-->
ಪದಗಳ ಆಟ ಭಾವ ಚಿತ್ರ ಪಾತ್ರ     ಸಂಚಿಕೆ - 12

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 12

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 12

          ದೇಶಡೆಲ್ಲೆಡೆ ಸಂತ ನೆಲ ಬೇಡಿದ
   ವಿನೋದಕ್ಕೂ ಯಾರೂ ನೋ ಅಂದಿಲ್ಲಾ.. ಬಾ..        
      ಅಂದ ಬಡವಗೆ ವೆಚ್ಚವಿಲ್ಲದೆ ಹಂಚಿದ.
                ಮಾನವ ಜೀವನ ಮರಗಳ ಹಾಗೆ
      ಮಣ್ಣಿನ ಸಂಬಂಧ ಕಡಿದರೆ ಜೀವಿಸಲಾರರು. 
                 Learn through work
                 Think through work 
      ಮುತ್ತಿನಂತಹ ಮಾತುಗಳು ! ಇವು ಮಣ್ಣಿನ ಮಗನಾಗಿ ದುಡಿದ ಭಾರತಿಸುತನದು. ಭಾಷಣದ ಸೊಲ್ಲಲ್ಲವಿದು.
           ಕೈಕೆಸರು ಮಾಡಿ ದಲಿತರಿಗೆಲ್ಲಾ ಮೊಸರು ಹಂಚಿದವರ ಹೃದಯದ ದನಿ ಇದು. ಲಕ್ಷ ಲಕ್ಷ ಮಂದಿಗೆ ನೆಲೆಕೊಟ್ಟು , ಅವರ ಜೀವನಕ್ಕೆ ಬೆಲೆ ಬರುವ ಹಾಗೆ ಮಾಡಿದ, ಸಮಪಾಲು - ಸಮಬಾಳು ಎಂಬ ತತ್ವವನ್ನು ನಿಜಾರ್ಥದಲ್ಲಿ ಅನುಷ್ಠಾನಕ್ಕೆ ತಂದ ನೇಗಿಲಯೋಗಿ , ತತ್ವ ಅನುಸಂಧಾನದಲ್ಲಿ ಅಪ್ಪಟ ಗಾಂಧಿವಾದಿ , ಬೋಧನೆಗೆ ತೊಡಗಿದರೆ ಶ್ರೇಷ್ಠ ಆಚಾರ್ಯ.
       ಗಾಂಧಿಯೇ ಹೇಳುವಹಾಗೆ ಗಾಂಧಿಯ ಕನಸನ್ನು ನನಸು ಮಾಡಹೊರಟವರಲ್ಲಿ ಮೊದಲಿಗರು. ಪ್ರಥಮ ಸ್ವತಂತ್ರ ಸ್ವಾತಂತ್ರ್ಯ ಸೇನಾನಿ , ಪ್ರಥಮ ಸತ್ಯಾಗ್ರಹಿ ಅಂತ ಗಾಂಧಿಯಿಂದಲೇ ಗುರುತಿಸಲ್ಪಟ್ಟವರು. ಅವರೇ ವಿನಾಯಕ ನರಹರಿಯವರು. 
