-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 16

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 16


ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 16

                ನಮಸ್ತೆ ಮಕ್ಕಳೇ........ ಹೇಗಿದ್ದೀರಿ.......? ನಗು , ಮಾತು , ಮೌನಗಳೆಲ್ಲವೂ ಬಣ್ಣ ತುಂಬಿಕೊಂಡು ಸಣ್ಣ ಸಣ್ಣ ಖುಷಿಯನ್ನೂ ಸಂಭ್ರಮಿಸುವ ನಿಮ್ಮ ಬಾಲ್ಯ ಚಂದ.       
   ‌ ವರ್ಷದುದ್ದಕ್ಕೂ ಇಂತಹ ನೆನಪಿನ ದಿನಗಳಿಗೆ ಸಾಕ್ಷಿಯಾಗುತ್ತೇವೆ ಅಲ್ವಾ.....? ಅದರಲ್ಲೂ ಬಹಳಷ್ಟು ಸಡಗರದ ದಿನ ನಮ್ಮ ಜನ್ಮದಿನ. ಬಹುಶಃ ಎಲ್ಲರ ಹಾರೈಕೆ ಬದುಕಿನ ಭರವಸೆಯಾಗಿ ಸ್ಫೂರ್ತಿ ನೀಡುತ್ತವೆ.
ಆದಾಗ್ಯೂ ಇದುವರೆಗಿನ ನಮ್ಮ ಈ ದಿನದ ಪ್ರತಿ ವರ್ಷದ ಆಚರಣೆ ಯಾವ ಕಾರಣಕ್ಕಾಗಿ ಮತ್ತೆ ಮತ್ತೆ ನೆನಪಾಗುತ್ತಿದೆ.......? ಎಲ್ಲ ವರ್ಷಗಳ ನೆನಪುಗಳನ್ನೂ ಮತ್ತಷ್ಟು ಹಸಿರಾಗಿಡುವ ಕಾರ್ಯದಲ್ಲಿ ಜೊತೆಯಾಗೋಣವೇ.......?
        ಸಾಮಾನ್ಯವಾಗಿ ಕೇಕ್ ಕತ್ತರಿಸಿದ ಸಂಭ್ರಮ ಕೆಲವು‌ ದಿನಗಳವರೆಗೆ ಅಥವಾ ಮುಂದಿನ ಕೇಕ್ ಕತ್ತರಿಸುವವರೆಗೆ ಇರ್ತದೆ ಅಲ್ವಾ......? ಈಗಾಗಲೇ ಪರಿಸರದ ಬಣ್ಣ ಮಾಸುವ ಭಯ ಇನ್ನಿಲ್ಲದಂತೆ ಮನುಕುಲವನ್ನು ಕಾಡುತ್ತಿರುವುದು ಸತ್ಯ...!!
        ನಮ್ಮ ಹುಟ್ಟು ಹಬ್ಬದ ದಿನ ಒಂದು ಗಿಡವನ್ನು ಭೂಮಿಯ ಮಡಿಲಿನಲ್ಲಿಟ್ಟು ಸಾರ್ಥಕತೆ ಮೆರೆಯಬಾರದೇಕೆ......? ಶಾಲೆ ಅಥವಾ ಮನೆ... ಎಲ್ಲಿಯಾದರೊಂದು ಕಡೆ ಇದನ್ನು ಸಾಧ್ಯವಾಗಿಸೋಣ. ಹೌದು...... ಇಂತಹ ಒಂದು ಪವಿತ್ರವಾದ ಕಾರ್ಯ ಜಗಲಿಯ ಗೆಳೆಯ ಗೆಳತಿಯರಿಂದ ಸಾಧ್ಯವಾಗಲಿ... ನಮ್ಮ ಜನ್ಮ ದಿನದಂದು ಈ ಭೂಮಿಯಲ್ಲಿ ಗಿಡವೊಂದು ಹುಟ್ಟು ಪಡೆಯಲಿ... ನಮ್ಮ ನಂತರವೂ ಗಿಡ ಹೆಮ್ಮರವಾಗಿ ಪುಟ್ಟ ಪುಟ್ಟ ಹಕ್ಕಿಗಳ ಜನ್ಮಕ್ಕೆ ಆಸರೆಯಾಗಲಿ ಅಲ್ವಾ.......? ಅವರ ಜನ್ಮದಿನಾಚರಣೆ ಪ್ರತಿದಿನವೂ ಸಡಗರದ ಕಲರವವಾಗಬಹುದು.
