-->
ಅಕ್ಕನ ಪತ್ರ - 11 ಕ್ಕೆ  ಮಕ್ಕಳ ಉತ್ತರ ಸಂಚಿಕೆ -1

ಅಕ್ಕನ ಪತ್ರ - 11 ಕ್ಕೆ ಮಕ್ಕಳ ಉತ್ತರ ಸಂಚಿಕೆ -1

ಜಗಲಿಯ ಮಕ್ಕಳ ಪ್ರೀತಿಯ ಅಕ್ಕ ತೇಜಸ್ವಿ ಅಂಬೆಕಲ್ಲು ಕಳೆದ ಆದಿತ್ಯವಾರ ಬರೆದಿರುವ ಅಕ್ಕನ ಪತ್ರ - 11 ಕ್ಕೆ ........ ಮಕ್ಕಳು ಬರೆದಿರುವ ಉತ್ತರ ಇಲ್ಲಿದೆ.........



          ನಮಸ್ತೇ ಅಕ್ಕ. ನಾನು ಬಿಂದುಶ್ರೀ...... ನೀವು ಹೇಳಿದ ತರಹ ನಮಗೆ ಶಾಲೆ ಪ್ರಾರಂಭವಾಗಿ ತುಂಬಾ ಖುಷಿ ಆಗಿದೆ. ನಮ್ಮ ಸ್ನೇಹಿತರ ಜೊತೆ ತುಂಬಾ ಸಂತೋಷ ದಿಂದ ನಾವು ಪಾಠ ಕೇಳುವ ಸಮಯ, ಹಾಗೂ ಅವರ ಜೊತೆ ಹಲವು ಚಟುವಟಿಕೆಗಳನ್ನು ತುಂಬಾ ಉತ್ಸಹದಿಂದ ಮಾಡುತ್ತಿದ್ದೇವೆ. ಶಾಲೆಯಲ್ಲಿ ಇದ್ದರೆ ಏನೋ ಒಂಥರ ಖುಷಿ ಆನಂದ. ಶಿಕ್ಷಕರು ಮಾಡಿದ ಪಾಠಗಳು ತುಂಬಾ ಚೆನ್ನಾಗಿ ಅರ್ಥವಾಗುತ್ತದೆ. ನಾವು ಶಾಲೆಗೆ ಹೋಗಿ ಹಲವು ವಿಷಯಗಳು ನಮಗೆ ಅರ್ಥವಾಗುತ್ತವೆ. ನೀವು ಬರೆದ ಪತ್ರ ತುಂಬಾ ಚೆನ್ನಾಗಿದೆ. ಓದಲು ತುಂಬಾ ಖುಷಿಯಾಗುತ್ತವೆ. ಧನ್ಯವಾದಗಳು.....       ...........................................ಕೆ ಬಿಂದು ಶ್ರೀ    
10ನೇ ತರಗತಿ      
ಶ್ರೀ ರಾಮ ವಿದ್ಯಾ ಕೇಂದ್ರ , ಕಲ್ಲಡ್ಕ ,  
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************




ನಮಸ್ತೆ ಅಕ್ಕ...... ನಾನು ಪಲ್ಲವಿ
     ನಿಮ್ಮ ಪತ್ರ ಓದಿ ಬಹಳ ಸಂತೋಷವಾಯಿತು. 
ನಾನು ನಮ್ಮ ಶಾಲೆಯ ಗ್ರಂಥಾಲಯದಿಂದ ಹಲವಾರು ಪುಸ್ತಕ ಗಳನ್ನು ಓದಿದ್ದೇನೆ. ಅದರಲ್ಲಿ ನನಗೆ ಆತ್ಮಕಥೆ ಮತ್ತು ಜೀವನ ಚರಿತ್ರೆ ಎಂದರೆ ಬಹಳ ಇಷ್ಟ.... ನನಗೆ ನಿಮ್ಮ ಪತ್ರ ಓದಿ ಇನ್ನೂ ಹಲವಾರು ಪುಸ್ತಕಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳ ಬೇಕೆಂದೆನಿಸಿದೆ..... 
          ಮುಂದಿನ ಪತ್ರಕ್ಕೆ ಕಾದಿರುತ್ತೇನೆ.......   
 - ಅವಕಾಶಕ್ಕಾಗಿ ಧನ್ಯವಾದಗಳು..... 
..........................................................ಪಲ್ಲವಿ 
10ನೇ ತರಗತಿ 
ಮುಂಡಾಜೆ ಸರಕಾರಿ ಪ್ರೌಢಶಾಲೆ  
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************




