-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 25

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 25

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 25

          ಕಂಠದಲ್ಲಿ ವೀಣೆ ಧರಿಸಿದ ಸ್ವರ ಸಾಮ್ರಾಜ್ಞಿ
     ಇಬ್ಬನಿ ತೊಯ್ದ ಸುಂದರ ಮುಂಜಾವಿನಲ್ಲಿ ನೀವು ದೇವಸ್ಥಾನಗಳ ಬಳಿ ಇದ್ದರೆ ಖಂಡಿತ ಅತಿಮಧುರ ಸ್ವರದಲ್ಲಿ ಹಾಡಿದ ವೆಂಕಟೇಶ್ವರ ಸುಪ್ರಭಾತ ಕೇಳಿಯೇ ಇರುತ್ತೀರಿ. ಇದೊಂದು ಕರ್ಣಾಮೃತ, ಕರ್ಣ ರಸಾಯನ. ಈ ಸ್ವರ್ಗಸದೃಶ ಸಂಗೀತ ಭಾರತದ ಮೂಲೆ ಮೂಲೆಗಳಲ್ಲಿ ಹೆಚ್ಚೇಕೆ ವಿದೇಶದಲ್ಲೂ ನಾದತರಂಗಗಳಿಂದ ತೊಯ್ದಿದೆ. ಈ ಸುಸ್ವರ ಸಾಮ್ರಾಜ್ಞಿ ಸಂಗೀತ ರಸಿಕರ ಹೃದಯ ಸಾಮ್ರಾಜ್ಞಿಯಾದದ್ದು ಒಂದು ರೋಚಕ ಕಥೆ. 
        ದುಂಡಾದ ಲಕ್ಷಣವಾದ ಮುಖಾರವಿಂದದಲ್ಲಿ ಕಾಸಿನಗಲದ ಕುಂಕುಮ ಬೊಟ್ಟು, ನಾಮದ ಮೆರುಗು. ನಾಸಿಕಕ್ಕೆ ವಜ್ರದ ಸಾಂಪ್ರದಾಯಿಕ ನತ್ತು. ಗುಂಗುರು ಕೂದಲ ತುರುಬು.ಮುಡಿದ ಸುವಾಸನೆ ಬೀರುವ ಮಲ್ಲಿಗೆ. ಇದು ಕುಂಜಮ್ಮನ ಅನನ್ಯತೆ.
           ತನ್ನ ಹನ್ನೊಂದನೆಯ ವಯಸ್ಸಿನಲ್ಲಿ ಕಚೇರಿ ಕೊಟ್ಟ ಕುಂಜಮ್ಮ ಸಂಗೀತದ ಮೇರು ಗಿರಿಯನ್ನೇರಿ ಸ್ವರ ಸಾಮ್ರಾಜ್ಞಿಯಾಗಿ ರಾರಾಜಿಸಿದ ಭಾರತದ ಕೋಗಿಲೆ. 
