-->
ಬದಲಾಗೋಣವೇ ಪ್ಲೀಸ್ : ಸಂಚಿಕೆ - 24

ಬದಲಾಗೋಣವೇ ಪ್ಲೀಸ್ : ಸಂಚಿಕೆ - 24

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು


            ಬದಲಾಗೋಣವೇ ಪ್ಲೀಸ್ - 24

                   ಸ್ವಚ್ಛಂದ ಬದುಕ ನೀಡಲು 
                      ಸಿದ್ಧರಾಗೋಣವೇ.....   
           ನನ್ನ ಮಕ್ಕಳು ಸಚಿನ್ ತೆಂಡೂಲ್ಕರ್ ನಂತೆ ದೊಡ್ಡ ಕ್ರಿಕೆಟಿಗನಾಗಬೇಕು , ಅಬ್ದುಲ್ ಕಲಾಂ ರಂತೆ ಶ್ರೇಷ್ಠ ವಿಜ್ಞಾನಿಯಾಗಬೇಕು , ಮದರ್ ತೆರೇಸಾ ಳಂತೆ ಶಾಂತಿದೂತಳಾಗಿ ನೊಬೆಲ್ ಪುರಸ್ಕೃತಳಾಗಬೇಕು , ಐಶ್ವರ್ಯರೈಯಂತೆ ವಿಶ್ವ ಸುಂದರಿಯಾಗಬೇಕು , ಟಾಟಾ ಅಂಬಾನಿಯರಂತೆ ಶ್ರೇಷ್ಠ ಉದ್ಯಮಿಯಾಗಬೇಕು , ಇನ್ಪೋಸಿಸ್ ವಿಪ್ರೊ ದಂತಹ ಕಂಪೆನಿಯನ್ನು ಕಟ್ಟಬೇಕು , ಶ್ರೇಷ್ಠ ಸೈನಿಕನಾಗಬೇಕು , ಶ್ರೇಷ್ಠ ರಾಜಕಾರಣಿಯಾಗಬೇಕು , ಶ್ರೇಷ್ಠ ಗುರುಗಳಾಬೇಕು , ಶ್ರೇಷ್ಠ ಕಲಾವಿದನಾಗಬೇಕು , ಸಾಮಾಜಿಕ ಮಾಧ್ಯಮದ ಶೋಗಳಲ್ಲಿ ಸ್ಟಾರ್ ಆಗಿ ಮೆರೆಯಬೇಕು... ಹೀಗೆ ಪ್ರತಿಯೊಂದು ತಂದೆ- ತಾಯಿ - ಪೋಷಕರು ತಮ್ಮ ಮಕ್ಕಳ ಬಗ್ಗೆ ಹಗಲಿರುಳು ಕನಸು ಕಾಣುತ್ತಾರೆ. ಇದಕ್ಕಾಗಿ ತನ್ನ ಪರಿಚಿತರಲ್ಲಿ ಚರ್ಚಿಸುತ್ತಾರೆ... ದೇವರಿಗೆ ಹರಕೆ ಹೇಳುತ್ತಾರೆ... ದುಡ್ಡು ಸಂಗ್ರಹಿಸಿಡುತ್ತಾರೆ.... ಆಸ್ತಿ ಮಾಡಿರುತ್ತಾರೆ... ಹೀಗೆ ಎಲ್ಲವನ್ನು ಮಾಡುತ್ತಾರೆ. ಆದರೆ ಅತೀ ಮುಖ್ಯವಾಗಿ ಕನಸನ್ನು ನನಸಾಗಿಸಬೇಕಾದ ಮಕ್ಕಳನ್ನು ಪೂರ್ತಿ ಬಂಧನದಲ್ಲಿಡುತ್ತಾರೆ. ಎಣ್ಣೆ , ಬತ್ತಿ , ಬೆಂಕಿಪೆಟ್ಟಿಗೆ ಎಲ್ಲ ಇದ್ದರೂ ದೀಪ ಬೆಳಗಿಸದಿದ್ದರೆ ಬೆಳಕನ್ನು ಕಾಣುವುದಾದರೂ ಹೇಗೆ.......? ಶ್ರೇಷ್ಠರಾಗಲು ಬೇಕಾದ ಸಾಧನೆಯ ಹಾದಿ... ವ್ಯಕ್ತಿತ್ವ ನಿರ್ಮಾಣದ ಅಡಿಪಾಯಗಳನ್ನು ಹಾಕದೇ ಬರೀ ಕನಸುಗಳನ್ನೇ ಕಂಡರೆ ಹೇಗೆ.....? ಬಂಧನಗಳಿಂದ ಪ್ರತಿಭೆ ಅರಳಲು ಸಾಧ್ಯವೇ.....? ಇದೇಕೆ ಹೀಗೆ ಎಂಬುದನ್ನು ನಾವೆಲ್ಲರೂ ಆಲೋಚಿಸಬೇಕಾಗಿದೆ. ಶೇಕಡಾ 99 ರಷ್ಟು ಕನಸುಗಳು ಕನಸಾಗಿ ಉಳಿಯಲು ಕಾರಣಗಳನ್ನು ಗುರುತಿಸಿ ಪರಿಹರಿಸಬೇಕಾಗಿದೆ.
          ಗಿಡ ನೆಡುವುದಕ್ಕಿಂತಲೂ ಗಿಡ ಬೆಳೆಸುವುದು ಮುಖ್ಯ. ನಾವೆಲ್ಲರು ಗಿಡ ನೆಡುತ್ತೇವೆ. ಆದರೆ ಅದನ್ನು ಬೆಳೆಸಲು ಕಾಲಕಾಲಕ್ಕೆ ನೀರು , ಗೊಬ್ಬರ ಉಣಿಸಿ ರೋಗ ರುಜಿನಗಳು ಬಾರದಂತೆ ರಕ್ಷಿಸಿ ಸೂಕ್ತವಾಗಿ ಕಾಪಾಡುವುದನ್ನು ಮರೆಯುತ್ತೇವೆ. ಗಿಡದ ಪ್ರಾರಂಭದ ಕೆಲವು ವರುಷಗಳಲ್ಲಿ ಕಾಪಾಡಿದರೆ ಸಾಕು. ನಂತರ ಅದೇ ಸ್ವಂತವಾಗಿ ತಾನೇ ಬೆಳೆದು ಪರಿಸರಕ್ಕೆ ತನ್ನದೇ ಆದ ನೆರಳು - ಫಲ ಕೊಡುತ್ತದೆ. ಇದೇ ರೀತಿ ಮಗುವನ್ನು ಹೆರುವುದಕ್ಕಿಂತಲೂ ಬೆಳೆಸುವುದು ಮುಖ್ಯ. ಹುಟ್ಟಿದ ಮಗುವನ್ನು ಅಂದಾಜು ಪ್ರೌಢಾವಸ್ಥೆ ವರೆಗೂ ಪ್ರೀತಿ ಎಂಬ ಸೂಕ್ತ ಪರಿಸರದಲ್ಲಿ ಧನಾತ್ಮಕ ಅಂಶಗಳೆಂಬ ನೀರು ಗೊಬ್ಬರ ಹಾಕಿ , ಕೆಟ್ಟ ನಡತೆ ಮತ್ತು ದುರ್ಜನ ಸಂಗಗಳೆಂಬ ರೋಗ ರುಜಿನಗಳಿಂದ ರಕ್ಷಿಸಿದರೆ ಪ್ರತಿಯೊರ್ವನು ಶ್ರೇಷ್ಠನಾಗಿ ಮೂಡುತ್ತಾನೆ.
