-->
ಓ ಮುದ್ದು ಮನಸೇ ...…...! ಸಂಚಿಕೆ -12

ಓ ಮುದ್ದು ಮನಸೇ ...…...! ಸಂಚಿಕೆ -12           ಸ್ವರ್ಗಕ್ಕೊಮ್ಮೆ ಹೋಗೋಣವೇ?
       -----------------------------------------------
         ಸಕಲ ಸುಖ ವೈಭೋಗಗಳಿಂದ ಸಮೃದ್ಧವಾಗಿರುವ ಸ್ವರ್ಗಕ್ಕೆ ಹೋಗೋದೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಬಸ್ಸೋ, ರೈಲೋ? ವಿಮಾನವಾದರೂ ಪರವಾಗಿಲ್ಲ ನನಗೂ ಒಂದು ಸೀಟ್ ಬುಕ್ ಮಾಡಿ ಎಂದ ಗುಂಡ. ಅರೆರೆ.... ಯಾಕಷ್ಟು ಆತುರ? ಇಡೀ ಜಗತ್ತಿನಲ್ಲಿ ಪ್ರತಿಯೊಬ್ಬನೂ ಹೋಗಲು ಬಯಸುವ, ಆದರೆ ಯಾವ ರಸ್ತೆಗಳೂ ಸಂಪರ್ಕಿಸದ, ಯಾವ ವಾಹನಗಳೂ ಹೋಗಲಾಗದ ಏಕೈಕ ಸ್ಥಳ ಸ್ವರ್ಗ. ಕಂಡವರಿಲ್ಲ, ಕೊಂಡವರಿಲ್ಲ ಕೆಲವೊಮ್ಮೆ ಅದೊಂದು ಕೇವಲ ಕಲ್ಪನಾ ಲೋಕವಿರಬಹುದೇನೋ ಅನ್ನಿಸದೇ ಇರದು. 
ಗುಂಡನಿಗೆ ಬೇಸರವಾಯಿತು....! 
           ನನ್ನ ಪ್ರಕಾರ ಸ್ವರ್ಗವೆಂಬುದಿದೆ..! ಬಹುಶಃ ನನ್ನ ಅನುಭವಕ್ಕೆ ಬಂದ ಸಣ್ಣದಾದರೂ ಬಹುವಾಗಿ ಕಾಡಿದ ಒಂದು ಸನ್ನಿವೇಶ ನಿಜವಾದ ಸ್ವರ್ಗದ ಗುಟ್ಟನ್ನು ರಟ್ಟುಮಾಡಬಹುದೇನೋ. 
            ಒಮ್ಮೆ ಐದನೇ ತರಗತಿಯಲ್ಲಿ ಓದುತ್ತಿದ್ದ ಹುಡುಗನೊಬ್ಬ ಆಪ್ತಸಮಾಲೋಚನೆಗೆಂದು ನನ್ನ ಬಳಿ ಬಂದ. ನಾನು ಕೇಳಿದ ಪ್ರಶ್ನೆಯೊಂದಕ್ಕೆ ಅವನು ಕೊಟ್ಟ ಉತ್ತರ ಇವತ್ತಿಗೂ ನನ್ನನ್ನು ಪುಳಕಿತನನ್ನಾಗಿಸುತ್ತಿದೆ. 
           ಮಕ್ಕಳೊಂದಿಗಿನ ನನ್ನ ಒಡನಾಟದ ಪ್ರತೀ ಹಂತದಲ್ಲೂ ಈ ಹುಡುಗನೊಂದು ಉದಾಹರಣೆಯಾಗಿ ಬಿಟ್ಟಿದ್ದಾನೆ. 
