-->
ಸ್ಪೂರ್ತಿಯ ಮಾತುಗಳು : ಹರಿಣಾಕ್ಷಿ ಕಕ್ಯಪದವು

ಸ್ಪೂರ್ತಿಯ ಮಾತುಗಳು : ಹರಿಣಾಕ್ಷಿ ಕಕ್ಯಪದವು         ಉತ್ತಮ ಹವ್ಯಾಸಗಳೇ, ಬದುಕಿಗೆ ದಿಕ್ಸೂಚಿ 
      ...........................................................
ಒಲವಿನ ಕನಸುಗಾರರೇ….,
          ಜೀವನದ ಬಗ್ಗೆ ಹಲವು ಕನಸುಗಳು, 
ಒಂದಷ್ಟು ಆಶಾವಾದಗಳು, ಅಚಲವಾದ ಗುರಿಗಳು….ಇವುಗಳ ಈಡೇರಿಕೆಗೆ ನಿತ್ಯ ಬದುಕಿನ ಪ್ರಯತ್ನಗಳಲ್ಲಿ ನಿರತರಾಗಿರುವ ನಿಮಗೆ ಒಂದು ಪುಟ್ಟ ಕಥೆ.
     ‍ಸಂತೋಷ್ ಹಾಗೂ ನರೇಶ್ ಇಬ್ಬರೂ ನೆರೆಹೊರೆಯ ಮಕ್ಕಳು.‍ ಹೆಚ್ಚೂ ,ಕಡಿಮೆ ಇಬ್ಬರ ವಯಸ್ಸೂ ಒಂದೇ ಆಗಿತ್ತು. ಮನೆಯ ಅಂಗಳದ ಬಾಲ್ಯದ ಆಟಗಳಲ್ಲಿ ಇಬ್ಬರದೂ ಉತ್ತಮ ಸಹಭಾಗಿತ್ವವಿತ್ತು. ಬೆಳೆಯುತ್ತಾ ಶಾಲೆಗೆ ಹೋಗಲಾರಂಭಿಸುತ್ತಿದ್ದಂತೆ, ಸಂತೋಷನ ಹೆತ್ತವರು ಅವನನ್ನು ಮನೆಯಿಂದ ಸ್ವಲ್ಪ ದೂರದಲ್ಲಿರುವ ಶಾಲೆಗೆ ಸೇರಿಸಿದರೆ, ನರೇಶನು ಅವನ ಮಾವನ ಮನೆಯಿಂದ ಶಾಲೆಗೆ ಹೋಗಲಾರಂಭಿಸಿದ. ಸಂತೋಷನಿಗೆ ಸಂಸ್ಕಾರ ಹಾಗೂ ಶಿಸ್ತಿನ ಶಿಕ್ಷಣ ದೊರೆಯಿತು. ಪೋಷಕರು ಮಗನ ತಪ್ಪುಗಳನ್ನು ತಿದ್ದುತ್ತಾ , ಉತ್ತಮ ಗುಣಗಳನ್ನು ಪ್ರೋತ್ಸಾಹಿಸುತ್ತಾ ಬೆಳೆಸತೊಡಗಿದರು. ಶಾಲಾ ಶಿಕ್ಷಣದೊಂದಿಗೆ ಸಂತೋಷನು ಚಿತ್ರಕಲೆ, ಸಂಗೀತದ ಕಲಿಕೆ , ಯಕ್ಷಗಾನ ಕಲೆಗಳಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಅದರೊಂದಿಗೆ ಉಳಿದ ಸಮಯವನ್ನು ಕಳೆಯುತ್ತಾ, ಆನಂದವನ್ನು ಕಂಡುಕೊಂಡ. 
      ಆದರೆ ನರೇಶ ಶಾಲಾ ಪಾಠಗಳಲ್ಲಿ ಅಲ್ಪಸ್ವಲ್ಪ ಆಸಕ್ತಿ ಇದ್ದರೂ ,ಉಳಿದ ಸಮಯವನ್ನು ಸೋಮಾರಿಯಾಗಿ ಕಳೆದು ವ್ಯರ್ಥ ಮಾಡತೊಡಗಿದ. ದಿನ ಕಳೆದಂತೆ ಕ್ಷಣಿಕ ಸುಖದ ಹಂಬಲಕ್ಕೆ ಜೋತು ಬಿದ್ದು ಹಠಮಾರಿಯಾದ. ಮುದ್ದಿನ ಕುವರನ ಹಟಕ್ಕೆ ತಲೆಬಾಗಿದ ಪೋಷಕರು ಆತನಿಗೆ ಮೊಬೈಲ್ ಖರೀದಿಸಿ ಕೊಟ್ಟರು. ಬಹುಶಃ ಮೊಬೈಲನ್ನು ಸದುಪಯೋಗಪಡಿಸಿಕೊಂಡಿದ್ದರೆ….. ಅದು ಆತನಿಗೆ ವರವಾಗಿ ಕಾಡುತ್ತಿತ್ತೋ ಏನೋ …!?