       ಹೆತ್ತವರ ಕನಸು ನನಸಾಗದಿರಲು ಮುಖ್ಯ ಕಾರಣ ಮಕ್ಕಳು ನಿಸರ್ಗದಿಂದ ಕೃತಕತೆಯೆಡೆಗೆ ಪಯಣಿಸುತ್ತಿರುವುದು. ಮೊಟ್ಟೆ ತಾನಾಗಿ ಒಡೆದರೆ ಸೃಷ್ಟಿ. ಇದು ನಿಸರ್ಗದತ್ತ ಕ್ರಿಯೆ. ಮೊಟ್ಟೆಯನ್ನು ಬಲತ್ಕಾರದಿಂದ ಒಡೆದರೆ ನಾಶ. ಇದು ಕೃತಕ ಪ್ರಕ್ರಿಯೆ. ಮೊಟ್ಟೆಯಿಂದ ಸೃಷ್ಟಿಯಾಗಲು ಅದರದ್ದೇ ಆದ ಬಿಸಿ ಪರಿಸರದ ಜತೆಗೆ ಅವಶ್ಯಕ ಸಮಯ ಮತ್ತು ಸ್ವಾತಂತ್ರ್ಯ ಕೊಡಬೇಕು. ಈ ಪ್ರಕ್ರಿಯೆಯನ್ನು ನೋಡಲು ನಮಗೆ ಕೊನೆಯವರೆಗೆ ಕಾಯುವ ತಾಳ್ಮೆ ಹಾಗೂ ನಂಬಿಕೆ ಬೇಕು. ಇವುಗಳಿಲ್ಲದೆ ತಾಳ್ಮೆಗೆಟ್ಟು ಒತ್ತಡದಿಂದಾಗಿ ಒಡೆಯಲು ಪ್ರಯತ್ನಿಸಿದರೆ ಸೃಷ್ಟಿಯ ಬದಲು ನಾಶ ಖಂಡಿತಾ. ಕನಸು ನನಸಾಗಿಸುವುದು ಕೂಡಾ ಒಂದು ಪ್ರತಿಭಾ ಸೃಷ್ಟಿಯ ಪ್ರಕ್ರಿಯೆ ತಾನೆ. ಇದರಲ್ಲಿ ಅತಿಯಾದ ಒತ್ತಡ ಸಾಲದು. ಅತಿಯಾದರೆ ಕನಸು ನನಸಾಗದು...!
          ಮಕ್ಕಳ ಬಾಲ್ಯ ಎನ್ನುವುದು ಬದುಕಿನ ಅಡಿಪಾಯವಿದ್ದಂತೆ. ಬಾಲ್ಯ ಭದ್ರವಾಗಿದ್ದರೆ ಬದುಕು ಸರಳ. ಹಾಗಾದರೆ ಬಾಲ್ಯವನ್ನು ಹೇಗೆ ಕಳೆಯಬೇಕು ಎಂಬುದು ಪ್ರಶ್ನೆಯಾಗುತ್ತದೆ. ನನ್ನ ಪ್ರಕಾರ ಬಾಲ್ಯದ ಉಸಿರು ಆಟ. ಅದು ಒಳಾಂಗಣ ಅಥವಾ ಹೊರಾಂಗಣ ಅಥವಾ ಕಲೆಯ ರೂಪದಲ್ಲಿರಬಹುದು. ಇದರಲ್ಲಿ ಮಕ್ಕಳಿಗೆ ಸ್ವತಂತ್ರಬೇಕು. ದೊಡ್ಡವರಾದ ನಾವು ಆಟಗಾರರಾಗದೇ ಅವರಿಗೆ ಸುಗಮಕಾರರಾಗಬೇಕು. ಸ್ವ ಅನುಭವಕ್ಕೆ ಒತ್ತು ನೀಡಬೇಕು. ಮಕ್ಕಳಿಗೆ ಸಾಕಷ್ಟು ಅವಕಾಶ ಹಾಗೂ ಸಮಯ ನೀಡಬೇಕು. ಮನೆಯೊಳಗೆ ಬಂಧಿಯಾಗದೇ ಪ್ರಕೃತಿಯಲ್ಲಿ ಆಡಬೇಕು. ಮನೆಯಲ್ಲಿ ಸ್ಥಳಾವಕಾಶ ಇಲ್ಲದಿರುವುದು ಕಾರಣವಾಗಬಾರದು. ಮಕ್ಕಳನ್ನು ಸಮಯ ಸಿಕ್ಕಾಗ ಸ್ಥಳಾವಕಾಶ ಇರುವಲ್ಲಿಗೆ ಕರೆದುಕೊಂಡು ಹೋಗಿ ಅನುಭವ ನೀಡಬೇಕು. ಜಾಗತೀಕರಣದ ಪ್ರಭಾವಗಳಿಂದಾಗಿ ನಾವೆಲ್ಲ ವ್ಯಕ್ತಿ ಹಾಗೂ ಪ್ರಕೃತಿಯನ್ನು ಮರೆತು ಕೃತಕವಸ್ತು ಹಾಗೂ ಸೌಲಭ್ಯಗಳ ದಾಸರಾಗಿದ್ದೇವೆ. ಯಂತ್ರಗಳ ಸಂಖ್ಯೆ ಹೆಚ್ಚಾದಂತೆ ಬದುಕು ಯಾಂತ್ರಿಕವಾಗಿವೆ. ಮೊಬೈಲ್ ಆಟದ ಚಟದಿಂದ ಮಕ್ಕಳನ್ನು ಬಿಡಿಸುವುದು ಹೇಗೆ ಎಂದು ಚಿಂತೆ ಮಾಡುತ್ತೇವೆ. ನಮಗೆ ತಿಳಿದಿರುವಂತೆ ಪ್ರೌಢಾವಸ್ಥೆವರೆಗೆ ಅಂದರೆ ಮಕ್ಕಳ ಬಾಲ್ಯತನಕ್ಕೆ ಆಟವೇ ಉಸಿರು. ಅದೊಂದು ಅವಿಭಾಜ್ಯ ಅಂಗ. ಆಟವಿಲ್ಲದೆ ಬಾಲ್ಯವಿಲ್ಲ. ಹಾಗಾಗಿ ಯಾಂತ್ರಿಕವಾಗಿರುವ ಮೊಬೈಲ್ ಆಟದ ಬದಲು ಪ್ರಕೃತಿಯಲ್ಲಿ ಆಡಲು ಪ್ರೋತ್ಸಾಹ ನೀಡಿ. ನಮ್ಮ ಬಾಲ್ಯದಲ್ಲಿ ಯಂತ್ರಗಳ ಆಟಕ್ಕಿಂತ ಪ್ರಕೃತಿ ಜೊತೆಗಿನ ಆಟಗಳು ಹೆಚ್ಚಾಗಿದ್ದವು. ಆಲದ ಮರದ ಬಿಳಲು , ಹಳೆಯ ಸೀರೆ , ಹಳೆಯ ಟಯರ್ , ಹಳೆಯ ಹಗ್ಗಗಳು ಹೀಗೆ ಎಲ್ಲವೂ ಜೋಕಾಲಿ ಆಟದ ಸಾಮಾಗ್ರಿಗಳಾಗಿದ್ದವು. ನಾವು ಹಣ್ಣಿಗಾಗಿ ಮರ ಹತ್ತುತ್ತಿದ್ದೆವು. ಮರಗಳೊಂದಿಗೆ ಕಳ್ಳ ಪೋಲಿಸ್ ಆಟ , ಕೋತಿಯಾಟ ಆಡುತ್ತಿದ್ದೆವು. ಕಬಡ್ಡಿ , ಚಿನ್ನಿದಾಂಡು ಹೀಗೆ ಪ್ರಕೃತಿಯ ಮಡಿಲಲ್ಲಿ ಆಟ ಆಡುತ್ತಿದ್ದೆವು. ಆಗ ನಮಗೆ ಬಂಧನಗಳು ಕಡಿಮೆ ಇದ್ದವು. ಬಿಸಿಲಿನ ಲೆಕ್ಕವಿಲ್ಲದೆ ಆಡುತ್ತಿದ್ದೆವು , ಜಾರಿ ಬೀಳುತ್ತಿದ್ದೆವು, ಮಣ್ಣು ಮಾಡಿಕೊಳ್ಳುತ್ತಿದ್ದೆವು, ಗಾಯವಾಗುತ್ತಿತ್ತು , ಇದೆಲ್ಲ ಸಹಜವಾಗಿದ್ದವು. ಆದರೆ ನಮ್ಮ ಹಿರಿಯರು ಯಾರೂ ಕೂಡಾ ಅದನ್ನು ದೊಡ್ಡ ಸಂಗತಿ ಮಾಡುತ್ತಿರಲಿಲ್ಲ. ಎಲ್ಲವೂ ಸ್ವ-ಅನುಭವ. ಆದರೆ ಈಗ ನಾವು ಮಕ್ಕಳನ್ನು ಮನೆಯಿಂದ ಹೊರಗೆ ಕಾಲಿಡಲು ಬಿಡುತ್ತಿಲ್ಲ. ಬಿಸಿಲಿನಲ್ಲಿ ಆಡಿ ತಲೆ ತಿರುಗಿ ಬಿದ್ದರೆ... ಕಪ್ಪಾದರೆ.. ಗಾಯವಾದರೆ... ಧೂಳಾದರೆ... ಮಣ್ಣಾದರೆ... ಶೀತವಾದರೆ....ಹೀಗೆ ನೂರಾರು ನಕಾರಾತ್ಮಕ ಕಾರಣಗಳಿಂದಾಗಿ ಮಕ್ಕಳು ಮನೆಯೊಳಗಡೆ ಬಂಧಿಯಾಗ ಬೇಕಾಗಿದೆ. 
