-->
ಜೀವನ ಸಂಭ್ರಮ : ಸಂಚಿಕೆ -18

ಜೀವನ ಸಂಭ್ರಮ : ಸಂಚಿಕೆ -18

ಜೀವನ ಸಂಭ್ರಮ : ಸಂಚಿಕೆ -18                           ಗೂಟದ ಕಥೆ 
                       -------------------
         ನಾವೆಲ್ಲಾ ಚಿಕ್ಕವರಿರುವಾಗ ಊರಿನಲ್ಲಿ ಸಂಜೆ ಊಟವಾದ ನಂತರ , ಮಲಗುವ ಮುನ್ನ , ಹಿರಿಯರಿಂದ ಕತೆ ಕೇಳುವುದು ವಾಡಿಕೆ. ಆಗ ಮನರಂಜನೆಗೆ ಬೇರೆ ವ್ಯವಸ್ಥೆ ಇರಲಿಲ್ಲ. ನಮ್ಮ ಮನೆ ಪಕ್ಕ ಜೋಗಯ್ಯ ಎಂಬ ವೃದ್ಧ ವ್ಯಕ್ತಿ ಇದ್ದರು. ಇವರು ಮಕ್ಕಳನ್ನು ಕೂರಿಸಿಕೊಂಡು ಕಥೆ ಹೇಳುತ್ತಿದ್ದರು. ಆ ಒಂದು ಕಥೆ ಹೀಗಿದೆ........        
               ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತ ರಾಜ್ಯದ ಜನರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಕಾಲಕಾಲಕ್ಕೆ ಮಳೆ , ಬೆಳೆ ಆಗುತ್ತಿತ್ತು. ಜನರೆಲ್ಲ ಸುಭಿಕ್ಷರಾಗಿದ್ದರು. ಊರಿನಲ್ಲಿ ವಾರಕ್ಕೊಮ್ಮೆ ಸಂತೆ ಆಗುತ್ತಿತ್ತು. ಜನರು ತಾವು ಬೆಳೆದ ಹಣ್ಣು-ತರಕಾರಿ ಮತ್ತು ದಿನಸಿಗಳನ್ನು ಮಾರಾಟ ಮಾಡಲು ಆ ಸಂತೆಗೆ ಬರುತ್ತಿದ್ದರು. ಅದೇರೀತಿ ಕುಶಲಕರ್ಮಿಗಳು ತಾವು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲು ಆ ಸಂತೆಗೆ ಬರುತ್ತಿದ್ದರು. ಒಬ್ಬ ವ್ಯಕ್ತಿ ಮೂರು ಗೂಟಗಳನ್ನು ಮಾಡಿಕೊಂಡು ಮಾರಾಟ ಮಾಡಲು ಬಂದಿದ್ದ. ಅದರ ಬೆಲೆ ತುಂಬಾ ದುಬಾರಿ ಆಗಿತ್ತು. ಗೂಟವು ಸಾಮಾನ್ಯ ಮರದಿಂದ ಮಾಡಿದ್ದು , ಆದರೆ ಬೇರೆ ಗೂಟಗಳಿಗಿಂತ ಭಿನ್ನವಾಗಿರಲಿಲ್ಲ. ಅದರ ಬೆಲೆ ಕೇಳಿ ಜನ ಹೌಹಾರಿದರು. ಇದು ರಾಜನವರೆಗೂ ದೂರು ಹೋಯಿತು. ರಾಜ ಗೂಟ ಮಾಡಿದ ವ್ಯಕ್ತಿಯನ್ನು ಕರೆಸಿದನು. ಏಕಪ್ಪಾ ಗೂಟಕ್ಕೆ ಇಷ್ಟೊಂದು ಬೆಲೆ ಎಂದು ಪ್ರಶ್ನಿಸಿದ. ಅದಕ್ಕೆ ಆ ವ್ಯಕ್ತಿ ಸ್ವಾಮಿ, ಇದು ಮಾಡಿರುವುದು ಸಾಮಾನ್ಯ ಮರದಿಂದಲೇ. ಆದರೆ ಇದರ ಹಿಂದಿರುವ ಮೌಲ್ಯ ಹೆಚ್ಚು ಬೆಲೆ ಬಾಳುವಂಥದ್ದು ಎಂದು ಹೇಳಿದ. ರಾಜ ಏನಪ್ಪಾ ಇದರ ಹಿಂದಿರುವ ಮೌಲ್ಯ ಎಂದು ಪ್ರಶ್ನಿಸಿದ. ಅದಕ್ಕೆ ಗೂಟದ ಮಾಲೀಕ ಹೇಳಿದ.......
