-->
ಸ್ಪೂರ್ತಿಯ ಮಾತುಗಳು : ವಿ ಶ್ರೀರಾಮ ಮೂರ್ತಿ

ಸ್ಪೂರ್ತಿಯ ಮಾತುಗಳು : ವಿ ಶ್ರೀರಾಮ ಮೂರ್ತಿ

 ಸ್ಪೂರ್ತಿಯ ಮಾತುಗಳು : ವಿ ಶ್ರೀರಾಮ ಮೂರ್ತಿ

       ಜಗಲಿಯ ಮಕ್ಕಳೇ...... ಹೇಗಿದ್ದೀರಿ..? ....ಒಂದು ಪೌರಾಣಿಕ ಕತೆ... ಹೀಗಿದೆ.....
      ಒಂದು ದೊಡ್ಡ ಹದ್ದು ಪಾರಿವಾಳವನ್ನು ಆಹಾರಕ್ಕಾಗಿ ಓಡಿಸಿಕೊಂಡು ಬರುತ್ತದೆ. ಪಾರಿವಾಳವು ಅದರಿಂದ ತಪ್ಪಿಸಿಕ್ಕೊಂಡು ಹಾರುತ್ತಾ ಕೊನೆಗೆ ಒಬ್ಬ ರಾಜನಲ್ಲಿಗೆ ಬಂದು ಗಿಡುಗನಿಂದ ನನ್ನನ್ನು ರಕ್ಷಿಸಬೇಕೆಂದು ರಾಜನಲ್ಲಿ ಬೇಡಿಕೊಳ್ಳುತ್ತದೆ. ಅದಕ್ಕೆ ರಾಜನು ಒಪ್ಪಿ ಅದರ ರಕ್ಷಣೆಯ ಹೊಣೆಯನ್ನು ಹೊರುತ್ತಾನೆ.
      ಅದೇ ಸಮಯಕ್ಕೆ ಪಾರಿವಾಳವನ್ನು ಅಟ್ಟಿಸಿಕೊಂಡು ಬಂದ ಗಿಡುಗ ರಾಜನಲ್ಲಿ ಅದು ನನ್ನ ಆಹಾರ ನನಗೆ ಕೊಡಲೇ ಬೇಕೆಂದು ಪಟ್ಟು ಹಿಡಿಯುತ್ತದೆ. ಆಗ ರಾಜ ನಾನು ಇದರ ರಕ್ಷಣೆ ಮಾಡುವೆನೆಂದು ಅಭಯ ಕೊಟ್ಟಿದ್ದೇನೆ. ಆದುದರಿಂದ ಪಾರಿವಾಳವನ್ನು ಹೊರತು ಪಡಿಸಿ ಬೇರೆ ಏನು ಬೇಕಾದರೂ ಕೇಳು ಎಂದಾಗ ಗಿಡುಗ ಹಾಗಾದರೆ ಪಾರಿವಾಳದ ತೂಕದ ಮಾಂಸವನ್ನು ನನಗೆ ನಿನ್ನ ದೇಹದಿಂದ ಕೊಡು ಎನ್ನುತ್ತದೆ. ಅದಕ್ಕೆ ಒಪ್ಪಿದ ರಾಜ ತಕ್ಕಡಿ ತರಿಸಿ ತನ್ನ ದೇಹದ ಕಾಲಿನ,ಕೈಯ ಹೀಗೆ ಬೇರೆ ಬೇರೆ ಭಾಗದ ಮಾಂಸವನ್ನು ತೂಗಿದಾಗ ಅದು ಪಾರಿವಾಳದ ತೂಕಕ್ಕೆ ಸಮನಾಗುವುದಿಲ್ಲ. ಕೊನೆಗೆ ತಾನೇ ಆ ತಕ್ಕಡಿಯಲ್ಲಿ ಕೂತಾಗ ತಕ್ಕಡಿ ಸರಿ ತೂಗುತ್ತದೆ.
     ಆಗ ರಾಜ ಎಲೈ ಗಿಡುಗವೇ ಇಗೋ ಈಗ ನನ್ನ ದೇಹ ಈ ಪಾರಿವಾಳದ ತೂಕಕ್ಕೆ ಸಮವಾಗಿದೆ. ಆದುದರಿಂದ ನನ್ನ ದೇಹದ ಮಾಂಸವನ್ನು ಭಕ್ಷಿಸಿ ತೃಪ್ತಿಯಾಗು ಎನ್ನುವನು. ಇದರಿಂದ ಪ್ರಸನ್ನಗೊಂಡ ಗಿಡುಗ ಹಾಗೂ ಪಾರಿವಾಳದ ವೇಷವನ್ನು ಧರಿಸಿದ ಇಂದ್ರ ಹಾಗೂ ಅಗ್ನಿ ದೇವರು ನಿಜರೂಪವನ್ನು ಧರಿಸಿ ಅವನ ದಾನಶೂರತೆಯನ್ನು ಕೊಂಡಾಡಿ ಅವನಿಗೆ ಆತನ ಮೊದಲ ರೂಪವನ್ನು ನೀಡುತ್ತಾರೆ. ಈ ಪ್ರಸಿದ್ಧ ರಾಜ ದಾನಶೂರ ಶಿಬಿ ಚಕ್ರವರ್ತಿ. ಈತ ತನ್ನ ಪ್ರಜೆಗಳನ್ನು ಅಕ್ಕರೆಯಿಂದ ನೋಡುವುದರ ಜೊತೆಗೆ ಕೊಡುಗೈ ದಾನಿ ಕೂಡ ಹೌದು.
