-->
ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 28

ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 28

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 28

                   ಸಿಡಿದರೆ ಕ್ರಾಂತಿಯ ಕಿಡಿ
                 ಮಿಡಿದರೆ ಶಾಂತಿಯ ಕುಡಿ
          ಅದು ಹನ್ನೆರಡನೆಯ ವಯಸ್ಸು. ಒಬ್ಬ ಹುಡುಗ ಅಥವಾ ಹುಡುಗಿ ಈ ವಯಸ್ಸಿನಲ್ಲಿ ಏನು ಮಾಡಬಹುದು? ಚೆನ್ನಾಗಿ ಓದಿ ಬರೆಯಬಹುದು, ಆಟ ಆಡಬಹುದು, ಸಿನಿಮಾ, ನಾಟಕ ನೋಡಬಹುದು, ಅಂಗಸಾಧನೆ ಮಾಡಬಹುದು.... 
      ಆದರೆ ಈ ಹುಡುಗ ಆಂಗ್ಲೋ ವೇದಿಕ್ ಶಾಲೆಯಲ್ಲಿ ಓದುತ್ತಿದ್ದವ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಜಾಗ ನೋಡಲು ರೈಲಿನಲ್ಲಿ ಹೋದ. ಅವನ ಕೈಚೀಲದಲ್ಲಿ ಇದ್ದದ್ದು ಎರಡು ಪುಸ್ತಕಗಳು, ಪುಟ್ಟ ಡಬ್ಬಿಗಳು. ಹೃದಯದಲ್ಲಿ ಮಡುಗಟ್ಟಿದ್ದು ದೇಶಕ್ಕಾಗಿ ಹುತಾತ್ಮರಾದವರ ಬಗ್ಗೆ ದುಃಖ.. ದುಃಖ.. ಆ ಭೀಕರ ಘಟನೆ, ಜೀವ ತಲ್ಲಣಗೊಳಿಸಿದ ದುರಂತದ ಬಗ್ಗೆ... ರೋಷ ಆಕ್ರೋಶ. ಹುಡುಗ ಕಿಂಕರ್ತವ್ಯ ಮೂಢನಾಗಿ ಆ ನೆಲದಲ್ಲಿ ಬಿದ್ದು ಹೊರಳಾಡಿದ, ಒದ್ದಾಡಿದ, ಅಡ್ಡಾಡಿದ. ಕೊನೆಗೆ ಬಾಗಿ ಕೊಂಚ ಮಣ್ಣನ್ನು ಹಣೆಗೆ ಇರಿಸಿಕೊಂಡ. ಮತ್ತಷ್ಟು ಮಣ್ಣನ್ನು ಡಬ್ಬಿಯಲ್ಲಿ ತುಂಬಿಕೊಂಡು ರಾತ್ರೋರಾತ್ರಿ ಮನೆಗೆ ಮರಳಿದ. ಊಟ ಬೇಡವಾಯಿತು. ಇಷ್ಟದ ಮಾವಿನಹಣ್ಣನ್ನು ಕಣ್ಣೆತ್ತಿ ನೋಡದಾದ. ಸೋದರಿಯನ್ನು ಮನೆಯ ಹಿಂಭಾಗಕ್ಕೆ ಕರೆದುಕೊಂಡು ಹೋಗಿ ದೇಶಭಕ್ತರ ರಕ್ತದಲ್ಲಿ ತೊಯ್ದ ಪಾವನ ಮಣ್ಣಿನ ದರ್ಶನ ಮಾಡಿಸಿದ. ಈ ಮಣ್ಣು ತ್ಯಾಗದ ಪ್ರತೀಕ ಎಂದ. ಆ ಪುಟ್ಟ ಹೃದಯದಲ್ಲಿ ಅದೆಂತಹ ಉತ್ಕಟ ಭಾವನೆ? ಉದಾತ್ತ ಚಿಂತನೆ.. ಪ್ರಾಯೋಗಿಕತೆ, ಧರ್ಮಪ್ರಜ್ಞೆ, ಕರ್ಮ ಪ್ರಜ್ಞೆ.... ಇದನ್ನು ನೆನೆಸಿಕೊಂಡರೆ ಕಣ್ಣೀರು ಒತ್ತರಿಸಿ ಬರುತ್ತದೆ. ಆತನನ್ನು ಹೆತ್ತ ಜನನಿ ವಿದ್ಯಾವತಿ, ಜನಕ ಕಿಶನ್ ಸಿಂಗ್, ಬೆಳೆಸಿದ ಪಂಜಾಬಿನ ಬಾಂಗ್ ನಗರ ಪುಣ್ಯ ಮಾಡಿರಬೇಕು.    