         ಆದರೆ ಆತ ಕಲಿಕೆಯ ಹಿಂದೆ ಓಡದೆ, ಆಕರ್ಷಣೆಯನ್ನು ಬೆಂಬತ್ತಿದ. ಮೊಬೈಲ್ ಆಟಗಳಲ್ಲಿ ಕಾಲ ಕಳೆಯುತ್ತ ಸಂಪೂರ್ಣವಾಗಿ ಕಲಿಕೆಯಲ್ಲಿ ಹಿಂದುಳಿದ. ಜೀವನದಲ್ಲಿ ಗುರಿಯೇ ಇಲ್ಲದಂತಾಗಿ ಅಪ್ರಯೋಜಕನೆನಿಸಿದ. 
        ಅದೇ ಸಂತೋಷನು ತನ್ನ ಉತ್ತಮ ಹವ್ಯಾಸಗಳಿಂದ ವಿವಿಧ ಕಲೆಗಳಲ್ಲಿ ಪರಿಣತಿ ಹೊಂದಿ, ರಾಜ್ಯಮಟ್ಟ , ರಾಷ್ಟ್ರಮಟ್ಟದಲ್ಲಿ ತನ್ನನ್ನು ಗುರುತಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರನಾದ.
       ಹೌದು ಮಕ್ಕಳೇ, ನಮ್ಮ ನಿರ್ಣಯ, ನಮ್ಮ ಗುರಿ , ಆಸಕ್ತಿ ಹಾಗು ಹವ್ಯಾಸಗಳು ಬದುಕಿನ ಭವಿಷ್ಯವನ್ನು ನಿರ್ಣಯಿಸುತ್ತವೆ. ಉತ್ತಮ ಹವ್ಯಾಸಗಳನ್ನು ಒಡನಾಡಿಗಳನ್ನಾಗಿಸಿ ಸಮಯ ಕಳೆದಾಗ ಏಕಾಂತಕ್ಕೊಂದು ಮೌಲ್ಯ ಬರುತ್ತದೆ. ಬಿಡುವಿನ ಸಮಯದ ಸದುಪಯೋಗವಾಗುತ್ತದೆ. ನಮಗೆ ಅರಿವಿದ್ದೋ ಇಲ್ಲದೆಯೋ ನಾವು ಹಲವಾರು ಹವ್ಯಾಸಗಳ ಒಡೆಯರಾಗಿರುತ್ತೇವೆ. ಹವ್ಯಾಸಗಳಲ್ಲಿ ಉತ್ತಮ ಹವ್ಯಾಸಗಳು ವ್ಯಕ್ತಿತ್ವವನ್ನು ರೂಪಿಸುತ್ತವೆ. ಹಾಗೂ ಕೆಟ್ಟ ಹವ್ಯಾಸಗಳು ಬದುಕನ್ನು ನಾಶಗೊಳಿಸುತ್ತವೆ. 
        ತೋಟಗಾರಿಕೆ , ಬರವಣಿಗೆ, ಪುಸ್ತಕ ಓದುವುದು, ವಿವಿಧ ಉಪಯುಕ್ತ ವಸ್ತುಗಳ ಸಂಗ್ರಹ, ಫೊಟೋಗ್ರಫಿ, ವಿಭಿನ್ನ ಕಲೆಗಳಲ್ಲಿ ಆಸಕ್ತಿ ತಳೆಯುವುದು ಹೀಗೆ ಹವ್ಯಾಸಗಳಲ್ಲಿ ಹಲವು ತರಹ.
         ನಮ್ಮೊಳಗಿನ ಕೆಲವು ಪರಿಸರ ಸ್ನೇಹಿ ಹವ್ಯಾಸಗಳು ನಮ್ಮ ಪ್ರಕೃತಿಯನ್ನು ಉಳಿಸಿ ಬೆಳೆಸಿದರೆ ಇನ್ನು ಕೆಲವು ಹವ್ಯಾಸಗಳು ನಮ್ಮೊಂದಿಗೆ ಇತರರನ್ನೂ ಬೆಳೆಸುತ್ತವೆ.
