-->
ಜೀವನ ಸಂಭ್ರಮ - 8

ಜೀವನ ಸಂಭ್ರಮ - 8                        ಪಂಚಲಿಂಗ 
     ಒಂದು ಊರಿನಲ್ಲಿ ಒಂದು ಸರ್ಕಾರಿ ಪ್ರೌಢಶಾಲೆ ಇತ್ತು. ಆ ಶಾಲೆಗೆ ಪಂಚಲಿಂಗ (ಹೆಸರು ಬದಲಾಯಿಸಲಾಗಿದೆ) ಎಂಬ ವಿದ್ಯಾರ್ಥಿ 8ನೇ ತರಗತಿಗೆ ಸೇರಿದನು. ಈತ ಅಂದಿನ ಏಳನೇ ತರಗತಿ ಪಬ್ಲಿಕ್ ಪರೀಕ್ಷೆಯಲ್ಲಿ ಶೇಕಡ 72 ಅಂಕ ಪಡೆದು ದಾಖಲಾಗಿದ್ದನು. ಶಾಲೆಗೆ ಹೊಸದಾಗಿ ಒಬ್ಬರು ಪ್ರೊಬೇಷನರಿ ಮುಖ್ಯಶಿಕ್ಷಕರು ಬಂದಿದ್ದರು. ಅವರು ಪ್ರತೀ ಪಿರಿಯಡ್ ಆದ ನಂತರ ವರಾಂಡದಲ್ಲಿ ಓಡಾಡುವುದು ವಾಡಿಕೆ. 8ನೇ ತರಗತಿ ಕನ್ನಡ ಶಿಕ್ಷಕರು ಮಕ್ಕಳಿಗೆ ಕನ್ನಡ ವರ್ಣಮಾಲೆಯನ್ನು ಜೋರಾಗಿ ಹೇಳುತ್ತಿದ್ದರು. ಇದರ ಅರ್ಥ 8ನೇ ತರಗತಿಗೆ ಬಂದಿರುವ ಮಕ್ಕಳ ಭಾಷಾ ಸಾಮರ್ಥ್ಯ ಮುಖ್ಯ ಶಿಕ್ಷಕರಿಗೆ ತಿಳಿಯಲಿ ಎಂದು. ಮುಖ್ಯಶಿಕ್ಷಕರು ಇದನ್ನು ಮೌನವಾಗಿ ಗಮನಿಸುತ್ತಿದ್ದರು. ಎರಡು ತಿಂಗಳಾಗಿರಬೇಕು ಪಂಚಲಿಂಗನನ್ನು ಕರೆದುಕೊಂಡು ಕನ್ನಡ ಶಿಕ್ಷಕರು ಮುಖ್ಯ ಶಿಕ್ಷಕರ ಕೊಠಡಿಗೆ ಬಂದರು. ಬಂದವರೇ ಸರ್ , ಇವನಿಗೆ ಕನ್ನಡ ಕಲಿಸಲು ನನ್ನ ಕೈಯಲ್ಲಿ ಆಗುವುದಿಲ್ಲ ಎಂದರು. ಮುಖ್ಯಶಿಕ್ಷಕರು ಪಂಚಲಿಂಗನನ್ನು ಪಕ್ಕಕ್ಕೆ ಕರೆದು ಒಂದು ಪೇಪರ್ ಮೇಲೆ ಗಣಪ ಎಂದು ಬರೆದು ಓದಲು ಹೇಳಿದರು. ಆತ 'ಅ' ನಿಂದ ಶುರುಮಾಡಿ 'ಗ' ವರೆಗೆ ಬಂದು 'ಗ' ಎಂದು ಹೇಳಿದ. ಪುನ 'ಅ' ನಿಂದ ಶುರುಮಾಡಿ 'ಣ' ವರೆಗೆ ಹೇಳಿ 'ಣ' ಎಂದ. ಆದರೆ ಆತನಿಗೆ 'ಗ' ಮರೆತುಹೋಗಿತ್ತು. ಪುನ 'ಅ' ನಿಂದ ಶುರುಮಾಡಿ 'ಪ' ವರೆಗೆ ಹೇಳಿ 'ಪ' ಎಂದ. ಹಿಂದೆ ಹೇಳಿದ 'ಗ ಣ' ಅಕ್ಷರಗಳು ಮರೆತುಹೋಗಿತ್ತು. 