ಪ್ರೀತಿಯ ಅಕ್ಕನಿಗೆ ಹಿತಾಶ್ರೀ ಮಾಡುವ ನಮಸ್ತೆ...          
          ನಾನು ದಿನನಿತ್ಯ ಶಾಲೆಗೆ ಹೋಗಿ ಆಟ ಪಾಠಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳುವುದರಿಂದ ನಾನು ತುಂಬಾ ಉಲ್ಲಾಸದಿಂದಿರುತ್ತೇನೆ. ಶಿಕ್ಷಕ ಶಿಕ್ಷಕಿಯರೊಂದಿಗೆ ಪಾಠದ ವಿಷಯದ ಬಗ್ಗೆ ನನಗೆ ಹೆಚ್ಚು ಹೆಚ್ಚು ತಿಳುವಳಿಕೆ ಮೂಡಿ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ. ಸಹಪಾಠಿಗಳೊಂದಿಗೆ ಪಾಠದ ಚಟುವಟಿಕೆಗಳಲ್ಲಿ ಚರ್ಚಿಸಿದಾಗ ಮನಸ್ಸಿಗೆ ಆಗುವ ಉಲ್ಲಾಸವೇ ಬೇರೆ. ಶಾಲೆಗೆ ಹೋಗಿ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಾಗ ನಮಗೆ ಉತ್ಸಾಹ ತುಂಬುತ್ತದೆ. ಹೊಸ ಹೊಸ ವಿಷಯಗಳ ಬಗ್ಗೆ ಅರಿವು ಮೂಡಿ ಜ್ಞಾನಭಿವೃದ್ಧಿಯಾಗುತ್ತದೆ. ಮುಖ್ಯ ಗುರುಗಳ ಮಾರ್ಗದರ್ಶನದಲ್ಲಿ ಶಿಸ್ತು, ವಿದ್ಯೆ, ನಂಬಿಕೆ, ಆತ್ಮ ಗೌರವ, ಆತ್ಮ ವಿಶ್ವಾಸ ತುಂಬಿ ಎಲ್ಲರೊಂದಿಗೆ ಹೊಂದಾಣಿಕೆ ಇರುವುದೇ ನಮಗೆಲ್ಲರಿಗೂ ಆನಂದ. ಇದರಿಂದ ನಮಗೆ ಜೀವನದಲ್ಲಿ ಓದು ಅಮೂಲ್ಯ.
............................................... ಹಿತಾಶ್ರೀ . ಪಿ
6ನೇ ತರಗತಿ
ಶ್ರೀ ವೇಣುಗಪಾಲ ಅ. ಹಿ . ಪ್ರಾ . ಶಾಲೆ 
ಪಕಳಕುಂಜ ಮಾಣಿಲ.
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



