-->
ಓ ಮುದ್ದು ಮನಸೇ ...…...! ಸಂಚಿಕೆ -13

ಓ ಮುದ್ದು ಮನಸೇ ...…...! ಸಂಚಿಕೆ -13

ಓ ಮುದ್ದು ಮನಸೇ ...…...! ಸಂಚಿಕೆ -13

        ಹುಟ್ಟನ್ನು ಸಂಭ್ರಮಿಸುವ ಮುನ್ನ….?
      ---------------------------------------
    ಅದೊಂದು ರವಿವಾರ ಮನೆಯಂಗಳದ ಕಟ್ಟೆ ಮೇಲೆ ಕೂತು ಪ್ರಾಜೆಕ್ಟ್ ವರ್ಕ್ ಮಾಡುತ್ತಿದ್ದ ಕಿರಣ್ ಅಂಗಳದ ಇನ್ನೊಂದು ಮೂಲೆಯಲ್ಲಿ ಸಮೃದ್ಧವಾಗಿ ಬೆಳೆದಿದ್ದ ನೇರಳೆ ಹಣ್ಣಿನ ಮರದ ಕಡೆ ಹೆಜ್ಜೆಯಿಟ್ಟ. ನಿರಂತರವಾಗಿ ಕೇಳಿಬರುತ್ತಿದ್ದ ಹಕ್ಕಿಗಳ ಚಿಲಿಪಿಲಿ ಕಿರಣ್ ನಲ್ಲಿ ಕುತೂಹಲ ಮೂಡಿಸಿತ್ತು. ಅದೇ ಮರದ ನೆರಳಿನಲ್ಲಿ ತೋಟದ ಕೆಲಸಕ್ಕೆ ಬಂದಿದ್ದ ಬಸಯ್ಯ ಮತ್ತು ಮುತ್ತಣ್ಣ ಮಧ್ಯಾಹ್ನದ ಬಿಸಿ ಬಿಸಿ ಊಟ ಮಾಡಿ ಗಡದ್ದಾಗಿ ನಿದ್ದೆ ಹೊಡೆಯುತ್ತಿದ್ದರು. ಅವರ ನಿದ್ರೆಗೆ ತೊಂದರೆ ಮಾಡದಂತೆ ಕಿರಣ್ ಮರದ ಸುತ್ತ ಸುತ್ತುತ್ತ ಹಕ್ಕಿಗಳ ಜಾಡು ಹುಡುಕಲು ಶುರು ಮಾಡಿದ. ಮರದಲ್ಲಿ ಬಿಟ್ಟಿದ್ದ ನೇರಳೆ ಹಣ್ಣುಗಳನ್ನು ತಿನ್ನುತ್ತಿದ್ದ ಪುಟಾಣಿ ಅಳಿಲೊಂದು ಕಿರಣ್ ನ ಹೆಜ್ಜೆ ಸಪ್ಪಳಕ್ಕೆ ಹೆದರಿ ಛಂಗನೆ ಜಿಗಿದು ಮಾಯವಾಯಿತು. ಹಕ್ಕಿಗಳ ಹುಡುಕಾಟದಲ್ಲಿದ್ದ ಕಿರಣ್ ನ ಕಣ್ಣಿಗೆ ರೆಂಬೆಯೊಂದರ ತುತ್ತ ತುದಿಯಲ್ಲಿ ಹಕ್ಕಿಯೊಂದರ ಗೂಡು ಗೋಚರವಾಯಿತು. ಗೂಡು ಕಂಡ ಕಿರಣ್ ಕೂತಹಲ ಭರಿತನಾಗಿ ಅದರ ಸುತ್ತಲೂ ಕಣ್ಣು ಹಾಯಿಸಲು ಶುರುಮಾಡಿದ. ಹೀಗೆ ಗೂಡಿನ ಮೇಲೆ ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಿದ್ದಾಗ ಪುಟಾಣಿ ಹಕ್ಕಿಯೊಂದು ಸರ್ರನೆ ಹಾರಿಬಂದು ಅದೇ ರೆಂಬೆಯ ಮೇಲೆ ಕೂತಿತು. ಹಕ್ಕಿ ಕೂತದ್ದೆ ತಡ, ಗೂಡಿನ ಒಳಗಿಂದ ಒಂದೇ ಸಮನೆ ಚಿಲಿಪಿಲಿ ಶಬ್ಧ! ಕಿರಣ್ ನ ಕಣ್ಣುಗಳು ಹಕ್ಕಿಗೂಡಿನ ಮೇಲೆ ಕೇಂದ್ರೀಕೃತವಾದವು. ಅತ್ತಿತ್ತ ನೋಡಿದ ಪುಟಾಣಿ ಹಕ್ಕಿ ಗೂಡಿನ ಬಳಿ ಬಂದು ತನ್ನ ಕೊಕ್ಕಿನಲ್ಲಿದ್ದ ಹಣ್ಣಿನ ತುಣುಕೊಂದನ್ನು ತನ್ನ ಮರಿಗಳ ಬಾಯಲ್ಲಿಟ್ಟು ಹಾರಿ ಹೋಯಿತು.
          ತನ್ನ ಅನ್ವೇಷಣೆಯನ್ನು ಅಮ್ಮನ ಬಳಿ ಹೇಳುವ ತವಕದಿಂದ ಅಡುಗೆ ಮನೆಗೆ ಓಡಿದ ಕಿರಣ್. ಅಮ್ಮನನ್ನು ಕಂಡವನೇ ಅಂದ, ಅಂಗಳದ ನೇರಳೆ ಮರದಲ್ಲಿ ಹಕ್ಕಿಯೊಂದು ಗೂಡು ಕಟ್ಟಿದೆ. ಅದು ತನ್ನ ಮರಿಗಳಿಗೆ ಅಹಾರ ಕೊಡೋದನ್ನ ನಾನು ನೋಡಿದೆ. ಮಗನ ಸಂತೋಷವನ್ನು ಕಂಡ ಅಮ್ಮ ಅಂದರು, ಅದು ನಿಂದೇ ಮರ..! ಕಿರಣ್ ಗೆ ಏನೂ ಹೊಳೆಯಲಿಲ್ಲ... ನಿನ್ನ ಮೊದಲನೇ ಹುಟ್ಟು ಹಬ್ಬಕ್ಕೆ ನಿಮ್ಮಪ್ಪ ನಿನ್ನ ಕೈಯ್ಯಾರೆ ನೆಡಿಸಿದ ಮರವದು, ಸರಿ ಸುಮಾರು ಹತ್ತು ಹನ್ನೆರೆಡು ವರ್ಷಗಳ ಹಿಂದೆ. ಇವತ್ತು ಇಷ್ಟು ದೊಡ್ಡದಾಗಿ ಬೆಳೆದು ಹಣ್ಣುಕೊಡುತ್ತಿದೆ. ಹಕ್ಕಿ ಗೂಡು ಕಟ್ಟಿರೋದು ಇದೇ ಮೊದಲೇನಲ್ಲ, ಅದೆಷ್ಟೋ ಹಕ್ಕಿಗಳು ಪ್ರತಿವರ್ಷ ಗೂಡುಕಟ್ಟಿ ಜೀವಿಸುತ್ತವೆ. ಅಳಿಲು, ಮಂಗ ಮೊದಲಾದ ಪ್ರಾಣಿಗಳೂ ಅದರ ಹಣ್ಣು ತಿನ್ನಲು ದಿನನಿತ್ಯ ಬರುತ್ತವೆ. ಪ್ರತೀದಿನ ಮನೆಕೆಲಸದವರು ದಣಿವಾರಿಸಿಕೊಳ್ಳೋದು ಅದೇ ಮರದ ನೆರಳಿನಲ್ಲಿ, ಅಷ್ಟೇ ಅಲ್ಲ ಸಂಜೆ ಕೆಲಸ ಮುಗಿಸಿ ಹೊರಡುವಾಗ ನೇರಳೆ ಹಣ್ಣುಗಳನ್ನು ತಮ್ಮ ಮಕ್ಕಳಿಗೂ ಕೊಂಡೊಯ್ಯುತ್ತಾರೆ.
       ಅವಕ್ಕಾಗಿ ನಿಂತ ಕಿರಣ್...! ತನಗೇ ಗೊತ್ತಿಲ್ಲದೆ, ತಾನೇ ನೆಟ್ಟ ಮರದಿಂದ ನಡೆಯುತ್ತಿರುವ ಚಮತ್ಕಾರಗಳನ್ನು ಅವನೆಂದೂ ತಿಳಿದುಕೊಂಡಿಲ್ಲ. ಅವನ ಬದುಕಿನ ಇಷ್ಟೂ ವರ್ಷ ಹುಟ್ಟಿದ ಹಬ್ಬ ಆಚರಿಸಿದ್ದರೂ ಇಂತಹದ್ದೊಂದು ಯೋಚನೆ ಅವನಿಗೆಂದೂ ಬಂದಿಲ್ಲ. ಕೇಕ್ ಕತ್ತರಿಸಿ, ಸಿಹಿತಿಂದು ಗೆಳೆಯರು ಕುಟುಂಬಸ್ಥರೊಂದಿಗೆ ಕುಣಿದು ಕುಪ್ಪಳಿಸುವುದೇ ಆಚರಣೆ ಅಂದುಕೊಂಡಿದ್ದ ಕಿರಣ್ಗೇ ಹುಟ್ಟು ಹಬ್ಬವನ್ನೂ ಒಂದು ಅರ್ಥಪೂರ್ಣ ಆಚರಣೆಯನ್ನಾಗಿಸಿ ಅದನ್ನು ಶಾಶ್ವತವಾಗಿಸುವ ಯೋಚನೆ ಬರಲೇ ಇಲ್ಲ. 
        ಪ್ರತೀ ವ್ಯಕ್ತಿಯೂ ತನ್ನ ಜನನದ ನಂತರ ಬದುಕಿನುದ್ದಕ್ಕೂ ಇಡೀ ಪರಿಸರ ವ್ಯವಸ್ಥೆಗೊಂದು ಕೊಡುಗೆಯಾಗಿ ತನ್ನ ಪ್ರತೀ ಕ್ಷಣಗಳನ್ನೂ ವಿಶೇಷವಾಗಿಸಬೇಕೇ ವಿನಃ ಕ್ಷಣಿಕ ಸುಖದ ಬೆನ್ನು ಬಿದ್ದು ಬದುಕಲು ಸಿಕ್ಕ ಸುಂದರ ಅವಕಾಶವನ್ನು ಅರ್ಥ ಹೀನ ಗೊಳಿಸಬಾರದು. ಮಕ್ಕಳು ಚಿಕ್ಕವರಿದ್ದಾಗಲೇ ಅವರ ಪ್ರತಿಯೊಂದೂ ಸಂತೋಷದ ಕ್ಷಣಗಳಲ್ಲಿ ಇಡೀ ಸಮಾಜದ ಒಳಿತನ್ನು, ಸಂತೋಷವನ್ನು ಒಟ್ಟೊಟ್ಟಿಗೆ ಕೊಂಡೊಯ್ಯಬಲ್ಲ ಮನೋಭಾವವನ್ನು ಬೆಳೆಸಿದರೆ, ಅಂತಹ ಅವಕಾಶಗಳನ್ನು ಕಲ್ಪಿಸಿಕೊಟ್ಟರೆ ಬೆಳೆಯುವ ಮಕ್ಕಳು ಮುಂದೊಂದು ದಿನ ಸ್ವಾರ್ಥಿಗಳಾಗದೆ, ಸಮಾಜಕ್ಕೊಂದು ಉತ್ತಮ ಕೊಡುಗೆಗಳಾಗಿ ರೂಪುಗೊಳ್ಳುತ್ತಾರೆ. ಪರಿಸರ ಪ್ರೀತಿ, ಸಾಮಾಜಿಕ ಕಾಳಜಿ, ವೈಜ್ಞಾನಿಕ ಚಿಂತನೆ, ದೇಶಾಭಿಮಾನ, ಪರೋಪಕಾರ ಮುಂತಾದವುಗಳನ್ನು ಹುಟ್ಟು ಹಬ್ಬದೊಟ್ಟಿಗೆ ಬೆರೆಸಿ ಆಚರಿಸಿದಾಗ ಚಿಕ್ಕಂದಿನಿಂದಲೇ ಉತ್ತಮ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಮಕ್ಕಳಿಗೆ ಸಹಾಯವಾಗುತ್ತವೆ. ಅಧುನಿಕ ಆಡಂಬರದ ಆಚರಣೆಗಳನ್ನು ಅನಾಮತ್ತಾಗಿ ಅನುಕರಿಸುವ ನಾವು ಪಕ್ಕದಮನೆಯವರಿಗೆ ಕಾಂಪಿಟೇಟರ್ಸ್ ಗಳಾಗಿದ್ದೇವೇ ಹೊರತು ನಮ್ಮ ಮಕ್ಕಳ ನಾಳೆಗಳಿಗೆ ಪೂರಕವಾದದ್ದನ್ನು ಕಟ್ಟಿಕೊಡುವಲ್ಲಿ ಸೋತಿದ್ದೇವೆ. ಹುಟ್ಟು ಹಬ್ಬವನ್ನೂ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವವನ್ನು ಕಟ್ಟಿಕೊಡಬಲ್ಲ ಒಂದು ಅವಕಾಶವನ್ನಾಗಿ ಬಳಸಬಾರದೇಕೆ?
