-->
ಗಾಂಧೀಜಿಯವರ ಚಿಂತನೆಗಳು

ಗಾಂಧೀಜಿಯವರ ಚಿಂತನೆಗಳು

      
                   ಗಾಂಧೀಜಿಯವರ ಚಿಂತನೆಗಳು
ಮಕ್ಕಳೇ.... 
         ನಮ್ಮೆಲ್ಲರ ಪ್ರೀತಿಯ ಬಾಪೂಜಿ... ಇವರನ್ನು ರಾಷ್ಟ್ರಪಿತ , ಮಹಾತ್ಮ ಗಾಂಧೀಜಿ ಅಂತಲೂ ಕರೆಯುತ್ತೇವೆ. ನಿಮಗೆಲ್ಲಾ ಗೊತ್ತೇ ಇದೆ ಇವರ ಪೂರ್ತಿ ಹೆಸರು ಮೋಹನದಾಸ ಕರಮಚಂದ ಗಾಂಧಿ. ಇವರು ಹುಟ್ಟಿದ್ದು 1869 ಅಕ್ಟೋಬರ್ 2. 152 ವರ್ಷಗಳ ಹಿಂದೆ ಗುಜರಾತ್ ನ ಪೋರಬಂದರ್ ಎಂಬ ಊರಿನಲ್ಲಿ. ಹಾಗಾಗಿ ಅಕ್ಟೋಬರ್ - 2 ಇಂದಿನ ದಿನವನ್ನು ನಾವೆಲ್ಲಾ ಗಾಂಧಿ ಜಯಂತಿ ಎಂಬುದಾಗಿ ಆಚರಿಸುತ್ತೇವೆ.
         ಗಾಂಧೀಜಿ ಭಾರತೀಯರಿಗೆ ಮಾತ್ರವಲ್ಲ ಇಡೀ ವಿಶ್ವಕ್ಕೆ ಮಾರ್ಗದರ್ಶಕರು. ತನ್ನ ಅಹಿಂಸಾ ತತ್ವದ ಮೂಲಕ ನಮಗೆ ಬ್ರಿಟಿಷರಿಂದ ಸ್ವಾತಂತ್ರ್ಯವನ್ನು ದೊರಕಿಸಿಕೊಟ್ಟ ಮಹಾನ್ ವ್ಯಕ್ತಿ. ಯಾವುದೇ ಆಯುಧಗಳಿಲ್ಲದೆ ರಕ್ತಪಾತವಿಲ್ಲದೆ ಹೋರಾಟ ಮಾಡಬಹುದೆನ್ನುವ ಕಲ್ಪನೆಯನ್ನು ಇಡೀ ವಿಶ್ವಕ್ಕೆ ನೀಡಿದ ಮಾನವತಾವಾದಿ.
         ಮಹಾತ್ಮ ಗಾಂಧೀಜಿ - ಪ್ರತಿಯೊಬ್ಬರಿಗೂ ಸ್ಪೂರ್ತಿಯ ಚಿಲುಮೆ. ದೇಶವು ಪ್ರಗತಿ ಹೊಂದಲು ಶಿಕ್ಷಣವೇ ಮುಖ್ಯ ಆಧಾರ.... ಎಲ್ಲರ ಗುರಿ ಮತ್ತು ಮಾರ್ಗ ಎರಡೂ ಸಾಧು ಮತ್ತು ಶ್ರೇಷ್ಠ ಆಗಿರಬೇಕು ಎಂದು ಹೇಳಿದವರು. ಮಕ್ಕಳಿಗೆ ತಮ್ಮ ಸುತ್ತಮುತ್ತಲೂ ಇರುವ ಒಂದು ಮೂಲ ಉದ್ಯೋಗದ ಮೂಲಕ , ಮಾತೃಭಾಷೆಯ ಮಾಧ್ಯಮದಿಂದ ಶಿಕ್ಷಣ ವಾಗಬೇಕೆಂದು ಬಯಸಿದರು. ಸ್ವತಂತ್ರವಾದ ಸಂತಸ ವಾತಾವಣದಲ್ಲಿ ವಿವಿಧ ಸಂಗತಿಗಳ ಜ್ಞಾನ ದೊರತೆರೆ ಮಕ್ಕಳಲ್ಲಿ ಸ್ವಾಭಿಮಾನ , ಸೇವಾ ಬುದ್ದಿ , ಸ್ವಾವಲಂಬನೆ ಮೊದಲಾದ ಪೋಷಕವಾದ ಸದ್ಗುಣಗಳು ಒಡಮೂಡಿ ಅದರ ಪರಿಣಾಮವಾಗಿ ಪ್ರಪಂಚವೇ ಒಂದು ಶಾಂತಿಧಾಮ ಆಗಬಹುದೆಂದು , ಶಿಕ್ಷಣದ ಬಗೆಗೆ... ಮಕ್ಕಳ ಭವ್ಯ ಭವಿಷ್ಯದ ಕನಸು ಕಂಡವರು ನಮ್ಮ ಬಾಪೂಜಿ ....
       ಗಾಂಧೀಜಿ ಇನ್ನೊಬ್ಬರ ಭಾವನೆಗಳಿಗೆ ತುಂಬಾ ಬೆಲೆ ಕೊಡುವವರು. ತನ್ನ ತಂದೆ ತಾಯಿಗಳಿಗೆ ತುಂಬಾ ಗೌರವ ಕೊಡುತ್ತಿದ್ದರು. ಸತ್ಯವನ್ನೇ ನುಡಿಯಬೇಕೆಂದು ಅರಿತವರು. ಇವರ ಈ ಮೂಲ ತತ್ವಗಳಿಗೆ ಪ್ರೇರಣೆಯಾದದ್ದು ಭಾರತೀಯ ಪೌರಾಣಿಕ ಕಥೆಗಳು. ಶ್ರವಣನ ಪಿತೃ ಭಕ್ತಿಯ ಕಥೆಗಳು ಮತ್ತು ಹರಿಶ್ಚಂದ್ರ ಮಹಾರಾಜರ ಸತ್ಯವನ್ನು ಪ್ರತಿಬಿಂಬಿಸುವ ಕಥೆಗಳು , ಗಾಂಧೀಜಿಯವರ ಮೇಲೆ ತುಂಬಾ ಪ್ರಭಾವ ಬೀರಿದ್ದವು. 