1, ಕುಳಿತುಕೊಂಡ ಜಾಗದಿಂದ ಮೇಲೆದ್ದಾಗ ಹಿಂತಿರುಗಿ ನೋಡದವನಿಗೆ ಒಂದು ಗೂಟ.
2, ಕಟ್ಟಿಕೊಂಡ ಹೆಂಡತಿಯನ್ನು ಆರು ತಿಂಗಳು ತವರುಮನೆಗೆ ಬಿಟ್ಟವನಿಗೆ ಮತ್ತೊಂದು ಗೂಟ.
3, ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡದವನಿಗೆ ಒಂದು ಗೂಟ.
         ಈ ಮಾತನ್ನು ಕೇಳಿ ರಾಜನಿಗೆ ಆಶ್ಚರ್ಯ ವಾಯಿತು. ಇದನ್ನು ಪರಿಶೀಲಿಸಬೇಕೆಂದು ತೀರ್ಮಾನಿಸಿದ. ರಾಜ ವೇಷಮರೆಸಿಕೊಂಡು ರಾಜ್ಯದಿಂದ ಹೊರಡಲು ತಯಾರಾದ, ಈ ವಿಚಾರವನ್ನು ಮಂತ್ರಿಗೆ ತಿಳಿಸಿ, ತಾನು ಬರುವವರೆಗೆ ಆಡಳಿತವನ್ನು ಸುಸೂತ್ರವಾಗಿ ನೋಡಿಕೊಳ್ಳುವಂತೆ ಹೇಳಿ ಜವಾಬ್ದಾರಿ ವಹಿಸಿದನು. ಆದರೆ ಈ ವಿಚಾರ ರಾಜ್ಯದಲ್ಲಿ ಯಾರಿಗೂ ತಿಳಿಯದಂತೆ ಎಚ್ಚರಿಕೆ ವಹಿಸುವಂತೆ ತಿಳಿಸಿದನು. ಹೋಗುವಾಗ ಹಸಿವಾದರೆ ಇರಲಿ ಎಂದು ಊಟ ಕಟ್ಟಿಕೊಂಡ , ತನ್ನ ಖರ್ಚಿಗೆಂದು ಸ್ವಲ್ಪ ಹಣ ಇಟ್ಟುಕೊಂಡ , ಬಟ್ಟೆಗಳನ್ನು ತೆಗೆದುಕೊಂಡ. ಬೆರಳುಗಳಲ್ಲಿ ಮುತ್ತಿನ ಹರಳಿನಿಂದ ಮಾಡಿದ ಉಂಗುರಗಳನ್ನು ಬಿಟ್ಟು, ಒಂದು ಮುತ್ತಿನ ಹರಳಿನ ಉಂಗುರವನ್ನು ಧರಿಸಿದ. ತನ್ನನ್ನು ಅತಿಯಾಗಿ ಪ್ರೀತಿಸುವ ಸುಂದರಳಾದ ಹೆಂಡತಿಯನ್ನು ತವರುಮನೆಗೆ ಕಳಿಸಿಕೊಟ್ಟ. ಹೀಗೆ ರಾಜ್ಯ ಬಿಟ್ಟು ಕಾಡಿನಲ್ಲಿ ಹೋಗುತ್ತಿರಬೇಕಾದರೆ ತುಂಬಾ ಹಸಿವಾಗಿತ್ತು . ಒಂದು ಮರದ ಕೆಳಗೆ ಕುಳಿತು ಊಟದ ಬುತ್ತಿ ತೆರೆದು ಊಟ ಮಾಡಿದ. ತುಂಬಾ ಸುಸ್ತಾಗಿದ್ದರಿಂದ ವಿಶ್ರಾಂತಿ ಪಡೆಯಬೇಕೆಂದು ತೀರ್ಮಾನಿಸಿ ಅದೇ ಮರದ ಕೆಳಗೆ ಮಲಗಿದ. ಮಲಗುವಾಗ ಮುತ್ತಿನ ಹರಳಿನ ಉಂಗುರ ಹಾನಿಯಾದೀತೆಂದು ಅದನ್ನು ಬೆರಳಿನಿಂದ ಬಿಚ್ಚಿ ನೆಲದ ಮೇಲಿಟ್ಟು , ಅದರ ಮೇಲೆ ಬಟ್ಟೆಯ ಗಂಟನ್ನಿಟ್ಟು ತಲೆದಿಂಬಾಗಿ ಮಾಡಿಕೊಂಡು ಮಲಗಿದ. ಗಾಢ ನಿದ್ರೆ ಬಂದಿತ್ತು. ನಿದ್ರೆಯಿಂದ ಎದ್ದಾಗ ಕತ್ತಲೆ ಸಮೀಪಿಸುತ್ತಿತ್ತು. ಬೇಗ ಯಾವುದಾದರೂ ಒಂದು ಊರಿಗೆ ತಲುಪಬೇಕೆಂದು ತೀರ್ಮಾನಿಸಿ , ಬಟ್ಟೆ ಗಂಟೆನ್ನು ಎತ್ತಿಕೊಂಡು ಹೊರಟ. ಕತ್ತಲಾಗುವ ಮುನ್ನ ಸಮೀಪದ ಊರಿಗೆ ಹೊರಟ. ಆತನಿಗೆ ಉಂಗುರದ ನೆನಪೇ ಇಲ್ಲ. ಎರಡು ದಿನದ ನಂತರ ತನ್ನ ಕೈಯಲ್ಲಿ ಉಂಗುರ ಇಲ್ಲದ್ದನ್ನು ಕಂಡು ಗಾಬರಿಯಾದ. ಗೂಟದ ಮಾಲೀಕ ಹೇಳಿದ ಮೌಲ್ಯ ನಿಜವಾಗಿತ್ತು. ಮರುದಿನ ಅದನ್ನು ಹುಡುಕಿಕೊಂಡು ಬಂದ. ಆದರೆ ಕಾಡಿನ ದಾರಿ ಹೊಸದಾಗಿದ್ದರಿಂದ ಆ ಜಾಗ ಗುರುತಿಸಲು ಸಾಧ್ಯವಾಗಲಿಲ್ಲ. ಉಂಗುರ ಸಿಗಲಿಲ್ಲ. ಹೀಗೆ ಊರೂರು ಅಲೆದು ಆರು ತಿಂಗಳ ನಂತರ ತನ್ನ ಹೆಂಡತಿಯ ತವರು ಮನೆಗೆ ಬಂದ. ಅರಮನೆ ಬಿಟ್ಟು ಹೋಗುವಾಗ ತನ್ನ ಸಂದರಳಾದ ಹೆಂಡತಿಯ ಮೇಲೆ ಅಷ್ಟೊಂದು ನಂಬಿಕೆ ಇತ್ತು. ಆಕೆ ರಾಜನನ್ನು ಎಷ್ಟು ಪ್ರೀತಿಸುತ್ತಿದ್ದಳು ಎಂದರೆ ರಾಜ ಬಾರದೆ ಊಟ ಮಾಡುತ್ತಿರಲಿಲ್ಲ. ತವರು ಮನೆಗೆ ಹೋದರೂ ಗಂಡನ ನೆನಪಾಗಿ ಬೇಗನೆ ಬರುತ್ತಿದ್ದಳು. ಇದನ್ನು ಮನಗಂಡಿದ್ದ ರಾಜನಿಗೆ ಹೆಂಡತಿ ಮೇಲೆ ಹೆಚ್ಚು ಪ್ರೀತಿ ಮತ್ತು ನಂಬಿಕೆ ಇತ್ತು. ಈಗ ರಾಣಿಯನ್ನು ನೋಡದೇ ಆರು ತಿಂಗಳಾಗಿತ್ತು. ರಾತ್ರಿ  ವೇಷಮರೆಸಿಕೊಂಡು ರಾಣಿಯ ಅರಮನೆಯ ಅಂತಃಪುರದಲ್ಲಿ ಏನಾಗುತ್ತದೆ ಎಂದು ದೂರದಿಂದ ಗಮನಿಸುತ್ತಿದ್ದನು. ರಾಣಿ ದೃಢಕಾಯರಾದ ಸುಂದರ ಸೈನಿಕನ ಜೊತೆ ಸರಸ ಸಲ್ಲಾಪ ಮಾಡುತ್ತಿದ್ದುದನ್ನು ದೂರದಿಂದಲೇ ಗಮನಿಸಿದ. ಆಗ ಆತನಿಗೆ ಗೂಟದ ಮಾಲೀಕ ಹೇಳಿದ ಎರಡನೇ ಮೌಲ್ಯ ಸತ್ಯವಾಗಿತ್ತು. ತಕ್ಷಣ ಅರಮನೆಗೆ ಬಂದವನೇ ಪತ್ನಿ ಮತ್ತು ಸೈನಿಕ ಜೊತೆಗೆ  ಜೀವನ ಮಾಡುವಂತೆ ಹೇಳಿ ಅಲ್ಲಿಂದ ಹೊರಟು ರಾಜ್ಯಕ್ಕೆ ಬಂದನು. ರಾಜ್ಯಕ್ಕೆ ಬಂದವನೇ ನೇರವಾಗಿ ಅರಮನೆಗೆ ಬರಲಿಲ್ಲ. ಗ್ರಾಮಗಳಲ್ಲಿ ಜನರು ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವೇಷಮರೆಸಿಕೊಂಡು ಗ್ರಾಮಕ್ಕೆ ತೆರಳಿದ. ಜನರು ಕುಳಿತು ಹರಟೆ ಹೊಡೆಯುತ್ತಿದ್ದುದನ್ನು ಗಮನಿಸಿದ. ಅಲ್ಲಿ ಏನು ನಡೆಯುತ್ತಿದೆ ನೋಡಬೇಕೆಂದು ಸಮೀಪಕ್ಕೆ ಬಂದು