        ನಮ್ಮ ಗದ್ದೆಗಳಲ್ಲಿ ಭತ್ತದ ಬದಲು ಬಂದೂಕು ನೆಡಬೇಕು.......... ಬ್ರಿಟಿಷರನ್ನು ಸುಡಲು....... ವೀರಪುತ್ರ, ಕ್ರಾಂತಿಯ ಕಿಡಿಯ ಬಾಯಿಯಿಂದ ಇಂತಹ ಸಿಡಿ ಮಾತುಗಳೇ ಗುಡುಗುವುದಲ್ಲದೆ.. ! ಆಡುವ ವಯಸ್ಸಿನಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿ ಬಿಟ್ಟ ಸಿಡಿಲಮರಿ... 
         ಸೈಮನ್ ಕಮಿಷನ್ ನ ವಿರುದ್ಧದ ಪ್ರತಿಭಟನೆಯ ನೇತಾರ ಲಾಲಾ ಲಜಪತ್ ರಾಯ್ ಲಾಟಿ ಚಾರ್ಜ್ ನಿಂದ ಆಘಾತಗೊಂಡು ಮರಣ ಹೊಂದುವಂತಾಯಿತು. ನಮ್ಮ ವೀರಪುತ್ರ ಸಿಂಗ್ ಇದರ ಪ್ರತೀಕಾರವಾಗಿ ಎಸ್ಪಿ ಸ್ಕಾಟ್ ನ್ನು ವಧಿಸಲು ಹೊಂಚುಹಾಕ ತೊಡಗಿದ. ಗೆಳೆಯರಾದ ಸುಖದೇವ, ಆಜಾದ್ ಮುಂತಾದವರ ಜೊತೆ. ಈ ಪ್ರಕ್ರಿಯೆಯಲ್ಲಿ ಜಾನ್ ಸಂಡರ್ಸ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಹತ್ಯೆಗೈದುದಕ್ಕಾಗಿ ಆತನನ್ನು ಪೊಲೀಸರು ಅರಸತೊಡಗಿದರು. ಸಿಂಗ್ ಮತ್ತು ಗೆಳೆಯರು ಇಡೀ ದೇಶದ ಗಮನ ಸೆಳೆಯಲು ಅಸೆಂಬ್ಲಿಗೆ ಬಾಂಬ್ ಎಸೆದರು. ಈ ಎಲ್ಲಾ ಕೃತಿಗಳಿಗಾಗಿ ಸರಕಾರ ಅವರನ್ನು ಸೆಂಟ್ರಲ್ ಜೈಲಿಗೆ ಹಾಕಿತು. ಅಲ್ಲಿ ಭಾರತೀಯ ಕೈದಿಗಳಿಗೆ ತೋರಿಸುತ್ತಿದ್ದ ತಾರತಮ್ಯ ನೀತಿಯ ವಿರುದ್ಧವೂ ಈ ಗುಂಪು ಪ್ರತಿಭಟಿಸಿ, ಉತ್ತಮ ಆಹಾರ, ನೈರ್ಮಲ್ಯ, ಪುಸ್ತಕ, ದಿನ ಪತ್ರಿಕೆಗಾಗಿ ಆಗ್ರಹಿಸಿತು. 