          ನಂತರ ಸರಳ ಸಂಕಲನ, ವ್ಯವಕಲನ ನೀಡಿದರು. ಯಾವುದೂ ಆತನಿಗೆ ತಿಳಿಯುತ್ತಿರಲಿಲ್ಲ. ನಂತರ , "7ನೇ ತರಗತಿ ಹೇಗೆ ಪಾಸಾದೆ ..?" ಎಂದು ಮುಖ್ಯಶಿಕ್ಷಕರು ಪಂಚಲಿಂಗನನ್ನು ಪ್ರೀತಿಯಿಂದ ಕೇಳಿದರು. ಆತ ಮುಗ್ದ , ಯಾವುದನ್ನೂ ಮುಚ್ಚುತ್ತಿರಲಿಲ್ಲ. ಶಿಕ್ಷಕರು , ಪಕ್ಕದ ವಿದ್ಯಾರ್ಥಿ ಜೊತೆ ಕುಳ್ಳಿರಿಸಿ ಕಾಪಿ ಮಾಡಿಸಿದ್ದು ಮತ್ತು ಪಕ್ಕದ ವಿದ್ಯಾರ್ಥಿಯ ಕೈಯಲ್ಲಿ ಉತ್ತರ ಬರೆಸಿದ್ದನ್ನು ಹೇಳಿದ. 
          ಆದರೆ ಪಂಚಲಿಂಗನನ್ನು ಎಲ್ಲ ಶಿಕ್ಷಕರು ಇಷ್ಟಪಡುತ್ತಿದ್ದರು. ಕಲಿಕೆಯಲ್ಲಿ ಹಿಂದುಳಿದಿದ್ದರೂ, ಶಾಲೆಗೆ ಗೈರು ಹಾಜರಾದುದು ಕಡಿಮೆ. ದಿನಾ ಶಾಲೆಗೆ ಅರ್ಧ ಗಂಟೆ ಮುಂಚಿತವಾಗಿ ಬರುತ್ತಿದ್ದ. ಯಾರೊಂದಿಗೂ ಜಗಳವಾಡುವುದಾಗಲೀ, ವೈರತ್ವವಾಗಲಿ ಇರಲಿಲ್ಲ. ಕ್ರೀಡೆಯಲ್ಲಿ ಭಾಗವಹಿಸುತ್ತಿರಲಿಲ್ಲ , ಏಕಾಂಗಿಯಾಗಿರುತ್ತಿದ್ದ.   
