-->
ಸದ್ಗುಣಗಳಿಗಿಂತ ಮಿಗಿಲಾದುದಿಲ್ಲ : ಸ್ಪೂರ್ತಿಯ ಮಾತುಗಳು

ಸದ್ಗುಣಗಳಿಗಿಂತ ಮಿಗಿಲಾದುದಿಲ್ಲ : ಸ್ಪೂರ್ತಿಯ ಮಾತುಗಳು



               ಸದ್ಗುಣಗಳಿಗಿಂತ ಮಿಗಿಲಾದುದಿಲ್ಲ...
          ಮಕ್ಕಳೇ, ನೀವು ಆದರ್ಶ ವಿದ್ಯಾರ್ಥಿಗಳು ಹೌದೇ.....? ಆದರ್ಶ ವಿದ್ಯಾರ್ಥಿ ಹೇಗಿರುತ್ತಾನೆ....? ಅಥವಾ ಹೇಗಿರಬೇಕು ...? ಎಂದು ನಿಮಗೆ ಗೊತ್ತೇ.....? 
           ನಾನು ವಿದ್ಯಾರ್ಥಿಯಾಗಿದ್ದಾಗ  "ಆದರ್ಶ ವಿದ್ಯಾರ್ಥಿ" ಎಂಬ ವಿಷಯದ ಬಗ್ಗೆ ಪ್ರಬಂಧ ಬರೆಯಲಿಕ್ಕಿತ್ತು. ಮೆದುಳಿನಲ್ಲಿ ಮೂಡಿದ ಆಲೋಚನೆಗಳಿಗೆ ಅಕ್ಷರ ರೂಪ ಕೊಟ್ಟು ಆದರ್ಶ ವಿದ್ಯಾರ್ಥಿ ಎಂಬ ಸೂಪರ್ ಕಿಡ್ ಬಗ್ಗೆ ಪುಟಗಟ್ಟಲೆ ಬರೆದು ಬಹುಮಾನ ಗಿಟ್ಟಿಸಿದ್ದೆ. ವಿದ್ಯಾರ್ಥಿಯಾಗಿದ್ದಾಗಿನ ನನ್ನ ಚಿಂತನೆಗಳಿಗೂ ಶಿಕ್ಷಕಿಯಾಗಿ ಈಗಿನ ನನ್ನ ಚಿಂತನೆಗಳಿಗೂ ಅಜಗಜಾಂತರವಿದೆ. ಅದಿರಲಿ...... ನಾನು ಮೊದಲು ಕೇಳಿದ ಪ್ರಶ್ನೆಗೆ ನಿಮ್ಮ  ಉತ್ತರವೇನು.....? ಪ್ರೀತಿಯ ಮಕ್ಕಳೇ ಗೊಂದಲಕ್ಕೊಳಗಾಗಬೇಡಿ. ಆದರ್ಶ ವಿದ್ಯಾರ್ಥಿ ಎಂಬುದೊಂದಿಲ್ಲ. ಯಾರನ್ನಾದರೂ ಆದರ್ಶ ವಿದ್ಯಾರ್ಥಿ ಎಂದು ಗುರುತಿಸುವುದು ತಪ್ಪು. ಅಷ್ಟೇಕೆ ಆದರ್ಶ ವಿದ್ಯಾರ್ಥಿ ಎಂಬ ಪರಿಕಲ್ಪನೆಯೇ ತಪ್ಪು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಒಂದಲ್ಲಾ ಒಂದು ಉತ್ತಮ ಗುಣ ಇದ್ದೇ ಇರುತ್ತದೆ. ಹಾಗಾಗಿ ಆದರ್ಶ ವಿದ್ಯಾರ್ಥಿ ಎಂಬ ಒಂದು ನಿರ್ದಿಷ್ಟ ಚೌಕಟ್ಟನ್ನು ಇಟ್ಟುಕೊಳ್ಳಲು ಹೇಗೆ ಸಾಧ್ಯ......? ಆದರ್ಶ ವಿದ್ಯಾರ್ಥಿಯ ಅತಿರಂಜಿತ ಗುಣಗಳ ನಡುವೆ ಸಾಮಾನ್ಯ ವಿದ್ಯಾರ್ಥಿಗಳು ಕಳಾಹೀನವಾಗಿ ಕಾಣುವುದು ಬೇಡ. 