         "ನಾನು ಎಂತಹ ಹುಚ್ಚನೆಂದರೆ ಜೈಲಿನಲ್ಲೂ ಸ್ವತಂತ್ರನಾಗಿರಬಲ್ಲೆ".  ಜೈಲಿನಲ್ಲಿ ಗಾಂಧಿಯ ವಿಚಾರಗಳಿಂದ ತಿರುಗಿ ಕಾರ್ಲ್ ಮಾರ್ಕ್ಸ್, ಲೆನಿನ್ ಮುಂತಾದ ಕಮ್ಯುನಿಸ್ಟರ ಪುಸ್ತಕಗಳನ್ನು ಓದತೊಡಗಿದ. ಅನಾರ್ಕಿಸಂ ಹಾಗೂ ಕಮ್ಯುನಿಸಂ ಆತನ ಆಕರ್ಷಣೆ. ಅನಾರ್ಕಿಸಂ ಅಂದರೆ ಅರಾಜಕತೆಯಲ್ಲ. ರಾಜನಿಲ್ಲದ ಆಡಳಿತ - ಪೂರ್ಣ ಸ್ವರಾಜ್ಯ. ದೇವರು-ಧರ್ಮದ ಭಯ ಇಲ್ಲದ, ಭ್ರಮೆ ಇಲ್ಲದ ರಾಜ್ಯ."  
    "ಕ್ರಾಂತಿಯ ಖಡ್ಗ ವಿಚಾರಗಳ ಘೋರ ಒರೆಗಲ್ಲಿನ ಮೇಲೆ ಹರಿತಗೊಳ್ಳಬೇಕು "   
   "ಕ್ರಾಂತಿಕಾರಿ ಚಿಂತನೆಯ ಎರಡು ಲಕ್ಷಣಗಳು ನಿರ್ದಯಿ ವಿಮರ್ಶೆ ಹಾಗೂ ಸ್ವತಂತ್ರ ಚಿಂತನೆ."
        ತನ್ನ ಆಳವಾದ ವ್ಯಾಪಕವಾದ ವಿಚಾರ ಧಾರೆಗಳನ್ನು ಕೀರ್ತಿ, ವೀರ ಅರ್ಜುನ್ ಮುಂತಾದ ಪತ್ರಿಕೆಗಳಲ್ಲಿ ಬರೆದು ಪಸರಿಸಿದ. ನೌಜವಾನ್, ಭಾರತ್ ಸಭಾದ ಕರಪತ್ರಗಳಿಗೆ ಧನಸಹಾಯ ಮಾಡುತ್ತಿದ್ದ. 
     ಈ ನಡುವೆ ಕೋರ್ಟಿನ ವಿಚಾರಣೆಯಲ್ಲಿ ತನ್ನ ವಾದವನ್ನು ತಾನೆ ಪ್ರಖರವಾಗಿ ಮಂಡಿಸುತ್ತಿದ್ದ. ಆ ಮೂಲಕ ಸ್ವಾತಂತ್ರ್ಯ ಸಂಬಂಧೀ ವಿಚಾರಗಳನ್ನು ಸಂವಹನ ಮಾಡಲು ವೇದಿಕೆಯನ್ನು ಪಡೆದುಕೊಳ್ಳುತ್ತಿದ್ದ, ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಿದ್ದ. ಈ ಹಿನ್ನೆಲೆಯಲ್ಲಿ ಜೈಲಿನಿಂದಲೇ ಉಪವಾಸ ಸತ್ಯಾಗ್ರಹ ಮಾಡಿದ. ಈ ಕ್ರಾಂತಿವೀರರ ಸತ್ಯಾಗ್ರಹಕ್ಕೆ ದೇಶವ್ಯಾಪಿ ಸಹಕಾರ, ಮನ್ನಣೆ, ನೈತಿಕ ಬೆಂಬಲ ದೊರೆಯಿತು. ಆಗ ಜೈಲಿನಲ್ಲಿ ವಿವಿಧ ರೀತಿಯ ತಿಂಡಿ ಹಾಲಿನ ಆಮಿಷವೊಡ್ಡಿ ಇವರ ನಿರ್ಧಾರವನ್ನು ಸಡಿಲಗೊಳಿಸಲು ಅನೇಕ ತಂತ್ರಗಳನ್ನು ಬಳಸಲಾಯಿತು. ಆದರೆ ಇವರ ತೀರ್ಮಾನ ಅಚಲ, ಅವಿಚ್ಛಿನ್ನ, ವಿಭಿನ್ನ. ಅಲ್ಲಿ ಅನೇಕ ರೀತಿಯ ಹಿಂಸೆಗಳನ್ನು ಸಹಿಸ ಬೇಕಾದಾಗ
 " ನನ್ನನ್ನು ಬಂದೂಕಿನ ನಳಿಗೆಗೆ ಹಾಕಿ, ಊದಿಬಿಡಿ ಬ್ರಿಟಿಷರನ್ನು ಸುಟ್ಟುಬಿಡುವೆ...... ಮರಣದ ಭಯ ಗೆದ್ದವನ ಮಾತೂ ಗುಂಡೇ... !!!"