           ಯಾರದೋ ತಪ್ಪಿಗೆ ಅರಣ್ಯ ನಾಶ... ಕಣ್ಣಮುಂದೆಯೇ ನೂರಾರು ವರ್ಷಗಳ ಇತಿಹಾಸದ ಕಥೆಯನ್ನು ಹೇಳುತ್ತಿರುವ ವನ , ವನ್ಯ ಸಂಕುಲಗಳು ಉರಿಯಲ್ಲಿ ಬೇಯುತ್ತಿರುವ ದೃಶ್ಯಗಳು ಹೃದಯವನ್ನು ಕಲಕುತ್ತಿವೆ...!!!
      ಮುಂದೆಯೂ ಹಸಿರನ್ನು ಉಸಿರಾಡ ಬೇಕಾದರೆ ಜನ್ಮದಿನಕ್ಕೆ ಕಡ್ಡಾಯವಾಗಿ ಗಿಡ ನೆಡುವ ಸವಾಲನ್ನು ನಮಗೆ ನಾವೇ ಹಾಕಿಕೊಳ್ಳೋಣ. ಸಣ್ಣ ಆಂದೋಲನ‌..... ದೊಡ್ಡ ಬದಲಾವಣೆಗೆ ಮುನ್ನುಡಿಯಾಗಲಿ. ನಮ್ಮ ಕಾರಣಕ್ಕಾಗಿ ಈ ಮರಗಳ ನೆರಳಿನಾಸರೆಯಲ್ಲಿ ಅಸಂಖ್ಯ ಜೀವರಾಶಿಗಳು ದಿನ ದಿನವೂ ಜನ್ಮ ತಾಳಲಿ.
       ನಮ್ಮ ಕಾರ್ಯ ಇನ್ನೊಂದು ಜೀವವನ್ನು ಬದುಕಲು ಬಿಡುವ ಋಣವಷ್ಟೇ... ಮತ್ಯಾಕೆ ತಡ.....? ಈ ಕ್ಷಣವೇ ಮನಸ್ಸಿನ ನಿರ್ಧಾರ ಗಟ್ಟಿಯಾಗಲಿ.
          ‌ನೆನಪು ನಿತ್ಯ ಖುಷಿಯನ್ನು ನೀಡಲು ಇನ್ನೊಂದು ಸಲಹೆ. ಈ ಗಿಡಗಳಿಗೆ ನಮ್ಮಿಂದ ದೂರವಾದ ನಮ್ಮ ಆಪ್ತರ ಹೆಸರನ್ನು ಇಡುವ ಮೂಲಕ ಆ ಸಂಬಂಧಗಳನ್ನು ಜೀವಂತವಾಗಿಡಬಹುದು. ಪ್ರತಿ ದಿನ.. ವಾರ.. ತಿಂಗಳು....... ವರ್ಷಗಳಾಗಿ ಮತ್ತೆ ಮುಂದಿನ ಜನ್ಮ ದಿನ. ಮಗದೊಂದು ಗಿಡ... ಅದಕ್ಕೊಬ್ಬರ ಹೆಸರು.. ಅಬ್ಬಾ.... ಒಬ್ಬರ ಜನ್ಮದಿನ ಇನ್ನೊಂದು ಜೀವಕ್ಕೆ ಮರುಹುಟ್ಟು ನೀಡುವುದಾದರೆ...!  ಆಗ ಹೇಳಿದಂತೆ ಅದರ ಆಸರೆಯಲ್ಲಿ ಒಂದಷ್ಟು ಪ್ರಾಣಿ ಪಕ್ಷಿಗಳು ಜನ್ಮ ತಾಳುವ ಚಂದದ ಪರಿಕಲ್ಪನೆ... ಹುಟ್ಟಿದ ದಿನ ಹೀಗೊಂದು ಹಬ್ಬವಾಗಿ... ನಾಡಿನೆಲ್ಲಡೆ ಹಸಿರು ಸಂಭ್ರಮಿಸಲಿ.... ನಿಮ್ಮ ಬಳಗಕ್ಕೂ ಈ ಯೋಚನೆಯನ್ನು ವಿಸ್ತರಿಸುತ್ತೀರಿ..... ಅಲ್ವಾ?
      ಏನನ್ನಿಸಿತು ನಿಮಗೆ....? ನಿಮ್ಮ ಮಾತುಗಳಿಗಾಗಿ ಕಾತರದಿಂದ ಕಾಯುತ್ತಿದೆ ಜಗಲಿ ಬಳಗ........
           ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
....................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
**********************************************


Ads on article

Advertise in articles 1

advertising articles 2

Advertise under the article