ಜೀವನ ಸಂಭ್ರಮ - 10
Monday, November 8, 2021
Edit
ಅಪನಂಬಿಕೆ
------------------------
ಮಕ್ಕಳೇ....... ಅಪನಂಬಿಕೆ ಯಿಂದಾಗುವ ದುಷ್ಪರಿಣಾಮವನ್ನು ಈ ಕೆಳಗಿನ ಘಟನೆಯನ್ನು ಓದಿ ತಿಳಿಯೋಣ......
ಒಂದು ನಗರದಲ್ಲಿ ಕೆಂಪಣ್ಣ ಮತ್ತು ಸೌಭಾಗ್ಯ ದಂಪತಿಗಳು ಇದ್ದರು. ಕೆಂಪಣ್ಣ ಒಂದು ಸರ್ಕಾರಿ ಇಲಾಖೆಯಲ್ಲಿ ಡಿ ದರ್ಜೆ ನೌಕರನಾಗಿದ್ಧನು. ಕೆಂಪಣ್ಣ, ಅತ್ತೆ ಮನೆಯ ಪಕ್ಕದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದನು. ಆ ಮನೆ ವಠಾರದಂತಿದ್ದು , ಕೆಂಪಣ್ಣನಿಗೆ ನಾಲ್ಕು ಜನ ಮಕ್ಕಳು. ಹಿರಿಯವನು ಗಂಡುಮಗ ಕಿರಣ. ಇನ್ನು ಮೂರು ಜನ ಹೆಣ್ಣು ಮಕ್ಕಳು. ಎಲ್ಲಾ ಮಕ್ಕಳನ್ನು ಇಂಜಿನಿಯರಿಂಗ್ ಪದವೀಧರನ್ನಾಗಿ ಮಾಡಲು ಶ್ರಮವಹಿಸಿ ಎಲ್ಲರೂ ಸರ್ಕಾರಿ ನೌಕರಿ ಗಿಟ್ಟಿಸಿಕೊಂಡರು.
ಮೊದಲ ಮಗಳ ಮದುವೆಯನ್ನು ಕೆಂಪಣ್ಣನೇ ನಿಂತು ಒಬ್ಬ ಸರ್ಕಾರಿ ನೌಕರನಿಗೆ ವಿವಾಹ ಮಾಡಿಕೊಟ್ಟನು. ನಂತರ ಇದ್ದಕ್ಕಿದ್ದಂತೆ ಹೃದಯಾಘಾತವಾಗಿ ಕೆಂಪಣ್ಣ ಇಹಲೋಕ ತ್ಯಜಿಸಿದರು. ಸರ್ಕಾರಿ ಇಲಾಖೆಯಲ್ಲಿ ಇಂಜಿನಿಯರ್ ವೃತ್ತಿ ಮಾಡುತ್ತಿದ್ದ ಹಿರಿಯ ಮಗ ಕಿರಣ ತನ್ನ ಇಬ್ಬರು ತಂಗಿಯರ ವಿವಾಹ ಮಾಡಿದನು. ಕಿರಣನಿಗೆ ತನ್ನ ಸೋದರ ಮಾವನ ಮಗಳನ್ನು ಮದುವೆಯಾಗಲು ತುಂಬಾ ಇಷ್ಟ ಇತ್ತು. ಇದು ಕಿರಣನ ತಾಯಿ ಹಾಗೂ ತಂಗಿಯರಿಗೆ ಇಷ್ಟವಿರಲಿಲ್ಲ. ಆ ಕಾರಣಕ್ಕೆ ಬೇರೆ ಮನೆಗೆ ಸ್ಥಳಾಂತರಗೊಂಡರು. ಕಿರಣ ನಿಗೆ ದಂತವೈದ್ಯೆಯಾಗಿದ್ದ ಕಾವ್ಯ ಳನ್ನು ಎಲ್ಲರ ಒಪ್ಪಿಗೆಯಂತೆ ವಿವಾಹ ನೆರವೇರಿಸಿದರು. ಸಂತಸದ ಕುಟುಂಬಕ್ಕೆ ಎರಡು ಕಣ್ಣುಗಳ ಹಾಗೆ ಒಂದು ಹೆಣ್ಣು ಪ್ರಿಯ, ಮತ್ತೊಂದು ಗಂಡು ಪ್ರವೀಣ ಇಬ್ಬರು ಮಕ್ಕಳಿದ್ದರು.
