
ಓ ಮುದ್ದು ಮನಸೇ ...…...! ಸಂಚಿಕೆ -14
Saturday, January 8, 2022
Edit
ಓ ಮುದ್ದು ಮನಸೇ ...…...! ಸಂಚಿಕೆ -14
ಒಂದೂರಲ್ಲಿ ಒಬ್ಬ ಶ್ರೀಮಂತ ವ್ಯಕ್ತಿಯಿದ್ದ ತನ್ನಲ್ಲಿದ್ದ ಅಮೂಲ್ಯ ಬಂಗಾರ , ಬೆಳ್ಳಿ , ರತ್ನ ಮತ್ತು ಒಂದಿಷ್ಟು ಹಣವನ್ನು ಕಳ್ಳ-ಕಾಕರಿಂದ ರಕ್ಷಿಸಲು ಒಂದು ಬೃಹದಾಕಾರದ ಮನೆ ನಿರ್ಮಿಸಿದ , ಅದರ ನಕ್ಷೆಯನ್ನು ಪ್ರಸಿದ್ಧ ಆರ್ಕಿಟೆಕ್ಟ್ ಬಳಿ ಸಿದ್ಧಗೊಳಿಸಿದ , ಮತ್ತು ನಿರ್ಮಾಣದ ಜವಾಬ್ಧಾರಿಯನ್ನು ಸಾಕಷ್ಟು ಅನುಭವ ಹೊಂದಿದ್ದ ಸಿವಿಲ್ ಇಂಜಿನಿಯರ್ ಒಬ್ಬರಿಗೆ ನೀಡಿದ. ಗಟ್ಟಿ ಮುಟ್ಟಾದ ಗೋಡೆ ಬೇಕೆಂದು ನಿರ್ಮಾಣಕ್ಕೆ ಟೀ ಎಮ್ ಟೀ ಕಬ್ಬಿಣದ ಸರಳುಗಳು, ಅಲ್ಟ್ರಾಟೆಕ್ ಸಿಮೆಂಟ್ ಬಳಸಿದ. ಹೀಗೆ ನಿರ್ಮಾಣವಾದ ಮನೆಯೊಳಗೊಂದು ಕೋಣೆಯನ್ನು ನಿರ್ಮಿಸಿ ಅದರೊಳಗೆ ಯಾರಿಗೂ ಕಾಣದಂತಹ ಗುಪ್ತ ನೆಲಮಾಳಿಗೆ ಮಾಡಿ, ಉತ್ಕೃಷ್ಟ ಕಬ್ಬಿಣ ಮತ್ತು ಉಕ್ಕಿನಿಂದ ನಿರ್ಮಾಣವಾಗಿದ್ದ ಪೆಟ್ಟಿಗೆಯೊಳಗೆ ತನ್ನ ಒಡವೆ ವೈಢೂರ್ಯಗಳನ್ನಿಟ್ಟು ಆ ಪೆಟ್ಟಿಗೆಯನ್ನು ನಂಬರ್ ಲಾಕರ್ ನಿಂದ ಬಂದ್ ಮಾಡಿದ. ಇನ್ನು ಗುಪ್ತ ಕೋಣೆಯ ಬಾಗಿಲಿಗೆ ಎರಡ್ಮೂರು ಬೀಗ ಜಡಿದು ಯಾರಿಗೂ ಕಾಣದಂತೆ ಮರೆಮಾಡಿದ. ಮನೆಯೊಳಗಿನ ಆ ಕೊಠಡಿಗೂ ವಿಶೇಷ ಕೀಲಿ ಹಾಕಿ ಮನೆಯ ಮುಖ್ಯ ಬಾಗಿಲಿಗೆ ತಂತ್ರಜ್ಞಾನ ನಿರ್ಮಿತ ಐ ಸೆನ್ಸರ್ ಮತ್ತು ಫಿಂಗರ್ ಪ್ರಿಂಟ್ ಸೆನ್ಸರ್ ಒಳಗೊಂಡ ವಿಶೇಷ ಲಾಕರ್ ಸಿಸ್ಟಮ್ ನಿಂದ ಭದ್ರ ಗೊಳಿಸಿದ. ಇಷ್ಟಾದರೂ ಒಡವೆಗಳ ರಕ್ಷಣೆಯ ಮೇಲೆ ಸಮಾಧಾನಗೊಳ್ಳದ ಆ ವ್ಯಕ್ತಿ ಮನೆಯ ಸುತ್ತಲೂ ಆಳೆತ್ತರದ ಕಾಂಪೌಂಡ್ ಕಟ್ಟಿಸಿ ಅದರ ತಲೆಮೇಲೆ ಗಾಜಿನ ಚೂರುಗಳನ್ನು ಅಂಟಿಸಿದ. ಕಾಂಪೌಂಡ್ ಗೋಡೆಯ ಮೇಲೆ ಎಲೆಕ್ಟ್ರಿಕ್ ಕೇಬಲ್ ಬಳಸಿ ಮನೆಗೆ ವಿದ್ಯುತ್ ಬೇಲಿಯ ರಕ್ಷಣೆ ನೀಡಿದ. ಅಷ್ಟಾದರೂ ಸಮಾಧಾನವಿಲ್ಲದ ಆತ ಮನೆಯ ಮುಖ್ಯ ದ್ವಾರದ ಎದುರು ದೊಡ್ಡದಾದ ಗೇಟ್ ನಿರ್ಮಾಣ ಮಾಡಿ ಅದನ್ನು ಕಾಯಲು ಒಬ್ಬ ವಾಚ್ ಮ್ಯಾನ್ ನನ್ನು ಕೆಲಸಕ್ಕೆ ಸೇರಿಸಿಕೊಂಡ. ಇದರಿಂದಲೂ ಒಡವೆಯ ರಕ್ಷಣೆಯ ಮೇಲೆ ಅವನಿಗೆ ಸಮಾಧಾನವಾಗದೆ ಡೋಬರ್ಮೆನ್ ತಳಿಯ ಒಂದು ನಾಯಿಯನ್ನು ಖರಿದೀಸಿ ಮನೆಯಂಗಳದಲ್ಲಿ ಬಿಟ್ಟು ಗೇಟ್ ಎದುರಿಗೆ ಒಂದು ಬೋರ್ಡ್ ನೇತು ಹಾಕಿದ "ನಾಯಿ ಇದೆ ಎಚ್ಚರಿಕೆ!".
ಇವನದು ಸುಖ ಸಂಸಾರ, ನಲ್ಮೆಯ ಹೆಂಡತಿ, ಮುದ್ದಾದ ಎರಡು ಮಕ್ಕಳು ನೆಮ್ಮದಿಯ ಬದುಕುಸಾಗಿಸಲು ಸಾಕಾಗುವಷ್ಟು ಆಸ್ತಿ-ಅಂತಸ್ತು. ಒಂದುದಿನ ತನ್ನ ಕೆಲಸ ಕಾರ್ಯದ ನಿಮಿತ್ತ ಹೊರಗೆ ಹೋಗಿದ್ದ ಆತನನ್ನು ಗೆಳೆಯನೊಬ್ಬ ಆಕಸ್ಮಾತ್ ಭೇಟಿಯಾದ. "ಅರೆ! ಎಷ್ಟೊಂದು ವರ್ಷ ಆಯ್ತು ಮಾರಯಾ ನಿನ್ನ ನೋಡಿ. ಮದುವೆಗೂ ಕರ್ದಿಲ್ಲ. ಒಟ್ಟಿಗೇ ಓದಿದ್ದು ಮಾತ್ರ , ದೊಡ್ದವನಾದ್ಮೇಲೆ ನಮ್ಮನ್ನೆಲ್ಲಾ ಮರ್ತೇ ಬಿಟ್ಟಿದ್ದೀಯ?" ಅಂದ ಗೆಳೆಯ. ಇವನಿಗೂ ಗೆಳೆಯನನ್ನು ಬಹು ವರ್ಷಗಳ ನಂತರ ನೋಡಿ ಖುಷಿಯಾಯಿತು. "ಹಾಗೇನಿಲ್ಲ ನಿನ್ನನ್ನು ಭೇಟಿ ಮಾಡುವ ಅವಕಾಶ ಸಿಗಲಿಲ್ಲ ಅಷ್ಟೇ" ಅಂದ. "ಅದು ಸರಿ ಮದುವೆ ಆಗಿ ಇಬ್ಬರು ಮಕ್ಕಳಂತೆ! ಮದುವೆಗಂತೂ ಕರೆದಿಲ್ಲ, ಮದುವೆಯ ಫೋಟೋವನ್ನಾದರೂ ತೋರಿಸುಮಾರಾಯ" ಅಂದ ಗೆಳೆಯ. "ಅದರಲ್ಲೇನಿದೆ" ಅಂದವನೆ, ತನ್ನ ಮೊಬೈಲ್ ತೆಗೆದು ಮದುವೆಯ ಫೊಟೋ ಓಪನ್ ಮಾಡಿ ಗೆಳೆಯನ ಕೈಯ್ಯಲ್ಲಿಟ್ಟ. ಫೊಟೋದಲ್ಲಿ ಅವನ ಹೆಂಡತಿಯನ್ನು ನೋಡಿದವನೆ "ಇವಳಾ.....! ನಿನ್ನ ಹೆಂಡತಿ" ಎಂದು ಉದ್ಘಾರ ತೆಗೆದ. ಗಲಿಬಿಲಿಗೊಂಡ ಈತ ಅಂದ "ಯಾಕೆ ಏನಾಯಿತು?" "ಏನಿಲ್ಲ ಬಿಡು, ನನಗೆ ಸ್ವಲ್ಪ ಕೆಲಸ ಇದೆ ಇನ್ನು ಯಾವತ್ತಾದರೂ ಸಿಕ್ಕಾಗ ಮಾತಾಡೋಣ" ಎಂದವನೇ ಗಡಿಬಿಡಿಯಲ್ಲಿ ಹೊರಟು ಹೋದ.
ಒಂದು ಸುಂದರ ಬದುಕು ಛಿದ್ರವಾಗೋದಕ್ಕೆ ಇಂದೊಂದು ಬಹುಮುಖ್ಯ ಘಟನೆಯಾಗಿ ಬಿಟ್ಟಿತ್ತು. ಪ್ರತಿದಿನ ಜಗಳ, ಕಿರಿಕಿರಿ , ಅನುಮಾನ , ಹಲ್ಲೆ...! ವ್ಯಕ್ತಿ ಕುಡಿತದ ದಾಸನಾದ. ನೆಮ್ಮದಿ ನೆಲಕಚ್ಚಿತು, ಶತ ಪ್ರಯತ್ನಗಳ ನಂತರ ಬದಲಾಗದ ಗಂಡನನ್ನು ಒಲ್ಲದ ಮನಸ್ಸಿನಿಂದಲೇ ತೊರೆದು ತವರುಮನೆ ಸೇರಬೇಕಾದ ಅನಿವಾರ್ಯ. ಮಕ್ಕಳು ಅಪ್ಪ ಅಮ್ಮ ಇದ್ದು ಇಲ್ಲದಂತೆ ಹಾಸ್ಟೆಲ್ ಪಾಲಾಗಬೇಕಾದ ಸಂದರ್ಭ.
ಕೆಲಸಮುಗಿಸಿ ಮನೆಗೆ ಮರಳಿದ ವ್ಯಕ್ತಿ ಮನೆಯ ಬಾಗಿಲು ತೆರೆದು ಒಳನಡೆದ. ಆಸ್ತಿ ಇದೆ, ಅಂತಸ್ತಿದೆ, ದುಡ್ಡು, ಒಡವೆ-ವೈಢೂರ್ಯಗಳಿವೆ, ಆದರೆ ಪ್ರತಿದಿನ ಗಂಡ ಕೆಲಸ ಮುಗಿಸಿ ಮನೆಗೇ ಬರೋದನ್ನೇ ಕಾದು ಕುಳಿತಿದ್ದು, ಬಂದ ಗಂಡನನ್ನು ಪ್ರೀತಿಯಿಂದ ಸ್ವಾಗತಿಸಿ ಕಾಫಿ ಮಾಡಿಕೊಟ್ಟು, ಸ್ನಾನಕ್ಕೆ ಬಿಸಿನೀರು ಕಾಯಿಸಿ, ಊಟಕ್ಕೆ ರುಚಿ ರುಚಿಯಾದ ಅಡುಗೆ ಮಾಡಿ ಬಡಿಸುತ್ತಿದ್ದ ಮಡದಿ ಮನೆಯಲ್ಲಿಲ್ಲಾ. ಅಪ್ಪನ ಸಾವಿರ ಸಮಸ್ಯೆಗಳಿಗೆ ತಮ್ಮ ತುಂಟಾಟದ ಮದ್ದು ನೀಡುತ್ತಿದ್ದ ಮಕ್ಕಳು ಮಾಯವಾಗಿದ್ದಾರೆ. ಎಲ್ಲವೂ ಇದೆ ಆದರೆ ಏನೂ ಇಲ್ಲ.......! ಯಾವುದು ನಿಜವಾದ ಒಡವೆ....?
