಭಾವ ಸಂಬಂಧವಿದೆ. ಎಲ್ಲಾ ರೀತಿಯ ಅಣಬೆಗಳು ಒಂದೊಂದು ಮಳೆನಕ್ಷತ್ರ ಆಗಮನ ಆದ ನಂತರ ಇವುಗಳ ಹುಟ್ಟು ಆರಂಭವಾಗುತ್ತದೆ. ಈ ಬಯಲು ಸೀಮೆಗಳಲ್ಲಿ ಆ ಮಳೆ ಚೆನ್ನಾಗಿ ನೆಡೆಸಿದರೆ ಮೊಗ್ಗಾಗಿ ಮೇಲೆದ್ದು ಅರಳುತ್ತವೆ. ಮಳೆ ನಡೆಸದೇ ಇದ್ದರೆ ಭೂಗತವಾಗಿಯೇ ಇವುಗಳ ಅಂತ್ಯವಾಗುತ್ತದೆ. ಕೆಲವೊಮ್ಮೆ ಅಲ್ಪಸ್ವಲ್ಪ ತೇವ ಇದ್ದರೂ ಅರೆಬರೆ ಶುಷ್ಕ ನೆಲದಲ್ಲೂ ಕಳಾಹೀನವಾಗಿ ಹುಟ್ಟುವವಾದರೂ ಇವುಗಳು ಅಧಿಕ ರುಚಿಯ ಸ್ವಾದ ಹೊಂದಿರುತ್ತವೆ. ಮಳೆ ಅಧಿಕ ಆದಾಗ ಅಣಬೆಯಲ್ಲೇ ಅಧಿಕ ಪ್ರಮಾಣದ ನೀರು ಈ ಸೌತೆಕಾಯಿಯಂತೆ ಹೊಂದಿರುತ್ತದೆ.
           ನಾನು ಅಣಬೆ ಹುಡುಕುವಾಗ ನಮ್ಮ ತಂದೆಯವರು ಅವರ ಅನುಭವದಲ್ಲಿ ಎಲ್ಲೆಲ್ಲಿ ಎದ್ದೇಳುತ್ತವೆ ಎಂದು ಮಾಹಿತಿ ನೀಡಿದ್ದರು. ಆದರೆ  ನಾನು ಆ ಸ್ಥಳದಲ್ಲಿ ಯಾವ ಮಳೆಗೆ ಎದ್ದೇಳುತ್ತಾವೆ ಎಂಬುದನ್ನು ನಾನು ಎರಡ್ಮೂರು ವರ್ಷದಲ್ಲಿ ನಿಖರವಾಗಿ ಕಂಡುಕೊಂಡಿದ್ದೆ. ಉದಾಹರಣೆಗೆ ಸ್ವಾತಿ ಮಳೆ ಆಗಮನವು ನಾಳೆ ಇದೆ ಎಂದರೆ ಇಂದು ಕಿರುಮೊಗ್ಗಾಗಿ ಕಾಣುತ್ತಿದ್ದವು. ನಾಳೆ ಹೋದರೆ ಮಣ್ಣು ಉಬ್ಬಿದ್ದರೆ ಇನ್ನೂ ಕೆಲವು ಮಣ್ಣನ್ನು ಸೀಳಿ ಶುದ್ದ ಬಿಳಿ ವರ್ಣದ ಅಣಬೆಗಳು ಹೊರಬಂದಿರುತ್ತಿದ್ದವು. ಅಣಬೆಯ ತಲೆಯ ಮಧ್ಯಭಾಗದಲ್ಲಿ ಮಾತ್ರ ತುಸು ಕಪ್ಪು ಬಣ್ಣದ ಶೇಡ್ ಇರುತ್ತಿದ್ದವು. ಇವುಗಳು ಯಾರ ಕಣ್ಣಿಗೂ ಬೀಳದೇ ಇದ್ದರೆ ನಾಡಿದ್ದು ಬೆಳಿಗ್ಗೆಗೆ ಛತ್ರಿಯಾಕಾರವಾಗಿ ಅರಳಿರುತ್ತಿದ್ದವು. ಛತ್ರಿಯಾಕಾರವಾಗಿ ಅರಳಿದ ಆರೆಂಟು ಗಂಟೆಗಳ ಕಾಲ ಮಾತ್ರವೇ ಇವು ಸುಸ್ಥಿತಿಯಲ್ಲಿ ಇರುತ್ತಿದ್ದವು. ಆಮೇಲೆ ಸೆಲ್ಪ್ ಕ್ರಿಯೇಟೆಡ್ ಚಿಕ್ಕ ಚಿಕ್ಕ ಬಿಳಿಯ ಹುಳುಗಳು ಸೃಷ್ಠಿಯಾಗಿ ಅವುಗಳ ಅಂತ್ಯ ಆಗುತ್ತದೆ. ಅಣಬೆ ತಿನ್ನುವವರ ಕಣ್ಣಿಗೆ ಬಿದ್ದರೆ ಸಾಮಾನ್ಯವಾಗಿ ಕಿತ್ತು ತರುವರು. ಮಣ್ಣು ಸಡಿಲವಾಗಿದ್ದರೆ ಸುಮಾರು ಒಂದೂವರೆ ಅಡಿಯಷ್ಟು ಉದ್ದದ ಬೇರು ಈ ಅಣಬೆಗೆ ಇರುತ್ತದೆ. ಕಿತ್ತಾಗ ಬೇರಿನ ಬೀಜದಂಶ ಮೂಲದಲ್ಲಿ ಉಳಿದು ಅದು ಪುನಃ ಮುಂದಿನ ವರ್ಷ ಸರಿಯಾಗಿ ಅದೇ ಮಳೇ ನಕ್ಷತ್ರದಲ್ಲಿ ಅದು ಮತ್ತೆ ಹುಟ್ಟಿ ಬರುವುದು. ಹೀಗೆ ತಲಾ ತಲಾಂತರದಿಂದ ಮುಂದುವರೆದುಕೊಂಡು ಬಂದಿದೆ ಈ ಅಣಬೆಗಳ ಸಂತತಿ. 