ಹೀಗೆ ಜೀವನ ನಡೆಯುತ್ತಿರಬೇಕಾದರೆ ಕುಟುಂಬದಲ್ಲಿ ಸಂಶಯದ ಹೊಗೆ ಕಾಡಲಾರಂಭಿಸಿತು. ಕಿರಣ ತನ್ನ ಸೋದರ ಮಾವನ ಮಗಳನ್ನು ಪ್ರೀತಿಸುತ್ತಿದ್ದ ವಿಷಯ ಕಾವ್ಯಳಿಗೆ ಗೊತ್ತಾಯ್ತು. ಅನುಮಾನ ದೃಷ್ಟಿ ಪ್ರಾರಂಭವಾಯಿತು. ಏನಾದರೂ ದೂರವಾಣಿ ಕರೆ ಬಂದರೆ ಮನೆಯಲ್ಲಿ ರಂಪಾಟ , ಜಗಳ. ತಾಯಿ-ಮಗ ಏನಾದರೂ ಮಾತನಾಡಿಕೊಂಡರೆ ಸಾಕು ಅನುಮಾನ. ಸಮಯಕ್ಕೆ ಸರಿಯಾಗಿ ಅಡುಗೆ ಮಾಡುತ್ತಿರಲಿಲ್ಲ. ತನ್ನ ಗಂಡನ ತಂಗಿಯರ ಜೊತೆಯು ಕೂಡ ಸಂಬಂಧ ಉತ್ತಮವಾಗಿರಲಿಲ್ಲ. ಕಾವ್ಯ ತನ್ನ ಎರಡು ಮಕ್ಕಳನ್ನು ತನ್ನ ತವರುಮನೆ ಹೊರತುಪಡಿಸಿ ಯಾವ ಬಂಧುಗಳ ಮನೆಗೂ ಕಳಿಸುತ್ತಿರಲಿಲ್ಲ. ಇದು ವಿಕೋಪಕ್ಕೆ ಹೋಗಿ ಡೈವೋರ್ಸ್ ಹಂತಕ್ಕೆ ಹೋಯಿತು. ಈ ಸಂದರ್ಭದಲ್ಲಿ ವಕೀಲರು ದಂಪತಿಗಳನ್ನು ಕುಳ್ಳಿರಿಸಿ ಕೌನ್ಸೆಲಿಂಗ್ ಹಾಜರಾಗುವಂತೆ ಹೇಳಿದರೂ , ನಾನು ದಂತವೈದ್ಯೆ ನನಗೆ ಏಕೆ ಬೇಕು ಕೌನ್ಸಿಲಿಂಗ್ ಎಂದು ಕಾವ್ಯ ನಿರಾಕರಿಸುತ್ತಾಳೆ.
ಹೀಗೆ ಜೀವನ ನಡೆಯುತ್ತಿರಬೇಕಾದರೆ ಕೋವಿಡ್ ಪ್ರಾರಂಭವಾಯಿತು. ಕೋವಿಡ್ ಕಾಲದಲ್ಲಿ ತನ್ನ ವಯಸ್ಸಾದ ತಾಯಿಗೆ ತೊಂದರೆಯಾಗಬಾರದೆಂದು ಒಂದು ಪ್ರತ್ಯೇಕ ಮನೆ ಮಾಡಿ ತಾಯಿಯನ್ನು ಇರಿಸಿದರೂ ತನ್ನ ತಾಯಿಯನ್ನು ಉಳಿಸಿಕೊಳ್ಳಲಾಗಲಿಲ್ಲ. ಕಿರಣನಿಗೆ ತನ್ನ ತಾಯಿ ಸತ್ತಿದ್ದು ತುಂಬಾ ಕಷ್ಟವಾಯಿತು. ಕಾವ್ಯ ಮುಗ್ದಳಂತೆ ವರ್ತಿಸುತ್ತಿದ್ದರೂ, ತನ್ನ ಅನುಮಾನ ನಿಲ್ಲಲಿಲ್ಲ. ಈಗ ಮನೆಯಲ್ಲಿ ಗಂಡ ಹೆಂಡತಿ ಎರಡು ಮಕ್ಕಳಿದ್ದರೂ ಒಬ್ಬರಿಗೊಬ್ಬರ ನಡುವೆ ಪ್ರೀತಿ ಇಲ್ಲದೇ , ಕಿರಣ ಕುಡಿತದ ಚಟಕ್ಕೆ ಬೀಳುತ್ತಾನೆ.
ಮಕ್ಕಳೇ ಈ ಘಟನೆ ಓದಿದಾಗ ಏನು ಕಂಡುಬರುತ್ತದೆ?.
