
ಊರು ಸ್ವಚ್ಛವಾದ ಕಥೆ
Monday, October 18, 2021
Edit
ಅದೊಂದು ಊರು.... ಸುತ್ತಲೂ ಹಚ್ಚ ಹಸಿರು ಸೆರಗು ಹಾಸಿದ ಪ್ರಕೃತಿ ಮಾತೆ ತಂಗಾಳಿಯ ಮೂಲಕ ತಂಪಾಗಿರಿಸಿತ್ತು. ಊರಕೇರಿಯಲ್ಲಿ ಹಲವಾರು ಮನೆಗಳಲ್ಲಿ ಆ ಮೂರು ಮನೆಯೂ ಸೇರಿತ್ತು...ರಾಜಶೇಖರ, ರಹಿಂ ಖಾನ್ , ರಾಯಲ್ ಡಿಸೋಜ. ಮೂರು ಮಕ್ಕಳು ಆ ಮನೆಗಳ ಬೆಳಕುಗಳು.... ಬೆಳಗಾದೊಡನೆ ಹಾಲಿಗಾಗಿ ದೂರದ ಡೈರಿಗೆ ನಡೆದುಕೊಂಡು ಹೋಗುವ ಹವ್ಯಾಸ ಮೂರೂ ಮಕ್ಕಳದ್ದು. ದಾರಿಯುದ್ದಕ್ಕೂ ಮಕ್ಕಳ ಮಾತುಗಳಿಗೆ ಸುತ್ತಲ ಮರಗಿಡಗಳು ಕಿವಿಯಾಗುತ್ತಿದ್ದವು. ಪ್ರತೀ ನಿತ್ಯ ದಾರಿಯಲ್ಲಿ ಹೋಗುವಾಗ ಮೂರೂ ಮಕ್ಕಳು ಆಗಾಗ ಕಪ್ಪೆಯಂತೆ ಕುಪ್ಪಳಿಸುತ್ತಾ ಕೈಗಳಿಂದ ಮೂಗು ಮುಚ್ಚುತ್ತಾ ಮುಂದೆ ಸಾಗುತ್ತಿದ್ದರು... ಕಾರಣ ದಾರಿಯುದ್ದಕ್ಕೂ ಊರ ಪರವೂರ ಮಹನೀಯರು ಎಸೆದಿದ್ದ ಅವರ ಮನೆಯ ತ್ಯಾಜ್ಯ ತುಂಬಿದ ಪ್ಲಾಸ್ಟಿಕ್ ಚೀಲಗಳು..... ನಾಯಿಗಳು ಎಳೆದಾಡಿ ಕಪ್ಪಗಿನ ಡಾಂಬರ್ ಮೇಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಹರಡಿರುತ್ತಿತ್ತು..... ದಿನಂಪ್ರತಿ ಸಾಗುವಾಗ ಪ್ರಜ್ಞಾವಂತ ಮಕ್ಕಳ ಮನದಲ್ಲಿ .... ಕಸ ಬಿಸಾಡುವವರು ಯಾರು ?!!! ಯಾಕೆ ?!!! ಎಸೆಯುತ್ತಾರೆ...? ಇಲ್ಲೆಲ್ಲಾ... ಮನೆಯಲ್ಲಿ ಜಾಗವಿಲ್ಲವೆ ?!!.... ಎಂಬ ನೂರಾರು ಯೋಚನೆಗಳು... ಯೋಚನೆಗಳಿಗೆ ಮಾತಿನ ರೂಪ ನೀಡಲು ನಿರ್ಧರಿಸಿದ್ದೇ.... ತಮ್ಮೂರಿನ ದೇವಸ್ಥಾನ, ಮಸೀದಿ, ಚರ್ಚ್ ಗಳ ಹಿರಿಯರಿಗೆ, ಯುವ ಜನರಿಗೆ ವಿಷಯ ತಿಳಿಸಿದರು... ದಾರಿಯಲ್ಲಿ ನಡೆಯಲು ಆಗುತ್ತಿಲ್ಲ....! ಗಬ್ಬು ವಾಸನೆ...!! ಸೊಳ್ಳೆ ನೊಣಗಳು ಗುಂಯ್ ಗುಡುತ್ತಿದೆ ಎಂದರು...!!
