-->
ಸ್ಪೂರ್ತಿಯ ಮಾತುಗಳು

ಸ್ಪೂರ್ತಿಯ ಮಾತುಗಳು

          

              ಸೋಲೇ ಗೆಲುವಿನ ಸೋಪಾನ
         -------------------------------------
ಪ್ರೀತಿಯ ಪುಟಾಣಿಗಳೇ,
        ರಾತ್ರಿ ಹೊತ್ತಿನಲ್ಲಿ ಮನೆಯನ್ನು ಆವರಿಸಿರುವ ಕತ್ತಲೆಯಲ್ಲಿ ವಿದ್ಯುತ್ತನ್ನು ಬೆಳಗಿಸುವುದೇ ಆತನ ಬದುಕಿನ ನಿತ್ಯ ಪ್ರಯತ್ನಗಳ ಗುರಿಯಾಗಿತ್ತು . ಎಳೆತನದಲ್ಲೇ ಇದ್ದ ಕಿವುಡುತನ, ಯೌವ್ವನದ ಹೊಸ್ತಿಲಲ್ಲಿ ಹೆಗಲ ಮೇಲೇರಿದ ಸಂಸಾರದ ಭಾರ ಆತನನ್ನು ಬದುಕಿನ ಜವಾಬ್ದಾರಿಯೆಡೆಗೆ ಮುಖ ಮಾಡಿಸಿತ್ತು . ಆದರೆ ಜೀವನ ಸಂಘರ್ಷಗಳನ್ನು ಎದುರಿಸುತ್ತಲೇ ತನ್ನ ಕನಸುಗಳಿಗೆ ನೀರೆರೆದು ಪೋಷಿಸುತ್ತಾ ಬಂದ ಈತ ಜಗತ್ತಿನ ಪ್ರತಿ ಕಾರ್ಯಗಳನ್ನು ಕುತೂಹಲದಿಂದ , ಆಶ್ಚರ್ಯದಿಂದ ನೋಡುತ್ತಿದ್ದ. ಪ್ರತಿ ಕೆಲಸದಲ್ಲೂ ವೈಜ್ಞಾನಿಕ ಕಾರಣವನ್ನು ಅರಸುತ್ತಿದ್ದ. ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದ …!!
         ಹೇಂಟೆಯೊಂದು ಮೊಟ್ಟೆಗಳಿಗೆ ಕಾವು ಕೊಡುವುದರ ಫಲಶ್ರುತಿಯಾಗಿ ಹೊರಬರುವ ಮರಿಗಳು ಈತನನ್ನು ಪ್ರಶ್ನೆಯಾಗಿ ಕಾಡತೊಡಗಿದಾಗ ಪ್ರಾಯೋಗಿಕವಾಗಿ ತಾನೇ ಆ ಕಾರ್ಯದಲ್ಲಿ ತೊಡಗಿ ಎಲ್ಲರ ನಗೆಪಾಟಲಿಗೆ ಗುರಿಯಾಗಿದ್ದ. ಹೀಗೆ ಒಂದರ ಮೇಲೊಂದರಂತೆ ಈತನ ತುಂಟಾಟಗಳಿಂದ ಹೈರಾಣಾದ ಶಾಲಾ ಶಿಕ್ಷಕರು ಶಾಲೆಯಿಂದಲೇ ಆತನನ್ನು ಹೊರಹಾಕಿದ್ದರು ….!!!
         ತಾಯಿಯ ಪ್ರೇರಣೆಯೊಂದಿಗೆ ವಿದ್ಯಾಭ್ಯಾಸವನ್ನು ಮನೆಯಲ್ಲಿ ಮುಂದುವರಿಸಿದ ಬಾಲಕ ತನ್ನ ಕನಸಾದ ಗೃಹೋಪಯೋಗಿ ವಿದ್ಯುತ್ ಬಲ್ಬಿನ ಆವಿಷ್ಕಾರದ ಮುನ್ನ ಸಾವಿರ ಸಾವಿರ ಸೋಲುಗಳನ್ನು ಕಂಡವನೆಂದರೆ ನಿಮಗೆ ಅಚ್ಚರಿಯೆನಿಸಬಹುದು ಮಕ್ಕಳೇ.
