ಚಿತ್ರ ಬರಹ : ನಾನು ಮತ್ತು ಪಕ್ಷಿಗಳು
Monday, January 24, 2022
Edit
ಹಕ್ಕಿಗಳು ಚಿಲಿಪಿಲಿ ಗುಟ್ಟುತ್ತಾ ಅತ್ತಿಂದಿತ್ತ ಹಾರಾಡುವಾಗ ಈ ಪಕ್ಷಿಗಳ ಭಾಷೆ ನನಗೆ ಅರ್ಥವಾದರೆ ಎಷ್ಟು ಚಂದ ಎಂದು ಎಷ್ಟೋ ಸಲ ಅನ್ನಿಸಿತ್ತು. ಹಕ್ಕಿಗಳ ಫೋಟೊ ತೆಗೆಯಬೇಕೆಂದು ಕಾದುಕುಳಿತು ನಿರಾಶೆಯಿಂದ ಬಂದಿರುವುದೇ ಹೆಚ್ಚು. ಆದರೆ ಪಕ್ಷಿಗಳ ಚಿತ್ರ ಬರೆಯುವುದು ನನ್ನ ನೆಚ್ಚಿನ ಹವ್ಯಾಸವೇ....
ಪಟ್ಟಣಗಳಲ್ಲಿ ಬೆಳಗಾಗುವುದೇ ವಾಹನಗಳ ಶಬ್ದ ಹಾಗೂ 'ಹಾರ್ನ್' ನೊಂದಿಗೆ. ಈ ಶಬ್ದಗಳೆಡೆಯಲ್ಲಿ ಕಿವಿಕೊಟ್ಟು ಕೇಳಿದರೆ ಅಲ್ಲೊಂದು ಇಲ್ಲೊಂದು ಎಂಬಂತೆ ಹಕ್ಕಿಗಳ ಕೂಗಷ್ಟೇ. ಆದರೆ ಸದ್ಯದ ಮಟ್ಟಿಗೆ ಈಗಿರುವ 'ವೀಕೆಂಡ್ ಕರ್ಫ್ಯೂ' ಸಮಯದಲ್ಲಿ ವಾಹನಗಳ ಓಡಾಟ ಅಷ್ಟಕಷ್ಟೆ ಜೊತೆಗೆ ಜನಸಂಚಾರವೂ ಕಡಿಮೆ. ಇಂತಹ ಸಮಯದಲ್ಲಿ ನಾನು ಗಮನಿಸಿದ್ದು ಹಕ್ಕಿಗಳ ಕೂಗು ಹಾಗೂ ಅವುಗಳ ಅತ್ತಿಂದಿತ್ತ ದ ಹಾರಾಟ.
ಮುಖ್ಯವಾಗಿ ಬೆಂಗಳೂರಿನಲ್ಲಿ ನಾನು ಪಕ್ಷಿಗಳ ಸ್ವಚ್ಛಂದ ಹಾರಾಟ ನೋಡಿದ್ದು ಎಂದರೆ ಕಳೆದ ದೀರ್ಘಾವಧಿಯ 'ಲಾಕ್ಡೌನ್' ಸಮಯದಲ್ಲಿ. ಮನೆ ಮುಂದೆಯೇ ಮಾರ್ಗಮಧ್ಯೆಯೇ ಕುಳಿತಿರುವ ಪಕ್ಷಿಗಳನ್ನು ನೋಡುವುದರಲ್ಲೇ ಸಮಯ ಕಳೆಯುತ್ತಿತ್ತು. ಪ್ರತಿದಿನ ಬರುವ ಹಕ್ಕಿ ಒಂದು ದಿನ ಬಾರದಿದ್ದರೂ ಏನೋ ಆತಂಕ. ಆದರೆ 'ಲಾಕ್ಡೌನ್' ಮುಗಿದಿದ್ದೇ ತಡ ಪಕ್ಷಿಗಳೆಲ್ಲ ಎಲ್ಲಿ ಹೋದವೋ ಗೊತ್ತಿಲ್ಲ. ಮತ್ತದೇ ವಾಹನಗಳ ಸಂಚಾರ, ಜನರ ಓಡಾಟ.
ಬಣ್ಣಬಣ್ಣದ ರೆಕ್ಕೆಪುಕ್ಕಗಳನ್ನು ಹೊಂದಿ ವಿಭಿನ್ನ ಶೈಲಿಯಲ್ಲಿ ಹಾಡುತ್ತಾ ಪುರ್ರನೆ ಹಾರಾಡುವ ಪಕ್ಷಿಗಳನ್ನು ಇಷ್ಟಪಡದವರ್ಯಾರು? ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಪಕ್ಷಿಪ್ರಿಯರೆ. ವಿಪರ್ಯಾಸವೆಂದರೆ ಬದಲಾದ ಈ ವರ್ತಮಾನದಲ್ಲಿ ನಾವು ಪಕ್ಷಿಗಳನ್ನು ನೋಡಬೇಕೆಂದರೆ ಯೂಟ್ಯೂಬ್ ಅಥವಾ ಗೂಗಲ್ ಎನ್ನುವ 'ಫ್ರೆಂಡ್' ಅನ್ನೇ ಅವಲಂಬಿಸಿಕೊಳ್ಳಬೇಕಷ್ಟೇ. ಇಲ್ಲವೇ ನೆಚ್ಚಿನ 'ಪಾರ್ಕ್' ಹಾಗೂ ಪಕ್ಷಿಧಾಮಗಳಿಗೆ ಭೇಟಿ ಕೊಡಬೇಕಷ್ಟೇ.
ಪಕ್ಷಿಗಳೂ ನಮ್ಮ ಸಹಜೀವಿಗಳೇ. ಮನುಷ್ಯ ಸಂಚಾರವಿಲ್ಲದ ದೂರದ ಕಾಡಿನಲ್ಲಿ ಅವು ಜೀವಿಸಲಾರವು. ಅವುಗಳಿಗೂ ತಮ್ಮ ಪುಟ್ಟ ಹೊಟ್ಟೆ ತುಂಬಿಸಿಕೊಳ್ಳಲು ದಿನವಿಡೀ ಪರದಾಡುವ ಪರಿಸ್ಥಿತಿ ಒಂದೆಡೆ. ವಾಹನಗಳ ಓಡಾಟ, ಧೂಳು, ಹೊಗೆ, ಶಬ್ದದೊಂದಿಗೆ ಹೋರಾಡುತ್ತಾ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಪ್ರಯತ್ನ ಇನ್ನೊಂದೆಡೆ. ಆದರೂ ಪಕ್ಷಿಗಳು ಧೃತಿಗೆಡದೆ ತಮ್ಮ ನೆಲೆಯನ್ನು ತಾವೇ ಕಂಡುಕೊಳ್ಳುತ್ತಾ ನಮಗೆ ಮಾದರಿಯಾಗುತ್ತಿವೆ.
ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ನಾವು ಪಕ್ಷಿ ಸಂಕುಲವನ್ನು ರಕ್ಷಿಸುವ ಪ್ರಯತ್ನ ಮಾಡೋಣ.
ದ್ವಿತೀಯ ಪಿಯುಸಿ
ಶೇಷಾದ್ರಿಪುರಂ ಕಾಂಪೋಸಿಟ್
ಪಿ.ಯು ಕಾಲೇಜ್, ಬೆಂಗಳೂರು
********************************************