-->
ಹೆಣ್ಣು ಮಗು ಜನಿಸಿದರೆ 111 ಗಿಡ ನೆಟ್ಟು ಸಂಭ್ರಮಿಸುವ ಪಿಪ್ಲಾಂತ್ರಿ : ಶಿವರಾಂ ಪೈಲೂರು

ಹೆಣ್ಣು ಮಗು ಜನಿಸಿದರೆ 111 ಗಿಡ ನೆಟ್ಟು ಸಂಭ್ರಮಿಸುವ ಪಿಪ್ಲಾಂತ್ರಿ : ಶಿವರಾಂ ಪೈಲೂರು


                   ಹೆಣ್ಣು ಮಗು ಜನಿಸಿದರೆ 
                         111 ಗಿಡ ನೆಟ್ಟು 
                 ಸಂಭ್ರಮಿಸುವ ಪಿಪ್ಲಾಂತ್ರಿ
     ಈ ಗ್ರಾಮದಲ್ಲಿ ಪ್ರತಿ ದಿನವೂ ಮಹಿಳಾ ದಿನ ; ಪ್ರತಿ ದಿನವೂ ಪರಿಸರ ದಿನ. ಹೆಣ್ಣು ಮಗು ಜನಿಸಿದರೆ ಹಬ್ಬದ ವಾತಾವರಣ. 111 ಗಿಡ ನೆಡುವ ಮೂಲಕ ಸಂಭ್ರಮಾಚರಣೆ. ವ್ಯಕ್ತಿಯೊಬ್ಬರು ನಿಧನರಾದಾಗ 11 ಮರ ಬೆಳೆಸುವುದರೊಂದಿಗೆ ಗೌರವ ನಮನ. ದಶಕದಿಂದಲೂ ಈ ಪರಿಪಾಠ. ಹೀಗಾಗಿ ಪಿಪ್ಲಾಂತ್ರಿಯ ಬೋಳು ಗುಡ್ಡಬೆಟ್ಟಗಳಲ್ಲಿ ಹಸಿರು ಹಬ್ಬಿ ಅದೀಗ ರಾಜಸ್ಥಾನದ ಓಯಸಿಸ್. ಅಲ್ಲಿಯ ಸ್ವರಾಜ್ಯ-ಸುಸ್ಥಿರ ಅಭಿವೃದ್ಧಿ ಮಾದರಿ ಇತರೆಡೆಗಳಿಗೂ ಸ್ಫೂರ್ತಿ.  
          ಹೆಣ್ಣು ಮಕ್ಕಳ ಹಿತರಕ್ಷಣೆ, ಹಸಿರೀಕರಣ, ಜಲಾನಯನ ಅಭಿವೃದ್ಧಿ, ನೈರ್ಮಲ್ಯ ಸೇರಿದಂತೆ ಹತ್ತುಹಲವು ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿರುವ ಈ ಗ್ರಾಮ ಇಂದು ಇಡೀ ವಿಶ್ವದ ಗಮನ ಸೆಳೆದಿದೆ. ‘ಪಿಪ್ಲಾಂತ್ರಿ ಮಾದರಿ’ ಸುಸ್ಥಿರ ಅಭಿವೃದ್ಧಿಯ ಹೊಸ ವ್ಯಾಖ್ಯೆ. ಇದನ್ನು ಖುದ್ದಾಗಿ ನೋಡಲು, ಅಧ್ಯಯನ ಮಾಡಲು ಜಗತ್ತಿನೆಲ್ಲೆಡೆಯಿಂದ ಜನ ಈ ಗ್ರಾಮಕ್ಕೆ ಬರುತ್ತಿದ್ದಾರೆ. ಆದರೆ ಇದಕ್ಕೆ ಕಾರಣವಾದ ಕಥೆ ಆರಂಭವಾಗುವುದು ಒಂದು ದುರಂತದಿಂದ.