        ಒಂದು ದಿನ ಮುಖ್ಯಶಿಕ್ಷಕರು ಪಂಚಲಿಂಗನ ತಂದೆಯನ್ನು ಬರಹೇಳಿ , ಮಗನ ಸ್ಥಿತಿಯನ್ನು ವಿವರಿಸಿದರು. ಆಗ ಪಂಚಲಿಂಗನ ತಂದೆ , " ಕಳೆದು ಎರಡು ತಿಂಗಳುಗಳಿಂದ ತಮ್ಮ ಶಾಲೆಯಲ್ಲಿ ನನ್ನ ಮಗನನ್ನು ಬಿಟ್ಟಿದ್ದೇನೆ. ಎರಡು ತಿಂಗಳಲ್ಲಿ ನನ್ನ ಮಗನಿಗೆ ಏನು ಕಲಿಸಿದಿರಿ..?" ಎಂದು ಪ್ರಶ್ನಿಸಿದ. ಈ ಪ್ರಶ್ನೆ ಕೇಳಿ ಮುಖ್ಯಶಿಕ್ಷಕರು ಎಲ್ಲಾ ಶಿಕ್ಷಕರನ್ನು ತನ್ನ ಕೊಠಡಿಗೆ ಕರೆಸಿ , ಆ ತಂದೆ ಕೇಳಿದ ಪ್ರಶ್ನೆ ಗೆ ಉತ್ತರಿಸುವಂತೆ ಹೇಳಿದರು. ಎಲ್ಲಾ ಶಿಕ್ಷಕರು ಮೌನವಾದರು. ಮುಖ್ಯ ಶಿಕ್ಷಕರು ಸಾವಧಾನವಾಗಿ ಆಲೋಚಿಸಿ , "ಯಜಮಾನ್ರೆ , ಇದುವರೆಗೆ ನಿಮ್ಮ ಮಗ ಏನು ಕಲಿತಿದ್ದಾನೆ ಎಂದು ತಿಳಿಸಿದ್ರೆ ನಾವು ಏನು ಕಲಿಸಿದ್ದೇವೆ ಎಂದು ಹೇಳುತ್ತೇವೆ" ಎಂದರು. ತಂದೆ ಮುಖ ಸಪ್ಪಗಾಯ್ತು. ವಿದ್ಯಾರ್ಥಿ ಪಂಚ ಲಿಂಗನನ್ನು ಕರೆಸಿ , ಅವನು ಹೇಗೆ ಏಳನೇ ತರಗತಿ ಪಾಸಾದ ಎಂಬುದನ್ನು ಅವನ ಬಾಯಿಂದಲೇ ಹೇಳಿಸಿದಾಗ , ಅವರ ತಂದೆ ಮರುಮಾತನಾಡದೆ ಮೌನವಾದರು. ಮುಖ್ಯಶಿಕ್ಷಕರು , "ಮಗ ಮನೆಯಲ್ಲಿ ಯಾವ ರೀತಿ ಚಟುವಟಿಕೆಯಲ್ಲಿ ಇರುತ್ತಾನೆ" ಎಂದು ಪ್ರಶ್ನಿಸಿದಾಗ , "ನಾನು ವ್ಯವಸಾಯಗಾರ ತರಕಾರಿ ಬೆಳೆಯುತ್ತೇನೆ. ರಜಾದಿನಗಳಲ್ಲಿ ಮಗನನ್ನು ವ್ಯಾಪಾರಕ್ಕೆ ಕಳಿಸುತ್ತೇನೆ. ವ್ಯಾಪಾರದಲ್ಲಿ ಒಂದು ರೂಪಾಯಿ ವ್ಯತ್ಯಾಸವಾಗದಂತೆ ವ್ಯವಹಾರ ಮಾಡುತ್ತಾನೆ ಎಂದರು. ಆಗ ಮುಖ್ಯಶಿಕ್ಷಕರು ಒಂದು ಲೆಕ್ಕವನ್ನು ನೀಡಿದರು 1 ಕೆಜಿ ಟಮೋಟ 5 ರೂನಂತೆ 9 ಕೆಜಿ ಮತ್ತು 1 ಕೆಜಿ ಬೀನ್ಸ್ 12 ರೂನಂತೆ 8 ಕೆಜಿ ಹಾಗೂ ಎಲೆಕೋಸು ಕೆಜಿಗೆ 6 ರೂನಂತೆ 10 ಕೆಜಿ ನೀಡಿದರೆ ಬರುವ ಹಣವೆಷ್ಟು ಎಂದಾಗ 2ನಿಮಿಷ ಮನಸ್ಸಿನಲ್ಲಿ ಲೆಕ್ಕಹಾಕಿ ರೂ 201ಎಂದು ಉತ್ತರಿಸಿದ. ಎಲ್ಲರಿಗೂ ಆಶ್ಚರ್ಯವಾಯಿತು.! ಅವನ ತಂದೆ , "ನೀವೇ ಅವನಿಗೆ ಏನಾದರೂ ದಾರಿ ತೋರಿಸಬೇಕು" ಎಂದು ಹೇಳಿ ಹೊರಟು ಹೋದರು. 
