-->
ಸ್ಪೂರ್ತಿಯ ಮಾತುಗಳು : ವಿ ಶ್ರೀರಾಮ ಮೂರ್ತಿ

ಸ್ಪೂರ್ತಿಯ ಮಾತುಗಳು : ವಿ ಶ್ರೀರಾಮ ಮೂರ್ತಿ


           "Practice makes man perfect" ಎನ್ನುವ ಆಂಗ್ಲ ನುಡಿಯಂತೆ ಪ್ರತಿಯೊಬ್ಬ ವ್ಯಕ್ತಿ ಪ್ರಯತ್ನ ಪಟ್ಟಾಗ ಅಥವಾ ನಿರಂತರ ಅಭ್ಯಾಸ ಮಾಡಿದಾಗ ಮಾತ್ರ ಆತ ಪರಿಪೂರ್ಣತೆಯನ್ನು ಪಡೆಯಲು ಸಾಧ್ಯವಾಗುತ್ತದೆ. ವ್ಯಕ್ತಿ ತನ್ನ ನಿರಂತರ ಪ್ರಯತ್ನ ಅಥವಾ ಸತತ ಅಭ್ಯಾಸದಿಂದ ತಾನು ಕಂಡುಕೊಂಡ ಗುರಿಯನ್ನು ಸಾಧಿಸಬಹುದು. ಆದುದರಿಂದ ಮಕ್ಕಳೇ, ಪ್ರತಿಯೊಬ್ಬರಲ್ಲೂ ಪ್ರಯತ್ನಿಸುವ ಗುಣ ಬೆಳೆಯಬೇಕು.
          ಸಾಧಿಸಿದರೆ ಸಬಳವನ್ನು ನುಂಗಬಹುದು ಎನ್ನುವ ಮಾತಿನಂತೆ ಪ್ರಯತ್ನಿಸಿದರೆ ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದಲ್ಲವೇ? ಅಂತೆಯೇ ಶಾಲೆಯಲ್ಲಿ ನೀವು ಕಲಿಯುತ್ತಿರಬೇಕಾದರೆ ಕೆಲವು ಪಾಠ ಅಥವಾ ವಿಷಯಗಳು ಸುಲಭ ಅನಿಸಬಹುದು. ಇನ್ನು ಕೆಲವು ಕಷ್ಟ ಅನಿಸಬಹುದು. ಆದರೆ ಕೆಲವರು ಯಾವಾಗಲೂ ಸುಲಭದ ವಿಷಯವನ್ನು ಹೆಚ್ಚು ಇಷ್ಟ ಪಟ್ಟು ಕಲಿಯುತ್ತಾರೆ. ಕಷ್ಟದ ವಿಷಯಗಳನ್ನು ನಮಗೆ ಅರ್ಥವಾಗುವುದಿಲ್ಲ ಅಂತ ಹಾಗೇ ಸುಮ್ಮನೆ ಬಿಟ್ಟು ಬಿಡುತ್ತಾರೆ ಮತ್ತು ಆ ವಿಷಯಗಳಲ್ಲಿ ಅನುತ್ತೀರ್ಣರಾಗುತ್ತಾರೆ. ಮತ್ತೆ ಪರಿತಪಿಸುತ್ತಾರೆ. ಅಲ್ಲವೆ? ಆದ್ದರಿಂದ ವಿದ್ಯಾರ್ಥಿಗಳಾದ ನೀವೆಲ್ಲರೂ ಕಷ್ಟದ ವಿಷಯಗಳನ್ನು ಕೂಡ ಹೆಚ್ಚು ಇಷ್ಟಪಟ್ಟು ಶ್ರಮವನ್ನು ಹಾಕಿದಾಗ ಅವು ಕೂಡ ನಿಮಗೆ ಸುಲಭವಾಗುತ್ತವೆ. ಅಲ್ಲವೇ? ಇವೆಲ್ಲದಕ್ಕೂ ನಿರಂತರ ಶ್ರಮ ಅಥವಾ ಪ್ರಯತ್ನ ಅಗತ್ಯ.    
            ವಿಜ್ಞಾನಿಗಳಿರಬಹುದು ಅಥವಾ ಸಾಧಕರಿರಬಹುದು ಅವರು ಯಾರೂ ತಮ್ಮ ಮೊದಲ ಪ್ರಯತ್ನದಲ್ಲೇ ಯಶ ಕಂಡವರಲ್ಲ. ಮರಳಿ ಯತ್ನವ ಮಾಡು ಅನ್ನುವ ಮಾತಿನಂತೆ ನಿರಂತರ ಪ್ರಯತ್ನಗಳಿಂದ ಹೊಸತನ್ನು ಕಂಡುಹಿಡಿದರು ಮತ್ತು ವಿಜ್ಞಾನಿಗಳಾದರು. ಪ್ರಯತ್ನ ನಮ್ಮದು ಪ್ರತಿಫಲ ದೇವರದು ಎನ್ನುವ ಮಾತಿನಂತೆ ಸತತ ಪ್ರಯತ್ನಕ್ಕೆ ದೇವರು ಪ್ರತಿಫಲ ಕೊಟ್ಟೇ ಕೊಡುತ್ತಾನೆ.