ನಮ್ಮೊಳಗೇ ಇರುವ, ಹುಟ್ಟಿನಿಂದ ಸಾಯುವವರೆಗೆ ಜೊತೆ ಬರುವ, ಯಾರಿಂದಲೂ ಕದಿಯಲಾಗದ, ಮನುಷ್ಯನ ನೆಮ್ಮದಿಯನ್ನು ನಿರ್ಧರಿಸಬಲ್ಲ ಅತ್ಯಮೂಲ್ಯ ಒಡವೆಗಳೆಂದರೆ ಒಂದು "ಹೃದಯ" ಮತ್ತೊಂದು "ಮೆದುಳು"...! ನಮಗೆ ಯಾವತ್ತೂ ಅಪಾಯ ತಂದೊಡ್ಡಬಲ್ಲ ಹಣ, ಒಡವೆ, ವೈಢೂರ್ಯಗಳ ರಕ್ಷಣೆಗೆ ಎಲ್ಲಿಲ್ಲದ ಪ್ರಯತ್ನಪಡುವ ನಾವು ನಮ್ಮ ಬದುಕಿನ ಅತ್ಯಮೂಲ್ಯ ಒಡವೆಗಳಾದ ಹೃದಯ ಮತ್ತು ಮೆದುಳನ್ನು ಮುಕ್ತವಾಗಿ ತೆರೆದಿಟ್ಟಿದ್ದೇವೆ. ಹೃದಯ, ಮೆದುಳೆಂದರೆ ಕೇವಲ ದೇಹದ ಅಂಗಗಳಲ್ಲ ಅವು ನಮ್ಮ ಯೋಚನೆ ಮತ್ತು ಭಾವನೆಗಳ ಪ್ರತೀಕ. ಯೋಚನೆ ಭಾವನೆಗಳು ಸರಿಯಿದ್ದರೆ ನೆಮ್ಮದಿ ನಮ್ಮದಾಗುತ್ತದೆ. ಆಸ್ತಿ ಅಂತಸ್ತಿನಿಂದ ಹಿಗ್ಗಿರುವ ಮಾನವ ಹೃದಯವಂತಿಕೆಯಲ್ಲಿ ಕುಗ್ಗುತ್ತಿದ್ದಾನೆ. ನಮ್ಮ ನೋವು ಸಂಕಟಗಳ ಸವಿಯನ್ನು ಮಜವಾಗಿ ಉಂಡು ತೃಪ್ತಿ ಪಡುವ ವಿಕೃತ ಮನಸ್ಸುಗಳ ಗುಂಪು ನಾವೇ ತೆರೆದಿಟ್ಟ ನಮ್ಮ ಹೃದಯ ಮತ್ತು ಮೆದುಳಿಗೆ ನೇರವಾಗಿ ಎಂಟ್ರಿಕೊಟ್ಟು ಉರಿಯುವ ಬೆಂಕಿಗೊಂದಿಷ್ಟು ತುಪ್ಪ ಸುರಿದು ಸುಡುತ್ತಿರುವ ಬದುಕಿನ ಮಜ ನೋಡುವುದಿದೆಯಲ್ಲ ಅದು ನಮ್ಮದೇ ತಪ್ಪಿನ ಪ್ರತಿಫಲ. ಎಷ್ಟೋ ಬಾರಿ ಸತ್ಯ ಅರಿಯುವ ಕಿಂಚಿತ್ ಪ್ರಯತ್ನವನ್ನೂ ಪಡದ ನಾವು, ಇನ್ನೊಬ್ಬರ ಮಾತು, ಅಭಿಪ್ರಾಯಗಳ ಸುಳಿಯಲ್ಲಿ ಸಿಲುಕಿ ಗಿರಿಗಿಟ್ಲೇ ಹೊಡೆಯುತ್ತಿರುತ್ತೇವೆ.