          ಇಸವಿ 2005. ಶ್ಯಾಮ್ ಸುಂದರ್ ಆಗ ಸರಪಂಚರಾಗಿ ಆಯ್ಕೆಯಾಗಿದ್ದರು. ಹಗಲಿನ ವೇಳೆ ಜನ ಕೃಷಿ ಕೆಲಸಗಳಲ್ಲಿ ತೊಡಗಿರುತ್ತಿದ್ದ ಕಾರಣ ಸಂಜೆಯ ವೇಳೆಯಲ್ಲೇ ಹಳ್ಳಿಗಳಿಗೆ ತೆರಳುತ್ತಿದ್ದ ಶ್ಯಾಮ್ ಆರಂಭಿಕ ಅಡೆತಡೆಗಳನ್ನು ಮೀರಿ ಬಹುಬೇಗನೆ ಸುಗಮ ಆಡಳಿತದ ಸೂತ್ರವನ್ನು ಕರಗತ ಮಾಡಿಕೊಂಡರು.
         ಆಗ ಧುತ್ತನೆ ಎದುರಾಯಿತು ವೈಯಕ್ತಿಕ ನೆಲೆಯಲ್ಲಿನ ದುರಂತ. ಮುದ್ದಿನ ಮಗಳು ಕಿರಣ್ (16) ಅಕಾಲಿಕ ವಿಧಿವಶರಾದಾಗ ಇಡೀ ಕುಟುಂಬವೇ ಅಧೀರಗೊಂಡಿತು. ಆ ನೋವಿನಲ್ಲಿ ಏನು ಮಾಡುವುದೆಂದೇ ತೋಚಲಿಲ್ಲ. ಅದರಿಂದ ಹೊರಬರುವ ಮಾರ್ಗವಾಗಿ ಮಗಳ ನೆನಪಿನಲ್ಲಿ ಈ ಕದಂಬ ಗಿಡ ನೆಟ್ಟೆ. ದಿನವೂ ಇದರ ಬೆಳವಣಿಗೆ ನೋಡುತ್ತ ಅದರಲ್ಲಿ ಮಗಳನ್ನು ಕಂಡುಕೊಂಡೆ. ಅವಳೀಗ ಸದಾ ನನ್ನ ಕಣ್ಣಮುಂದೆಯೇ ಇದ್ದಾಳೆ, ಮರವೊಂದನ್ನು ಅಪ್ಪಿ ಹಿಡಿದು ಶ್ಯಾಮ್ ಸುಂದರ್ ಭಾವುಕರಾದಾಗ ಸುತ್ತಲಿನ ಸಸ್ಯರಾಶಿಯೇ ಆರ್ದ್ರಗೊಂಡಂತನಿಸಿತು.
     ಕಿರಣ್ ನಿಧಿ ಯೋಜನೆ : ಒಂದು ಗಿಡ ನೆಟ್ಟು ತಮ್ಮ ಮಗಳನ್ನು ಸಾಕ್ಷಾತ್ಕರಿಸಿಕೊಂಡ ಅವರು ತಮ್ಮ ಮನದ ಕರೆಗೆ ಓಗೊಟ್ಟು 2006ರಲ್ಲಿ ಪಂಚಾಯಿತಿ ಮೂಲಕವೆ ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಚಾಲನೆ ನೀಡಿದರು. ಅದೇ ಕಿರಣ್ ನಿಧಿ ಯೋಜನೆ. 
          ಇದು ನನ್ನ ಅಂತರಾತ್ಮದ ಕರೆಯಾಗಿತ್ತು. ಭ್ರೂಣ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆ ಸರ್ವೇಸಾಮಾನ್ಯವಾಗಿದ್ದ ಈ ರಾಜ್ಯದಲ್ಲಿ ನವಜಾತ ಹೆಣ್ಣು ಮಕ್ಕಳ ಹತ್ಯೆ ಕೂಡ ತೀರ ಸಹಜವೆಂಬಂತೆ ನಡೆಯುತ್ತಿತ್ತು. ಇದಕ್ಕೆ ನಮ್ಮ ಗ್ರಾಮದಲ್ಲಿ ಕಡಿವಾಣ ಹಾಕಲೇಬೇಕೆಂಬ ದೃಢಸಂಕಲ್ಪದಿಂದ ಈ ಯೋಜನೆ ರೂಪಿಸಿದೆ, ಶ್ಯಾಮ್ ಸುಂದರ್ ನೆನೆಯುತ್ತಾರೆ.