         ಆದರೂ ತನ್ನ ಇಚ್ಛಾಶಕ್ತಿಯಲ್ಲಿ ಒಂದಿಂಚೂ ಸಡಿಲಿಕೆಯನ್ನು ಮಾಡಿಕೊಳ್ಳದೆ, ಜೀವನದಲ್ಲಿ ಸವಾಲುಗಳಿಗೆ ಎದುರಾಗಿ ಈಜುತ್ತಲೇ ದಡ ಸೇರಿದ ಥಾಮಸ್ ಆಲ್ವಾ ಎಡಿಸನ್ ನ ಪ್ರತಿ ದಿನದ ಸೋಲು ಅವನೊಳಗಿನ ಸಾಮರ್ಥ್ಯವನ್ನು ಇಮ್ಮಡಿಗೊಳಿಸುತ್ತಿತ್ತು. ತನ್ನ ಪ್ರತಿ ಪ್ರಯತ್ನದಲ್ಲೂ ತನ್ನ ಹಿಂದಿನ ಸೋಲುಗಳೊಂದಿಗೆ ಆತ ಸ್ಪರ್ಧೆಗಿಳಿದಿದ್ದ. ಪ್ರತಿ ಬಾರಿ ಸೋತಾಗಲೂ ಗುರಿಯೆಡೆಗಿನ ಆತನ ನಡೆ ಇನ್ನಷ್ಟು ಜಾಗ್ರತೆವಾಗುತಿತ್ತೇ ವಿನಹ ನಿರುತ್ಸಾಹ, ಹತಾಶ ಭಾವ ಎಂದೂ ಆತನನ್ನು ಕಾಡಲೇ ಇಲ್ಲ. ಸಾವಿರ ಪ್ರಯೋಗಗಳನ್ನು ನಡೆಸಿ ಸೋತಾಗಲೂ ಆತನ ಮೊಗದಲ್ಲಿ ಸಂಶೋಧನೆಯ ವಿವಿಧ ಮಜಲುಗಳನ್ನು ಅರ್ಥೈಸಿಕೊಂಡ ಸಂತೃಪ್ತಿ ಇತ್ತೇ ವಿನಃ ಸೋಲಿನ ದುಃಖ ಬಾಧಿಸಿರಲಿಲ್ಲ. ಸೋಲೇ ಗೆಲುವಿನ ಸೋಪಾನ ಎಂದುಕೊಂಡ ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರಾಗಿ ಗುರುತಿಸಲ್ಪಡುವ ಥಾಮಸ್ಆಲ್ವಾ ಎಡಿಸನ್ ರ ಛಲ ನಮ್ಮ ಬದುಕಿಗೊಂದು ಮಾರ್ಗದರ್ಶಿ.
       ನಾವು ಹೀಗೆ…. ಜೀವನದಲ್ಲಿ ಹಲವಾರು ಗುರಿಗಳನ್ನು ಇಟ್ಟುಕೊಂಡಿರುತ್ತೇವೆ.
ಒಂದೊಮ್ಮೆ ಅಸ್ಪಷ್ಟ ಗುರಿಯೊಂದಿಗೆ ಪ್ರಸ್ತುತ ಸನ್ನಿವೇಶದಲ್ಲಿ ಗೆಲುವಿನ ಹರಸಾಹಸಕ್ಕೆ ಕೈಹಾಕುತ್ತಾ ಸಹಪಾಠಿಗಳೊಂದಿಗೆಯೋ , ಸಹವರ್ತಿ ಗಳೊಂದಿಗೆಯೋ ಸ್ಪರ್ಧೆಗಿಳಿದಿರುತ್ತೇವೆ. ಇತರರ ಸಾಮರ್ಥ್ಯದೊಂದಿಗೆ ತನ್ನ ಸಾಮರ್ಥ್ಯವನ್ನು ಪಣಕ್ಕೊಡ್ಡಿ ಪ್ರತೀ ಕ್ಷಣವೂ ಗೆದ್ದು ಸೋಲುತ್ತಿರುತ್ತೇವೆ.