ಪ್ರೀತಿಯ ಅಕ್ಕನಿಗೆ ನಿಭಾ ಮಾಡುವ ವಂದನೆಗಳು............
ಹೌದು, ಅಕ್ಕ ಹೇಳಿದ್ದು ನಿಜ.
ನನಗೂ ಕೂಡ ಶಾಲೆ ಪ್ರಾರಂಭವಾಗಿದೆ. ಈಗ ನಾವು ಸಂತಸದಿಂದ ಇದ್ದೇವೆ. ಪುಟಾಣಿ ಮಕ್ಕಳು ಕೂಡ ಬಂದಿದ್ದಾರೆ. ಹಾಗೆಯೇ ನಮಗೆ ಪಾಠಗಳು ಕೂಡ ಪ್ರಾರಂಭವಾಗಿದೆ. ಅಕ್ಕ ಹೇಳಿದ *ಬದುಕು ಬದಲಿಸಬಹುದು* ಎಂಬ ಪುಸ್ತಕದಿಂದ ಆರಿಸಲಾದ *ನೀರು ಕೊಡದ ನಾಡಿನಲ್ಲಿ* ಎಂಬ ಪಾಠವು 8 ನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿದೆ. ಹೀಗೆ ನಾವು ಯಾವಾಗಲೂ ಸಂತಸದಿಂದ ಶಾಲೆಗೆ ಹೋಗಬೇಕು ಎಂದು ಆಶಿಸುತ್ತೇನೆ. ಧನ್ಯವಾದಗಳು
........................................................ನಿಭಾ
8ನೇ ತರಗತಿ
ಸ. ಹಿ ಪ್ರಾ. ಶಾಲೆ. ನೇರಳಕಟ್ಟೆ , 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************



ಪ್ರೀತಿಯ ಅಕ್ಕನಿಗೆ........ ವೈಷ್ಣವಿ ಕಾಮತ್ ಮಾಡುವ ನಮಸ್ಕಾರಗಳು. 
      ನನಗೆ ನಿಮ್ಮ ಪತ್ರವನ್ನು ಓದಿ ತುಂಬಾ ಸಂತೋಷವಾಯಿತು...... 
       ನಾನು ಸಮಯ ಸಿಕ್ಕಿದಾಗ ಪುಸ್ತಕಗಳನ್ನು ಓದುತ್ತೇನೆ. ಅದರಲ್ಲಿರುವ ವಿಷಯಗಳ ಬಗ್ಗೆ ಮನೆಯವರೊಂದಿಗೆ ಚರ್ಚಿಸುತ್ತೇನೆ. ನಾನು ಓದಿದ ಪುಸ್ತಕಗಳಲ್ಲಿ ಸ್ವಾಮಿ ವಿವೇಕಾನಂದರ ಪುಸ್ತಕಗಳೇ ಹೆಚ್ಚು. ಅವರು ಜಗತ್ತಿಗೆ ಮಾನವತೆಯ ಸಂದೇಶವನ್ನು ಸಾರಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರ ವಿಚಾರಧಾರೆಗಳು ನಮಗೆಲ್ಲ ಸ್ಪೂರ್ತಿಯಾಗಿವೆ. ಸ್ವಾಮಿ ವಿವೇಕಾನಂದರು ಸರ್ವಧರ್ಮ ಸಮಾನತೆಯನ್ನು ಸಾರಿದ ಹರಿಕಾರರಾಗಿದ್ದಾರೆ. ಅವರು ಹಾಕಿಕೊಟ್ಟ ಪಥದಲ್ಲಿ ನಾವೆಲ್ಲರೂ ಮುನ್ನಡೆಯೋಣ. ಅವರ ಸ್ಪೂರ್ತಿಯ ಮಾತುಗಳು ನಮಗೆಲ್ಲಾ ದಾರಿದೀಪವಾಗಿವೆ. ಅಕ್ಕ ತಾವು ಪುಸ್ತಕಗಳನ್ನು ಓದುವ ಅಭಿರುಚಿಗೆ ನಮಗೆ ಪ್ರೇರಣೆಯಾಗಿದ್ದೀರಿ. 
ನಿಮ್ಮ ಮುಂದಿನ ಪತ್ರದ ನಿರೀಕ್ಷೆಯಲ್ಲಿರುತ್ತೇನೆ. 
           ಧನ್ಯವಾದಗಳೊಂದಿಗೆ
..........................................ವೈಷ್ಣವಿ ಕಾಮತ್
5ನೇ ತರಗತಿ
ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆ 
ಹನುಮಾನ್ ನಗರ ಕಲ್ಲಡ್ಕ. 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ.
**********************************************