ನಿಜವಾದ ರಕ್ಷಣೆ ಬೇಕಾದದ್ದು ಹಣ ಒಡವೆಗಳಿಗಲ್ಲ, ಹೃದಯ ಮತ್ತು ಮೆದುಳಿಗೆ...! ಇವತ್ತಿನ ಸಮಾಜದಲ್ಲಿ ನಮ್ಮ ಯೋಚನೆ ಮತ್ತು ಭಾವನೆಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನವಾಗಬೇಕಿದೆ. ಅಂತಹದ್ದೊಂದು ಜ್ಞಾನವನ್ನು, ಕಲೆಯನ್ನು ಚಿಕ್ಕಂದಿನಲ್ಲೇ ನಮ್ಮ ಮಕ್ಕಳಿಗೆ ಕಲಿಸಿಕೊಟ್ಟರೆ ಅವರ ಮುಂದಿನ ಬದುಕಿನಲ್ಲಿ ಅವಶ್ಯಕವಲ್ಲದ ವಿಚಾರ, ವ್ಯಕ್ತಿ, ಸನ್ನಿವೇಷ ಮತ್ತು ಘಟನೆಗಳ ಸುಳಿಗೆ ತಮ್ಮ ಮೆದುಳು ಮತ್ತು ಹೃದಯವನ್ನು ತೆರೆದಿಡುವ ಬದಲು ಅತ್ಯಂತ ಜಾಗರೂಕತೆಯಿಂದ ತಮ್ಮ ಯೋಚನೆ ಮತ್ತು ಭಾವನೆಗಳನ್ನು ನಿಗ್ರಹಿಸಿಕೊಳ್ಳಬಲ್ಲವರಾಗಿ ರೂಪುಗೊಳ್ಳುತ್ತಾರೆ.
ಹೃದಯ ಮತ್ತು ಮೆದುಳಿನ ರಕ್ಷಣೆ ಹೇಗೆ?:
ರಕ್ಷಣೆ ಅಂದಾಕ್ಷಣ ಯಾವುದೇ ಲಾಕರ್ ಸಿಸ್ಟಮ್ ಅಳವಡಿಸುವ ಅವಶ್ಯಕತೆಯಿಲ್ಲ. ಕಾಂಪೌಂಡ್ ಬೇಡ, ವಾಚ್ ಮ್ಯಾನ್ ಬೇಕಾಗಿಲ್ಲ, ಸೀಕ್ರೇಟ್ ಲಾಕರ್ ಆಗಲಿ ಅಥವಾ ಡಾಬರ್ಮೆನ್ ನಾಯಿಯ ಅವಶ್ಯಕತೆಯಂತೂ ಇಲ್ಲವೇ ಇಲ್ಲ. ಸ್ವ - ಗೌರವ ಬೆಳೆಸಿಕೊಳ್ಳೋಣ...! ನಮ್ಮ ಭಾವನೆಗಳಿಗೆ ನಮ್ಮ ವಿಚಾರಗಳಿಗೆ ನಾವು ಗೌರವ ಕೊಡೋಣ ಅವುಗಳನ್ನು ಇನ್ನೊಬ್ಬರ ಅಭಿಪ್ರಾಯಗಳಿಗೆ ನೂಕುವುದು ಬೇಡ. ನಮ್ಮ ಸಾಮರ್ಥ್ಯ ಮತ್ತು ಅಸಾಮರ್ಥ್ಯತೆಯ ಬಗ್ಗೆ ನಮಗೆ ಸ್ಪಷ್ಟ ಅರಿವಿರಲಿ. ಹೃದಯ ಮತ್ತು ಮೆದುಳಿನ ಆರೋಗ್ಯ ಉತ್ತಮ ಆಲೋಚನೆ ಮತ್ತು ಭಾವನೆಗೆ ಪೂರಕವಾಗಿರುತ್ತದೆ. ಹಾಗಾಗಿ ಅವುಗಳನ್ನು ಕ್ರೀಯಾಶೀಲವೂ ಮತ್ತು ಸಮರ್ಥವಾಗಿಸಲು ಉತ್ತಮ ಆಹಾರ ಪದ್ಧತಿಯನ್ನು ಅಳವಡಿಸಿಕೊಂಡು, ಪ್ರತಿನಿತ್ಯದ ಯೋಗ, ಧ್ಯಾನ ಮತ್ತು ವ್ಯಾಯಾಮಗಳ ಮೂಲಕ ಅವುಗಳನ್ನು ಸದಾ ಸಂರಕ್ಷಿಸೋಣ. ಸಕಾರಾತ್ಮಕ ಕಾರ್ಯ ಚಟುವಟಿಗಳಲ್ಲಿ ಮಾತ್ರ ತೊಡಗಿಸಿ ಕೊಳ್ಳೋಣ. ನಮ್ಮ ದಿನನಿತ್ಯದ ಬದುಕಿನಲ್ಲಿ ಸುತ್ತಲಿನ ವ್ಯಕ್ತಿಗಳು ಪ್ರಮುಖ ಪಾತ್ರವಹಿಸುವುದರಿಂದ ಅವರೊಂದಿಗೆ ಸಂಪರ್ಕ ಸಾಧಿಸುವಾಗ ಜಾಗರೂಕರಾಗಿರೋಣ. ಅನಾವಶ್ಯಕ ಸಂಪರ್ಕಗಳನ್ನು ನಾಜೂಕಿನಿಂದ ಕಡಿತಗೊಳಿಸಿದರೆ ಉತ್ತಮ. ಕೆಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಮುನ್ನ ಸರಿಯಾದ ಮತ್ತು ಸಕಾರಾತ್ಮಕ ಮನಸ್ಥಿತಿಯುಳ್ಳವರಲ್ಲಿ ಚರ್ಚಿಸೋಣ. ಹಳೆಯ ಘಟನೆ ವಿಚಾರಗಳೂ ಎಷ್ಟೋ ಬಾರಿ ಮುಂದಿನ ಬದುಕಿಗೆ ಮಾರಕವಾಗಿಬಿಡುತ್ತವೆ, ಹಾಗಾಗಿ ಹಿಂದಿನದ್ದನ್ನು ನೆನಪಿಸಿಕೊಳ್ಳುವ ಬದಲು ಮುಂದಿನ ಬದುಕನ್ನು ಸಮರ್ಪಕವಾಗಿ ನಿರ್ಮಿಸಿಕೊಳ್ಳುವಲ್ಲಿ ಪ್ರಯತ್ನಶೀಲರಾಗೋಣ. ಕೆಲವೊಮ್ಮೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ನಡೆದು ಹೋಗುವ ತಪ್ಪುಗಳನ್ನು ಚ್ಯೂಯಿಂಗ್-ಗಮ್ ನಂತೆ ಉದ್ದುದ್ದ ಎಳೆದು ನೆಮ್ಮದಿ ಕೆಡಿಸಿಕೊಳ್ಳುವ ಬದಲು. ಅದನ್ನು ಆ ಕ್ಷಣಕ್ಕೆ ಮಾತ್ರ ಸೀಮಿತಗೊಳಿಸಿ ಹೊಸತನವನ್ನು ಹುಡುಕಿದರೆ ಉತ್ತಮ. ನಾವೂ ನಗು-ನಗುತ್ತಿರುವುದರ ಜೊತೆ-ಜೊತೆಗೆ ನಮ್ಮ ಸುತ್ತಲೂ ಇರುವವರನ್ನೂ ನಗಿಸಿಕೊಂಡು ಬದುಕಿದರೆ ಬದುಕು ಅದೆಷ್ಟು ಚೆನ್ನ. ನಮ್ಮ ಯೋಚನೆ ಮತ್ತು ಭಾವನೆಗಳು ನಮ್ಮವು ಅವು ಇನ್ಯಾರದ್ದೂ ಸ್ವತ್ತಾಗದಿರಲಿ.
ಸಂಶೋಧಕರು ಮತ್ತು ಆಪ್ತ-ಸಮಾಲೋಚಕರು
ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
**********************************************