-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 23

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 23

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 23

               ಈ ಹೆಣ್ಣ ಬದುಕು ಹೋರಾಟ
              ಇತಿಹಾಸ ಕತೆಯೊಳಗಣ ಪಾಠ
    ನಾನು ಲಗೋರಿ ಆಡುವುದರಲ್ಲಿ ಕೌಶಲ್ಯ ಪಡೆದಿದ್ದೆ. ಲಗೋರಿ ಆಡಿದ್ರೆ 'ಯುದ್ಧ ಮಾಡಿದಂಗೆ ಇರುತ್ತದೆ' ಅಂತ ಅಪ್ಪ ಹೇಳುತ್ತಿದ್ದರು. ನಿನ್ನ ಈ ಶಕ್ತಿಯನ್ನು ಆಮೇಲೆ ನಿನ್ನ ಮಕ್ಕಳ ಹಿಂದೆ ಓಡಲು ಇಟ್ಟುಕೋ ಅನ್ನುತ್ತಿದ್ದರು ಅವ್ವ.  
     ಒಂದು ಸಲ ಸೀಬೆಯ ಮರದ ಮೇಲೆ ಕುಳಿತಿದ್ದಾಗ ಹಳದಿ ಹಾವೊಂದು ನಮ್ಮತ್ತಲೆ ತೆವಳುತ್ತಿತ್ತು, ಏನೆಂದು ಯೋಚಿಸುವ ಮುನ್ನವೇ ಕೈಚಾಚಿ ಅದನ್ನು ಹಿಡಿದು ದೂರ ಎಸೆದುಬಿಟ್ಟೆ. ಈ ಘಟನೆಯಿಂದ ನನ್ನ ಹೆಸರಿಗೆ ಧೈರ್ಯಶಾಲಿ ಎಂಬ ವಿಶೇಷಣ ಸೇರಿಕೊಂಡಿತು.
    ನನ್ನ ಗೆಳತಿ ರಾಧಾ 9 ವರ್ಷದಲ್ಲೇ ಮದುವೆಯಾಗಿ ಹೋದಳು. ಒಬ್ಬ ಹುಡುಗಿಯ ಬದುಕು ಅಡುಗೆ, ಸ್ವಚ್ಛತೆ ಹೆರುವುದು ಅಷ್ಟೇ. ನಾನು ಅದನ್ನು ಬಿಟ್ಟು ಬೇರೆ ಏನಾದರೂ ಮಾಡಲು ವಾಂಛೆ ಹೊಂದಿದೆ. ನಾನು ಹುಡುಗರಂತೆ ವಿದ್ಯೆ ಕಲಿಯಬಹುದೇ ಕೇಳಿದೆ ಅಪ್ಪನನ್ನು. ವಿದ್ಯೆ ಕಲಿತು ಹುಡುಗಿಯರು ಏನು ಮಾಡಲಿಕ್ಕಿದೆ ಬಿಟ್ಟ ಬಾಣದಂತೆ ಬಂತು ಉತ್ತರ. ನಾನು ಲಗೋರಿ ಆಡುವುದನ್ನು ಬಿಟ್ಟು ಸೀರೆ ಉಡಲು ಕಲಿಯಬೇಕೆಂದರು. ಮೊದಲು ನಿರಾಕರಿಸಿದರೂ ನಂತರ ಸೀರೆ ಉಟ್ಟು ಲಗೋರಿ ಯಾಟ. ಮುಂದಿನವಾರ ಅಪರಿಚಿತ ಜ್ಯೋತಿಬಾ ರೊಂದಿಗೆ ನನ್ನ ವಿವಾಹ. ಗಂಡ ಬೇಡ ಎಂದು ಚೀರಿದೆ. ಕೊನೆಗೂ ಮದುವೆಯಾಯಿತು.