           ರಾಜಸ್ಥಾನ ಹೆಣ್ಣು ಭ್ರೂಣಹತ್ಯೆಯ ಅಪಖ್ಯಾತಿಗೆ ಒಳಗಾದ ರಾಜ್ಯ. 2011ರ ಜನಗಣತಿಯ ಪ್ರಕಾರ ಆ ರಾಜ್ಯದಲ್ಲಿ ಆರು ವರ್ಷದೊಳಗಿನ ಪ್ರತಿ ಒಂದು ಸಾವಿರ ಗಂಡು ಮಕ್ಕಳಿಗೆ ಹೆಣ್ಣು ಮಕ್ಕಳ ಸಂಖ್ಯೆ 888! (ರಾಷ್ಟ್ರೀಯ ಅನುಪಾತ 1000:919) ಆ ರಾಜ್ಯದಲ್ಲಿ ಇನ್ನೂ ಪ್ರಚಲಿತದಲ್ಲಿರುವ ವರದಕ್ಷಿಣೆಯ ಪಿಡುಗಿಗೆ ಅಂಜಿ ಹೆಣ್ಣು ಸಂತತಿಯನ್ನು ಹೊಸಕಿ ಹಾಕುವ ಪ್ರವೃತ್ತಿ ಭ್ರೂಣ ಲಿಂಗ ಪತ್ತೆಯನ್ನು ನಿರ್ಬಂಧಿಸುವ ಕಠಿಣ ಕಾನೂನಿನ ಕಣ್ಣಿಗೆ ಮಣ್ಣೆರೆಚುತ್ತ ಅವ್ಯಾಹತವಾಗಿ ಮುಂದುವರಿದಿತ್ತು. ಇದರ ಜತೆಗೆ ಬಾಲ್ಯ ವಿವಾಹ ಕೂಡ ಹೆಣ್ಣು ಮಕ್ಕಳ ಬದುಕನ್ನು ಇನ್ನಷ್ಟು ದುಸ್ತರವಾಗಿಸಿತ್ತು.
      ತಮ್ಮೆದುರಿಗಿದ್ದ ಸಾಮಾಜಿಕ ಮತ್ತು ಪಾರಿಸರಿಕ ಎರಡೂ ಸಮಸ್ಯೆಗಳಿಗೆ ಪರಿಹಾರದ ರೂಪದಲ್ಲಿ ಶ್ಯಾಮ್ ಸುಂದರ್ ‘ಕಿರಣ್ ನಿಧಿ ಯೋಜನೆ’ಯನ್ನು ಜಾರಿಗೊಳಿಸಿದರು. ಅವರು ವಿವರಿಸುತ್ತಾರೆ: ಯೋಜನೆಯನ್ವಯ ಗ್ರಾಮದಲ್ಲಿ ಪ್ರತಿ ಹೆಣ್ಣು ಮಗುವಿನ ಜನ್ಮವನ್ನು ಸಂಭ್ರಮದಿಂದ ಪರಿಗಣಿಸಲಾಗುತ್ತದೆ ಮತ್ತು 111 ಸಸಿಗಳನ್ನು ನೆಡಲಾಗುತ್ತದೆ. ಜತೆಗೆ ಆ ಹೆಣ್ಣು ಮಗುವಿನ ಹೆಸರಿನಲ್ಲಿ 31 ಸಾವಿರ ರೂಪಾಯಿಗಳನ್ನು 18 ವರ್ಷಗಳ ಅವಧಿಗೆ ಸಹಕಾರಿ ಸಂಘ ಅಥವಾ ಬ್ಯಾಂಕಿನಲ್ಲಿ ಠೇವಣಿ ಇಡಲಾಗುತ್ತದೆ. ಆ ಪೈಕಿ 10 ಸಾವಿರ ರೂ. ಆಯಾ ಮಗುವಿನ ಪೋಷಕರು ಅಥವಾ ಕುಟುಂಬದ ಕೊಡುಗೆಯಾಗಿದ್ದರೆ ಉಳಿದ 21 ಸಾವಿರ ರೂ.ಗಳನ್ನು ಊರವರಿಂದ ಸಂಗ್ರಹಿಸಲಾಗುತ್ತದೆ. ಈ ಠೇವಣಿಯ ಅವಧಿ ಪೂರ್ಣಗೊಂಡಾಗ ದೊರಕುವ ಮೊತ್ತವನ್ನು ಹೆಣ್ಣು ಮಗುವಿನ ಉನ್ನತ ಶಿಕ್ಷಣ ಅಥವಾ ಮದುವೆಗೆ ಬಳಸಬಹುದಾಗಿದೆ.
        ಗ್ರಾಮದಲ್ಲಿ ವರ್ಷಕ್ಕೆ ಸರಾಸರಿ 120 ಮಕ್ಕಳು ಜನಿಸುತ್ತಿದ್ದು ಆ ಪೈಕಿ ಸುಮಾರು 60 ಹೆಣ್ಣು ಶಿಶುಗಳು. ಈವರೆಗೆ ನೆಟ್ಟ ಗಿಡಗಳ ಸಂಖ್ಯೆ ಮೂರು ಲಕ್ಷ ದಾಟಿದೆ ಎನ್ನುತ್ತಾರೆ ಶ್ಯಾಮ್ ಸುಂದರ್. ಬಹುಶಃ ಸಾಮೂಹಿಕವಾಗಿ ಗಿಡ ನೆಡುವಾಗ ಲೆಕ್ಕಕ್ಕಿಂತ ತುಸು ಹೆಚ್ಚಿಗೆಯೇ ನೆಟ್ಟಿರಬೇಕೆನಿಸುತ್ತದೆ. 
       ವಿಶಿಷ್ಟ ರಕ್ಷಾ ಬಂಧನ : ಕಿರಣ್ ನಿಧಿ ಯೋಜನೆಗೆ ಕಲಶಪ್ರಾಯವಾದುದು ಪಿಪ್ಲಾಂತ್ರಿಯ ರಕ್ಷಾ ಬಂಧನ. ಅಂದು ಊರಿಗೆ ಊರೇ ಸಂಭ್ರಮಿಸುತ್ತದೆ. ಸಮಸ್ತ ಜನತೆ ಒಂದೆಡೆ ಸೇರುತ್ತಾರೆ. ನೆಲದ ಉದ್ದಗಲಕ್ಕೂ ರಂಗುರಂಗಿನ ರಂಗೋಲಿಗಳು ಮೈದಳೆಯುತ್ತವೆ. ರಾಜಸ್ಥಾನದ ಜಾನಪದ ವಾದ್ಯ-ನೃತ್ಯ ಎಲ್ಲವೂ ಮೇಳೈಸುತ್ತವೆ. ನೆರೆದಿರುವ ಎಲ್ಲರ ಸಮ್ಮುಖದಲ್ಲಿ ಗ್ರಾಮದ ಪೂಜಾರಿ ವೃಕ್ಷಮಾತೆಗೆ ಪೂಜೆ ಸಲ್ಲಿಸುತ್ತಾರೆ. ಬಳಿಕ ಶಾಲಾ ಬಾಲಕಿಯರು ಅಲ್ಲಿನ ಗಿಡಮರಗಳಿಗೆ ರಾಖಿ ಕಟ್ಟಿ ಭ್ರಾತೃತ್ವ ಮೆರೆಯುತ್ತಾರೆ.       
      ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ (ಮನ್ರೇಗಾ) ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿದ್ದರಿಂದ, ಮುಖ್ಯವಾಗಿ ಸಾಕಷ್ಟು ಮಹಿಳೆಯರಿಗೆ ಅನುಕೂಲವಾಯಿತು. ಗಿಡ ನೆಡುವ ಸಂದರ್ಭದಲ್ಲಿ ಆಯಾ ಜಾಗಕ್ಕೆ ಸೂಕ್ತವೆನಿಸುವ ಸಸಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಯಿತು. ಉದಾಹರಣೆಗೆ: ಗುಡ್ಡದ ಮೇಲ್ಭಾಗದಲ್ಲಿ ಬಲವಾದ ಗಾಳಿಯ ಹೊಡೆತವನ್ನು ಸಹಿಸಿಕೊಳ್ಳುವ ಅರಣ್ಯ ಗಿಡಗಳು, ತಪ್ಪಲಿನಲ್ಲಿ ಹಣ್ಣಿನ ಗಿಡಗಳು. 