ನಾನಂದೆ, ನೀನು ಇದುವರೆಗೆ ಅನುಭವಿಸಿದ ಸುಂದರ ಕ್ಷಣಗಳಲ್ಲಿ ನಿನ್ನನ್ನು ಅತೀ ಹೆಚ್ಚು ಸಂತೋಷಗೊಳಿಸಿದ ಒಂದು ಸನ್ನಿವೇಷವನ್ನು ನನ್ನಲ್ಲಿ ಹಂಚಿಕೊಳ್ಳಬಹುದೆ? ಈ ಪ್ರಶ್ನೆಯ ಜೊತೆ ಜೊತೆಗೆ ಅವನು ಕೊಡಬಹುದಾದ ಉತ್ತರಗಳೂ ನನ್ನ ತಲೆಯಲ್ಲಿ ಅದಾಗಲೇ ತಿರುಗುತ್ತಿದ್ದವು. ಹಾಗಂತ ಆ ಉತ್ತರಗಳ್ಯಾವೂ ನನ್ನವಲ್ಲ, ಬದಲಾಗಿ ನಾನು ಪ್ರತಿ ಬಾರಿ ಕೇಳಿ ಪಡೆದ ಮನುಜ ಸಹಜ ಅನುಭವಗಳಷ್ಟೇ. ಹೆಚ್ಚಾಗಿ ಮಕ್ಕಳಲ್ಲಿ ನೀವು ಇಂತಹದ್ದೊಂದು ಪ್ರಶ್ನೆಯನ್ನು ಕೇಳಿ ನೋಡಿ ನಿಮಗೆ ಸಿಗುವ ಉತ್ತರಗಳೂ ಅವೇ, ನನ್ನ ಹುಟ್ಟುಹಬ್ಬದ ಆಚರಣೆ, ನಾನು ಪಡೆದ ಸರ್ಪ್ರೈಸ್ ಗಿಫ್ಟ್, ಭೇಟಿಕೊಟ್ಟ ಸ್ಥಳ, ಪಡೆದ ಅಂಕ ಇತ್ಯಾದಿ. 
          ಆದರೆ ಈ ಐದು ವರ್ಷದ ಹುಡುಗನ ಜೀವನದಲ್ಲಿ ಒಂದು ವರ್ಷದ ಹಿಂದೆ ನಡೆದ ಆ ಒಂದು ಸನ್ನಿವೇಶ ವರ್ಷ ಕಳೆದರೂ ಅವನಲ್ಲಿ ಅಚ್ಚಳಿಯದೆ ಉಳಿದಿದ್ದು ಸ್ವರ್ಗ ಸುಖದ ಗುಟ್ಟಲ್ಲದೆ ಇನ್ನೇನು ಆಗಿರಲಿಕ್ಕೆ ಸಾಧ್ಯ?
           ಹುಡುಗನೆಂದ, ಸರ್ ಒಂದು ರವಿವಾರ ಶಾಲೆಗೆ ರಜಾ ಇದ್ದ ದಿನ, ನನಗೆ ಐಸ್ಕ್ರೀಮ್ ತಿನ್ನಬೇಕೆನಿಸಿತು, ಅಮ್ಮನಲ್ಲಿ ಹಣ ಕೇಳಿದೆ. ಯಾವಾಗಲೂ ನಿರಾಕರಿಸುತ್ತಿದ್ದ ಅಮ್ಮ ಇವತ್ತು ಪ್ರೀತಿಯಿಂದಲೇ ಕೈಯ್ಯಲ್ಲಿ ಐವತ್ತು ರುಪಾಯಿ ಹಣವಿಟ್ಟು ಅಂದರು, "ನಿಧಾನ ಹೋಗು, ರಸ್ತೆ ದಾಟುವಾಗ ಹುಷಾರು". ಐವತ್ತು ರುಪಾಯಿ....! ಇಷ್ಟೊಂದು ಹಣವನ್ನು ಅಮ್ಮ ಯಾವತ್ತೂ ಕೊಟ್ಟಿಲ್ಲ, ಐಸ್ ಕ್ರೀಮ್ ತಿನ್ನುವ ಆಸೆ ಇಮ್ಮಡಿಸಿತು. ಆತುರದಲ್ಲಿ ಮನೆಯಿಂದ ತುಸು ದೂರದಲ್ಲೇ ಇದ್ದ ಐಸ್ಕ್ರೀಮ್ ಅಂಗಡಿಯಕಡೆ ಹೊರಟೆ. ದಾರಿಯುದ್ದಕ್ಕೂ ತರ ತರದ ಐಸ್ಕ್ರೀಮ್ ಗಳನ್ನು ನೆನಪಿಸಿಕೊಳ್ಳುತ್ತ ಇರುವ ಐವತ್ತು ರೂಪಾಯಿಗಳಲ್ಲಿ ಯಾವೆಲ್ಲ ಐಸ್ಕ್ರೀಮ್ ತಿನ್ನಬೇಕೆಂದು ಅಳೆದು-ತೂಗಿ, ಅಂಗಡಿಯ ಕಡೆ ದೌಡಾಯಿಸಿದೆ. ರಸ್ತೆಯೊಂದನ್ನು ದಾಟಿ ನಿಂತ ನನಗೆ ಕಂಡಿದ್ದು ಬಣ್ಣ ಬಣ್ಣದ ಐಸ್ಕ್ರೀಮ್ ಚಿತ್ರಗಳಿಂದ ನಳ-ನಳಿಸುತ್ತಿದ್ದ ಅಂಗಡಿ, ಬಾಯಲ್ಲಿ ನೀರು ತುಂಬಿತು, ರುಚಿಯಾದ ಐಸ್ಕ್ರೀಮ್ ಸವಿಯಲು ನಾಲಗೆ ಕಾತರಿಸಿತು. ಅಂಗಡಿಯ ಮಾಲೀಕ ಕೂತಲ್ಲಿಂದಲೇ ಇಣುಕಿದ...! ಹೀಗೆ ನನ್ನಿಷ್ಟದ ಐಸ್ಕ್ರೀಮ್ ಹುಡುಕುತ್ತಿದ್ದ ನನಗೆ ಯಾರೋ ಹಸಿವಿನಿಂದ ಬಳಲುತ್ತಿದ್ದ, ಅನ್ನಕ್ಕಾಗಿ ಬೇಡುತ್ತಿದ್ದ ಧ್ವನಿ ಕೇಳಿತು. ತಿರುಗಿ ನೋಡಿದೆ, ಕೃಷವಾದ ದೇಹ, ಸುಮಾರು ಎಪ್ಪತ್ತು ದಾಟಿದ್ದ ವಯಸ್ಸು, ರಸ್ಥೆಯ ಬದಿಯಲ್ಲಿ ಕುಳಿತು ತುತ್ತು ಅನ್ನಕ್ಕಾಗಿ ಅಂಗಲಾಚುತ್ತಿದ್ದ ಆ ವೃದ್ದೆಯನ್ನು ಕಂಡಾಗ ನಾನು ನನ್ನನ್ನೇ ಮರೆತೆ. ನೇರವಾಗಿ ಅವಳಬಳಿ ನಡೆದ ನಾನು ನನ್ನ ಬಳಿಯಿದ್ದ ಐವತ್ತು ರುಪಾಯಿಯನ್ನು ಅವಳ ಕೈಯ್ಯಲ್ಲಿಟ್ಟೆ....! ಮುಂದೆ ನಡೆದ ಕ್ಷಣ ನನ್ನ ಜೀವನದ ಅತ್ಯಂತ ಸಂತೋಷದ ಕ್ಷಣವಾಗಿಬಿಟ್ಟಿತು. ನನ್ನ ಕೈಹಿಡಿದು ತನ್ನ ಬಳಿ ಎಳೆದುಕೊಂಡ ಅಜ್ಜಿ ತನ್ನ ಬಲಗೈಯ್ಯನ್ನು ನನ್ನ ತಲೆಮೇಲಿಟ್ಟು ಅಂದರು "ದೇವ್ರು ನಿನ್ನ ಚೆನ್ನಾಗಿಡ್ಳಿ ಮಗ" ಅವಳ ಮುಖದಲ್ಲಿ ಅಪಾರ, ಸಂತೋಷವಿತ್ತು, ನಿರಾಳತೆಯಿತ್ತು, ಆ ಕ್ಷಣಕ್ಕಾದರೂ ಹಸಿವಿನಿಂದ ಹೊರಬರುವ ಅವಳ ಪ್ರಯತ್ನಕ್ಕೆ ಜಯವಿತ್ತು. ಆ ಕ್ಷಣ ಅವಳ ಮುಖದಲ್ಲರಳಿದ ನಗು ನಾನೆಂದಿಗೂ ಮರೆಯಲಾಗದ್ದು...!