    ಗಂಡ ಜ್ಯೋತಿಬಾ ಅವರ ಬಾಲ್ಯದ ನೋವಿನ ಕಥೆಗಳನ್ನು ಹೇಳುತ್ತಿದ್ದರು. ಅಸ್ಪೃಶ್ಯತೆಯ ನಾನಾ ಮುಖಗಳನ್ನು ಅನಾವರಣಗೊಳಿಸುವ ದಾರುಣ ಘಟನೆಗಳನ್ನು ಅವರು ಕಣ್ಣಾರೆ ಕಂಡಿದ್ದರು. ಅವರು ಶಾಲೆಯ ಉನ್ನತ ಜಾತಿಯ ಗೆಳೆಯರನ್ನು ಮನೆಗೆ ಕರೆತಂದಾಗ ನನ್ನ ಮಾತುಗಳು ತೊದಲುತ್ತಿದ್ದವು.
        ಒಂದು ದಿನ ಓದಲು ಬಾರದ ನನ್ನ ಕೈಯಲ್ಲಿ ಪುಸ್ತಕ ನೋಡಿದ ಬಾ ನೀನು ಶಿಕ್ಷಣ ಪಡೆಯಲು ಅರ್ಹರು ಎಂದರು. ಆದರೆ ಭಾರತದ ಹೆಣ್ಣು ಮಕ್ಕಳಿಗೆ ಕಲಿಸಲು ಶಾಲೆಗಳಿರಲಿಲ್ಲ. ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡುವುದು ಪಾಪ ಅದು ಧರ್ಮ ವಿರೋಧಿ. ನನಗೆ ಯಾರು ಕಲಿಸುತ್ತಾರೆ? ಆಗ ಮುಂದೆ ಬಂದವರು ಯಾರು ಗೊತ್ತೆ? ನನ್ನ ಗಂಡ ಜ್ಯೋತಿಬಾ. ಅದು ನನ್ನ ಜೀವನದ ಮಹತ್ತರ ತಿರುವು. ಬಾಳನೌಕೆ ಸರಿ ದಿಕ್ಕಿಗೆ ತಿರುಗಿದ ಸುದಿನ. ನನ್ನ ನಾಮದೇಯ ಬರೆಯುವುದು, ಗುಣಿಸುವುದು, ಓದುವುದು ಕಲಿತೆ. ಎಲ್ಲಾ ಮನೆಕೆಲಸ ಮಾಡಿ ಅಧ್ಯಯನ. ಮನೆಯ ನಾಲ್ಕು ಗೋಡೆಗಳ ಒಳಗೆ ಕಲಿಯುತ್ತಿದ್ದುದರಿಂದ ಮಾವನಿಗೆ ಸ್ವಲ್ಪ ಸಮಾಧಾನ.
       ಒಂದು ದಿನ ನಾನು ಸಂಪೂರ್ಣವಾಗಿ ಒಂದು ಪುಸ್ತಕ ಓದಿದೆ. ಬಹಳ ಸಂತೋಷದ ಸಂಭ್ರಮದ ಜೀವನದಲ್ಲಿ ಬರೆದಿಡಬೇಕಾದ ಮೈಲಿಗಲ್ಲು. ಅಂದಿನಿಂದ ಪುಸ್ತಕಗಳೆನ್ನ ಸಂಗಾತಿಗಳು. ಜ್ಯೋತಿಬಾ ಓದಿದ right-of ಮ್ಯಾನ್ ಪುಸ್ತಕ ಅವರ ಮೇಲೆ ಗಾಢವಾದ, ಆಳವಾದ, ತೀವ್ರವಾದ ಪ್ರಭಾವ ಬೀರಿತು. ಇದರಿಂದ ಸಮಾನತೆಯ ಪರಿಕಲ್ಪನೆ ಅವರಲ್ಲಿ ಚಿಗುರೊಡೆಯಿತು. ನಾನು ಶಿವಾಜಿ ಮಹಾರಾಜರ, ಜಾರ್ಜ್ ವಾಷಿಂಗ್ಟನ್ ರ ಪುಸ್ತಕ ಓದಿದೆ. ಸ್ಪೂರ್ತಿ ಪಡೆದೆ. ಪ್ರೇರಣೆ ಗೊಂಡೆ. ನನ್ನ ಹಾಗೆ ಇತರ ಹುಡುಗಿಯರು ಓದುವ ಖುಷಿಯನ್ನು ಪಡೆಯಬೇಕು, ಸೊಗಸಾದ ಸಾಧ್ಯತೆಗಳಿಗೆ ತೆರೆದುಕೊಳ್ಳಬೇಕು, ಜಗತ್ತಿನ ಸುಖವನ್ನು ಅನುಭವಿಸಬೇಕು ಎಂದು ಮನಸಾರೆ ಇಚ್ಛಿಸಿದೆ.