      ಈಕೆ ವೀಣಾವಾದಕಿ ಷಣ್ಮುಖ ವಡಿವೇಲ್ ಅಮ್ಮ ಮತ್ತು ಸುಬ್ರಹ್ಮಣ್ಯ ಅಯ್ಯರ್ ದಂಪತಿಗೆ ದೇವಾಲಯಗಳ ನಗರ ಮಧುರೈಯಲ್ಲಿ ಜನಿಸಿದರು. ಅಜ್ಜಿ ಅಕ್ಕಮ್ಮ ವೈಲಿನ್ ಪ್ರವೀಣೆ. ದೇವದಾಸಿ ಕುಟುಂಬದ ತಾಯಿ ನಿತ್ಯ ವೀಣೆಯಲ್ಲಿ ಅಭ್ಯಾಸ ನಿರತೆ. ಎದ್ದರೆ, ಕುಳಿತರೆ, ಮಲಗಿದರೆ ಸಂಗೀತವೇ.... ನಾದಮಯ ಪರಿಸರದಲ್ಲಿ ಸಂಗೀತವನ್ನೇ ಉಸಿರಾಡುತ್ತಾ ಬೆಳೆದವರು ಕುಂಜಮ್ಮ. ತಾಯಿಯ ದೈನಂದಿನ ವೀಣಾವಾದನ ಕೇಳಿಯೇ ಅಖಂಡ ಸಂಗೀತ ನಿಧಿಯನ್ನು ಗ್ರಹಿಸಿದ ಕುಶಾಗ್ರಮತಿ. ಕರ್ನಾಟಕ ಸಂಗೀತವನ್ನು ಎಳವೆಯಿಂದಲೇ ಶೆಮ್ಮಗುಂಡಿ ಶ್ರೀನಿವಾಸ್ ಅವರಿಂದ ಕಲಿಯಲಾರಂಭಿಸಿದರು. ಹಿಂದೂಸ್ತಾನಿ ಸಂಗೀತವನ್ನು ಪಂಡಿತ್ ನಾರಾಯಣರಾವ್ ಅವರಿಂದ ಅಭ್ಯಾಸ ಮಾಡಿದರು. ಈ ಗುರುಗಳಲ್ಲದೆ ಕರೈಕುಡಿ ಸಾಂಬಶಿವಯ್ಯ, ರಾಮಾನುಜ ಅಯ್ಯಂಗಾರ್ ಮುಂತಾದ ಸಂಗೀತ ದಿಗ್ಗಜರ ಸಹವಾಸದ ಸುವರ್ಣ ಅವಕಾಶ ಅವರಿಗೆ ಒದಗಿ ಬಂದಿತ್ತು. 
        ಇವರ ಹತ್ತನೆಯ ವಯಸ್ಸಲ್ಲೇ ಧ್ವನಿಮುದ್ರಿಕೆ ಬೆಳಕುಕಂಡಿತ್ತು. ಹನ್ನೊಂದನೆಯ ವಯಸ್ಸಲ್ಲಿ ತಿರುಚಿರಾಪಳ್ಳಿಯ ದೇವಾಲಯದಲ್ಲಿ ಸಂಗೀತ ಕಚೇರಿಯನ್ನು ನೀಡಿದರು. ಆ ಕಚೇರಿಗೆ ಮೈಸೂರು ಚೌಡಯ್ಯ ವೈಲಿನ್ ಹಾಗೂ ದಕ್ಷಿಣ ಮೂರ್ತಿ ಮೃದಂಗದಲ್ಲಿ ಸಾಥ್ ನೀಡಿದ್ದರು ಎನ್ನುವುದು ವಿಶೇಷ. ತನ್ನ ಹದಿಮೂರನೇ ವಯಸ್ಸಿನಲ್ಲಿ ಪ್ರತಿಷ್ಟಿತ ಮದ್ರಾಸ್ ಸಂಗೀತ ಅಕಾಡೆಮಿಯಲ್ಲಿ ಕಚೇರಿ ನೀಡಿದ ಹೆಗ್ಗಳಿಕೆ ಇವರದು. ಅಲ್ಲಿಯತನಕ ಅಕಾಡೆಮಿ ಚಿಕ್ಕ ಹುಡುಗಿಗೆ ಸಂಗೀತದ ಅವಕಾಶ ಕೊಟ್ಟಿರಲಿಲ್ಲ. ಆದರೆ ಇವರ ವಿಷಯದಲ್ಲಿ ಅಕಾಡೆಮಿಯು ಅದರ ನಿಯಮಗಳನ್ನು ಮುರಿದು ವಿಶೇಷ ಅವಕಾಶವನ್ನು ನೀಡಿತು. ಆ ಕಚೇರಿ ಆಕೆಗೆ ಉತ್ತಮ ಹೆಸರನ್ನು ತಂದುಕೊಟ್ಟಿತು. ಸಂಗೀತ ವಿಮರ್ಶಕರ ದಿಗ್ಗಜರ ಮೆಚ್ಚುಗೆಗೆ ಪಾತ್ರವಾಯಿತು. ಕೆಲವೇ ವರ್ಷಗಳಲ್ಲಿ ಕರ್ನಾಟಕ ಸಂಗೀತದ ಶ್ರೇಷ್ಠ ಗಾಯಕರಲ್ಲಿ ಇವರು ಒಬ್ಬರೆಂದು ಗುರುತಿಸಿಕೊಂಡರು.
        ವೀಣಾವಾದಕಿ ತಾಯಿಯ ಕಚೇರಿಯಲ್ಲಿ ಕೆಲವು ಸಂಗೀತ ಕೃತಿಗಳನ್ನು ಹಾಡುತ್ತಿದ್ದ ಕುಂಜಮ್ಮ ತನ್ನ 17ರ ವಯಸ್ಸಿನಲ್ಲಿ ಸ್ವಂತ ಕಚೇರಿಯನ್ನು ನೀಡಲಾರಂಭಿಸಿದರು. ನ್ಯೂಯಾರ್ಕ್, ಕೆನಡಾ, ರಷ್ಯಾಗಳಲ್ಲಿ ಭಾರತದ ಸಾಂಸ್ಕೃತಿಕ ರಾಯಭಾರಿಯಾಗಿ ಸಂಗೀತ ರಸದೌತಣವನ್ನು ನೀಡಿದರು.
      ಚೆನ್ನೈಯಲ್ಲಿ ಸೇವಾಸದನ ಚಲನಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಸಂಗೀತ ಪ್ರಧಾನವಾದ ಚಲನಚಿತ್ರಗಳಾದ ಶಾಕುಂತಲ, ಸಾವಿತ್ರಿ ಮುಂತಾದ ಚಿತ್ರಗಳಲ್ಲಿ ನಟಿಸಿದ ಅಭಿನಯ ಶಾರದೆ ಗಾಯನ ವಿಶಾರದೆ ಈಕೆ. ತಮಿಳಿನ ಮೀರಾ ಚಿತ್ರದಲ್ಲಿ ತಾನೇ ಸಂಗೀತ ಹಾಡುತ್ತಾ ಅಭಿನಯಿಸಿದ ಇವರ ಪಾತ್ರ ಸರ್ವರ ಹೃದಯವನ್ನು ಸೂರೆ ಗೊಂಡಿತು.
       ಈಕೆ ರಾಮೇಶ್ವರದ ಪ್ರತಿ ಮೂರ್ತಿಯ ಮುಂದೆ ಸಂಗೀತಗಾನ ಸೇವೆ ಮಾಡಿದರು. ಆಗಿನ ಪ್ರಧಾನಿ ನೆಹರು ಅವರು ನಾನು ಪ್ರಧಾನಿ ಮಾತ್ರ, ಈಕೆ ಸಂಗೀತ ಸಾಮ್ರಾಜ್ಞಿ ಎಂದು ತುಂಬು ಹೃದಯದಿಂದ ನುಡಿದರು. ಸಂಗೀತಜ್ಞರು ಈಕೆ ಸಂಗೀತದ ಎಂಟನೆಯ ಸ್ವರ ಎಂದು ಕೊಂಡಾಡಿದರು. ಇವರ ಭಜಗೋವಿಂದಂ, ವಿಷ್ಣುಸಹಸ್ರನಾಮ, ವೆಂಕಟೇಶ್ವರ ಸುಪ್ರಭಾತ ಜನಮಾನಸದಲ್ಲಿ ಸಂಗೀತದ ಜತೆಗೆ ಭಕ್ತಿಯ ಗಂಧವನ್ನು ಪಸರಿಸಿತು. ಈಕೆ ತಿರುಮಲ ತಿರುಪತಿ ದೇವಸ್ಥಾನದ ಆಸ್ಥಾನ ವಿದುಷಿಯಾಗಿದ್ದರು. ಕಾಂಚಿಪುರದ ಸೀರೆಗೆ ಆಕೆಯ ಹೆಸರನ್ನು ಇಟ್ಟು ಗೌರವ ನೀಡಲಾಗಿತ್ತು. ಅನೇಕ ವಿಶ್ವವಿದ್ಯಾನಿಲಯಗಳು ಇವರಿಗೆ ಗೌರವ ಡಾಕ್ಟರೇಟ್ ನೀಡಿ ತಾವು ಗೌರವಕ್ಕೆ ಪಾತ್ರವಾಗಿವೆ ಎಂದರೆ ತಪ್ಪಾಗಲಿಕ್ಕಿಲ್ಲ.