     ಮಕ್ಕಳೇ, ನಾವೆಲ್ಲಾ ಶಿಬಿ ಚಕ್ರವರ್ತಿಯಂತೆ ದಾನಶೂರರಾಗಬೇಕೆಂದೇನೂ ಇಲ್ಲ. ಆದರೆ ಇತರರಿಗೆ ತಮ್ಮ ಕೈಲಾದ ಸಹಾಯ ಮಾಡಬಹುದಲ್ಲವೇ.....? ಸಹಾಯ ಅಂದಾಗ ಅದು ಧನ ಸಹಾಯವಾಗಬೇಕೆಂದೇನೂ ಇಲ್ಲ. ಅದು ಬೇರೆ ಯಾವುದೇ ರೀತಿಯಲ್ಲಿ ಆದರೂ ಇರಬಹುದು. ಆದುದರಿಂದ ಅಸಹಾಯಕರಿಗೆ ಹಾಗೂ ಅವಶ್ಯಕತೆ ಇರುವವರಿಗೆ ತನ್ನ ಕೈಲಾದ ಸಹಾಯ ಮಾಡಬೇಕು. ನಮ್ಮ ಸುತ್ತಲೂ ಕೆಲವರು ಅಶಕ್ತರಿರಬಹುದು, ಅಸಹಾಯಕರಿರಬಹುದು, ಅವರನ್ನು ಕಡೆಗಣಿಸದೆ ಅವರಿಗೆ ಅವಶ್ಯವಿದ್ದಾಗ ಸಹಾಯ ಮಾಡುವ ಗುಣ ನಮ್ಮಲ್ಲಿ ಇರಬೇಕು.
      ಪರೋಪಕಾರಾಯ ಫಲಂತಿ ವೃಕ್ಷಾಃ        
      ಪರೋಪಕಾರಾಯ ವಹಂತಿ ನದ್ಯಾ   
      ಪರೋಪಕಾರಾಯ ದುಹಂತಿ ಗಾವಃ
      ಪರೋಪಕಾರಾರ್ಥ ಮಿದಂ ಶರೀರಂ
ಮೇಲಿನ ಸಂಸ್ಕೃತದ ಸುಭಾಷಿತದಂತೆ ಮರಗಳು ತಮ್ಮಲ್ಲಿ ಬೆಳೆದ ಫಲ ಪುಷ್ಪಗಳನ್ನು ತಾವು ಉಪಯೋಗಿಸದೆ ಇತರರಿಗೆ ನೀಡುತ್ತವೆ. ನದಿಗಳು ತಮ್ಮ ನೀರನ್ನು ತಾವು ಉಪಯೋಗಿಸದೆ ಅವು ಹರಿಯುವ ಎಲ್ಲಾ ಪ್ರದೇಶಗಳ - ಸಕಲ ಜೀವರಾಶಿಗಳಿಗೆ ನೀರುಣಿಸುತ್ತವೆ. ಹಾಗೆಯೇ ಗೋವುಗಳು ಇತರರಿಗಾಗಿಯೇ ಹಾಲನ್ನು ಕೊಡುತ್ತವೆ. ಅದೇ ರೀತಿಯಲ್ಲಿ ಇತರರ ಸೇವೆಗಾಗಿ ಭಗವಂತ ನಮಗೆ ಈ ಶರೀರವನ್ನು ನೀಡಿದ್ದಾನೆ. 
     ಆದುದರಿಂದ ಮಕ್ಕಳೇ, ತ್ಯಾಗ ಮತ್ತು ಸೇವೆ ಎಂಬ ಎರಡು ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸೋಣ. ನಾವೆಲ್ಲರೂ ಪರಸ್ಪರ ಸಹಕಾರ ಹಾಗೂ ಸೇವಾ ಮನೋಭಾವದಿಂದ ಎಲ್ಲರೊಡನೆ ಉತ್ತಮ ಬಾಂಧವ್ಯ ಬೆಸೆಯೋಣ. ನಾಡಿನ ಸತ್ಪ್ರಜೆಗಳಾಗೋಣ.
..................................... ವಿ ಶ್ರೀ ರಾಮಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ" 
ವಾಟೆತ್ತಿಲ, ಅಂಚೆ: ಬಾಯಾರು 
ಮಂಜೇಶ್ವರ ತಾಲೂಕು, 
ಕಾಸರಗೋಡು ಜಿಲ್ಲೆ, ಕೇರಳ.
ಮೊಬೈಲ್ : +91 94819 74949
********************************************


Ads on article

Advertise in articles 1

advertising articles 2

Advertise under the article