           ಅಗಾಧ ಓದಿನ, ಚಿಂತನೆಯ ಪರಿಣಾಮ ಸಾಮಾಜಿಕ ಪುನರ್ ನಿರ್ಮಾಣದ ಕನಸು ಕಾಣಲಾರಂಭಿಸಿದ. ಸೋಹಂ ಸ್ವಾಮಿಯ ಕಾಮನ್ ಸೆನ್ಸ್ ಪುಸ್ತಕವನ್ನು ಓದಿ ಗಾಢವಾಗಿ ಅಪ್ಪಿಕೊಂಡ. ಪರಿಣಾಮವಾಗಿ ದೇಶದ, ಬಗ್ಗೆ, ದೇವರ ಬಗ್ಗೆ ತನ್ನದೇ ಆದ ಪರಿಕಲ್ಪನೆಯನ್ನು ರೂಪಿಸಿಕೊಂಡ. 
       "ತತ್ವಜ್ಞಾನ ಮನುಕುಲದ ದೌರ್ಬಲ್ಯದ, ಜ್ಞಾನದ ಕೊರತೆಯ ಫಲ"
     ಆಸೆ, ಮಹತ್ವಾಕಾಂಕ್ಷೆ, ಜೀವನ ಆಕರ್ಷಣೆ ನನಗಿದೆ. ಆದರೆ ಅಗತ್ಯ ಬಿದ್ದರೆ ಅವನ್ನೆಲ್ಲಾ ತ್ಯಾಗಮಾಡಲು ಸಿದ್ಧ. ಇದು ನಿಜವಾದ ಬಲಿದಾನ.
 "ಅವರು ನನ್ನ ದೇಹವನ್ನು ಪುಡಿಪುಡಿ ಮಾಡಬಹುದು. ಆದರೆ ನನ್ನ ವಿಚಾರಗಳನ್ನಲ್ಲ."
       ಜೈಲಿನಲ್ಲಿ ಡೈರಿ ಬರೆದ, ಹೊಸ ಹೊಸ ವಿಚಾರಗಳನ್ನು ದಾಖಲಿಸಿದ. ಕ್ರಾಂತಿಯ ಕಿಡಿ ಹಚ್ಚಿದ. ನಾನು ಹೋದರೂ ಒಂದು ದಿನ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿಯೇ ಸಿಗುತ್ತದೆ ಎಂಬ ಭರವಸೆಯನ್ನು ನೆಚ್ಚಿಕೊಂಡ. 
        ಆತ್ಮೀಯರ ಪ್ರಶ್ನೆಗೆ ಉತ್ತರಿಸಲು 'ನಾನೇಕೆ ನಾಸ್ತಿಕನಾದೆ' ಎಂಬ ಪ್ರಬಂಧವನ್ನು ಬರೆದ. ಜೀವನದ ಗುರಿ ಮನಸ್ಸನ್ನು ನಿಯಂತ್ರಿಸುವುದಲ್ಲ. ಮನಸ್ಸನ್ನು ಸೌಹಾರ್ದತೆಯಿಂದ ರೂಪಿಸುವುದು. ಅದರಿಂದ ಮೋಕ್ಷ ಪಡೆಯುವುದಕ್ಕೆ ಅಲ್ಲ. ಜನರಿಗಾಗಿ ಬಳಸುವುದಕ್ಕೆ. 