ನಮಸ್ತೆ ಅಕ್ಕ...... ನಾನು ಪ್ರಣವ್ ದೇವ್
ನನಗೆ ಶಾಲೆಗೆ ಹೋಗುವುದು ಬಹಳ ಇಷ್ಟ. ಅದರಲ್ಲೂ ನನ್ನ ಟೀಚರ್ ಜಡೆ, ಮಾತು, ಹಾಡು ಎಲ್ಲವೂ ಇಷ್ಟ. ಶಾಲೆಯಲ್ಲಿ ಯೋಗ, ಆಟ, ಪಾಠ, ಹಂಚಿ ತಿನ್ನುವುದು ಎಲ್ಲವನ್ನೂ ಕಲಿಯುತ್ತೇನೆ.
   ನನಗೆ ಕೃಷ್ಣ ವೇಷ ಸ್ಪರ್ಧೆಯಲ್ಲಿ "ಗಾಂಧೀಜಿ ಮತ್ತು ಯಕ್ಷಗಾನದ" ಪುಸ್ತಕ prize ಸಿಕ್ಕಿದೆ. ಅಮ್ಮ ಓದಿ ಹೇಳಿದಾಗ ನಾನು ಅವರಂತೆ leader ಆಗಬೇಕು ಅನಿಸಿತು.
  ಯಕ್ಷಗಾನದ ಪುಸ್ತಕದಲ್ಲಿ ಚಿತ್ರಗಳಿದ್ದವು , ನೋಡಿ ಸಂತೋಷವಾಯಿತು. 
" ಅಕ್ಕಾ, ಇನ್ನು ಮುಂದೆ ಚಾಕಲೇಟ್ ಬದಲು ಪುಸ್ತಕ ತೆಗದುಕೊಳ್ಳುತ್ತೇನೆ ".
ವಂದನೆಗಳು,
..........................................ಪ್ರಣವ್ ದೇವ್
1ನೇ ತರಗತಿ
ಲೇಡಿಹಿಲ್ ಇಂಗ್ಲೀಷ್ ಹೈಯರ್ ಪ್ರೈಮರಿ ಸ್ಕೂಲ್ - ಮಂಗಳೂರು - ದ.ಕ ಜಿಲ್ಲೆ
**********************************************