      ಅಂದು ನನ್ನ ಗಂಡನಿಗೆ ಸ್ನೇಹಿತರು ಕರೆದುಕೊಂಡು ಹೋದ ವಿವಾಹ ಸಮಾರಂಭದಲ್ಲಿ ಅವಮಾನ ಅಪಮಾನ ಉಂಟಾಯಿತು. ನಮ್ಮಂತಹ ಕೆಳಜಾತಿಯವರು ಘನತೆಯ ಬದುಕನ್ನು ಬಾಳಬೇಕು. ಮಹಿಳೆಯರನ್ನು ಸಶಕ್ತರನ್ನಾಗಿ ಮಾಡಬೇಕು. ಎಲ್ಲಾ ಜಾತಿಯ ಹುಡುಗಿಯರು ಹೋಗಿ ಕಲಿಯಬಹುದಾದ ಹೆಣ್ಣುಮಕ್ಕಳ ಶಾಲೆಯನ್ನು ತೆರೆಯಲು ನಾವು ತೀರ್ಮಾನಿಸಿದೆವು. ನಮ್ಮ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೆವು. ಮಾವನವರ ವಿರೋಧ ಪ್ರತಿರೋಧಗಳ ನಡುವೆಯೇ ಅಹಮದ್ನಗರ ದಲ್ಲಿ ಶಿಕ್ಷಕರ ತರಬೇತಿ ಪಡೆದೆ . ನನ್ನನ್ನು 100 ಶೇಕಡ ತೊಡಗಿಸಿಕೊಂಡೆ.
    ನಾವು ಹುಡುಗಿಯರಿಗಾಗಿ ಶಾಲೆ ಆರಂಭಿಸುತ್ತಿದ್ದೇವೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಊರಲ್ಲಿ ಹರಡಿತ್ತು. ನಮಗೆ ಬೆದರಿಕೆಗಳು ಬಂದವು . ಅವಮಾನಿಸಿದರು, ಹಿಂಸಿಸಿದರು. ಆದರೆ ನಾವು ದೃಢ ಮನಸ್ಕರಾಗಿದ್ದೆವು. ನಮ್ಮ ಮನೆಯಿಂದಲೇ ನಮ್ಮನ್ನು ಹೊರಹಾಕಲಾಯಿತು. ಆದರೆ ಸಹೃದಯರು ದಾನ ಮಾಡಿ ಶಾಲೆ ಆರಂಭವಾಯಿತು. ಆದರೂ ಅನೇಕ ವಿಘ್ನಗಳು ತಲೆದೋರಿದವು. ಉತ್ಸಾಹದಿಂದ ಸೇರಿದ ಹುಡುಗಿಯರು ಕ್ರಮೇಣ ಆಸಕ್ತಿ ಕಳೆದುಕೊಂಡು ಶಾಲೆ ಬಿಡಲಾರಂಭಿಸಿದರು. ಅವರ ಆಸಕ್ತಿಯನ್ನು ಸುಸ್ಥಿರ ಗೊಳಿಸಲು ಆಗ ವೃತ್ತಿ ಶಿಕ್ಷಣ, ಗುಡಿಕೈಗಾರಿಕೆ ಆರಂಭಿಸಿದೆವು. ಒಂದರ ನಂತರ ಇನ್ನೊಂದು ಸಮಸ್ಯೆ ರೈಲು ಬೋಗಿಯಂತೆ ಎದುರಾದರೂ ನಾವು ಧೃತಿಗೆಡದೆ ಎದುರಿಸಿ ಪ್ರಗತಿಯ ದಾರಿಯಲ್ಲಿ ಸಾಗಿದೆವು. ಇನ್ನೂ ಅನೇಕ ಶಾಲೆಗಳನ್ನು ಆರಂಭಿಸಿದೆವು. ಸರ್ಕಾರಿ ಶಾಲೆಗಳಿಗಿಂತ ನಮ್ಮ ಶಾಲೆಯ ಹುಡುಗಿಯರು ಸಂಖ್ಯೆ ಹಾಗೂ ಗುಣಮಟ್ಟದಲ್ಲಿ. ಮುಂದಿದ್ದರು.ಇದು ಪತ್ರಿಕೆಯಲ್ಲೂ ವರದಿಯಾಯಿತು. ನನ್ನ ಗಂಡನನ್ನು ಬ್ರಿಟಿಷ್ ಸರ್ಕಾರ ಗುರುತಿಸಿ ಸನ್ಮಾನಿಸಿತು.
