-->
ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 26

ಪದಗಳ ಆಟ ಭಾವ ಚಿತ್ರ ಪಾತ್ರ : ಸಂಚಿಕೆ - 26


ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 26

                      ಕಲ್ಲು ಹೇಳಿದ ಕಥೆ
             ನಾನು ಸಾರನಾಥದಲ್ಲಿರುವ ರಾಜ ಸ್ತಂಭ. ನನಗೆ ರೂಪಕೊಟ್ಟ ಜನಕ, ನಾಡಿನ ಶೋಕವನ್ನು ವಿದೂರ ಮಾಡಿದ ಸಾಮ್ರಾಟ ಮೌರ್ಯರ ಮೂರನೆಯ ಮತ್ತು ಕೊನೆಯ ರಾಜ. ಹೆಚ್ಚುಕಡಿಮೆ ಭಾರತ ಉಪಖಂಡವನ್ನು ಆತನ ಮೌರ್ಯ ಸಾಮ್ರಾಜ್ಯ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು. 
        ನೀವೆಲ್ಲಾ ನನ್ನ ಚಿತ್ರವನ್ನು ಪ್ರತಿಕೃತಿಯನ್ನು ಭಾರತೀಯತೆಯ ಪ್ರತೀಕವಾಗಿ ಬಳಸುತ್ತಿದ್ದೀರಿ. ಆದರೆ ನನ್ನ ಜನ್ಮಕ್ಕೆ ಕಾರಣರಾದ ನನಗೆ ಪ್ರಿಯನಾದ, ಜನಪ್ರಿಯನಾದ, ದೇವನಾಂಪ್ರಿಯನನ್ನು ಬಲ್ಲಿರಾ? ಆತನ ಯಶೋಗಾಥೆ, ವಿಜಯದ ಕಥೆ ತಿಳಿದಿರುವಿರಾ? ಪ್ರಜೆಗಳನ್ನು ತನ್ನ ಮಕ್ಕಳಂತೆ ನೋಡಿಕೊಂಡ ರಾಜಾ ಪ್ರತ್ಯಕ್ಷ ದೇವತಾ. ಆತನ ಬಗ್ಗೆ ಕೇಳಿರುವಿರಾ? ಬೃಹತ್ ಸಾಮ್ರಾಜ್ಯದ ಮಹಾಕಲಿ ನನ್ನ ರಾಜ. 
            ಬಾಲ್ಯದಲ್ಲಿ ಸೌಂದರ್ಯ ವಿಹೀನನಾಗಿರುವುದಕ್ಕಾಗಿ ತನ್ನ ಜನ್ಮದಾತ, ಜನಕ, ಪಿತನಿಂದ ದೂರವಾದವನು. ಪಿತನ ಹಿತ ಅಪ್ಪುಗೆಯ ಸುಖದಿಂದ ವಂಚಿತನಾದವನು. ಇದಕ್ಕಾಗಿಯೇ ಉತ್ತರಾಧಿಕಾರಿಯಾಗಲು ಅನರ್ಹ ಎಂಬ ತೀರ್ಮಾನವಾಗಿತ್ತು. ಆದರೆ ನನ್ನ ಸೃಷ್ಟಿಕರ್ತ ಆಡಳಿತ, ನ್ಯಾಯ, ಸಮರ ಕಲೆಗಳಲ್ಲಿ ನಿಪುಣ, ಪರಿಣತ. ರಾಜಕೀಯದ ಭಗವದ್ಗೀತೆ ಅರ್ಥಶಾಸ್ತ್ರ ಕೋವಿದ, ವಿಬುಧ. 
