
ಬದಲಾಗೋಣವೇ ಪ್ಲೀಸ್..! : ಸಂಚಿಕೆ - 28
Wednesday, January 12, 2022
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್ - 28
ಮಳೆ ನಿಂತು ಹೋದ ಮೇಲೆ....!!
-------------------------------------
ಅದೊಂದು ಮಳೆಗಾಲದ ದಿನ. ನನ್ನ ತರಬೇತಿ ಮುಗಿದ ನಂತರ 30 ವರುಷದ ಯುವಕನೊಬ್ಬ "ಸರ್ ನನ್ನ ಕಥೆ ಕೇಳಲು ತಮ್ಮ ಬಳಿ ಸಮಯವಿದೆಯಾ ?" ಎಂದು ಪ್ರೀತಿಯಿಂದ ಕೇಳಿದ. ಅವನ ತಪ್ಪಿತಸ್ಥ ಮುಖಭಾವ ನೋಡಿ "ನಿನಗಾಗಿ ಸಮಯ ಇದ್ದೇ ಇದೆ. ಹೇಳಪ್ಪ.." ಎಂದೆ. ಅವನು ತನ್ನ ಕಥೆ ಪ್ರಾರಂಭಿಸಿದ.
ಸರ್ .... ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ. ಮಾತೆಲ್ಲ ಮುಗಿದ ಮೇಲೆ ಕನಸೊಂದು ಮೂಡಿದೆ. ಮಧ್ಯಮ ವರ್ಗದ ಕುಟುಂಬದಲ್ಲಿ ನನ್ನಯ ಜನನ. ತಂದೆ ಕಂಪೆನಿಯೊಂದರಲ್ಲಿ ಸಣ್ಣ ಕಾರ್ಮಿಕ. ತಾಯಿ ಗೃಹಿಣಿ. ತನ್ನದೇ ಮಿತಿಯಲ್ಲಿ ಸುಖ ಜೀವನ ನಡೆಸುತ್ತಿದ್ದ ಅವರಿಗೆ ಮಕ್ಕಳಿಲ್ಲದ ಕೊರಗೊಂದಿತ್ತು. ಹತ್ತಾರು ವರುಷಗಳ ನಂತರ ವೈದ್ಯಕೀಯ ನೆರವಿನೊಂದಿಗೆ ನಾನು ಹುಟ್ಟಿದೆ. ರಾಜನಂತೆ ಸದಾ ನಮ್ಮನ್ನು ಕಾಪಾಡುತ್ತಾನೆ ಎಂದು ನಂಬಿ ನನಗೆ ಯುವರಾಜ ಎಂದು ಹೆಸರಿಟ್ಟರು. ನನ್ನ ಜನನದ ಖುಷಿಗಾಗಿ ಊರಿಗೆ ಊರೇ ಸಿಹಿ ತಿಂಡಿ ಹಂಚಿ ಖುಷಿಪಟ್ಟರು. ನನ್ನ ಲಾಲನೆ- ಪಾಲನೆಗೆ ದಿನವೆಲ್ಲ ಮೀಸಲಿಟ್ಟರು. ನನ್ನೆದುರೇ ನಾನು ದೊಡ್ಡವನಾದ ಮೇಲೆ ಹೇಗೆ ಸುಖೀ ಜೀವನ ನಡೆಸುತ್ತೇನೆ ಎಂಬ ಕಲ್ಪನೆಗಳನ್ನು ಹೇಳಿ ಸಂಭ್ರಮಿಸುತ್ತಿದ್ದರು. ನನಗೊಂದು ಸೂರು ನಿಮಗೊಂದು ಕಾರು ಎಂದು ಅಮ್ಮ - ಅಪ್ಪ ಕನಸು ಹೆಣೆಯುತ್ತಿದ್ದರು. ಮನೆ ಕಟ್ಟಲು ಸಂಗ್ರಹಿಸಿದ ಹಣವನ್ನೆಲ್ಲ ನನ್ನ ಕಲಿಕೆಗಾಗಿ ಖರ್ಚು ಮಾಡಿದ್ದರು. ನಾನು ಕೇಳಿದನ್ನೆಲ್ಲ ಕೊಡಿಸುತ್ತಿದ್ದರು. ನನ್ನ ಖುಷಿಯಲ್ಲಿಯೇ ಸರ್ವಸ್ವವನ್ನು ಕಳೆದರು. ತಾನು ಉಪವಾಸವಿದ್ದರೂ ನನ್ನನ್ನು ಎಂದಿಗೂ ಉಪವಾಸ ಬೀಳಿಸಲಿಲ್ಲ. ತಾನು ಉರಿದರೂ ನನ್ನನ್ನು ಉರಿಸಲಿಲ್ಲ. ತಾನು ಬೆಂದರೂ ನನ್ನನ್ನು ಬೇಯಿಸಲಿಲ್ಲ. ತನಗೆ ಕತ್ತಲಾದರೂ ನನ್ನನ್ನು ಕತ್ತಲಿನಲ್ಲಿಡಲಿಲ್ಲ ... (ಯುವರಾಜನ ಕಣ್ಣಲ್ಲಿ ಕಣ್ಣೀರು ಬರಲಾರಂಭಿಸಿತು).
ಸರ್ ....ಅದೊಂದು ಕೆಟ್ಟ ದಿನ. ನನ್ನ ಕಾಲೇಜು ದಿನಗಳಲ್ಲಿ ಬೈಕಿನ ಶೋಕಿಗೆ ಬಿದ್ದೆ. ಅದಕ್ಕಾಗಿ ಅಪ್ಪನಲ್ಲಿ ದುಡ್ಡು ಕೇಳಿದೆ. ಸ್ವಾಭಿಮಾನಿಯಾದ ಅಪ್ಪ ಈಗಾಗಲೇ ಮಾಡಿರುವ ಸಾಲ ತೀರಿಸಲಾಗದೇ ಅಸಹಾಯಕ ಸ್ಥಿತಿಯಲ್ಲಿದ್ದ ಕಾರಣ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ನಾನು ಅಮ್ಮನಲ್ಲಿ ಗಲಾಟೆ ಮಾಡಿದೆ. ಊಟ ಬಿಟ್ಟೆ. ಮಾತು ಬಿಟ್ಟೆ. ಕೊನೆಗೆ ಊರನ್ನೇ ಬಿಟ್ಟೆ. ಬೆಂಗಳೂರಿಗೆ ಬಂದೆ. ಆ ಕೆಟ್ಟದಿನಕ್ಕೆ ಇವತ್ತು ಹನ್ನೆರಡು ವರುಷವಾಯಿತು. ಈ ಹನ್ನೆರಡು ವರುಷಗಳಲ್ಲಿ ನಾನು ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಮದುವೆಯಾದೆ. 2 ಮಕ್ಕಳಿಗೆ ತಂದೆಯಾದೆ. ಈಗ ನನ್ನಲ್ಲಿ ನಾನು ಮನೆ ಬಿಡಲು ಕಾರಣವಾದ ಬೈಕ್ ಇದೆ. ಜತೆಗೆ ಕಾರು ಕೂಡಾ ಇದೆ. ಸ್ವಂತ ಮನೆಯಿದೆ , ಎಲ್ಲಾ ಸೌಲಭ್ಯವಿದೆ, ಕೆಲಸಕ್ಕೆ ಜನರಿದ್ದಾರೆ. ಎಲ್ಲವೂ ಇದೆ. ಆದರೆ ತಾಯಿಯ ಪ್ರೀತಿ ಸಿಗುತ್ತಿಲ್ಲ. ಸೋತಾಗ "ಚಿಂತೆ ಬೇಡ... ನಾನಿದ್ದೇನೆ ಮಗಾ" ಎಂದು ಧೈರ್ಯ ತುಂಬುವ ತಂದೆಯಿಲ್ಲ. ಈಗ ನಾನೇ ಎರಡು ಮಕ್ಕಳಿಗೆ ತಂದೆಯ ಸ್ಥಾನದಲ್ಲಿದ್ದೇನೆ. ತಂದೆಯ ಸಂಕಟ ಸ್ವಲ್ಪ ಸ್ವಲ್ಪವೇ ಅರ್ಥವಾಗುತ್ತಿದೆ. ಬದುಕಿಗೆ ಕಾಳಜಿ ಕೊಡುವವರಿಲ್ಲ. ಎಲ್ಲವೂ ಇದ್ದರೂ ಏನೂ ಇಲ್ಲವೆಂಬ ಶೂನ್ಯಭಾವ ಮೂಡುತ್ತಿದೆ. ಕಾಂಕ್ರಿಟ್ ಗೂಡಿನೊಳಗೆ ಬದುಕು ಬೆಂದು ಹೋಗುತ್ತಿದೆ. ನಾಲ್ಕು ಗೋಡೆಯೊಳಗೆ ಉಸಿರಾಡಲು ಕಷ್ಟವಾಗುತ್ತಿದೆ. ಹೇಗಾದರೂ ಏನಾದರೂ ಮಾಡಿ ಊರಿಗೊಮ್ಮೆ ಹೋಗಲೇ ಬೇಕು. ತಂದೆ ತಾಯಿಯನ್ನು ಭೇಟಿ ಮಾಡಿ ಕ್ಷಮೆ ಕೇಳಬೇಕು. ನನ್ನ ಮೂಲಕ ತಂದೆ ತಾಯಿ ಕಂಡ ಕನಸುಗಳನ್ನು ನನಸು ಮಾಡಲೇಬೇಕು. ಅಮ್ಮನಿಗೊಂದು ಸೂರು .....ಅಪ್ಪನಿಗೊಂದು ಕಾರು.... ಕೊಡಿಸಲೇಬೇಕು. ತುಂಬಾ ದಿನಗಳಿಂದ ಹೊರಟರೂ ಊರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಇವತ್ತು ಹೊರಡಲೇ ಬೇಕು" ಎಂದು ನಿರ್ಧರಿಸಿ ಕುಳಿತ ಜಾಗದಿಂದ ಎದ್ದಾಗ ನನ್ನ ಮೊಬೈಲ್ ಗೆ ಅಪರಿಚಿತ ನಂಬರ್ ನಿಂದ ಕರೆಯೊಂದು ಬರುತ್ತದೆ... "ಯುವರಾಜ , ಸಾರಿss ಕಾಣೋ... ನಿನ್ನ ಅಪ್ಪ ಮತ್ತು ಅಮ್ಮ ನಿನ್ನ ದಾರಿ ನೋಡಿ ನೋಡಿ ನಿನ್ನೆ ನಮ್ಮನ್ನೆಲ್ಲ ಬಿಟ್ಟು ಹೋದರು... ಅವರು ಸತ್ತುಹೋದರು. ನಿನ್ನನ್ನು ಸಂಪರ್ಕಿಸಲು ತುಂಬಾ ಪ್ರಯತ್ನಿಸಿದೆವು. ಆದರೆ ಸಾಧ್ಯವಾಗಲಿಲ್ಲ. ನಿನ್ನ ಅನುಪಸ್ಥಿತಿಯಲ್ಲಿ ನಾವೇ ಎಲ್ಲಾ ಕ್ರಿಯೆ ಮುಗಿಸಿದೆವು. ಬರುವ ವಾರ ಅವರ ಉತ್ತರಕ್ರಿಯೆ ಇದೆ. ಅದಕ್ಕಾದರೂ ಯಾವುದೇ ನೆಪ ಹೇಳದೆ ಬಂದು ಹೋಗಪ್ಪಾ.... ಪ್ಲೀಸ್ ..... ಪ್ಲೀಸ್..." ಎಂದು ಭಾವುಕರಾಗಿ ಫೋನಿಟ್ಟರು. ಆ ಸ್ಥಿತಿ ನೆನೆದು ಭಾವುಕನಾದ ಯುವರಾಜನ ಕಣ್ಣಲ್ಲಿ ಕಣ್ಣೀರಧಾರೆ ಹರಿಯಿತು. ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದಂತಾಯಿತು.... ಆ ದಿನ ಅವನನ್ನು ಸಮಾಧಾನಪಡಿಸಿ ಕಳುಹಿಸಿಕೊಟ್ಟೆ.