        ವಿನಾಯಕ ಪ್ರೌಢ ಶಿಕ್ಷಣದ ನಂತರ ಪರೀಕ್ಷೆ ಬರೆಯಲು ಮುಂಬಯಿಗೆ ಹೋದರು. ಆ ಸಂದರ್ಭ ಮಹಾತ್ಮ ಗಾಂಧಿ ಬರೆದ ಒಂದು ಲೇಖನವನ್ನು ಓದಿ ಪ್ರಭಾವಿತರಾಗಿ ಸರ್ಟಿಫಿಕೇಟ್ ಶಿಕ್ಷಣ ಅಗತ್ಯವಿಲ್ಲವೆಂದು ಮನಗಂಡು ಪುಸ್ತಕಗಳನ್ನೆಲ್ಲ ಬೆಂಕಿಗೆ ಹಾಕಿದರು. ಚಿಕ್ಕ ವಯಸ್ಸಿನಲ್ಲೇ ದೊಡ್ಡ ಧೈರ್ಯ ಮಾಡುವುದು ಮಹಾಪುರುಷರಿಗೆ ಮಾತ್ರ ಸಾಧ್ಯ. ಆದರೆ ಜೀವನವೆಂಬ ವಿಶ್ವವಿದ್ಯಾನಿಲಯದಲ್ಲಿ ಇವರು ಕಲಿತದ್ದು ಅಪಾರ. ಕನ್ನಡ ಗುಜರಾತಿ, ಮರಾಠಿ, ಹಿಂದಿ, ಇಂಗ್ಲಿಷ್, ಉರ್ದು, ಸಂಸ್ಕೃತ ಮಾತಾಡಬಲ್ಲ ಬಹುಭಾಷಾ ಕೋವಿದರಾಗಿದ್ದರು. ಉಪನಿಷತ್ತುಗಳ ಬಗ್ಗೆ ದೃಷ್ಟಾಂತ ಸಹಿತ ಲೇಖನಗಳನ್ನು ಬರೆಯಬಲ್ಲ ಜ್ಞಾನವಿದ್ದ ಸುಜ್ಞಾನಿ. ತನ್ನ ತಾಯಿಯಿಂದಲೇ ಭಗವದ್ಗೀತೆ ಬಗ್ಗೆ ಒಲವು ಬೆಳೆಸಿಕೊಂಡ ಅವರು ಗೀತೆಯ ಸಾರದ ಬಗ್ಗೆ ಚಿಂತನ - ಮಂಥನ ನಡೆಸಿ ಗೀತಾರಹಸ್ಯ - ಸ್ವಾರಸ್ಯದ ಬಗ್ಗೆ ತಾಸುಗಟ್ಟಲೆ ಪ್ರವಚನ ನೀಡಬಲ್ಲ ಪಂಡಿತವರೇಣ್ಯರಾಗಿದ್ದರು. ತಾನು ಮಾತನಾಡಿದ್ದನ್ನು ಕೂಡಲೇ ಹಾಳೆಗಿಳಿಸಿ ಮಹಾಗ್ರಂಥಗಳನ್ನು ಬರೆದು ಹಾಕಿದರು. ಸೆರೆಮನೆ ವಾಸದಲ್ಲಿ ಸರಸ್ವತಿಯನ್ನು ಬಿಟ್ಟಿರಲಿಲ್ಲ. ಸಹ ಖೈದಿಗಳಿಗೆ ಗೀತೆ, ಉಪನಿಷತ್ತು, ಸಮಾಜ ಸುಧಾರಣೆ ಬಗ್ಗೆ ಮಾತನಾಡುವುದು, ಅವನ್ನೇ ಪುಸ್ತಕ ಮಾಡುವುದು - ಈ ಜ್ಞಾನಯಜ್ಞ ನಿರಂತರವಾಗಿ ನಡೆಯುತ್ತಿತ್ತು.
         ಗಾಂಧಿ ತತ್ವಗಳನ್ನು ಅಕ್ಷರಶ: ಚಾಚೂತಪ್ಪದೆ ಕಾಯೇನ ವಾಚಾ ಮನಸಾ ಒಪ್ಪಿ ನಡೆದ ವಿನಾಯಕರು ಅಹಿಂಸೆಯ ಪ್ರಬಲ ಪ್ರತಿಪಾದಕರು. ಇವರು ನಂಬಿದ ಅಹಿಂಸೆಗೆ ಎಷ್ಟು ಬದ್ಧರಾಗಿದ್ದರೆಂದರೆ ಚಂಬಲ್ ನ ಡಕಾಯಿತರ ನಡುವೆ ನಿರಾಯುಧರಾಗಿ ಧೈರ್ಯ ವೆಂಬ ಬತ್ತಳಿಕೆಯಲ್ಲಿ, ಇಷುಧಿಯಲ್ಲಿ ಅಹಿಂಸೆ ಎಂಬ ಅಸ್ತ್ರವನ್ನು ಧರಿಸಿಕೊಂಡು ಹೋದರು. ಅದೇ 