        ನಾನಿಲ್ಲಿ ಆದರ್ಶ ವಿದ್ಯಾರ್ಥಿ ಹೇಗಿರಬೇಕು ಎಂದು ಹೇಳುತ್ತಿಲ್ಲ. ಆದರೆ ಒಬ್ಬ ವ್ಯಕ್ತಿ ಅಥವಾ ವಿದ್ಯಾರ್ಥಿ ರೂಢಿಸಿಕೊಳ್ಳಬೇಕಾದ ಕೆಲವು ಸದ್ಗುಣಗಳ ಬಗ್ಗೆ ಹೇಳಬಯಸುತ್ತೇನೆ. ಮಾನವರೆಂದು ಬೀಗುವ ನಮ್ಮಲ್ಲಿ ಮಾನವೀಯತೆಯೇ ಮರೆಯಾಗಿ ಪ್ರಾಣಿಗಳಿಗಿಂತ ಕೀಳು ಗುಣಗಳು ತುಂಬುತ್ತಿರುವಾಗ ಸದ್ಗುಣಗಳ ಬಗ್ಗೆ ಹೇಳುವುದು ಅನಿವಾರ್ಯ ಹಾಗೂ ಅತ್ಯಗತ್ಯ ಎಂದು ನನಗನಿಸುತ್ತದೆ.
         ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಉತ್ತಮರಾದ ಪ್ರಜೆಗಳಿಂದ ಮಾತ್ರ ದೇಶ ಕಟ್ಟಲು ಸಾಧ್ಯ. ಉತ್ತಮ ಪ್ರಜೆಗಳಾಗಿ ಬೆಳೆಯಬೇಕಾದರೆ ಬಾಲ್ಯದಲ್ಲಿಯೇ ಅವರಿಗೆ ಕೆಲವು ತಿಳುವಳಿಕೆಗಳು ಅತ್ಯಗತ್ಯವಾಗಿ ಬೇಕಾಗುತ್ತದೆ. ನಮ್ಮ ದೇಶ ವೈವಿಧ್ಯತೆಯ ದೇಶ. ವಿವಿಧ ಧರ್ಮ, ಭಾಷೆ, ಜಾತಿ, ವರ್ಣ, ವರ್ಗ, ಆಚಾರ-ವಿಚಾರಗಳ ದೇಶ. ವಿವಿಧತೆಯಲ್ಲಿ ಏಕತೆ ಎಂಬುದು ನಮ್ಮ ಧ್ಯೇಯವಾಕ್ಯ. ಆದರೆ ಈ ವೈವಿಧ್ಯತೆಗಳನ್ನು ಒಪ್ಪಿಕೊಂಡು ಎಲ್ಲರೊಂದಿಗೆ ಸಹಬಾಳ್ವೆ ನಡೆಸುವುದು ಸುಲಭದ ಮಾತಲ್ಲ. ಈ ಸಹಬಾಳ್ವೆಯ ತತ್ವವೇ ನಾವು ತುರ್ತಾಗಿ ಕಲಿಯಬೇಕಾದ ಗುಣ. ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡು, ಎಲ್ಲಾ ಭಿನ್ನತೆಗಳನ್ನೂ ಒಪ್ಪಿಕೊಂಡು, ಸಮಾನತೆಯ ಮನೋಭಾವದಿಂದ, ಸ್ನೇಹದಿಂದ ಬದುಕಬೇಕಾದರೆ ನಮ್ಮಲ್ಲಿ ವಿಶಾಲ ಹೃದಯವಿರಬೇಕು. ಮನಸ್ಸನ್ನು ವಿಶಾಲಗೊಳಿಸಿ ಎಲ್ಲವನ್ನೂ ಅರ್ಥಮಾಡಿಕೊಂಡು, ಪೂರ್ವಗ್ರಹವಿಲ್ಲದೇ ಸ್ವೀಕರಿಸಲು ತಯಾರಾದಾಗ ಶಾಂತಿ, ಸಹಬಾಳ್ವೆ ತಾನಾಗಿ ಸಾಧ್ಯವಾಗುತ್ತದೆ. ವಿಶಾಲ ಮನಸ್ಕರಲ್ಲಿ ಉಳಿದೆಲ್ಲಾ  ಗುಣಗಳು ತಾವಾಗಿ ಬಂದು ನೆಲೆಸುತ್ತವೆ. 
         ಶಾಲೆಗಳಲ್ಲಿ ನಾನು ಗುರುತಿಸಿದ ಒಂದು ನಕಾರಾತ್ಮಕ ಅಂಶ ಕೆಲವು ವಿದ್ಯಾರ್ಥಿಗಳು ತಮ್ಮ ತಮ್ಮ ಜಾತಿಯ ಅಥವಾ ಭಾಷೆಯ ವಿದ್ಯಾರ್ಥಿಗಳೊಂದಿಗೆ ಮಾತ್ರ ಗೆಳೆತನ ಮಾಡಿಕೊಂಡು ಪ್ರತ್ಯೇಕ ಗುಂಪುಗಳಾಗಿ ಇರುತ್ತಾರೆ. ಎಳವೆಯಲ್ಲೇ ಕಂಡುಬರುವ ದೇಶದ ಅಖಂಡತೆಗೆ ಭಂಗ ತರುವ  ಈ ಮನೋಭಾವ ಅವರು ಮುಂದೆ ಬೆಳೆದು ಪೌರರೆನಿಸಿಕೊಂಡಾಗ ದೇಶದ ಶಾಂತಿ, ಸುವ್ಯವಸ್ಥೆಗೆ ಸವಾಲಾಗಿ ಪರಿಣಮಿಸುತ್ತದೆ. ಎಲ್ಲರೂ ನನ್ನವರು, ಎಲ್ಲರೂ ಸಮಾನರು ಎಂಬ ಭಾವನೆಯಿಂದ ವಿದ್ಯಾರ್ಥಿಗಳು ಎಲ್ಲರೊಂದಿಗೆ ಸಮಭಾವದಿಂದ ಬೆರೆತಾಗ ಮಾತ್ರ ಐಕ್ಯತೆ ಹಾಗೂ ಸಾಮರಸ್ಯ ಸಾಧ್ಯ.