        ಉತ್ತಮ ಹವ್ಯಾಸಗಳು ಉತ್ತಮ ಗೆಳೆಯರಿದ್ದಂತೆ. ಉದಾಹರಣೆಗೆ ಪುಸ್ತಕಗಳನ್ನೇ ತೆಗೆದುಕೊಳ್ಳಿ. ಓದುವ ಹವ್ಯಾಸ ವ್ಯಕ್ತಿಯ ಜ್ಞಾನ ದಾಹವನ್ನು ತಣಿಸುವುದರೊಂದಿಗೆ, ಸುತ್ತಲ ಜಗದ ಅರಿವನ್ನು ಮೂಡಿಸುತ್ತದೆ. ಸತ್ಪ್ರಜೆಯನ್ನಾಗಿ ಬೆಳೆಸುತ್ತದೆ. ಹಾಗೆಯೇ ಸತ್-ಚಿಂತನೆಯೊಂದಿಗೆ ಸತ್-ಸ್ನೇಹಿತರನ್ನು ಸಂಪಾದಿಸಿಕೊಡುತ್ತದೆ.
          ಡಾ। ಬಿ.ಆರ್ ಅಂಬೇಡ್ಕರ್ ರವರ ಪುಸ್ತಕ ಪ್ರೀತಿಯೇ ಅವರನ್ನು ಸಂವಿಧಾನಶಿಲ್ಪಿಯಾಗಿ ರೂಪಿಸಿತು. ಸರ್ ಸಿ.ವಿ .ರಾಮನ್ನರ ವಿಜ್ಞಾನದ ಆಸಕ್ತಿ ಭಾರತರತ್ನ ಅವರ ಮುಡಿಗೇರುವಂತೆ ಮಾಡಿತು. ಸಾಲು ಮರದ ತಿಮ್ಮಕ್ಕ ನವರ ಹವ್ಯಾಸ ಪ್ರಾಣವಾಯುವನ್ನೇ ನೀಡುತ್ತಿದೆ.  ಶ್ರೇಷ್ಠ ಸಂತರ , ಮಹಾಪುರುಷರ ಹವ್ಯಾಸಗಳೇ ಅವರಿಂದಿಗೂ ಇತಿಹಾಸದಲ್ಲಿ ಅಮರರಾಗುಳಿಯಲು ಪ್ರೇರಕವಾದ ಶಕ್ತಿಗಳಾಗಿವೆ. ಸೆರೆಮನೆಯಲ್ಲೂ ತನ್ನ ಬರವಣಿಗೆ ಹವ್ಯಾಸದಿಂದ ನಿರಂತರ ಪತ್ರ ಬರೆಯುತ್ತಾ ಮಗಳಲ್ಲಿ ದೇಶಭಕ್ತಿ, ಧೈರ್ಯದ ಬೀಜವನ್ನು ಬಿತ್ತಿದ ಜವಹಾಲಾಲ್ ನೆಹರು, 'ಉತ್ತಮ ಹವ್ಯಾಸಗಳು ನಮ್ಮ ಹಾಗೂ ನಮ್ಮವರ ಜೀವನಗತಿಯನ್ನೇ ಬದಲಿಸುತ್ತವೆ' ಎಂಬ ಮಾತಿಗೆ ನಿದರ್ಶನವಾಗಿ ನಿಲ್ಲುತ್ತಾರೆ.
           ಮಕ್ಕಳೇ, ನಿಮ್ಮೊಳಗಿಹ ಒಳ್ಳೆಯ ಹವ್ಯಾಸಗಳೇ ನಿಮ್ಮನ್ನು ರೂಪಿಸುತ್ತವೆ. ಹಾಗೆಯೇ ನಿಮ್ಮ ಉತ್ತಮ ಹವ್ಯಾಸಗಳೇ ಇಂದು ನಮ್ಮ ಮಕ್ಕಳ ಜಗಲಿಯನ್ನು ಬೆಳಗುತ್ತಿದೆ. ಇಂದಿನ ನಿಮ್ಮ ಚಿತ್ರ ಬಿಡಿಸುವ ಹವ್ಯಾಸ ಮುಂದೆ ನಿಮ್ಮನ್ನೊಬ್ಬ ಪ್ರತಿಭಾನ್ವಿತ ಕಲಾವಿದನನ್ನಾಗಿಸಬಹುದು. ನಿಮ್ಮ ಇಂದಿನ ಬರವಣಿಗೆಯ ಆಸಕ್ತಿ ಭವಿಷ್ಯದ ಅತ್ಯುತ್ತಮ ಕವಿಯನ್ನಾಗಿಯೋ, ಲೇಖಕನನ್ನಾಗಿಯೋ ಮಾಡಬಹುದು.