      ವಿಧವೆಯರು ಮತ್ತು ಅವರ ಮಕ್ಕಳಿಗಾಗಿ ಮನೆ ಆರಂಭಿಸಿದೆವು. ನಾನು ಸೂಲಗಿತ್ತಿ ತರಬೇತಿ ಪಡೆದು ಗರ್ಭಿಣಿಯರ ಹೆರಿಗೆಯನ್ನು ಮಾಡಿದೆ. ಈ ಎಲ್ಲಾ ಮಹಿಳೆಯರನ್ನು ನಾವು ಸ್ವಂತ ಮಕ್ಕಳಂತೆ ನೋಡಿಕೊಂಡೆವು. ವಿಧವೆಯರ ಕೇಶ ಮುಂಡನ ಮಾಡದಂತೆ ಕ್ಷೌರಿಕರಿಂದ ಮುಷ್ಕರ ಮಾಡಿಸಿದೆವು. ಇದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟವಾಯಿತು.
       ನಾನು ಶಾಲೆಗೆ ಹೋಗುವಾಗ ದಾರಿಯಲ್ಲಿ ಯುವಕರು ಸೆಗಣಿ ಎಸೆಯಲಾರಂಭಿಸಿದರು . ನಾನು ದಿನಾ ಇನ್ನೊಂದು ಸೀರೆ ತೆಗೆದುಕೊಂಡುಹೋಗಿ ಶಾಲೆಯಲ್ಲಿ ಬದಲಿಸುತ್ತಿದ್ದೆ. ಕೆಲವು ತಿಂಗಳ ನಂತರ ಅವರಿಗೆ ಸುಸ್ತಾಯಿತು ನನ್ನ ತಾಳ್ಮೆಗಲ್ಲ.
        ಜ್ಯೋತಿಬಾ ತೀರಿಹೋದಾಗ ನಮ್ಮ ದತ್ತು ಪುತ್ರ ಯಶವಂತ ಅಂತ್ಯಕ್ರಿಯೆ ಮಾಡುವುದನ್ನು ಜನ ವಿರೋಧಿಸಿದರು. ಆದರೆ ನಾನು ಮತ್ತು ಮಗ ಸೇರಿ ಪ್ರತಿಭಟಿಸಿ ಚಿತೆಗೆ ಅಗ್ನಿಸ್ಪರ್ಶ ಮಾಡಿದೆವು. 
       ಅಕ್ಷರ ಕಲಿತ ಪ್ರತಿ ಭಾರತೀಯ ನಾರಿ ಬಾ ದಂಪತಿಗೆ ಋಣಿಯಾಗಿರಬೇಕು. ಎಲ್ಲಾ ಜಾತಿಯ ಹೆಣ್ಣು ಮಕ್ಕಳಿಗೆ ಅಕ್ಷರ ಕಲಿಸಲು ಶಾಲೆ ತೆರೆದ ಭಾರತದ ಮೊದಲ ಶಿಕ್ಷಕಿ ನಂತರ ಸಾಂಕ್ರಾಮಿಕ ರೋಗಿಗಳ ಶುಶ್ರೂಷೆ ಮಾಡುತ್ತಲೇ, ಅದರಿಂದಲೇ ಇಹಲೋಕ ತ್ಯಜಿಸಿದರು. ಮನುಕುಲಕ್ಕೆ ಮಾದರಿಯಾದ , ಇಂತಹ ಗಟ್ಟಿಗಿತ್ತಿ ಸ್ತ್ರೀ 
ಇಂಥವರು ನಿಮ್ಮೊಳಗಿಲ್ಲವೇ .................?
...............................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*******************************************


     

Ads on article

Advertise in articles 1

advertising articles 2

Advertise under the article