         ಐಸ್ಕ್ರೀಮ್ ತಿಂದು ಪಡೆಯಬಹುದಾಗಿದ್ದ ಸಂತೋಷವನ್ನು ಇನ್ನೊಬ್ಬರ ಹಸಿವು ನೀಗಿಸಲು ಬಿಟ್ಟುಕೊಟ್ಟ ಮತ್ತು ಇನ್ನೊಬ್ಬರ ನಗುವನ್ನು ತಾನು ಪಡೆದ ಸಂತೋಷದ ಕ್ಷಣವನ್ನಾಗಿಸಿದ ಆ ಮೂಲಕ ನಿಜವಾದ ಸ್ವರ್ಗ ಸುಖದ ಅನುಭವ ಪಡೆದ ಈ ಹುಡುಗ ಸಿಂಪಲ್ ಆಗಿ ಸ್ಪೆಷಲ್ ಅಲ್ಲವೇ?
         ಎಲ್ಲವೂ ಇದ್ದು, ಯಾವುದರಲ್ಲೂ ತೃಪ್ತಿ ಹೊಂದದ ಅದೆಷ್ಟೋ ಜನ ಇಲ್ಲದ ಸ್ವರ್ಗದ ಹುಡುಕಾಟದಲ್ಲಿ ತಮ್ಮ ಒಂದಿಡೀ ಬದುಕಿನ ಅವಕಾಶಗಳನ್ನೇ ಕಳೆದುಕೊಂಡುಬಿಡುತ್ತಾರೆ. ನನ್ನ ಪ್ರಕಾರ ಇಡೀ ಬ್ರಹ್ಮಾಂಡದಲ್ಲಿ ಭೂಮಿಗಿಂತ ಮಿಗಿಲಾದ ಸ್ವರ್ಗವೊಂದು ಇರಲಿಕ್ಕೆ ಸಾಧ್ಯವೇ ಇಲ್ಲ. ಅದರಲ್ಲಿಯೂ ಭಾರತೀಯರಾದ ನಾವು ನಿಜಕ್ಕೂ ಪುಣ್ಯವಂತರು. ಹೀಗೆ ಹೇಳುವುದಕ್ಕೆ ಕಾರಣವೂ ಇದೆ. ನೀವೇ ನೋಡಿ, ದೇವರು ನಮಗೆ ಹಸಿವನ್ನು ನೀಗಿಸಿಕೊಳ್ಳಲು ಆಹಾರ ಕೊಟ್ಟ, ಒಂದೇ ಆಹಾರ ತಿಂದು ಬೇಜಾರಾಗೋದು ಬೇಡವೆಂದು ಅದರಲ್ಲಿ ವಿವಿಧ ಬಗೆಗಳನ್ನಿಟ್ಟ. ಗಿಡ, ಮರ, ಪ್ರಾಣಿ ಪಕ್ಷಿಗಳನ್ನೊಳಗೊಂಡ ಸುಂದರ ಪ್ರಕೃತಿಯನ್ನು ನಿರ್ಮಿಸಿದ, ಚಳಿ, ಬಿಸಿಲು, ಮಳೆ, ಝರಿ ತೊರೆ, ಹೊಳೆ ಹಳ್ಳ ಗಳನ್ನು ಸೃಷ್ಠಿಸಿದ. ಪ್ರೀತಿಗೆ ಕುಟುಂಬ, ಸ್ನೇಹಕ್ಕೆ ಗೆಳೆಯರು, ಬದುಕಿಗೆ ಜೊತೆಗಾರರು, ಇನ್ನು ಒಂದಿಡೀ ಸಮಾಜದಲ್ಲಿ ಗೌರವ, ಸಮ್ಮಾನಗಳನ್ನು ನೀಡಿದ. ತಲೆಯಲ್ಲಿ ಬುದ್ದಿಯಿಟ್ಟ ಅದನ್ನು ಬೆಳೆಸಿಕೊಳ್ಳೋದಕ್ಕೆ ಶಾಲೆ, ಕಲಿಸಿಕೊಡೋದಕ್ಕೆ ಶಿಕ್ಷಕರನ್ನೂ ಸೃಷ್ಠಿಸಿದ. ವಿಲಾಸಕ್ಕೆ ಆಟೋಟಗಳು, ಮನೋರಂಜನೆಗೆ ಹಾಡು, ನೃತ್ಯ ಇತ್ಯಾದಿಗಳನ್ನು ಕಲಿಸಿದ. ಇಂತಹ ಅದೆಷ್ಟೋ ಅದ್ಭುತಗಳನ್ನೊಳಗೊಂಡ ಈ ಭೂಲೋಕವೇ ನಿಜವಾದ ಸ್ವರ್ಗ. 
         ನಮ್ಮೆದುರೇ ಇರುವ ಸುಖ ಸಂತೋಷಗಳನ್ನು ಬಿಟ್ಟು ಪ್ರಸ್ತುತತೆಯಲ್ಲಿ ಇಲ್ಲದುದರೆಡೆಗೆ ಯೋಚಿಸುವ ನಾವು ಮೂರ್ಖರಲ್ಲವೇ? ಇದ್ದಷ್ಟು ದಿನ, ಇರುವ ಅವಕಾಶಗಳನ್ನು ಬಳಸಿಕೊಂಡು, ಒಂದು ಉತ್ತಮ ಬದುಕನ್ನು ಕಟ್ಟಿಕೊಳ್ಳೋಣ. ಪ್ರೀತಿ, ವಿಶ್ವಾಸಗಳು ನಮ್ಮ ಧ್ಯೇಯಗಳಾಗಲಿ. ಸಹನೆ, ಸಹಬಾಳ್ವೆಗಳು ನಮ್ಮ ಜೀವನದ ಭಾಗಗಳಾಗಲಿ. ಎಲ್ಲರೊಳಗೊಂದಾಗಿ ಶ್ರೇಷ್ಠ ಮಾನವ ಮೌಲ್ಯಗಳನ್ನು ಅಳವಡಿಸಿಕೊಂಡು ಜೀವನದ ಪ್ರತೀ ಕ್ಷಣಗಳನ್ನು ಅನುಭವಿಸೋಣ. ಮಾಡುವ ಎಲ್ಲಾ ಕೆಲಸಗಳಲ್ಲೂ ಸ್ವರ್ಗ ಕಾಣೋಣ. ದ್ವೇಷ, ಅಸೂಯೆ, ಸ್ವಾರ್ಥ, ಕ್ರೌರ್ಯ, ಮೋಸ, ವಂಚನೆಯಂತಹ ದುಷ್ಟ ಗುಣಗಳು ಕ್ಷಣಿಕ ತೃಪ್ತಿ ನೀಡಿಯಾವೆ ವಿನಹ ಶಾಶ್ವತ ಸುಖವನ್ನಲ್ಲ. ಬದುಕಿದ್ದೂ ಸತ್ತಂತವರಾಗುವ ಬದಲು ಸತ್ತ ಮೇಲೂ ಬದುಕುವ ಮನುಜರಾಗೋಣ....! ಸ್ವರ್ಗ ಸುಖದ ಅನುಭವ ಹೊಂದೋಣ...!
..........................................ಗುರುರಾಜ್ ಇಟಗಿ
ಸಂಶೋಧಕರು ಮತ್ತು ಮಾನಸಿಕ ಆರೋಗ್ಯ ಸಲಹೆಗಾರರು
ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ
mob : +91 94837 16589
*********************************************
Ads on article

Advertise in articles 1

advertising articles 2

Advertise under the article