        ಹೆತ್ತವರು ಆತನಿಗೆ ವಿವಾಹ ಮಾಡಿಸಲು ಹೊರಟಾಗ ಇದು ಮದುವೆ ಸಮಯವಲ್ಲ. ನನ್ನ ದೇಶ ನನ್ನನ್ನು ಕರೆಯುತ್ತಿದೆ. ನನ್ನ ಹೃದಯ ಮತ್ತು ಆತ್ಮಪೂರ್ವಕವಾಗಿ ದೇಶ ಸೇವೆ ಮಾಡುವ ಪ್ರತಿಜ್ಞೆ ಮಾಡಿದ್ದೇನೆ. 
       "--ಕ್ರಾಂತಿ ಮನುಕುಲದ ಅನಿವಾರ್ಯ ಅಧಿಕಾರ. ಸ್ವಾತಂತ್ರ್ಯ ಎಲ್ಲರ ಜನ್ಮಸಿದ್ಧ ಹಕ್ಕು. ಶ್ರಮವೇ ಸಮಾಜದ ನಿರ್ವಾಹಕ........"
        ಎಂತಹ ಬೌದ್ಧಿಕ ಔನ್ನತ್ಯ !
        ಎಂತಹ ಹಾರ್ದಿಕ ಭಾವೈಕ್ಯ!!
        ಮಾನಸಿಕ ಧೈರ್ಯ !!!
        ಶಾರೀರಿಕ ಶೌರ್ಯ !!!!
 ಆ ವೀರಪುತ್ರನ ಕೊನೆಯ ಆಸೆ ಯಾದರೂ ಏನಿತ್ತು... ಲೆನಿನ್ ನ ಪುಸ್ತಕ ಓದಿ ಮುಗಿಸುವುದು.... ಬ್ರಿಟಿಷರು ನೇಣಿಗೆ ಹಾಕುವ ಮೊದಲೇ ತನ್ನ ಪ್ರಾಣವನ್ನು ತಾಯಿ ಭಾರತಿಗೆ ಅರ್ಪಿಸಿದ. 
        ನಿಜವಾಗಿಯೂ ದಿಟವಾಗಿಯೂ
        ಭರತ ಖಂಡಕ್ಕೊಬ್ಬನೇ....
        ಅವನೊಬ್ಬನೇ.....
ಕ್ರಾಂತಿಯೇಉಸಿರಾಗಿ, 
ಸ್ವಾತಂತ್ರ್ಯವೇ ಹಸಿವಾಗಿ, 
ಕ್ರಾಂತಿ ಎಂಬ ಪರಮ ಮಂತ್ರ
ಉಚ್ಚರಿಸುತ್ತಲೇ ವಿಶ್ವಾತ್ಮನಾದ. ದೇಶಕ್ಕಾಗಿ ಎಚ್ಚರಿಸುತ್ತಲೇ ದೇಶಭಕ್ತರ ಪರಮಾಪ್ತನಾದ.  
ನರನಾಡಿಗಳಲ್ಲಿ ರಾಷ್ಟ್ರಭಕ್ತಿ ಹರಿಯುತ್ತಿದ್ದ ನಿನ್ನ ಕೀರ್ತಿ ಚಿರಾಯುವಾಗಲಿ.
         ಕೋಟಿ ಕೋಟಿ ಯುವಕರಿಗೆ ಪ್ರೇರಣೆಯಾದ ಈ ಕ್ರಾಂತಿಯ ಜ್ವಾಲೆ ಎಂದೂ ನಂದದಿರಲಿ.... ಕೋಟಿ ಕೋಟಿ ನಮನ ಭಾರತ ಪುತ್ರ.... ಇಂಕ್ವಿಲಾಬ್ ಜಿಂದಾಬಾದ್..... ನಿನ್ನದೇ ಘೋಷಣೆಗಳಲ್ಲಿ ಮಾರ್ನುಡಿತಗಳಲ್ಲಿ ನೀನಿದ್ದಿ.... ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************
   

Ads on article

Advertise in articles 1

advertising articles 2

Advertise under the article