        ಕೆಲವು ಬಾರಿ ಪೋಷಕರು ತಮಗರಿವಿಲ್ಲದೆಯೇ ಮನೆ ಮಗುವನ್ನು ನೆರೆಮನೆಯ ಮಕ್ಕಳೊಂದಿಗೆ ಹೋಲಿಸಿ ಅವರನ್ನು ಕಲಿಕೆಯಲ್ಲಿ ಹಿಂದಿಕ್ಕುವಂತೆ ತಮ್ಮ ಮಕ್ಕಳಿಗೆ ಒತ್ತಡವನ್ನು ಹಾಕುತ್ತಿರುತ್ತಾರೆ. ಇಂತಹ ಒತ್ತಡಗಳಿಂದ ಮಗುವಿನ ಮನಃಸ್ಥಿತಿಯಲ್ಲಿ ಅಲ್ಲೋಲ ಕಲ್ಲೋಲವುಂಟಾಗಬಹುದು. ಹಟಕ್ಕೆ ಬಿದ್ದು ಹೆಚ್ಚು ಅಂಕ ಪಡೆದುಕೊಂಡ ಮಗು ಅಹಂನ ಪ್ರತಿರೂಪವಾಗಬಹುದು. ಹೆಚ್ಚು ಸಾಧನೆ ಮಾಡಲಾಗದ ಮಗು ಕೀಳರಿಮೆ ಭಾವ ಬೆಳೆಸಿಕೊಂಡು ವರ್ತನಾ ಬದಲಾವಣೆ ತೋರಬಹುದು. ತಾನು ಯಾವುದಕ್ಕೂ ಪ್ರಯೋಜನವಿಲ್ಲವೆಂದು ತೀರ್ಮಾನಕ್ಕೆ ಬಂದು ಆಂತರಿಕವಾಗಿ ಕುಗ್ಗಿ ಹೋಗಬಹುದು. ಆದ್ದರಿಂದಲೇ ನಮ್ಮ ನಿತ್ಯದ ಸ್ಪರ್ಧೆ ನಮ್ಮೊಂದಿಗೆಯೇ ಇರಬೇಕು. 
         ಹೌದು ಮಕ್ಕಳೇ, ಪ್ರತಿಯೊಬ್ಬ ವ್ಯಕ್ತಿಯೂ ಭಿನ್ನವಾಗಿರುತ್ತಾನೆ. ಒಬ್ಬರಂತೆ ಮತ್ತೊಬ್ಬರಿರುವುದಿಲ್ಲ. ಒಬ್ಬನಲ್ಲಿರುವ ಪ್ರತಿಭೆ ಇನ್ನೊಬ್ಬನಲ್ಲಿ ಇರದೇ ಇರಬಹುದು. ಇಲ್ಲವೇ ಅಲ್ಪ ಪ್ರಮಾಣದಲ್ಲಿರಬಹುದು. ಹಾಗಾಗಿ ಪ್ರತಿಯೊಬ್ಬರೂ ತಮ್ಮೊಳಗಿರುವ ಪ್ರತಿಭೆಯನ್ನು ಕಂಡುಕೊಳ್ಳಬೇಕು. ಅದಕ್ಕೆ ಸೂಕ್ತವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು. 'ಗೆಳೆಯ ಡಾಕ್ಟರ್ ಆದ. ನಾನೇನು ಅವನಿಗಿಂತ ಕಡಿಮೆ ಆಗಬಾರದು. ನಾನೂ ಡಾಕ್ಟರ್ ಆಗಬೇಕು' ಎಂಬ ವ್ಯರ್ಥ ದುರಾಸೆ ನಮ್ಮ ಭವಿಷ್ಯವನ್ನೇ ಹಾಳುಗೆಡವಬಹುದು. ಆ ಕ್ಷೇತ್ರದಲ್ಲಿ ನಮ್ಮ ಸಾಧನೆ ಶೂನ್ಯವೆನಿಸಬಹುದು. ನಮ್ಮೊಳಗಿನ ಪ್ರತಿಭೆಯ ಬೆಳವಣಿಗೆಗೆ , ಪ್ರದರ್ಶನಕ್ಕೆ ಅಗತ್ಯವಾದ ವೇದಿಕೆಯನ್ನು ಹುಡುಕಬೇಕು ಇಲ್ಲವೇ ನಾವೇ ಅವಕಾಶಗಳ ಸೃಷ್ಟಿಕರ್ತರಾಗಬೇಕು. ಹೋಲಿಕೆ ಮಾಡುವುದು, ಹೋಲಿಸಿ ನೋಡುವುದು ವ್ಯಕ್ತಿತ್ವದ ಮಾರಣ ಹೋಮ ಮಾಡಿದಂತೆ.