         ಜಲಾನಯನ ಅಭಿವೃದ್ಧಿ ಯೋಜನೆ : 2012-13ರಲ್ಲಿ ಮುಕ್ತಾಯಗೊಂಡಾಗ ಗ್ರಾಮದಲ್ಲಿ ಲಕ್ಷಾಂತರ ಲೀಟರ್ ಮಳೆನೀರು ಸಂಗ್ರಹಕ್ಕೆ ವ್ಯವಸ್ಥಿತ ರಚನೆಗಳು ರೂಪುಗೊಂಡದ್ದಲ್ಲದೆ ಹಸಿರೀಕರಣವೂ ಗಣನೀಯ ಮಟ್ಟದಲ್ಲಿ ಆಯಿತು. ತೆರೆದ ಬಾವಿಗಳಲ್ಲಿ 50 ಅಡಿ ಆಳಕ್ಕೆ ಇಳಿದಿದ್ದ ನೀರಿನ ಮಟ್ಟ ಒಂದೇ ಸಮನೆ ಏರತೊಡಗಿ ಮೇಲಿನಿಂದ ಆರೇಳು ಅಡಿಗಳ ವರೆಗೆ ಬಂದು ನಿಂತಿತು. 
        ಅಲ್ಲಿಯವರೆಗೆ ಮಳೆಯಾಧಾರಿತ ಕೃಷಿ ಮಾಡುತ್ತ ಉಳಿದ ಸಮಯ ಗುಳೇಹೋಗುತ್ತಿದ್ದ ರೈತಾಪಿ ಮಂದಿ ಈಗ ನಿರಾತಂಕವಾಗಿ ಎರಡನೇ ಬೆಳೆಯನ್ನೂ ಬೆಳೆಯುವುದು ಸಾಧ್ಯವಾದದ್ದರಿಂದ ಮರಳಿ ಊರಿನತ್ತ ಮುಖಮಾಡತೊಡಗಿದರು. ಬೆಳ್ಳುಳ್ಳಿ, ಆಲೂಗಡ್ಡೆ, ಗೆಣಸು, ಕಬ್ಬು, ವಿವಿಧ ತರಕಾರಿ-ಹಣ್ಣುಹಂಪಲು ಮತ್ತೆ ಚಿಗಿತುಕೊಂಡವು. ಕೃಷಿಯೊಂದಿಗೆ ಪಶುಸಂಗೋಪನೆಯೂ ಬಲಗೊಂಡಿತು. ಗಿಡಮೂಲಿಕೆಗಳನ್ನು ಬೆಳೆಯಲು ಒತ್ತುನೀಡಿದ್ದರಿಂದ ‘ವಸುಂಧರಾ ಔಷಧಿ ಉದ್ಯಾನ’ ಅಸ್ತಿತ್ವಕ್ಕೆ ಬಂತು.
        ಹಸಿರು ಹೊದಿಕೆ ದಟ್ಟವಾಗುತ್ತಿದ್ದಂತೆ ಇತ್ತೀಚಿನ ವರ್ಷಗಳಲ್ಲಿ ಆ ಪರಿಸರದಿಂದ ಕಣ್ಮರೆಯಾಗಿದ್ದ ಪ್ರಾಣಿ-ಪಕ್ಷಿ ಸಂಕುಲ ಮತ್ತೆ ಕಾಣಿಸಿಕೊಂಡಿತು. 
       ಇವುಗಳಿಗೆ ಕುಡಿಯುವ ನೀರು ಒದಗಿಸಲೆಂದೇ ಕೆಲವೆಡೆ ನೆಲಮಟ್ಟದಲ್ಲಿ ಟ್ಯಾಂಕಿಗಳನ್ನು ನಿರ್ಮಿಸಿರುವುದು ವಿಶೇಷ.