       ಸ್ವರಶುದ್ಧಿ, ಭಾವ ಸಿದ್ದಿ ಇದು ಸ್ವರ್ಗ ರಮಣೀಯ ಸಂಗೀತದ ವಿಶಿಷ್ಟತೆ. ಮಂದ್ರಕ್ಕೆ ಇಳಿವಾಗಲಾಗಲಿ, ಏರು ಸ್ಥಾಯಿಗೆ ಹತ್ತುವಾಗಲಾಗಲಿ ಪರಿಶುದ್ಧ ಶಾರೀರ. ತಾಯಿ ಕರಗಳಲ್ಲಿ ವೀಣೆ ಹಿಡಿದು ತಂತಿ ಮೀಟಿದರೆ ಮಗಳು ಕಂಠದಲ್ಲಿ ವೀಣೆಯನ್ನು ಧರಿಸಿದ್ದಳು ಎನ್ನುತ್ತಿದ್ದರು ಸಂಗೀತ ರಸಿಕರು.
        ಪ್ರತಿ ಯಶಸ್ವಿ ಮಹಿಳೆಯ ಹಿಂದೆ ಒಬ್ಬ ಪುರುಷನಿರುತ್ತಾನೆ ಎನ್ನುತ್ತಾರೆ. ಆದರೆ ಕುಂಜಮ್ಮನ ವಿಷಯದಲ್ಲಿ ಪತ್ನಿಯ ಇಮೇಜ್ ಆಕೆಯ ವೃತ್ತಿ ಸಂಗೀತದ ದಿಕ್ಕು ಇವೆಲ್ಲವನ್ನು ಆಸಕ್ತಿಯಿಂದ ವಿನ್ಯಾಸಗೊಳಿಸಿದವರು ಆಕೆಯ ಪತಿ ಸಂಗೀತ ರಸಿಕ ಭಕ್ತ ಸದಾಶಿವಂ. ತನ್ನ ಪತ್ನಿ ಭವಿಷ್ಯದಲ್ಲಿ ಏನಾಗಬೇಕು ಎಂಬ ಸ್ಪಷ್ಟ ದರ್ಶನ ಇದ್ದ ಅವರು ಅದನ್ನು ಸಾಧಿಸಿ ತೋರಿಸಿದರು. ಇವರ ಸಂಗೀತ ಕಛೇರಿಗಳು ಆಧ್ಯಾತ್ಮದ ಹೊಳಹನ್ನು ಪಸರಿಸುವಂತೆ ವಾಹಕ ವಾಗುವಂತೆ ಗಮನ ವಹಿಸಿದರು. ಹಾಗಾಗಿ ಎಚ್ಚರಿಕೆಯಿಂದ ಆಲಾಪನೆ ಗಳಲ್ಲಿ ಭಾವ ಭಕ್ತಿಯ ಮಿಲನ ವನ್ನು ತರಲು ವಿನಂತಿಸುತ್ತಿದ್ದರು. ಪತ್ನಿಯ ಕಚೇರಿಯಿಂದ ಬಂದ ಹಣವನ್ನು ದಾನ ಧರ್ಮಗಳಲ್ಲಿ ಬಳಸಿ ಧಾರ್ಮಿಕತೆ ಮೆರೆದರು. ತಮಿಳು, ತೆಲುಗು, ಮಲೆಯಾಳಂ, ಸಂಸ್ಕೃತ, ಹಿಂದಿ ಭಾಷೆಗಳನ್ನು ಬಲ್ಲ ಅವರು ಹಾಡುವ ಕೃತಿಯ ಸಾಹಿತ್ಯವನ್ನು ಸೂಕ್ತ ಯತಿ, ಉಸಿರು, ಲಯದ ಮೂಲಕ ಸ್ಪಷ್ಟವಾಗಿ ಅರ್ಥವಾಗುವಂತೆ ಸಭಿಕರ ಮನಮುಟ್ಟುವಂತೆ ಶ್ರಮವಹಿಸುತ್ತಿದ್ದರು. 