ಧೀ ಶಕ್ತಿಯೆದುರು ಡಕಾಯಿತರು ಶರಣಾದರು. ಅಹಿಂಸೆಗೆ ಶಿರಬಾಗಿದರು. ಎಂತಹ ಹೃದಯಂಗಮ ದೃಶ್ಯ ! ಕಟಿಬದ್ದತೆ ಎಂದರೆ , ದೀಕ್ಷೆ ಎಂದರೆ ಇದೇ ಅಲ್ಲವೇ....? ಇದೇ ಅಹಿಂಸಾ ಪರಮೋಧರ್ಮ ಎಂಬ ನಿಲುವಿನೊಂದಿಗೆ ಬ್ರಿಟಿಷರ ವಿರುದ್ಧ ನಡೆದುಕೊಂಡರು. ಅದಕ್ಕಾಗಿ ಅನೇಕ ಸಲ ಜೈಲಿಗೆ ಹೋದರು. ಸರಳುಗಳ ಹಿಂದೆ ಇದ್ದರೂ ಬೆರಳುಗಳಿಗೆ ಬರೆಹದ ಕಾಯಕವನ್ನು ಮರಳಿಮರಳಿ ಕೊಟ್ಟ ಚಿಂತಕ ದೇಶಕ್ಕಾಗಿಯೇ ಚಿಂತಿಸಿದರು. ಈಶಾವಾಸ್ಯ ವೃತ್ತಿ , ಸ್ಥಿತಪ್ರಜ್ಞ ದರ್ಶನ ಸೆರೆಯಿಂದ ಹೊರಹೊಮ್ಮಿದ ಇವರ ಶ್ರೇಷ್ಠ ಕೃತಿಗಳು.
           ಗಾಂಧಿಯ ವಿಶ್ವಾಸಕ್ಕೆ ಪಾತ್ರರಾದ ವಿನಾಯಕರಿಗೆ ಗಾಂಧಿಯಿಂದಲೇ ಮಹತ್ತರವಾದ ಜವಾಬ್ದಾರಿಗಳು ಸುವರ್ಣ ಅವಕಾಶಗಳಂತೆ ಒದಗಿಬಂದವು. ವಾರ್ಧ ಆಶ್ರಮದ ಹೊಣೆ ಇವರ ಹೆಗಲಿಗೆ ಬಂತು. ಸೇವಾ ಗ್ರಾಮದ ಆಶ್ರಮದಲ್ಲಿ ಕುಟೀರ ನಿವಾಸಿಯಾಗಿ ಮೂಲ ಶಿಕ್ಷಣವನ್ನು ಕೊಡಲಾರಂಭಿಸಿದರು. ಮೂಲ ಶಿಕ್ಷಣವು ಒಂದು ಸಮಗ್ರ ಶೈಕ್ಷಣಿಕ ಪರಿಕಲ್ಪನೆಯಾಗಿ ಹೊರಬರುವಲ್ಲಿ ಮಹತ್ತರ ಪಾತ್ರ ವಹಿಸಿ ಶ್ರೇಷ್ಠ ಗುರು , ಆಚಾರ್ಯ ಎಂದು ಕರೆಸಿಕೊಂಡರು.
          ಭಾರತದ ಕೇಂದ್ರ ಹಳ್ಳಿ , ಹಳ್ಳಿಗಳ ಉದ್ಧಾರದಿಂದ ಮಾತ್ರ ದೇಶದ ಉದ್ದಾರ ಎಂದು ಮನಗಂಡು ಗುಡಿಕೈಗಾರಿಕೆ , ಖಾದಿ ಉತ್ಪನ್ನಗಳಿಗೆ ಪ್ರಾಶಸ್ತ್ಯ ನೀಡಿದರು. ತಾನು ಚರಕದಲ್ಲಿ ನೂಲತೊಡಗಿದರು ಖಾದಿಯನ್ನು ಧರಿಸಿ ಸಂಭ್ರಮಿಸಿದರು. ಸರ್ವರ ಏಳಿಗೆ , ಸರ್ವೋದಯ, ಅದರಿಂದ ಗ್ರಾಮಸ್ವರಾಜ್ಯ, ಮತ್ತೆ ರಾಮರಾಜ್ಯ - ಈ ಎಲ್ಲಾ ಗಾಂಧಿ ಪರಿಕಲ್ಪನೆಗಳನ್ನು ಸಾಕಾರಗೊಳಿಸಿದ ಮೂರ್ತಿ ಸಂಸಾರಕ್ಕಿಳಿಯದೆ ಬ್ರಹ್ಮಚರ್ಯವನ್ನು ಪಾಲಿಸುತ್ತಾ ದೇಶವೇ ನನ್ನ ಸಂಸಾರ ಎಂಬಂತೆ ನಡೆದುಕೊಂಡರು. ಸರ್ವಧರ್ಮಗಳ ಸತ್ಯ - ಓಂ ತತ್ಸತ್, ಜಯ ಜಗತ್ ಇವು ಅವರ ನಿತ್ಯಾನುಸಂಧಾನವಾಗಿತ್ತು. ಹರಿಜನರಿಗಾಗಿ ಬಹಳ ಕೆಲಸ ಮಾಡಿದರು. ಕೇರಳದ ಹರಿಜನ ಚಳವಳಿಗೆ ಗಾಂಧಿ ಇವರನ್ನೇ ಕಳುಹಿಸಿದರು. ದಲಿತರಿಗಾಗಿ ಉಳ್ಳವರಿಂದ ಭೂಮಿ ಪಡೆದು ದಾನ ಮಾಡಿದರು. ಈ ಚಳವಳಿಯನ್ನು ಎಂಬತ್ತು ಎಕರೆಯಿಂದ ಆರಂಭಿಸಿ ದೇಶದ ಉದ್ದಗಲಕ್ಕೆ 58741 ಕಿಲೋಮೀಟರ್ ನಡೆದು 4.45 ಮಿಲಿಯ ಎಕರೆಯಷ್ಟು ಜಾಗವನ್ನು ಒಟ್ಟುಮಾಡಿ ದೀನ - ದಲಿತರಿಗೆ ದಾನ ಮಾಡಿದ್ದು ಒಂದು ಚಾರಿತ್ರಿಕ ವಿಶ್ವದಾಖಲೆ. ಹೀಗಾಗಿಯೇ ಪ್ರಜಾಪ್ರಭುತ್ವ , ಜನಶಕ್ತಿ ದೊಡ್ಡದು , ಹಿರಿದು ಎಂದು ನಂಬಿದರು. ಜನ ಸುವರ್ಣ ಪಾಶಕ್ಕೆ ಸಿಲುಕದಿರಲು ಕಾಂಚನ ಮುಕ್ತಿ ಚಳವಳಿ ನಡೆಸಿದರು. ಎತ್ತುಗಳನ್ನು ಉಳಲು ಬಳಸದಿರುವಂತೆ ಋಷಿ ಕೇತಿ ಚಳವಳಿ ಆರಂಭಿಸಿದರು. ನಿಸ್ವಾರ್ಥವಾಗಿ ತನ್ನ ಇಡೀ ಬದುಕನ್ನು ಪರೋಪಕಾರಾರ್ಥಂ ಇದಂ ಶರೀರಂ ಎಂಬಂತೆ ದೇಶಕ್ಕಾಗಿ ಬಾಳಿದ, ಮುಡಿಪಾಗಿಟ್ಟ ವಿನಾಯಕರಿಗೆ ಮೊದಲ ರಾಮನ್ ಮ್ಯಾಗ್ಸೇಸೆ ಪ್ರಶಸ್ತಿ ಅರಸಿ ಬಂತು. ಭಾರತದ ಹೆಮ್ಮೆಯ ಪುತ್ರ ರತ್ನನಿಗೆ ಭಾರತರತ್ನದ ಮುಕುಟ ಅಲಂಕಾರವಾಯಿತು.
         ಜೈ ಭಾರತಿ ! ನಿನ್ನ ಪುತ್ರರತ್ನ ಚಿರಂಜೀವಿ, ಅಮರ, ಆಚಂದ್ರಾರ್ಕ ಕೀರ್ತಿವಂತ.
ಇಂಥವರು ನಿಮ್ಮೊಳಗಿಲ್ಲವೇ ...............?
...........................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*********************************************



Ads on article

Advertise in articles 1

advertising articles 2

Advertise under the article