ನಮಸ್ತೆ
       ನನ್ನ ಪ್ರೀತಿಯ ಅಕ್ಕನಿಗೆ ಸಾತ್ವಿಕ್ ಗಣೇಶ್ ಮಾಡುವ ನಮಸ್ಕಾರಗಳು.
                ನಿಮ್ಮ ಪತ್ರವನ್ನು ಓದಿದೆನು.
    ನಾನು ನೀವು ಹೇಳಿದಂತೆ ನಮ್ಮ ಸಾಹಿತಿಗಳ ಪುಸ್ತಕವನ್ನು ಓದಿದೆನು. ನಮ್ಮ ಭಾರತ ಭೂಮಿಯಲ್ಲಿ ಅನೇಕ ಮಹಾಪುರುಷರು ಸಮಾಜ ಸೇವೆ, ರಾಷ್ಟ್ರ ಸೇವೆ ಮಾಡಿದ್ದಾರೆ. ಅವರಲ್ಲಿ ಕನಕದಾಸರು, ಕುವೆಂಪು, ಬಸವಣ್ಣ ನವರ ಬಗ್ಗೆ ಓದಿದೆ.
       "ಕಾಯಕವೇ ಕೈಲಾಸ" ಎಂಬುದು ಬಸವಣ್ಣನವರ ಮಂತ್ರವಾಗಿತ್ತು. ಅವರಂತೆ ನಾವು ವೃತ್ತಿ ಗೌರವ, ದುಡಿಮೆಯ ಮಹತ್ವ ಎಷ್ಟಿದೆ ಎಂಬುದನ್ನು ಅರಿತು ಬಾಳೋಣ.
     ಕನಕದಾಸರು ಪ್ರಸಿದ್ಧ ಕೀರ್ತನೆಕಾರರು. ಅವರಂತೆ ಶಾಂತಿ, ಜ್ಯಾತ್ಯಾತೀತ ಭಾವನೆಯನ್ನು ಅರಿತು ಬಾಳಿದರೆ ಬದುಕಿನಲ್ಲಿ ಶಾಂತಿ, ಸಮಾಧಾನ ಖಂಡಿತಾ ಎಲ್ಲರಿಗೂ ದೊರೆಯುತ್ತದೆ.
 ಕುವೆಂಪು ಅವರ ಹೇಳಿದಂತೆ  
       "ಎಲ್ಲಾದರೂ ಇರು, ಎಂತಾದರೂ ಇರು
        ಎಂದೆಂದಿಗೂ ನೀ ಕನ್ನಡವಾಗಿರು
        ಕನ್ನಡ ಗೋವಿನ ಓ ಮುದ್ದಿನ ಕರು 
        ಕನ್ನಡತನ ಒಂದಿದ್ದರೆ, ನೀನಮ್ಮಗೆ ಕಲ್ಪತರು"
ಮೇಲಿನ ಹಿತ ನುಡಿಯಂತೆ ಕನ್ನಡ ಅಭಿಮಾನಿಯಾಗಿ ಕನ್ನಡಕೆ, ಕನ್ನಡ ನಾಡಿಗೆ ನಮ್ಮ ಅಳಿಲು ಸೇವೆಯನ್ನು ಸಲ್ಲಿಸೋಣ.
   ಧನ್ಯವಾದಗಳು,..................
.........................................ಸಾತ್ವಿಕ್ ಗಣೇಶ್
7ನೇ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


ಅಕ್ಕನ ಪತ್ರ-11 
      ಪ್ರೀತಿಯ ಅಕ್ಕನಿಗೆ ಲಹರಿ ಬರೆಯುವ ಪತ್ರ. ಅಕ್ಕ ನಿಮ್ಮ ಪತ್ರ ಓದುವುದೇ ಒಂದು ಖುಷಿ....ಹೌದು.... ನಿಜ ಅಕ್ಕ... ಶಾಲೆಯ ಆರಂಭ, ಓದು, ಆಟ-ಪಾಠ, ಶಿಕ್ಷಕರೊಂದಿಗಿನ ಒಡನಾಟ, ಎಲ್ಲವೂ ಹೇಳಲಾರದಷ್ಟು ಖುಷಿ ತಂದಿದೆ.... ಈ ಖುಷಿಗೆ ಮತ್ತೆಂದೂ ದೃಷ್ಟಿ ಬೀಳದಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.... ಅಕ್ಕ ನೀವಂದಂತೆ ನಾನೂ ತೆನಾಲಿ ರಾಮಕೃಷ್ಣನ ಕತೆಗಳನ್ನು ಓದುತ್ತಿರುವೆನು.... ಆ ಕತೆಗಳಲ್ಲಿ ತೆನಾಲಿ ರಾಮಕೃಷ್ಣನ ಬುದ್ಧಿವಂತಿಕೆ, ಹಾಸ್ಯ ಎಲ್ಲವೂ ತುಂಬಾ ಇಷ್ಟವಾಗುತ್ತದೆ.... ನಿಮ್ಮ ಆಶೀರ್ವಾದ ಸದಾ ಇರಲಿ ಅಕ್ಕ... ನಿಮ್ಮ ಮುಂದಿನ ಪತ್ರಕ್ಕೆ ಕಾಯುವೆನು... ಇಂತೀ ನಿಮ್ಮ 
.............................................. ಲಹರಿ ಜಿ.ಕೆ.
 7ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ , ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************









Ads on article

Advertise in articles 1

advertising articles 2

Advertise under the article