        60 ವರ್ಷಗಳ ಸತತ ಸಂಗೀತ ಉಪಾಸನೆ ಮಾಡಿದ ಈಕೆ ಸಂಗೀತದಲ್ಲಿ ತನ್ನದೇ ಶೈಲಿಯನ್ನು ಸ್ಥಾಪಿಸಿದರು. ರಸ ಧ್ವನಿಯ ವಿಶಿಷ್ಟತೆಯ ಮೂಲಕ ಸಂಗೀತ ಲೋಕವನ್ನು ಆಳಿದರು. ಅಲೌಕಿಕವಾದ ಪರಮಾನಂದವನ್ನು, ದಿವ್ಯ ಅನುಭೂತಿಯನ್ನು ಅನುಭವಿಸುತ್ತಲೇ ಅದೇ ಅನುಭವ ಶ್ರೋತೃಗಳದಾಗುವಂತೆ ಜಾದು ಮಾಡಿದರು. ಹೀಗಾಗಿಯೇ 20ನೆಯ ಶತಮಾನದಲ್ಲಿ ಕರ್ನಾಟಕ ಸಂಗೀತದ ವ್ಯಾಖ್ಯಾನವನ್ನು, ಕಲ್ಪನೆಯನ್ನು ಪರಿವರ್ತಿಸಿದ ವಿಶ್ವಮಟ್ಟದ ಸಂಗೀತ ಮಾಂತ್ರಿಕ ಇವರಾದರು. "ಅವರು ಹಾಡುವುದಲ್ಲ ದೈವಿಕತೆಯು ಮೈ ತಾಳುವಂತೆ ಮಾಡುತ್ತಾರೆ" ಇದು ವಿದೇಶಿ ಸಂಗೀತಪ್ರೇಮಿಗಳ ಉದ್ಘಾರ.
  ಸಹಜವಾಗಿಯೇ ಸಂಗೀತದ ಇಂತಹ ಮೇರು ಸಾಧಕಿಗೆ ತಪಸ್ವಿನಿಗೆ ಅನೇಕ ಪ್ರಶಸ್ತಿಗಳು ಒಲಿದು ಬಂದವು. ಪ್ರತಿಷ್ಠಿತ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ, ಪದ್ಮಭೂಷಣ, ಪದ್ಮವಿಭೂಷಣ ಪ್ರಶಸ್ತಿಗಳಲ್ಲದೆ ಭಾರತ ಸರಕಾರದ ಅತ್ಯುಚ್ಚ ಪ್ರಶಸ್ತಿಯಾದ ಭಾರತ ರತ್ನವು ಇವರ ಮುಡಿಯನ್ನು ಅಲಂಕರಿಸಿತು.
     ಭಾರತದ ಸಂಗೀತಕ್ಕೆ ಹೊಸ ಭಾಷ್ಯ ಬರೆದ ಈ ಸ್ವರ ತಪಸ್ವಿನಿಯ ದಿವ್ಯ ಸ್ವರವನ್ನು ನಾವು ಈಗಲೂ ಆಸ್ವಾದಿಸುತ್ತಿದ್ದೇವೆ ಎನ್ನುವುದೇ ಬಹಳ ಹೆಮ್ಮೆ ಹಾಗೂ ಪುಣ್ಯ ವಿಶೇಷ. 
    ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************

Ads on article

Advertise in articles 1

advertising articles 2

Advertise under the article