        ಪ್ರತಿ ಮನೆಯಲ್ಲೂ ಶೌಚಾಲಯ, ಹೊಗೆರಹಿತ ಅಡುಗೆ ಕೋಣೆ, ನಲ್ಲಿ ನೀರು ಪೂರೈಕೆ, ಊರಲ್ಲಿ ಉತ್ತಮ ರಸ್ತೆ-ಚರಂಡಿ-ಬೀದಿ ದೀಪ, ಸೌರವಿದ್ಯುತ್ ಚಾಲಿತ ನೀರೆತ್ತುವ ಪಂಪು, ನೀರು ಶುದ್ಧೀಕರಣ ಘಟಕ, ಮದ್ಯಪಾನ ನಿಷೇಧ...ಹೀಗೆ ಗ್ರಾಮ ಸರ್ವಾಂಗೀಣ ಪ್ರಗತಿ ಸಾಧಿಸುತ್ತಿದ್ದಂತೆ ಇನ್ನೊಂದೆಡೆ ಸಾಮಾಜಿಕ ಸ್ವಾಸ್ಥ್ಯ ಕೂಡ ಸಾಕಷ್ಟು ಸುಧಾರಣೆ ಕಂಡಿತು. ಊರಿನ ಜನತೆಯ ನಡುವಿನ ಬಾಂಧವ್ಯ ಗಟ್ಟಿಯಾಯಿತು. ಕಳೆದ ಅನೇಕ ವರ್ಷಗಳಿಂದ ನಮ್ಮಲ್ಲಿ ಪೊಲೀಸ್ ಕೇಸೇ ಇಲ್ಲ, ಹುರಿ ಮೀಸೆಯಡಿ ಮುಗುಳ್ನಗುತ್ತ ಶ್ಯಾಮ್ ಹೆಮ್ಮೆಯಿಂದ ನುಡಿಯುತ್ತಾರೆ.  
        ರಾಷ್ಟ್ರ ಮಟ್ಟದ ‘ನಿರ್ಮಲ ಗ್ರಾಮ ಪುರಸ್ಕಾರ’ (2007) ಸೇರಿದಂತೆ ಹಲವು ಪ್ರಶಸ್ತಿಗಳು ಪಿಪ್ಲಾಂತ್ರಿಯನ್ನು ಅರಸಿ ಬಂದಿವೆ. ಗ್ರಾಮ ಪಂಚಾಯಿತಿ ಕಛೇರಿಯಲ್ಲೂ, ಶ್ಯಾಮ್ ಸುಂದರ್ ಅವರ ಮನೆಯಲ್ಲೂ ಪ್ರಶಸ್ತಿ ಫಲಕಗಳದ್ದೇ ಸಾಮ್ರಾಜ್ಯ! ಈ ಗ್ರಾಮದ ಯಶೋಗಾಥೆ ರಾಜಸ್ಥಾನದ ಶಾಲಾಪಠ್ಯದಲ್ಲಿಯೂ ಸೇರ್ಪಡೆಗೊಂಡಿದೆ. 
      ‘ಹೆಣ್ಣು ಮಗು, ನೀರು, ಮರ ಹಾಗೂ ಗೋಮಾಳ ಉಳಿಸಬೇಕು; ಪ್ರಕೃತಿಯ ಜತೆಯಲ್ಲೆ ಸಾಗಬೇಕು’ - ಇದು ಪಿಪ್ಲಾಂತ್ರಿಯ ಘೋಷವಾಕ್ಯ. 
...................................... ಶಿವರಾಂ ಪೈಲೂರು
ಅಭಿವೃದ್ಧಿ ಬರಹಗಾರ
ಅಂಚೆ: ಕುಕ್ಕುಜಡ್ಕ
ಸುಳ್ಯ ತಾಲೂಕು 574212
ದಕ್ಷಿಣ ಕನ್ನಡ ಜಿಲ್ಲೆ
ಮೊಬೈಲ್ : 9483757707
********************************************


 






 

Ads on article

Advertise in articles 1

advertising articles 2

Advertise under the article