           ಪ್ರಯತ್ನಕ್ಕೆ ಪ್ರತಿಫಲ ಖಂಡಿತಾ ಎನ್ನುವುದಕ್ಕೆ ಅನೇಕ ಉದಾಹರಣೆಗಳನ್ನು ಕೊಡಬಹುದು. ಒಬ್ಬ ಉದ್ದ ಜಿಗಿತಗಾರ ತನ್ನ ಮೊದಲ ಪ್ರಯತ್ನದಲ್ಲೇ ತನ್ನ ಗುರಿಯನ್ನು ತಲುಪಿ ಪ್ರಥಮ ಸ್ಥಾನವನ್ನು ಪಡೆಯಲಾರ. ಯಾವಾಗ ಆತ ಆ ಸ್ಪರ್ಧೆಯಲ್ಲಿ ಎಲ್ಲರಿಗಿಂತ ಹೆಚ್ಚು ದೂರ ಜಿಗಿಯ 'ಬಲ್ಲನೋ ಆಗ ಆತ ಮೊದಲ ಸ್ಥಾನ ಪಡೆಯುತ್ತಾನೆ. ಇದಕ್ಕೆ ಆತ ಸುಮ್ಮನಿದ್ದು ನಿರಂತರ ಅಭ್ಯಾಸ ಮಾಡದಿದ್ದಲ್ಲಿ ಸಾಧ್ಯವೇ? ಇಲ್ಲ. ಅಲ್ಲವೇ? ಆದುದರಿಂದ ದೂರ ದೂರ ಜಿಗಿಯಲು ಆತ ನಿರಂತರ ಅಭ್ಯಾಸ ಅಥವಾ ಪ್ರಯತ್ನ ಮಾಡುತ್ತಿರುತ್ತಾನೆ. ನೀರಜ್ ಚೋಪ್ರಾರವರು ಜಾವೆಲಿನನ್ನು ಅತ್ಯಂತ ದೂರ ಎಸೆದು ಅತ್ಲೆಟೆಕ್ಸ್ ನಲ್ಲಿ ಭಾರತಕ್ಕೆ ಮೊದಲ ಚಿನ್ನವನ್ನು ತಂದುಕೊಟ್ಟ ಸಾಧನೆ ಮಾಡಿದರು. ಈ ಸಾಧನೆಗೆ ಕಾರಣ ಅವರ ನಿರಂತರ ಅಭ್ಯಾಸ. ಅವರಂತೆ ನೀವು ಕೂಡ ಪ್ರಯತ್ನಿಸಬಾರದೇಕೆ? ಆಗ ನೀವು ಕೂಡ ಒಲಿಂಪಿಕ್ಸ್ ನಲ್ಲಿ ಪದಕ ಪಡೆಯಬಹುದಲ್ಲವೇ?
         ವಿದ್ಯಾರ್ಥಿಗಳಾದ ನಿಮಗೆಲ್ಲರಿಗೂ ನೀವು ಸಾಧಿಸಬೇಕಾಗಿರುವ ಗುರಿಯ ಸ್ಪಷ್ಟತೆ ಇರಬೇಕು. ಹಾಗೆಯೇ ಗುರಿ ಸಾಧನೆಗೆ ನಿರಂತರ ಪ್ರಯತ್ನವಿರಬೇಕು. ಯಾವ ರೀತಿ ಒಂದು ನದಿಯು ಹಿಂದಕ್ಕೆ ಹರಿಯಲಾರದೋ ಅದೇ ರೀತಿ ನಾವು ನಮ್ಮ ಗುರಿಯತ್ತ ಸಾಗುವಾಗ ಹಿಂದಿರುಗಿ ನೋಡದೆ ನಮ್ಮ ಗುರಿಯನ್ನು ಸಾಧಿಸಬೇಕು. ಸಾಧನೆಯ ಕಡೆ ಹೆಜ್ಜೆ ಹಾಕಿ ಯಶ ಕಂಡಾಗ ಸಾಧನೆಗೆ ಸಹಕರಿಸಿದವರನ್ನು ಮರೆಯಬಾರದು. ಮೊದಲ ಪ್ರಯತ್ನದಲ್ಲಿ ನಾವು ಗುರಿಯನ್ನು ತಲಪದಿರಬಹುದು. ಆದರೆ ಮುಂದೆ ನಿರಂತರ ಅಭ್ಯಾಸದಿಂದ ನಮ್ಮ ಗುರಿಯನ್ನು ಸಾಧಿಸಬಹುದು. ಆದು ದರಿಂದ ಮಕ್ಕಳೇ, "ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬ ಸ್ವಾಮಿ ವಿವೇಕಾನಂದರ ಸಂದೇಶ ಇಲ್ಲಿ ನಿಮಗೆ ಆದರ್ಶವಾಗಲಿ. ಪ್ರಯತ್ನಕ್ಕೆ ಮಿತಿ ಹಾಕದಿರಿ. ಪ್ರಯತ್ನಕ್ಕೆ ತಡೆ ಒಡ್ಡದಿರಿ. ನಿರಂತರ ಪ್ರಯತ್ನ ನಿಮ್ಮದಾಗಲಿ. ಪ್ರಯತ್ನದ ಫಲ ನಿಮಗೆ ಸಿಗಲಿ. ಪ್ರಯತ್ನಿಸುತ್ತೀರಿ ತಾನೆ?
..................................... ವಿ ಶ್ರೀ ರಾಮಮೂರ್ತಿ
ನಿವೃತ್ತ ವಿಜ್ಞಾನ ಶಿಕ್ಷಕರು
"ಗೌರಿ ಕೃಪಾ" 
ವಾಟೆತ್ತಿಲ, ಅಂಚೆ: ಬಾಯಾರು 
ಮಂಜೇಶ್ವರ ತಾಲೂಕು, 
ಕಾಸರಗೋಡು ಜಿಲ್ಲೆ, ಕೇರಳ.
*******************************************


Ads on article

Advertise in articles 1

advertising articles 2

Advertise under the article