1.ನಾವು ಕುಟುಂಬದಲ್ಲಿ, ಸಂಬಂಧದಲ್ಲಿ ಮತ್ತು ಸಮಾಜದಲ್ಲಿ ಯಾವುದೇ ಸಮಸ್ಯೆಗಳು ಬಂದಾಗ, ಮುಕ್ತವಾಗಿ ,ನೇರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಂಡು ಅನುಮಾನ ಮಾಡದಂತೆ ನೋಡಿಕೊಳ್ಳಬೇಕು.
2.ಸಂಭ್ರಮದ ಜೀವನಕ್ಕೆ ಬೇರೊಬ್ಬರ ತಪ್ಪನ್ನು ಗುರುತಿಸಬಾರದು. ಒಳ್ಳೆಯದನ್ನು ಗುರುತಿಸಿದಾಗ ಸಂಭ್ರಮವಾಗುತ್ತದೆ.
3. ಸಾಮಾಜಿಕ ಮತ್ತು ನೈತಿಕ ಬೆಳವಣಿಗೆ ಆಗುವುದು ಕುಟುಂಬದ ಎಲ್ಲರೊಂದಿಗೂ ಮತ್ತು ಸಮಾಜದ ಎಲ್ಲಾ ವರ್ಗದ ಸ್ನೇಹಿತರೊಡನೆ ಬೆರೆತಾಗ. ಆದರೆ ಈ ಘಟನೆಯಲ್ಲಿ ಮಕ್ಕಳ ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಗೆ ಅಡ್ಡಿ ಆಗುತ್ತಿರುವುದು ಕಂಡುಬರುತ್ತದೆ.
4. ಸಮಾಜದಲ್ಲಿ ಈಗಿನ ಜೀವನ ಶೈಲಿಯಲ್ಲಿ , ಮನಸ್ಸು ಒತ್ತಡಕ್ಕೆ ಈಡಾಗಿ ಮನಸ್ಸು ಅಡ್ಡದಾರಿ ಹಿಡಿಯಬಹುದು, ನಕಾರತ್ಮಕ ಭಾವನೆಗಳು ಮೂಡಬಹುದು ಹಾಗಾಗಿ ನಮ್ಮ ವಿದ್ಯಾರ್ಹತೆ, ಸ್ಥಾನಮಾನ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ. ಕೌನ್ಸಲಿಂಗ್ ಅಗತ್ಯವಿದ್ದಾಗ ಕೌನ್ಸಲಿಂಗ್ ಪಡೆದರೆ ನಮ್ಮ ತಪ್ಪು ಅರಿವಾಗಿ ತಿದ್ದಿಕೊಂಡು ಸಂತೋಷದಿಂದ ಇರಲು ಸಾಧ್ಯವಾಗುತ್ತದೆ.
5. ಹಣ ,ಸ್ಥಾನಮಾನ ಮತ್ತು ವಿದ್ಯಾರ್ಹತೆ ಇದ್ದರೂ ಅದೂ ಪೂರ್ಣ ಸಂಭ್ರಮ ಕೊಡುವುದಿಲ್ಲ. ಕೊಟ್ಟರೂ ಅದು ಕ್ಷಣಿಕ.
6. ಸಂಭ್ರಮಪಡಲು ನಮ್ಮಸಕಾರಾತ್ಮಕವಾದ ಮಾನಸಿಕ ಸ್ಥಿತಿ ಮತ್ತು ಆಲೋಚನಾ ಶೈಲಿ ಮುಖ್ಯವಾಗುತ್ತದೆ.
ನಮ್ಮ ಜೀವನ ಎನ್ನುವುದೇ ಅದ್ಭುತ. ಏನು ಬೇಕಾದರೂ ಸಾಧಿಸಬಹುದಾದ ದೊಡ್ಡ ಅವಕಾಶ. ಕ್ಷಣಿಕ ವಿಷಯಗಳಿಗೆ ಮನಸೋತು ಏನೂ ಅಲ್ಲದ ವಿಚಾರಗಳಲ್ಲಿ ತೊಡಗಿಕೊಳ್ಳುವುದು ಅನಾವಶ್ಯ. ಉಸಿರು ನಿಲ್ಲುವವರೆಗೆ ಇರುವ ಸಣ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳೋಣ. ಬದುಕನ್ನು ಪ್ರೀತಿಸೋಣ. ಎಲ್ಲರನ್ನು ಪ್ರೀತಿಸುವುದ ಕಲಿಯೋಣ...... ಜೀವನ ಸಂಭ್ರಮ ಪಡೋಣ.
..............................................ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿಯವರು
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
**********************************************