        ಆಟ ಬಾಲ್ಯದ ಉಸಿರು ಎಂಬುದನ್ನು ನಾವು ಮರೆಯಬಾರದು. ಅದು ವ್ಯಕ್ತಿತ್ವದ ನಿರ್ಮಾಣಕ್ಕೆ ಭದ್ರ ಅಡಿಗಲ್ಲು. ಮಗು ಮಣ್ಣಿನೊಡನೆ ಬೆರೆಯದಿದ್ದರೆ ಮಣ್ಣಿನ ಸಂಬಂಧ ಸಿಗಲಾರದು. ಮಣ್ಣಿನ ಬಾಂಧವ್ಯವಿಲ್ಲದೆ ಶ್ರೇಷ್ಠತೆ ಎಂಬುದು ಅಸಾಧ್ಯ. ಕಂಠಪಾಠ ಅಥವಾ ಬಂಧನದೊಳಗಿನ ಕಲಿಕೆ ಎಂದಿಗೂ ಶ್ರೇಷ್ಠತೆಯನ್ನು ಸೃಷ್ಟಿಸಲಾರದು. ಮುಕ್ತ ಬದುಕು ಮಾತ್ರ ಸ್ವಂತಿಕೆಯ ಜತೆಗೆ ಶ್ರೇಷ್ಠತೆಯನ್ನು ಸೃಷ್ಟಿಸುತ್ತದೆ. ಹಾಗಾಗಿ ಪಾಲಕರಾದ ನಾವು ಬಾಲ್ಯದಲ್ಲಿ ಸ್ವಂತಿಕೆ ಹಾಗೂ ಸ್ವಕಲಿಕೆ ಮತ್ತು ಸ್ವ ಅನುಭವದ ಕಲಿಕೆ ಪಡೆಯಲು ಮಕ್ಕಳನ್ನು ಹೆಚ್ಚು ಸಮಯ ಬಿಡಬೇಕು. ಇದು ಮನೆಯೊಳಗಿನ ಬಂಧನದಿಂದ ಸಾಧ್ಯವಿಲ್ಲ. ಪ್ರಕೃತಿ ಜತೆ ಒಡನಾಟವಿದ್ದರೆ ಮಾತ್ರ ಸಾಧ್ಯ. ವಿಶಾಲವಾಗಿ ಅರಳಿ ಜಗಕ್ಕೆ ನೆರಳಾಗ ಬೇಕಾದ ಗಿಡದ ರೆಂಬೆ ಕೊಂಬೆಗಳನ್ನು ಬೊನ್ಸಾಯ್ ಕೃಷಿಯಂತೆ ಆಗಾಗ ಕತ್ತರಿಸಿದರೆ ನೆರಳಾಗುವುದಾದರೂ ಹೇಗೆ ?..... ಬರೀ ಪುಸ್ತಕವನ್ನು ಓದಿ ಪ್ರಾಯೋಗಿಕ ಅನುಭವವಿಲ್ಲದೆ ಶ್ರೇಷ್ಠ ಈಜುಪಟು ಎನಿಸುವುದಾದರೂ ಹೇಗೆ ?.... ಪಾಲಕರೇ , ಮಕ್ಕಳ ಸ್ವಚ್ಛಂದ ಬಾಲ್ಯದ ಭದ್ರ ಅಡಿಪಾಯ ಕಟ್ಟಲು ಬದಲಾಗೋಣವೇ....ಕನಸು ನನಸಾಗಿಸೋಣವೇ ?... ಈ ಬದಲಾವಣೆಗೆ ಯಾರನ್ನು ಕಾಯದೇ ನಾವೇ ಬದಲಾಗೋಣ .... ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*******************************************




Ads on article

Advertise in articles 1

advertising articles 2

Advertise under the article