ಆದರೆ ಆ ಯುವರಾಜ ಹಾಗೂ ಅವನ ತಂದೆ- ತಾಯಿಯಂಥವರು ನೂರಾರು ಜನ ನಮ್ಮ ಸಂಪರ್ಕಕ್ಕೆ ಬಂದಿರಬಹುದು. ಮಕ್ಕಳಿಗಾಗಿ ತನ್ನೆಲ್ಲ ಸುಖಗಳನ್ನು ತ್ಯಾಗ ಮಾಡುವ ತಂದೆ ತಾಯಿಗಳು ಇಂದೂ ಸಿಗ್ತಾರೆ, ಆದರೆ ತಾಯಿ - ತಂದೆಗಾಗಿ ತನ್ನ ಅಲ್ಪ ಸ್ವಲ್ಪ ಸುಖಗಳನ್ನು ತ್ಯಾಗ ಮಾಡೋ ಮಕ್ಕಳ ಸಂಖ್ಯೆ ಕಡಿಮೆಯೆಂದೇ ಹೇಳಬಹುದು. ನಮಗಾಗಿ ನಮ್ಮ ಸುಖಕ್ಕಾಗಿ ಎಲ್ಲಾ ತೊರೆದಿರುವ ಇಂಥವರ ಭಾವನೆಗಳನ್ನು ಅರ್ಥ ಮಾಡದೆ ಕ್ಷುಲ್ಲಕ ಕಾರಣಗಳಿಗಾಗಿ ಪರಿಸ್ಥಿತಿ ಅರ್ಥ ಮಾಡದೆ ಯುವರಾಜನಂತೆ ಮನೆ ಬಿಟ್ಟು ಓಡಿ ಹೋಗುವ ಮಕ್ಕಳು ನೋಡ ಸಿಗುತ್ತಾರೆ. ಓಡದೇ ಜತೆಗಿದ್ದು ಸಾಧಿಸಬೇಕು.
ಮಳೆ ನಿಂತ ಮೇಲೆ ಕೊಡೆ (ಛತ್ರಿ ) ಬಿಡಿಸಿದರೇನು ಫಲ ? ಮಾತೆಲ್ಲ ಮುಗಿದ ಮೇಲೆ ಕನಸು ಮೂಡಿದರೇನು ಫಲ ? ಸತ್ತ ಮೇಲೆ ಅತ್ತರೇನು ಫಲ ? ಇರುವಾಗಲೇ ಜತೆಗಿರದೆ ಇಲ್ಲವಾದ ಮೇಲೆ ಪ್ರೀತಿಸಿದರೇನು ಫಲ ? ... ಬನ್ನಿ... ಇರುವಾಗಲೇ ಪ್ರೀತಿಸೋಣ... ನಮಗಾಗಿ ದುಡಿದ ಹಿರಿಯ ಜೀವಗಳಿಗೆ ನೆಮ್ಮದಿ ತರೋಣ..
ಮಕರ ಸಂಕ್ರಾತಿಯ ಈ ಸಂದರ್ಭದಲ್ಲಿ ಎಳ್ಳುಬೆಲ್ಲ ತಿಂದು ನಮಗಾಗಿ ಬದುಕುವವರ ಒಳ್ಳೆಯದಕ್ಕಾಗಿ ಬದಲಾಗೋಣ. ಬನ್ನಿ.. ಈ ಬದಲಾವಣೆಗೆ ಯಾರನ್ನೂ ಕಾಯದೇ ನಾವೇ ಬದಲಾಗೋಣ .... ಬದಲಾಗೋಣವೇ ಪ್ಲೀಸ್..! ಏನಂತೀರಿ...?
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
*********************************************