       ಗಾಂಧೀಜಿ ಜನರಿಗೆ ಸ್ವಾತಂತ್ರ್ಯದ ಕಲ್ಪನೆ ಮಾತ್ರವಲ್ಲ ಸಾಮಾಜಿಕ ಸುಧಾರಣೆಯ ಆಶಾವಾದವನ್ನು ನೀಡಿದವರು. ಸರಳ ಜೀವನ ವನ್ನು ಅನುಸರಿಸಿ ಮತ್ತು ಸದ್ವಿಚಾರಗಳನ್ನು ತಿಳಿದುಕೊಂಡು ಎಲ್ಲರೂ ಮಹಾನ್ ವ್ಯಕ್ತಿಗಳಾಗಬೇಕೆಂದು ತಿಳಿಸಿದವರು. ಮೌಡ್ಯ ಆಚಾರಗಳನ್ನು ವಿರೋಧಿಸುತ್ತಾ ಬಂದು , ಒಳಿತನ್ನು ಅನುಭವಿಸಿ , ಅಂಧಕಾರವನ್ನು ತೊಡೆದುಹಾಕಿ ಎನ್ನುವ ನಿಲುವನ್ನು ನೀಡಿದರು.
ಸ್ತ್ರೀಶಕ್ತಿ ಭಯ ಮುಕ್ತವಾಗಬೇಕೆಂದು ವಾದಿಸಿದವರು. ಸಮಾಜ ವಿಧಿಸಿರುವ ಬಂಧನದಿಂದ ಹೊರಬಂದು ಅಗಾಧ ಶಕ್ತಿಯ ಬೆಳಕಿಗೆ ಪ್ರೇರಣೆಯಾದರು. 
       ಮಕ್ಕಳೇ.... ಇಂದು ನಮ್ಮ ದೇಶದ ಮಹಾಚೇತನ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನವೂ ಹೌದು. ಶಾಸ್ತ್ರೀಜಿಯವರು ನಮ್ಮ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಅವರ ಪ್ರಾಮಾಣಿಕ ಮತ್ತು ಸರಳ ಜೀವನ ನಮಗೆಲ್ಲಾ ಆದರ್ಶವಾಗಿದೆ. ನಿಮ್ಮ ಶಾಲಾ ಲೈಬ್ರರಿಗಳಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ಮತ್ತು ಗಾಂಧೀಜಿಯವರ ಕುರಿತು ಪುಸ್ತಕಗಳು ಇರುತ್ತವೆ. ಅದನ್ನು ಓದುವ ಪ್ರಯತ್ನ ಮಾಡೋಣ.
      ನಾವು ಗಾಂಧೀಜಿಯವರನ್ನು ಜೀವಂತವಾಗಿ ನೋಡದೆ ಇರಬಹುದು. ಆದರೆ ನಡೆ ಮತ್ತು ನುಡಿಗಳಲ್ಲಿ ಆದರ್ಶರಾದ ಬಾಪೂಜಿಯವರ ತತ್ವ ಮತ್ತು ಸಂದೇಶಗಳು ಎಲ್ಲರಿಗೂ ದಾರಿ ದೀಪ. ಗಾಂಧೀಜಿಯವರ ಚಿಂತನೆಗಳು ಹೊಸ ಬದುಕನ್ನು ಕಟ್ಟಿಕೊಳ್ಳುವ , ಹೊಸ ದಿಕ್ಕಿನತ್ತ ಸಾಗುವ ನಮಗೆಲ್ಲಾ ಪ್ರೇರಣೆಯಾಗಿದೆ.
............................................ಮಲ್ಲೇಸ್ವಾಮಿ
ಉಪನಿರ್ದೇಶಕರು
ಸಾರ್ವಜನಿಕ ಶಿಕ್ಷಣ ಇಲಾಖೆ (ಆಡಳಿತ)
ದಕ್ಷಿಣ ಕನ್ನಡ ಜಿಲ್ಲೆ
*********************************************       
    
      

Ads on article

Advertise in articles 1

advertising articles 2

Advertise under the article