
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ : ಸಂಚಿಕೆ -15
Saturday, January 15, 2022
Edit
ಜಗಲಿಯ ಮಕ್ಕಳಿಗೆ
ಅಕ್ಕನ ಪತ್ರ - 15
ನಮಸ್ತೆ ಮಕ್ಕಳೇ ಚೆನ್ನಾಗಿದ್ದೀರಿ ಅಲ್ವಾ?
ಪತ್ರವನ್ನು ಓದಿ ಪ್ರತಿಕ್ರಿಯಿಸುವ ನಿಮ್ಮ ಪ್ರೀತಿಗೆ ಧನ್ಯವಾದಗಳು......
ನಮ್ಮ ಸುತ್ತಮುತ್ತಲೆಲ್ಲ ಗೆಳೆಯರ ಬಳಗವಿದೆ. ಆಟ ಪಾಠಗಳಲ್ಲಿ ಜೊತೆಯಾಗುತ್ತಾ ಸಂಭ್ರಮಿಸುತ್ತೇವೆ. ನೋವು ನಲಿವುಗಳನ್ನು ಹಂಚಿಕೊಳ್ಳುತ್ತಾ ಬದುಕಿನ ಹಾದಿಯಲ್ಲಿ ಕೆಲವರು ಹೆಚ್ಚು ಆಪ್ತರಾಗುತ್ತಾರೆ.
ಇದು ಕಪ್ಪೆಗಳ ಕಥೆ. ಹೀಗೆಯೇ ಗೆಳೆಯರಾದ ಕಪ್ಪೆಗಳೆಲ್ಲರೂ ವಿಶಾಲವಾದ ಕಾಡಿನೊಳಗೆ ಹೋಗುತ್ತಿದ್ದರು. ಹರಟೆ ಹೊಡೆಯುತ್ತಾ...... ಕುಪ್ಪಳಿಸುತ್ತಾ...... ಸಾಗುತ್ತಿದ್ದಂತೆಯೇ ಮಾತಿನ ಗುಂಗಿನಲ್ಲಿದ್ದ ಎರಡು ಕಪ್ಪೆಗಳು ಅಲ್ಲಿಯೇ ಬದಿಯಲ್ಲಿದ್ದ ಪ್ರಪಾತದೊಳಗಿನ ಬದಿಯ ಕಲ್ಲಿನಲ್ಲಿ ಸಿಕ್ಕಿಹಾಕಿಕೊಂಡವು. ಕೆಳಗೆ ಬಿದ್ದರೆ ಜೀವ ಹೋಗೋದು ಖಂಡಿತಾ! ದಡಕ್ಕೆ ಹಾರಿ ಪಾರಾಗೋಣ ಅಂದರೆ....... ಸ್ವಲ್ಪ ಹೆಚ್ಚು ಆಳದಲ್ಲಿಯೇ ಇದ್ದರು. ಉಳಿದ ಗೆಳೆಯರೆಲ್ಲಾ ಜಿಗಿದು ಮೇಲೆ ಬರುವಂತೆ ಹುರಿದುಂಬಿಸುತ್ತಿದ್ದರು. ಎರಡು ಕಪ್ಪೆಗಳು ಮೇಲೆ ಬರಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗುತ್ತಿರಲಿಲ್ಲ. ಮೈತುಂಬಾ ಗಾಯಗಳಾದವು. ಪ್ರಪಾತವನ್ನು ಸುತ್ತುವರಿದು ಮೇಲೆ ನಿಂತ ಕಪ್ಪೆಗಳೆಲ್ಲಾ, "ಇನ್ನು ನಿಮ್ಮಿಂದ ಸಾಧ್ಯವಿಲ್ಲ. ಎಷ್ಟೊಂದು ನೋವು ಅನುಭವಿಸ್ತೀರಿ. ಬಿದ್ದು ಬಿಡಿ ಕೆಳಕ್ಕೆ" ಎಂದು ಬಿಟ್ಟರು. ಅವರಿಗೂ ಏನೂ ಮಾಡಲು ಸಾಧ್ಯವಿರಲಿಲ್ಲ. ಅದುವರೆಗೂ ಪ್ರಯತ್ನಿಸುತ್ತಲೇ ಇದ್ದ ಎರಡು ಕಪ್ಪೆಗಳಲ್ಲಿ ಒಂದನೆಯ ಕಪ್ಪೆಗೆ ಇವರ ಮಾತು ಹೌದೆನಿಸಿತು. ಇನ್ನು ನಾನು ಮೇಲೇರಲು ಸಾಧ್ಯವೇ ಇಲ್ಲ,... ದೇಹವೆಲ್ಲಾ ದುರ್ಬಲವಾಗುತ್ತಿದೆ... ಸತ್ತೇ ಹೋಗುತ್ತೇನೆ.... ಎಂದು ಕೆಳಗೆ ಬಿದ್ದು ಪ್ರಾಣ ಕಳೆದುಕೊಂಡಿತು......!
ಅರೆ...! ಇನ್ನೊಂದು ಕಪ್ಪೆ ಮೊದಲಿನಷ್ಟೇ ಸ್ಫೂರ್ತಿಯಿಂದ ಪ್ರಯತ್ನಿಸುತ್ತಲೇ ಇದೆ....!
ಮೇಲಿನಿಂದ ಗೆಳೆಯರೆಲ್ಲಾ, ನಿನ್ನಿಂದ ಇನ್ನು ಕಷ್ಟವೇ... ನೀನೂ ಹಾರಿಬಿಡು....! ಸಾಕು ನೋವು ಅನುಭವಿಸಿದ್ದು... ಎಂದು ಒಂದೇ ಸಮನೆ ಕೂಗುತ್ತಿವೆ. ಕತ್ತಲಾಗುತ್ತಾ ಬಂತು..... ಗೆಳೆಯರೆಲ್ಲಾ ತಾವು ಹೊರಡುತ್ತೇವೆ ಎಂದು ಜೋರಾಗಿ ಕಿರುಚಲಾರಂಭಿಸಿದರು. ಆಶ್ಚರ್ಯ..! ತನ್ನ ಶಕ್ತಿಯನ್ನೆಲ್ಲಾ ಒಟ್ಟು ಸೇರಿಸಿ ಜಿಗಿದ ಕಪ್ಪೆ ದಡ ಸೇರಿತು. ಗೆಳೆಯರೆಲ್ಲಾ ಆನಂದದಿಂದ ಸುತ್ತುವರಿದರು. "ಅಲ್ಲಾ.... ನಾವು ನಿನ್ನಿಂದ ಸಾಧ್ಯವಿಲ್ಲ ಎಂದು ಅಷ್ಟು ಹೇಳುತ್ತಿದ್ದರೂ ನಿನಗೆಲ್ಲಿಂದ ಬಂತು ಇಷ್ಟು ಶಕ್ತಿ.....?" ಎಂದು ಕೇಳಿದ್ರು. ಆಗ ಈ ಕಪ್ಪೆಯು, "ನನಗೆ ಕಿವಿಗಳು ಸರಿಯಾಗಿ ಕೇಳಿಸೋದಿಲ್ಲ... ದೂರದಿಂದ ನೀವು ಏನು ಹೇಳ್ತಿದ್ದೀರಿ ಅನ್ನೋದೇ ಗೊತ್ತಾಗ್ತಿರಲಿಲ್ಲ.. ನೀವೆಲ್ಲರೂ ,ನನ್ನಲ್ಲಿ ಹೆಚ್ಚು ಹೆಚ್ಚು ಸ್ಫೂರ್ತಿ ತುಂಬಿಸುತ್ತಿದ್ದೀರಿ ಅಂದುಕೊಳ್ಳುತ್ತಿದ್ದೆ... ಪ್ರತಿ ಬಾರಿ ಸೋತಾಗಲೂ ನನ್ನಿಂದ ಸಾಧ್ಯವಾಗಬಹುದು ಎನ್ನುವ ಧೈರ್ಯ ನೀವು ತುಂಬಿದ್ದು... ಹಾಗಾಗಿ ಬದುಕಿದೆ" ಎಂದು ಬಿಟ್ಟಿತು...!
ನಮ್ಮ ಸುತ್ತಲೂ ಇಂತಹ ಅನೇಕ ಸಂದರ್ಭಗಳು ಬಂದೊದಗಬಹುದು. ಈ ಕತೆಯಲ್ಲಿ ನಾವು ತಿಳಿದುಕೊಳ್ಳಬಹುದಾದ ಅಂಶ ಯಾವುದು....? ಮೊದಲನೇ ಕಪ್ಪೆ ಯಾಕೆ ಇದ್ದಕ್ಕಿದ್ದಂತೆ ದುರ್ಬಲವಾಯಿತು? ಎರಡನೇ ಕಪ್ಪೆಗೆ, ಅಸಾಧ್ಯವೆಂದೆನಿಸಿದ್ದನ್ನು ಸಾಧಿಸಲು ಸಾಧ್ಯವಾದದ್ದು ಹೇಗೆ....?
ನಿಮ್ಮದೇ ಆಲೋಚನೆಗಳನ್ನು ಅಕ್ಷರರೂಪಕ್ಕಿಳಿಸಿ ನಮಗೆ ಕಳುಹಿಸಿ.... ನಿಮ್ಮ ಭಾವಗಳನ್ನು ಓದುವುದು ಸಂಭ್ರಮ ನಮಗೆ. ಪತ್ರಕ್ಕೆ ಉತ್ತರಿಸಿದ , ಉತ್ತರಿಸುತ್ತಿರುವ ಎಲ್ಲ ಗೆಳೆಯ ಗೆಳತಿಯರಿಗೂ ನನ್ನ ಪ್ರೀತಿಯ ವಂದನೆಗಳು. ನಿಮ್ಮ ಬರೆಯುವ ಸಾಧ್ಯತೆಯನ್ನು ಇನ್ನಷ್ಟು ಗಟ್ಟಿಗೊಳಿಸಲು ಜಗಲಿಯ ಬಾಂಧವ್ಯ ಎಂದೆಂದೂ ಜೊತೆಗಿರಲಿ.. ಆರೋಗ್ಯ ಜೋಪಾನ. ಇನ್ನು ನನ್ನ ನಿಮ್ಮ ಭೇಟಿ..... ಮುಂದಿನ ಪತ್ರದೊಂದಿಗೆ...... ಅಲ್ಲಿಯವರೆಗೆ ಅಕ್ಕನ ನಮನಗಳು.
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************