        ಅಣಬೆಗಳೂ ಕೂಡ ಸಂಘಜೀವಿಗಳು. ಯಾವಾಗಲೂ ಕನಿಷ್ಠ ಎಂಟತ್ತು ಸಂಖ್ಯೆಯಿಂದ ಗರಿಷ್ಠ ಮೂವತ್ತು ನಲವತ್ತಕ್ಕೆ ಒಂದೊಂದು ಗುಂಪಿನಂತೆ ಒಂದು ಸ್ಥಳದಲ್ಲಿ ಕನಿಷ್ಠ ಮೂರು ಗುಂಪು ಇದ್ದೇ ಇರುತ್ತವೆ. ಇವು ಒಂಟೊಂಟಿಯಾಗಿ ಕಾಣುವುದು ತುಂಬಾ ವಿರಳ. ಹೀಗೆ  ಗುಂಪುಗಳಲ್ಲಿ ಬಯಲು ಸೀಮೆಯಲ್ಲಿ ಸುಮಾರು ಅರ್ಧ ಕೇಜಿಯಷ್ಟು ಸಿಕ್ಕರೆ ಅದೇ ಮಲೆನಾಡು ಪ್ರದೇಶಗಳಲ್ಲಿ ಒಂದೇ ಸ್ಥಳದಲ್ಲಿ ಸುಮಾರು ಎಂಟತ್ತು ಕೆಜಿಯ ಪ್ರಮಾಣದಲ್ಲಿ ಈ ಅಣಬೆಗಳು ಕಾಣಸಿಗುತ್ತವೆ.
        ಈ ಅಣಬೆ ಮತ್ತು ಮೊಟ್ಟೆ ಸಸ್ಯಹಾರಿ ಎಂದೂ, ಇನ್ನೂ ಕೆಲವರು ಮಾಂಸಹಾರಿ ಎಂದು ವಾದಮಾಡಿ ಮಾಡಿ ನಿಖರವಾಗಿ ಹೇಳದೇ ಅವರರವರ ಭಾವಕ್ಕೆ ಇವೆರಡನ್ನೂ ಬಿಟ್ಟಿದ್ದಾರೆ. ಇದೇನೇ ಆದರೂ ಪ್ರಕೃತಿಯಲ್ಲಿ ಸಿಗುವ ಈ ಅಣಬೆಗಳು ಪೋಷಕಾಂಶಗಳ ಲಭ್ಯತೆಯಲ್ಲಿ ಅಗ್ರಮಾನ್ಯ ಸ್ಥಾನವನ್ನು ಪಡೆದಿದೆ. ಇದು ಸಸ್ಯವಾದರೂ, ಪ್ರಾಣಿಯಾದರೂ ಇದರಲ್ಲಿ ಜೀರೋ ಕೆಮಿಕಲ್.! ಈ ನ್ಯಾಚುರಲ್  ಅಣಬೆಗೆ ಅಣಬೆಯೇ ಸಾಟಿ. ಇದರಲ್ಲಿ ವಿಷಕಾರಕ ಅಣಬೆಗಳೂ ಇದ್ದೂ ನನಗೆ ಗೊತ್ತಿದ್ದಂತೆ ಬಹುಶ ಇಂತಹ ವಿಷಕಾರಕ ಅಣಬೆಗಳು ನಮ್ಮ ರಾಜ್ಯದಲ್ಲಿ ಇರಲಿಕ್ಕಿಲ್ಲ. ವಾಯು, ಕೆಲವೇ ರೋಗಗಳಿಗೆ ನಾಟಿ ಔಷದಿಪಡೆದಂತವರು ಇವುಗಳನ್ನು ತಿನ್ನಬೇಡಿ ಎಂದು ಹೇಳುವರು ಆದರೆ ನಾನು ಕಂಡಂತೆ ಸರ್ವ ಶ್ರೇಷ್ಠ ಆಹಾರದಲ್ಲಿ ಅಣಬೆಯೂ ಒಂದು.
        ಒಂದು ದಿನ  ಬೆಳ್ಳಂಬೆಳಗ್ಗೆ ತರೀಕೆರೆಯ ಹೊರಹೊಲಯದಲ್ಲಿ  ಯಾರದ್ದೋ ಮಾವಿನ ತೋಪುಗಳಲ್ಲಿ ಓಡಾಟ...ಹೋಗಿದ್ದು ಓಡಾಡಕೆ ಅಲ್ಲ ! ಇವತ್ತು ಅಣಬೆ ಹುಡುಕಿ ತರಬೇಕು ಎಂದೆ. ಚುಮು ಚುಮು ಮಳೆಯ ಲೆಕ್ಕಿಸದೇ ಕೊಡೆಯ ಹಿಡಿದು ಕಾರು ಹತ್ತಿ ಹೋದೆ..
      ಬೆಳಿಗ್ಗೆ ನವಿಲುಗಳು. ಕಾಡುಕೋಳಿ ಮತ್ತು ಮರಿಗಳು, ಬೆಳವ, ಪಿಕಳಾರ ಇನ್ನೂ ನಾನ ಪಕ್ಷಿಗಳ ಕಲರವದ ಮದ್ಯೆ ನೂರು-ಇನ್ನೂರು ಮೀಟರ್ ಓಡಾಡುತ್ತಿದ್ದಾಗಲೇ ಛತ್ರಿಯಾಕಾರದ ಹತ್ತಾರು ಅರಳಿದ ಅಣಬೆ ದೂರದಿಂದಲೇ ನನ್ನ ಕಣ್ಣಿಗೆ ಬಿದ್ದವು...
       ಖುಷಿಯಿಂದಲೇ ಸ್ಥಳಕ್ಕೆ ಧಾವಿಸಿ ಪಟಕ್ ಪಟಕ್ ಎಂದು  ಅಣಬೆ ಕಿತ್ತು ಕಿತ್ತು ರಾಶಿ ಹಾಕಿದೆ
ಅಂತೂ ಇಂತೂ ಸುತ್ತಾ ಮುತ್ತಾ ಹುಡುಕಿ ಸಮಾರು ಎರಡು-ಮೂರು ಕೆಜಿ ಅಣಬೆ ಒಟ್ಟುಮಾಡಿದೆ.. ಅಲ್ಲಿಂದಲೇ ಮಡದಿ ಕುಮುದಾಗೆ ಕರೆ ಮಾಡಿ ಮಸಾಲೆ ಅಣಿಗೊಳಿಸಲು ಸೂಚಿಸಿದೆ ಕೆಲವು ಸ್ನೇಹಿತರಿಗೂ ವಿಷಯ ತಿಳಿಸಿದೆ.  
       ಬಯಲುಸೀಮೆಯ ಪ್ರದೇಶದಲ್ಲಿ ಮಳೆಯ ಪ್ರಮಾಣಕುಸಿದಿದ್ದರಿಂದ ಮತ್ತು ಜೆಸಿಬಿಯಂತಹ ಯಂತ್ರ ಬಳಸಿ ಮಣ್ಣನ್ನು ಅಗೆದು ಸ್ಥಳಾಂತರ ಮಾಡಿರುವ ಪರಿಣಾಮ ಗಣನೀಯ ಪ್ರಮಾಣದಲ್ಲಿ ಅಣಬೆಗಳು ಹುಟ್ಟುವ ಪ್ರಮಾಣವೇ ಕುಸಿದಿದೆ. ಈ ಕರೋನಾ ಕಾರಣದಿಂದ ಕಳೆದ ವರ್ಷ ಮತ್ತು ಈ ವರ್ಷ ಅಣಬೆಗಳ ಹುಡುಕಿಹೋಗಲು ಆಗಲಿಲ್ಲ. ಸಾಧ್ಯವಾದರೆ ನೀವೂ ವರ್ಷಕ್ಕೇ ಒಮ್ಮೆಯಾದರೂ ಅಣಬೆಗಳ ರುಚಿ ಆಸ್ವಾದಿಸಿ ಆರೋಗ್ಯವಂತರಾಗಿ...
......................................ನಾಗೆಂದ್ರ ಬಂಜಗೆರೆ.
ಶಿಕ್ಷಕರು.
ಸ ಹಿ ಪ್ರಾ ಶಾಲೆ, ತುಮಟಿ 
ಸಂಡೂರು ತಾಲೂಕು ಬಳ್ಳಾರಿ
9902912684.
*********************************************


Ads on article

Advertise in articles 1

advertising articles 2

Advertise under the article