        ಮಕ್ಕಳೇ......., ನಿಮಗೆ ಯಾವತ್ತಾದರೂ ಶಿಕ್ಷಕರು ಪರೀಕ್ಷೆಯ ಉತ್ತರ ಪತ್ರಿಕೆ ಕೊಡುವ
ವೇಳೆ ತನ್ನ ಪೇಪರ್ ಮೇಲಿನ ಅಂಕಗಳನ್ನು ನೋಡುವುದಕ್ಕಿಂತ ಇತರರ ಉತ್ತರ ಪತ್ರಿಕೆಯೆಡೆಗೆ ಆಸಕ್ತಿ ಹೆಚ್ಚಾಗಿದೆಯೇ..? ಹೀಗಾಗಿದ್ದರೆ ನೀವು ಅನಾವಶ್ಯಕವಾಗಿ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತಿರುವಿರೆಂದೇ ಅರ್ಥ. ಅದಕ್ಕೆ ಬದಲಾಗಿ ನಿಮ್ಮ ಕಲಿಕೆಯಲ್ಲಿ ಪ್ರಗತಿಪರ ಬದಲಾವಣೆಗಳು ಆಗಿದ್ದರೆ, ಹಿಂದಿನ ಅಂಕಗಳಿಗಿಂತ ನೀವು ಇಂದು ಹೆಚ್ಚು ಪಡೆದಿದ್ದರೆ ಅದಕ್ಕೆ ಸಂತೋಷ ಪಡಿ. ಯಾಕೆಂದರೆ ಅದು ನಿಮ್ಮ ನಿಜವಾದ ಸಾಧನೆಯಾಗಿರುತ್ತದೆ. ಭವಿಷ್ಯ ರೂಪಿಸೋ ಮೈಲಿಗಲ್ಲಾಗುತ್ತದೆ.
     ಇತರರೊಂದಿಗೆ ನಾವು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡಾಗ ಆತನನ್ನು ಸೋಲಿಸುವ ಗುರಿಯೊಂದೇ ಗೋಚರವಾಗುತ್ತಾ , ತಾನು ತಲುಪ ಬೇಕಾದ ಜೀವನದ ಗುರಿಯು ಅಸ್ಪಷ್ಟವಾಗುತ್ತಾ ಕೊನೆಗೆ ಮರೆಯಾಗಿಬಿಡುತ್ತದೆ. ಪರೋಕ್ಷವಾಗಿ ನಾವು ಅನ್ಯರ ಹಿಂಬಾಲಕರಾಗಿ ಸಾಗುತ್ತೇವೆ. ಜೊತೆ ಜೊತೆಯಲ್ಲೇ ಮನಸ್ಸು ವ್ಯಗ್ರತೆ, ನಿರಾಶೆ, ದ್ವೇಷ ಅಹಂಕಾರಗಳಿಂದ ಸಾಮರ್ಥ್ಯದಲ್ಲಿ ಕುಸಿತ ಉಂಟಾಗಲಾರಂಭಿಸುತ್ತದೆ.
        ವ್ಯಕ್ತಿಯ ಬೆಳವಣಿಗೆಯಲ್ಲಿ ಸಕಾರಾತ್ಮಕ ಸ್ಪರ್ಧಾ ಮನೋಭಾವ ವ್ಯಕ್ತಿತ್ವದಲ್ಲಿ ಧನಾತ್ಮಕತೆಯನ್ನು ತರುವುದು. ಸ್ವಸಾಮರ್ಥ್ಯದಲ್ಲಿ ಪ್ರಭುದ್ಧತೆಯುಂಟಾಗಿ ಸಮಾಜದ ಮಾನ್ಯತೆ ಪ್ರಾಪ್ತವಾಗುವುದು.