       ತನ್ನ 18ರ ವಯಸ್ಸಿನಲ್ಲೇ ಕಲ್ಲು ತಿಂದು ಕಲ್ಲು ಕರಗಿಸಬಲ್ಲ ಪ್ರಾಯದಲ್ಲಿ ರಾಜಕುಮಾರನನ್ನು ತಕ್ಷಶಿಲಾ ದಂಗೆಯನ್ನು ನಿಯಂತ್ರಿಸಲು ಕಳುಹಿಸಲಾಯಿತು. ತಕ್ಷಶಿಲಾದ ಗೆಲುವು, ಯಶಸ್ಸು, ವಿಜಯದ ಬಳಿಕ ಉಜ್ಜಯಿನಿಯ ವಾಣಿಜ್ಯ ಕೇಂದ್ರದ ನಿರ್ವಹಣಾಧಿಕಾರಿಯಾಗಿ ಕಾರ್ಯಭಾರವನ್ನು ವಹಿಸಲಾಯಿತು. ತಂದೆ ಮರಣ ಶಯ್ಯೆಯಲ್ಲಿ ಇದ್ದಾಗ ಮಂತ್ರಿಗಳು ನನ್ನ ರಾಜನಿಗೆ ಪಟ್ಟಾಭಿಷೇಕ ಮಾಡಿಸಿದರು. ಯೋಗ್ಯತೆಗೆ ಸಂದ ಭಾಗ್ಯವದು. 
      ತಾತ ಮುತ್ತಾತಂದಿರಿಗೆ ದಾರಿ ದೀವಿಗೆಯಾಗಿದ್ದ ವಿಷ್ಣುಗುಪ್ತ ರಚಿತ ಅರ್ಥಶಾಸ್ತ್ರದಲ್ಲಿ ತರಬೇತಿ ಯುವರಾಜನನ್ನು ಪ್ರಬಲನನ್ನಾಗಿಸಿತು. ಹಾಗೆಯೇ ರಾಜ್ಯವು ಪ್ರಬಲವಾಯಿತು. ಬುದ್ಧಿವಂತನೂ ವಿವೇಕಿಯೂ ಆದ ನನ್ನ ರಾಜ ಪ್ರಜಾ ರಂಜಕನೂ ಆದ. ಪ್ರಜೆಗಳ ಹಿತವೇ ಸ್ವಹಿತ ಎಂದು ಭಾವಿಸಿದ, ಭಾವಿಸಿದಂತೆ ಕಾರ್ಯೋನ್ಮುಖನಾದ, ಕಾರ್ಯತತ್ಪರನಾದ. 
        ಹಿಂದೂಗಳ 'ಧರ್ಮ' ಪರಿಕಲ್ಪನೆಯನ್ನು ಸಶಕ್ತವಾಗಿ ಅನುಷ್ಠಾನಕ್ಕೆ ತಂದ. ನನ್ನ ರಾಜನ ಪ್ರಕಾರ ಧರ್ಮ ಎಂದರೆ ಜೀವನದಲ್ಲಿ ವ್ಯಕ್ತಿಯ ಹೊಣೆಗಾರಿಕೆ, ಜವಾಬ್ದಾರಿ. ಜೊತೆಗೆ ಸರ್ವರ ಸುಖ, ಸನ್ನಡತೆ. ಇದರೊಂದಿಗೆ ಶಾಂತಿ, ಸಹಿಷ್ಣುತೆ, ಅರ್ಥಮಾಡಿಕೊಳ್ಳುವಿಕೆ, ಕರುಣೆ, ದಾನ, ಸತ್ಯ, ಪರಿಶುದ್ಧತೆ ಮೊದಲಾದ ಸದ್ಗುಣಗಳು ಸೇರಿಕೊಳ್ಳುತ್ತವೆ.
      ನನ್ನ ರಾಜನ ಆಡಳಿತದಲ್ಲಿ ರಾಜ್ಯವು ಬಹಳಷ್ಟು ವಿಸ್ತರಿಸಿತು. ಪಶ್ಚಿಮದಲ್ಲಿ ಇರಾನ್ ವರೆಗೆ, ಪೂರ್ವದಲ್ಲಿ ಬರ್ಮಾದ ತನಕ, ಇಡೀ ದಕ್ಷಿಣ ಭಾರತ ಮೌರ್ಯ ಸಾಮ್ರಾಜ್ಯದ ಒಡಲಿಗೆ. ಈ ಸಮರಕಲಿ ಮಾಡಿದ ಕೊನೆಯ ಯುದ್ಧ ಕಳಿಂಗ ಯುದ್ಧ. ಈ ಸಂದರ್ಭದಲ್ಲಿ ಸಾವಿರಾರು ನಗರಗಳನ್ನು ಧ್ವಂಸ ಮಾಡಲಾಯಿತು. ಲಕ್ಷಾಂತರ ಜನರ ಹನನವಾಯಿತು. ಯುದ್ಧದ ನಂತರ ರಾಜ ವಿಜಯ ಮಾಲೆಯನ್ನು ಧರಿಸಿ ನಗರ ಸಂದರ್ಶನವನ್ನು ಮಾಡುತ್ತಾ ಹೋದಾಗ ಆತನಿಗೆ ಕಂಡದ್ದು ಸುಟ್ಟ ಮನೆಗಳು, ಅಸ್ತವ್ಯಸ್ತವಾಗಿ ಹರಡಿದ ಹೆಣಗಳು, ಅದೆಷ್ಟೋ ವಿಧವೆಯರು, ಅನಾಥರು. ಈ ತರಹದ ಯುದ್ಧದ ಘೋರ ಪರಿಣಾಮಗಳಿಗೆ ಮುಖಾಮುಖಿಯಾದ ನಮ್ಮ ರಾಜ ತನ್ನ ಹಿಂಸಾ ಕೃತ್ಯಗಳಿಗೆ ಮನನೊಂದ. ಪಶ್ಚಾತ್ತಾಪದ ಬೇಗುದಿಯಲ್ಲಿ ಬೆಂದು ಹೋದ. ಬ್ರಾಹ್ಮಣ ಹಾಗೂ ಬುದ್ಧ ಗುರುಗಳ ನಿರ್ದೇಶನದಲ್ಲಿ ಬೌದ್ಧ ತತ್ವಗಳನ್ನು ರಾಜ್ಯದಾದ್ಯಂತ ಪಸರಿಸಲು ಕಟಿಬದ್ಧನಾದ. ಧರ್ಮಿಷ್ಠ ನಾಗಲು ತೀರ್ಮಾನ ಕೈಗೊಂಡ. ಜನಹಿತಕ್ಕೆ ತನ್ನ ಜೀವನವನ್ನು ಮುಡುಪಾಗಿಟ್ಟ. 
      ವಿಶ್ವಾಸಿ ಮಂತ್ರಿ ಮಂಡಲವನ್ನು ರಚಿಸಿದ. ನೂತನ ಆಡಳಿತ ನೀತಿಯನ್ನು ಜಾರಿಗೆ ತರುವ ಮೊದಲು ವ್ಯಾಪಕ ಚರ್ಚೆಯ ನಿಕಷಕ್ಕೆ ಅದನ್ನು ಒಡ್ಡಿದ. ತನ್ನ ಸಲಹಾ ಸಮಿತಿಯಲ್ಲಿ ಯುವರಾಜ, ಮಹಾಮಂತ್ರಿ, ಸೇನಾಪತಿ, ಪುರೋಹಿತರನ್ನು ಸೇರಿಸಿ ಕೊಂಡ. ಹಿಂದಿನ ರಾಜರುಗಳ ಕಾಲದಲ್ಲಿ ಕಂಡರಿಯದ ಅನೇಕ ಶಾಸನಗಳನ್ನು ಜಾರಿಗೆತಂದ. ರಾಜ್ಯವನ್ನು ಪ್ರದೇಶಗಳಾಗಿ, ವಿಷಯಗಳಾಗಿ, ಜನ ಪದಗಳಾಗಿ, ಗ್ರಾಮಗಳಾಗಿ ವಿಭಜಿಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸಿದ. ಸುಸೂತ್ರಗೊಳಿಸಿದ. ಕಾಲಕಾಲಕ್ಕೆ ಆಡಳಿತಾಧಿಕಾರಿಗಳನ್ನು ಬದಲಿಸುತ್ತಾ ಆಡಳಿತ ಯಂತ್ರವನ್ನು ಸುಸ್ಥಿರ ಗೊಳಿಸಿದ. ಸುದ್ದಿಗಾರರನ್ನು ನೇಮಿಸಿ ಸಾರ್ವಜನಿಕ ಸಂಗತಿಗಳನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಕ್ರಮಕೈಗೊಳ್ಳುತ್ತಿದ್ದ. ನ್ಯಾಯ, ಅರ್ಥ, ತೆರಿಗೆ ವಾಣಿಜ್ಯ, ಕೃಷಿ ಹೀಗೆ ಅನೇಕ ರಂಗಗಳಲ್ಲಿ ಬದಲಾವಣೆಗಳನ್ನು ತಂದ. ಪರಿಣಿತ ಬೇಹುಗಾರಿಕೆ ಜಾಲವನ್ನು ಹೊಂದಿದ್ದ. ಜನಗಣತಿ, 
ಜಾತಿ, ವೃತ್ತಿ ಗಣತಿಯ ಮೂಲಕ ದೊರೆತ ಅಂಕಿ ಅಂಶಗಳ ಆಧಾರದಲ್ಲಿ ಕಾಲಕಾಲಕ್ಕೆ ಬದಲಾವಣೆಗಳನ್ನು ಮಾಡಿದ. ಎಲ್ಲಾ ಆಡಳಿತ ಸೂಕ್ಷ್ಮಗಳನ್ನು ಹೊಂದಿದ ಅವನ ಆಡಳಿತ ವ್ಯವಸ್ಥೆ ನಮ್ಮ ಸಂವಿಧಾನಕ್ಕೆ ಆಧಾರವಾಗಿ ಕಂಡುಬಂತು. ಜನರು ನೆಮ್ಮದಿಯ ಜೀವನವನ್ನು ಸಾಗಿಸಲು ಬೇಕಾದಂತಹ ಬೌದ್ಧ ತತ್ವಗಳನ್ನು 14 ಶಾಸನಗಳಲ್ಲಿ ವಿವಿಧ ಪ್ರದೇಶಗಳಲ್ಲಿ ಕೆತ್ತಿಸಿದ. ಬೌದ್ಧ ತತ್ವಗಳನ್ನು ಪ್ರಚಾರ ಮಾಡಲು ಹಿಮಾಲಯ, ಶ್ರೀಲಂಕಾ, ಗ್ರೀಕ್ ಮುಂತಾದ ಕಡೆಗಳಿಗೆ ತನ್ನ ಕುಟುಂಬದ ಸದಸ್ಯರನ್ನು ನೇಮಿಸಿದ. 