       ಪರಸ್ಪರ ಸಹಕಾರ, ಹೊಂದಾಣಿಕೆ, ಸರ್ವಧರ್ಮ ಸಹಿಷ್ಣುತೆ, ಪ್ರೀತಿ, ನಿಸ್ವಾರ್ಥತೆ, ಇತರರಲ್ಲಿ ಗೌರವ, ನಿಜವಾದ ದೇಶಪ್ರೇಮ ಇವುಗಳನ್ನು ವಿದ್ಯಾರ್ಥಿಗಳು ರೂಢಿಸಿ ಕೊಳ್ಳಬೇಕು. ದ್ವೇಷ, ಅಸೂಯೆಗಳನ್ನು ತೊರೆದು ಬದುಕಬೇಕು. ಹಾಗಾದರೆ ಮಾತ್ರ ವಿದ್ಯಾರ್ಥಿಗಳು ಮುಂದೆ ಪ್ರಜೆಗಳಾದಾಗ ದೇಶ ಶಾಂತಿಯ ಕೇಂದ್ರವಾಗುತ್ತದೆ. ಆಂತರಿಕ ಸಮಸ್ಯೆಗಳಿಂದ ಮುಕ್ತವಾಗುತ್ತದೆ. ಪ್ರಗತಿಯ ಪಥದಲ್ಲಿ ಮುನ್ನುಗ್ಗುತ್ತದೆ.
       ಪ್ರೀತಿಯ ಮಕ್ಕಳೇ ನೀವೆಷ್ಟು ಅಂಕ ಪಡೆದಿರಿ, ಎಷ್ಟು ಉನ್ನತ ಹುದ್ದೆಯ ಉದ್ಯೋಗಕ್ಕೆ ಹೋಗುತ್ತೀರಿ, ಎಷ್ಟು ಹಣ ಸಂಪಾದನೆ ಮಾಡುತ್ತೀರಿ ಎಂಬುದು ಮುಖ್ಯವಲ್ಲ. ಮಾನವೀಯ ಮೌಲ್ಯಗಳು ನಮ್ಮಲ್ಲಿ ಎಷ್ಟಿವೆ ಎಂಬುದೇ ಮುಖ್ಯ. ನಿಮ್ಮ ವೈಯಕ್ತಿಕ ಬೆಳವಣಿಗೆಗೆ ಗಮನಕೊಡಿ. ಯಾವುದೇ ಕಾರಣಕ್ಕೂ ಇತರರ ನೋವಿಗೆ ಕಾರಣವಾಗದಿರಿ. ದೇಶದ ಅಮೂಲ್ಯ ಆಸ್ತಿಗಳಾಗಿ. ದೇಶದ ಹೆಮ್ಮೆಯ ಪ್ರಜೆಗಳಾಗಿ. ಶಾಂತಿಯ ದೂತರಾಗಿ. ಒಗ್ಗಟ್ಟನ್ನು ಸಾಧಿಸಿ, ದೇಶ ಕಟ್ಟುವವರಾಗಿ. ಹಣಕಾಸಿನ ಶ್ರೀಮಂತಿಕೆ ಕಡಿಮೆಯಿದ್ದರೂ ಪರವಾಗಿಲ್ಲ. ಹೃದಯ ಶ್ರೀಮಂತಿಕೆಯಿಂದ ತುಂಬಿ ತುಳುಕುವವರಾಗಿ. 
..................................................ಜೆಸ್ಸಿ ಪಿ.ವಿ
ಸಹಶಿಕ್ಷಕಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಕೆಯ್ಯೂರು.
ಪುತ್ತೂರು ತಾಲೂಕು. ದಕ್ಷಿಣ ಕನ್ನಡ ಜಿಲ್ಲೆ
******************************************

Ads on article

Advertise in articles 1

advertising articles 2

Advertise under the article