        ಹವ್ಯಾಸಗಳು ನಮ್ಮನ್ನು ನಾವು ಅರಿಯಲು, ನಮ್ಮ ಸಾಮರ್ಥ್ಯವನ್ನು ಒರೆಹಚ್ಚಲು ಅವಕಾಶವನ್ನು ಸೃಷ್ಟಿಸುತ್ತವೆ. ಆ ವಿಷಯದ ಕುರಿತು ಪ್ರೀತಿಯನ್ನು ಹೆಚ್ಚಿಸುತ್ತವೆ. ವೈಯಕ್ತಿಕ ಬೆಳವಣಿಗೆಯೊಂದಿಗೆ ಸಮಾಜಕ್ಕೆ ಪೂರಕವಾದ ಕೊಡುಗೆಯು ನಮ್ಮಿಂದ ಹರಿದು ಹೋಗಲು ನೆರವಾಗುತ್ತವೆ. ಕೆಟ್ಟ ಯೋಚನೆಗಳು ಬಳಿ ಸುಳಿಯದಂತೆ ಕಾಯುತ್ತವೆ.
ಜ್ಞಾನಸಂಪಾದನೆಯೊಂದಿಗೆ ವ್ಯಕ್ತಿತ್ವ ವಿಕಸನಗೊಂಡು ಸಮಾಜಮುಖಿ ವ್ಯಕ್ತಿಗಳಾಗಿ ರೂಪುಗೊಳ್ಳಲು ಹವ್ಯಾಸಗಳು ಪ್ರೇರಣೆಯೊದಗಿಸುತ್ತವೆ.
          ಕೆಲವು ಬಾರಿ ಹವ್ಯಾಸಗಳೇ ವೃತ್ತಿಗಳಾಗಿ ಬದಲಾಗಿ ಜೀವನಕ್ಕೆ ದಾರಿಯಾಗುತ್ತವೆ. ಗಳಿಸಿದ ಪದವಿಯಾಧಾರದಲ್ಲಿ ದೊರೆಯದ ಉದ್ಯೋಗ , ಹವ್ಯಾಸಗಳ ಮೂಲಕ ದೊರೆತು ಬದುಕಿಗೆ ನೆಲೆಯನ್ನು ಕಂಡುಕೊಳ್ಳಲು ನೆರವಾಗುತ್ತದೆ. ಆದ್ದರಿಂದಲೇ ನಮ್ಮ ನಿತ್ಯ ಜೀವನದಲ್ಲಿ ಹವ್ಯಾಸಗಳಿಗೆ ಸ್ಥಾನವಿತ್ತರೆ ಸಮಯದ ಸದುಪಯೋಗದೊಂದಿಗೆ ಕಲಿಕೆಯ ಗಳಿಕೆಯಾಗುವುದೆಂದರೆ ಅತಿಶಯೋಕ್ತಿಯಾಗಲಾರದು. ಹವ್ಯಾಸಗಳು ಬದುಕಿಗೊಂದು ಪ್ರೇರಣೆ.....ದುಃಖ , ನೋವುಗಳಿಗೆ ಸಾಂತ್ವನದ ಶ್ರೀರಕ್ಷೆ…...
      ನಮ್ಮ ಮುಂದೆ ಕನಸುಗಳಿವೆಯೆಂದರೆ ಅದಕ್ಕೆ ಪೂರಕವಾದ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳೋಣ. ಇನ್ನೂ ಯಾವುದೇ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡಿಲ್ಲವೆಂದರೆ ಇಂದೇ ಆರಂಭದ ಹೆಜ್ಜೆಯಿಡೋಣ. ಸಮಯದ ಸದುಪಯೋಗದೊಂದಿಗೆ ಅಮೂಲ್ಯ ರತ್ನಗಳು ನಾವಾಗೋಣ.
..............................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
*********************************************
Ads on article

Advertise in articles 1

advertising articles 2

Advertise under the article