        ವ್ಯಕ್ತಿಯು ತನ್ನ ಸಾಮರ್ಥ್ಯದ ಬಳಕೆಯ ಹಿಂದಿನ ಫಲಿತಾಂಶದೊಂದಿಗೆ ಇಂದು ಸ್ಪರ್ಧೆಗಿಳಿದಾಗ ಉತ್ಕೃಷ್ಟ ಸಾಧನೆ ಹೊರಹೊಮ್ಮುವುದು. ಇತರರ ಸಾಧನೆ ನಮ್ಮ ಗುರಿಯೆಡೆಗಿನ ಚಲನೆಗೆ ಸ್ಫೂರ್ತಿಯಾಗಬೇಕೆ ವಿನ: ಮನಸ್ಸಿನ ಸ್ಥಿಮಿತತೆಯನ್ನು ಭಂಗಪಡಿಸುವಂತಿರ ಬಾರದು. 'ನಾನು ಅವನಂತಾಗಬೇಕು' ಎಂಬ ಧೋರಣೆ ನನ್ನತನವನ್ನು ಕಸಿದುಕೊಳ್ಳುವುದು. ನಾನು ನಾನಾಗಿಯೇ ಸತ್ಪಥದಲ್ಲಿ ಮುನ್ನಡೆದಾಗ ಯಶಸ್ಸು ದೊರೆಯುವುದು.
         ಬಾಹ್ಯ ಪ್ರೇರಣೆಗಳು, ಬಾಹ್ಯ ಒತ್ತಡಗಳಿಗಿಂತ ಆಂತರಿಕ ಪ್ರೇರಣೆಯ ಪ್ರಭಾವ ಹೆಚ್ಚಾದಾಗ ಆಸಕ್ತಿ ಗರಿಗೆದರಿ ನಿತ್ಯ ಪರಿಶ್ರಮವು ಸದ್ವಿನಿಯೋಗವಾಗುವುದು. ಹೊಸತನ್ನು ಕಲಿಯಬೇಕು, ನಾವೀನ್ಯವನ್ನು ಬೆಳೆಸಿಕೊಳ್ಳಬೇಕೆಂದು ಬಯಸುವ ಮಂದಿ ತನ್ನ ಆಸಕ್ತಿಯನ್ನು ಪ್ರಯತ್ನಗಳಲ್ಲಿ ಬಲಿಷ್ಠಗೊಳಿಸುತ್ತಾ ಸಾಗಬೇಕು. ಸ್ವಸಾಮರ್ಥ್ಯದೊಂದಿಗೆ ಪ್ರಯತ್ನಕ್ಕಿಳಿದಾಗ ಥಾಮಸ್‌ ಆಲ್ವಾ ಎಡಿಸನ್ ನಂತೆ ಅಪ್ರತಿಮ ಮಹಾಪುರುಷರಾಗಬಹುದು. ವಿಶಿಷ್ಟತೆಯನ್ನು ಮೈಗೂಡಿಸಿಕೊಂಡು ಅಜರಾಮರರಾಗಬಹುದು.
       ಪ್ರಕೃತಿಯ ಮರಗಿಡಗಳ ನಡುವೆ ಇಲ್ಲದ ಪೈಪೋಟಿ ನಮ್ಮ ನಡುವೆ ಯಾಕೆ..? ಮನಶ್ಶಾಂತಿ ಕಸಿಯೋ ಸ್ಪರ್ಧಾಕಣದಲ್ಲಿ ನಿಂತು ಬೆವರಿಳಿಸುವುದಾದರೂ ಯಾಕೆ..? ಅನ್ಯರ ಉತ್ತಮ ಕಾರ್ಯಕೆ ಮೆಚ್ಚುಗೆ ಹಾಗೂ ಬೆಂಬಲ ಸೂಚಿಸುತ್ತಾ, ಇತರರ ಸಾಧನೆಯಿಂದ ಪ್ರೇರಣೆ ಪಡೆಯುತ್ತಾ ನಮ್ಮ ಆಂತರ್ಯದ ಅನಾವರಣಕೆ ದರ್ಪಣ ಹಿಡಿಯೋಣ. ನಮ್ಮ ಧ್ಯೇಯದೆಡೆಗಿನ ನಡೆಯಲ್ಲಿ ಗಟ್ಟಿತನ ಮೆರೆಯೋಣ... ಅಲ್ಲವೇ…!?
...................................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
*********************************************


Ads on article

Advertise in articles 1

advertising articles 2

Advertise under the article