        ಜಗತ್ತಿನಾದ್ಯಂತ ಪ್ರತೀ ಸೆಕೆಂಡಿಗೆ ಕನಿಷ್ಠ ಮೂರು ಮಕ್ಕಳ ಜನನವಾಗುತ್ತದೆ. ಇನ್ನು ಭಾರತದಲ್ಲೇ ಪ್ರತೀ ನಿಮಿಷಕ್ಕೆ ಐವತ್ತಕ್ಕಿಂತ ಹೆಚ್ಚು ಮಕ್ಕಳ ಜನನವಾಗುತ್ತದೆ. ಇದರ ಜೊತೆ ಜೊತೆಗೆ ಪ್ರತೀ ನಿಮಿಷಕ್ಕೆ ಸರಿಸುಮಾರು ಇಪ್ಪತ್ತು ಜನರ ಮರಣವೂ ಸಂಭವಿಸುತ್ತದೆ. ನಾವು ನಮ್ಮ ಹುಟ್ಟನ್ನು ಸಂಭ್ರಮಿಸುವ ಬದಲು ಅದನ್ನೊಂದು ಅವಕಾಶವನ್ನಾಗಿ ಬಳಸಿಕೊಂಡು ಬದುಕಿನುದ್ದಕ್ಕೂ ಒದಗಿಬರುವ ಪ್ರತೀ ಕ್ಷಣಗಳನ್ನೂ ವಿಶೇಷವನ್ನಾಗಿಸುತ್ತ ಜೊತೆ ನಡೆಯುವ ಗೆಳೆಯರಿಗೆ ಉತ್ತೇಜನೆ, ಮನೆಯವರಿಗೆ ಆಸರೆ, ಮುಂದಿನ ಪೀಳಿಗೆಗೆ ಮಾದರಿ ಒಟ್ಟಾರೆ ಸಮಾಜಕ್ಕೊಂದು ಕೊಡುಗೆಯಾಗುವಂತೆ ಮಾಡಿದರೆ ಹುಟ್ಟಿ ಸಾಯುವವರ ನಡುವೆ ನಾವೊಬ್ಬರಾಗದೆ, ಸತ್ತಮೇಲೂ ಬದುಕಬಲ್ಲ ಶ್ರೇಷ್ಠರಾಗಬಹುದು. ಕಿರಣ್ ತನ್ನ ಹುಟ್ಟು ಹಬ್ಬದಲ್ಲಿ ನೆಟ್ಟ ಅದೊಂದು ಗಿಡ ನೂರಾರು ಪ್ರಾಣಿ ಪಕ್ಷಿಗಳಿಗೆ ಆಸರೆಯಾಗಿದೆಯೆಂದರೆ ಇದಕ್ಕಿಂತ ಸಾರ್ಥಕ ಆಚರಣೆ ಬೇರೊಂದಿರಲಿಕ್ಕಿಲ್ಲ. ಇಂತಹದ್ದೊಂದು ಸಂದರ್ಭ ನಮ್ಮೆಲ್ಲಾ ಮುದ್ದು ಮಕ್ಕಳ ಬದುಕಿನಲ್ಲೂ ಸಂಭವಿಸಲಿ, ಅವರ ಹುಟ್ಟು ಕೊಡುಗೆಯಾಗಲಿ.   
..................................ಗುರುರಾಜ್ ಇಟಗಿ
ಸಂಶೋಧಕರು ಮತ್ತು 
ಮಾನಸಿಕ ಆರೋಗ್ಯ ಸಲಹೆಗಾರರು 
ಶಾರದಾ ಸಮೂಹ ಸಂಸ್ಥೆಗಳು, ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
****************************************** 

Ads on article

Advertise in articles 1

advertising articles 2

Advertise under the article