ಹೌದಲ್ಲ...!! ಎಂಬ ಯೋಚನೆ ಬಂದದ್ದೇ ತಡ ಊರ ಹಿರಿಯರು ಯುವಜನರು ಒಂದಾಗಿ ಜನಪ್ರತಿನಿಧಿಗಳಲ್ಲಿ ಮಾತಾಡಿ ಪಂಚಾಯತ್ ವತಿಯಿಂದ ಗಲ್ಲಿ ಗಲ್ಲಿಯಲ್ಲಿ ಕಸದ ತೊಟ್ಟಿ ಇಡಿಸಿದರು. ಊರ ಜನರಿಗೆ ಪಂಚಾಯತ್... ದೇವಸ್ಥಾನ... ಮಸೀದಿ.... ಚರ್ಚುಗಳ ಮೂಲಕ ಹಸಿ ಕಸ, ಒಣ ಕಸ , ಬೇರೆಬೇರೆ ಮಾಡಿ ತೊಟ್ಟಿಗೆ ಹಾಕಲು ಮಾಹಿತಿ ನೀಡಿದರು. ಪ್ರಜ್ಞಾವಂತ ಊರಿನ ಜನರು ಅದರಂತೆ ಪಾಲಿಸಿದರು. ಕಸದತೊಟ್ಟಿ ಯಾವುದೇ ನಾಯಿ ದನಕರುಗಳಿಗೆ ಎಟಕುತ್ತಿರಲಿಲ್ಲ. ಹಸಿ ಕಸ ಒಣ ಕಸ ಅಲ್ಲಿಯೇ ಗೊಬ್ಬರವಾಗುವ ಹಾಗೆ ವ್ಯವಸ್ಥೆ ಮಾಡಿದ್ದರು. ಪ್ಲಾಸ್ಟಿಕ್ ಗಳು ಪರಿಸರ ಮಾಲಿನ್ಯ ಆಗದಂತೆ ತೊಟ್ಟಿಯೊಳಗೇ ವಿದ್ಯುತ್ ಮೂಲಕ ಕರಗಿಸಿ ದೊಡ್ಡ ದೊಡ್ಡ ಮುದ್ದೆಗಳಾಗಿ ಮರುಬಳಕೆಗೆ ಯೋಗ್ಯವಾದವು....!
ಪ್ರೀತಿಯ ಜಗಲಿ ಮಕ್ಕಳೇ ಆ ಊರು ಸ್ವಚ್ಛ ವಾಯಿತು. ಮೂರು ಮಕ್ಕಳ ಅದ್ಭುತ ಯೋಚನೆಗೆ ಸಹಕಾರವಿತ್ತವರು ಊರ ಹಿರಿಯರು ಯುವ ಜನರು.... ಯಶಸ್ಸಿಗೆ ಕಾರಣವಾದದ್ದು ಜನಪ್ರತಿನಿಧಿಗಳು , ಅವರೂರಿನ ಪಂಚಾಯತ್..... ಹೌದು ! ಮಕ್ಕಳೇ ನೀವೆಲ್ಲರೂ ನಿಮ್ಮ ಊರಿನ ರಾಜಶೇಖರ... ರಹಿಂ ಖಾನ್... ರಾಯಲ್ ಡಿಸೋಜ.... ನಿಮ್ಮ ಊರು ನಿಮ್ಮ ಕೈಯಲ್ಲಿದೆ..... ಮನಸ್ಸು ಮಾಡೋಣ ನಮ್ಮ ಊರ ಸ್ವಚ್ಛತೆ ನಮ್ಮಿಂದಲೇ ಆರಂಭವಾಗಲಿ..... ಯೋಚನೆ ಯೋಜನೆಯಾಗಿ ಹೊರಹೊಮ್ಮಲಿ...
..............................................ತುಳಸಿ ಕೈರಂಗಳ
ಸಹಶಿಕ್ಷಕಿ
ಸರಕಾರಿ ಪ್ರೌಢಶಾಲೆ ನಾರ್ಶ ಮೈದಾನ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************