ಕುಳಿತ. ಅವರು ರಾಜ್ಯದ ಮಂತ್ರಿಯ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ರಾಜ ಕಾಣಿಸುತ್ತಿಲ್ಲ , ರಾಣಿಯು ಕಾಣಿಸುತ್ತಿಲ್ಲ. ಮಂತ್ರಿ , ರಾಜ ರಾಣಿಯರನ್ನು ಮೋಸದಿಂದ ಕೊಂದು ಹಾಕಿ ರಾಜ್ಯಭಾರ ಮಾಡುತ್ತಿದ್ದಾನೆ. ಅರಮನೆಯ ಎಲ್ಲಾ ಸ್ವತ್ತುಗಳನ್ನು ಲೂಟಿ ಮಾಡಿದ್ದಾನೆ. ಸುಖದ ಸುಪ್ಪತ್ತಿಗೆಯಲ್ಲಿ ಮೆರೆಯುತ್ತಿದ್ದಾನೆ ಎಂಬುದಾಗಿ ಮಾತನಾಡಿ ಕೊಳ್ಳುತ್ತಿದ್ದರು. ಇದನ್ನು ಕೇಳಿಕೊಂಡ ರಾಜ ನೇರವಾಗಿ ಅರಮನೆಗೆ ಬಂದು , ಮಂತ್ರಿಯನ್ನು ಕರೆಸಿದನು. ರಾಜ್ಯದ ಸ್ಥಿತಿಗತಿಯ ಬಗ್ಗೆ ವಿಚಾರಿಸಿದ. ಎಲ್ಲಾ ಸುಭಿಕ್ಷೆಯಿಂದ ಇರುವುದಾಗಿ ಮಂತ್ರಿ ತಿಳಿಸಿದ. ತಮ್ಮ ಗೈರುಹಾಜರಿಯಲ್ಲಿ ಯಾವುದೇ ತೊಂದರೆ ಬಾರದಂತೆ ನೋಡಿಕೊಂಡಿದ್ದೇನೆ ಮತ್ತು ಅರಮನೆಯ ಸಂಪತ್ತು ಹೆಚ್ಚಳವಾಗಿರುವುದನ್ನು ಮಂತ್ರಿ ರಾಜನ ಗಮನಕ್ಕೆ ತಂದ. ಆಗ ರಾಜ ಆಲೋಚಿಸಿದ. ನಾನೇನಾದರೂ ಊರಿನವರ ಹೇಳಿಕೆಯನ್ನು ಸರಿ ಎಂದು ತಿಳಿದು ಮಂತ್ರಿಗೆ ಶಿಕ್ಷೆ ಕೊಟ್ಟಿದ್ದರೆ ಅನಾಹುತವಾಗುತ್ತಿತ್ತು. ಹಾಗಾಗಿ ಗೂಟದ ಮಾಲೀಕ ಹೇಳಿದ ಮೂರನೇ ಮೌಲ್ಯವೂ ಸತ್ಯವಾಗಿತ್ತು. ಮಾರನೆಯದಿನ ಗೂಟದ ಮಾಲೀಕನನ್ನು ಅರಮನೆಗೆ ಕರೆಸಿ , ಅವನು ನಿಗದಿಪಡಿಸಿದಕ್ಕಿಂತ ಹೆಚ್ಚಿಗೆ ಮೌಲ್ಯ ನೀಡಿದನು ಮತ್ತು ಮೌಲ್ಯಗಳಿಗೆ ಬಹುಮಾನವನ್ನು ನೀಡಿ ಕಳಿಸಿಕೊಟ್ಟನು.
      ಈ ಕಥೆಯಲ್ಲಿ ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ನಾಣ್ನುಡಿ ನೆನಪಿಗೆ ಬರುತ್ತದೆ. ಗಾದೆಗಳು ಜೀವನದ ಅನುಭವದಿಂದ ಮೂಡಿಬಂದ ಮಾತುಗಳು. ಸಂಭ್ರಮದ ಜೀವನಕ್ಕೆ ಈ ಮಾತುಗಳು ಅನುಸರಣೀಯ......!
..........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************* 

Ads on article

Advertise in articles 1

advertising articles 2

Advertise under the article