      ನನ್ನ ರಾಜ ಮೊತ್ತಮೊದಲು ಶಿಲ್ಪಕಲೆಗೆ ಶ್ರೀಕಾರ ಹಾಕಿದವನು. ಶಾಸನಗಳನ್ನು ಕೆತ್ತಿಸಿದವನು. ಭಾರತದ ಮುದ್ರಾಂಕಿತದಲ್ಲಿ ಇಂತಹ ನಿರ್ಮಾಣಗಳಲ್ಲಿ ಒಂದಾದ ನನ್ನ ಸ್ತಂಭದ ಸಿಂಹಗಳನ್ನು ಕಾಣುತ್ತೀರಿ. 
      ಬಹುಜನ ಹಿತಾಯ ಬಹುಜನ ಸುಖಾಯ ಎಂಬಂತೆ ನಡೆದುಕೊಂಡ ರಾಜನ ಧರ್ಮಕಾರ್ಯಗಳು ವಿಪುಲ. ಸಮಾಜಕಲ್ಯಾಣ ಚಟುವಟಿಕೆಗಳು ಹೇರಳ. ಜನರಿಗೆ ಮತ್ತು ಪ್ರಾಣಿಗಳಿಗೆ ಔಷಧೋಪಚಾರ ಸೇವೆ, ಗಿಡಮೂಲಿಕಾ ವನ, ಬಾವಿಗಳ ನಿರ್ಮಾಣ, ರಸ್ತೆಯ ಇಕ್ಕೆಲಗಳಲ್ಲಿ ಸಾಲುಮರಗಳ ನೆಡಿಸುವಿಕೆ... ಇಂತಹ ನಿತ್ಯ ಅಗತ್ಯದ ಸಂಗತಿಗಳಿಗೆ ಗಮನ ಕೊಡುತ್ತಿದ್ದ. ತನ್ನ ಇಡೀ ಸಾಮ್ರಾಜ್ಯವನ್ನು ಸಂದರ್ಶಿಸಲು ರಾಜ 256 ದಿನ ತೆಗೆದುಕೊಳ್ಳುತ್ತಿದ್ದ ಎಂದರೆ ಅದರ ವ್ಯಾಪಕತೆಯನ್ನು, ವಿಸ್ತಾರವನ್ನು ನೀವೇ ಕಲ್ಪಿಸಿಕೊಳ್ಳಿ.    
        'ಜಾತಸ್ಯ ಮರಣಂ ಧ್ರುವಂ' ಎಂಬಂತೆ ನನ್ನ ರಾಜನು ಅಸ್ತಂಗತನಾದ. ಆದರೆ ನಾನು ಹಾಗೂ ನನ್ನಂತಹ ಎಷ್ಟೋ ಅವನ ನಿರ್ಮಿತಿಗಳು ಅವನ ಕತೆಯನ್ನು ಹೇಳುತ್ತಲೇ ಬಂದಿದ್ದೇವೆ.ಇನ್ನಷ್ಟು ಕಥೆ ಕೇಳಲು ಬನ್ನಿ ನೇಪಾಲಕ್ಕೆ, ಲುಂಬಿನಿಗೆ, ಬೌದ್ಧ ಸ್ತೂಪ ದೆಡೆಗೆ, ಧರ್ಮ ಶಾಸನಗಳು ಮಾತನಾಡುವಲ್ಲಿಗೆ. ಅಸಂಖ್ಯ ಕಲ್ಲುಗಳಲ್ಲಿ, ಸ್ತೂಪಗಳಲ್ಲಿ, ಶಾಸನಗಳಲ್ಲಿ, ಸಾಲುಮರಗಳಲ್ಲಿ, ಭಾರತದ ಧ್ವಜದಲ್ಲಿ, ಚಕ್ರದಲ್ಲಿ ಚಕ್ರವರ್ತಿ ಇದ್ದಾನೆ. ದೇವನಾಂಪ್ರಿಯ ನಿದ್ದಾನೆ, ಧರ್ಮಬೀರು ಇದ್ದಾನೆ, ಶಾಂತಿದೂತನಿದ್ದಾನೆ.
       ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************


Ads on article

Advertise in articles 1

advertising articles 2

Advertise under the article