       ಆ ವರ್ಷ ಪಂಚಲಿಂಗ 8ನೇ ತರಗತಿಯಲ್ಲಿ ಫೇಲಾದ. ಆದರೂ ಕೂಡ ಶಾಲೆಯಲ್ಲಿ ಯಾವುದೇ ಬದಲಾವಣೆ ಇಲ್ಲದೆ ಬರುತ್ತಿದ್ದ. ಗೈರು ಹಾಜರಾತಿ ಇರಲಿಲ್ಲ .ಅದೇ ಮುಗ್ದತೆ , ಮತ್ತೆ ಯಾವ ಚಟುವಟಿಕೆಯಲ್ಲಿ ಭಾಗವಹಿಸುತ್ತಿರಲಿಲ್ಲ. ಕಲಿಕೆಯಲ್ಲಿ ಅದೇ ಸ್ಥಿತಿ. ಮರುವರ್ಷ ಫಲಿತಾಂಶ ಪ್ರಕಟಿಸಬೇಕು ಮುಖ್ಯಶಿಕ್ಷಕರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ತೀರ್ಮಾನಿಸಲಾಯಿತು. ಈ ವರ್ಷ ಪಂಚಲಿಂಗ ನನ್ನು ಉತ್ತೀರ್ಣ ಮಾಡುವುದೆಂದು ತೀರ್ಮಾನಿಸಿ ಉತ್ತೀರ್ಣಗೊಳಿಸಲಾಯಿತು. 9ನೇ ತರಗತಿಯಲ್ಲಿ ಯಾವುದೇ ಪ್ರಗತಿಯಾಗಲಿಲ್ಲ. ಆದರೆ ತಂದೆಗೆ ಎಸ್.ಎಸ್.ಎಲ್.ಸಿ. ಆಗಬೇಕೆಂಬ ಅಪೇಕ್ಷೆ. ಆದರೆ ಪಂಚಲಿಂಗ ನಲ್ಲಿ ಯಾವುದೇ ಸುಧಾರಣೆಯಾಗಲಿಲ್ಲ. ಒಂದು ದಿನ ಮುಖ್ಯಶಿಕ್ಷಕರು , "ನೋಡಿ ಯಜಮಾನರೇ, ನಿಮ್ಮ ಮಗನಿಗೆ ಹದಿನೈದು ವರ್ಷ ಆಗಿರುವುದರಿಂದ , ಪ್ರೈವೇಟ್ ಆಗಿ ಎಸ್.ಎಸ್.ಎಲ್.ಸಿ. ಕಟ್ಟಿಸಿ , ಅವನಿಗೆ ಇಷ್ಟವಾದ ಅಂಗಡಿ ಹಾಕಿ ಕೊಡಿ" ಎಂದು ಆತನ ತಂದೆಗೆ ಸಲಹೆ ಹೇಳಿದರು.  
        ನಂತರ ಮುಖ್ಯಶಿಕ್ಷಕರು ಬಿ ಆರ್ ಸಿ ಕಚೇರಿಗೆ ಸಮನ್ವಯಾಧಿಕಾರಿಯಾಗಿ ವರ್ಗಾವಣೆಗೊಂಡರು. ಎರಡು ವರ್ಷದ ನಂತರ, ಸಭೆಗೆ ಹಾಜರಾಗುವುದಕೋಸ್ಕರ ಸಮನ್ವಯಾಧಿಕಾರಿಗಳು ಜಿಲ್ಲಾಕೇಂದ್ರಕ್ಕೆ ಬಸ್ ನಲ್ಲಿ ಬಂದಿಳಿದರು. ಆ ಸಮಯದಲ್ಲಿ ಏನೋ ಕೆಲಸಕ್ಕೆ ಬಂದಿದ್ದ ಪಂಚಲಿಂಗ, ತನ್ನ ಗುರುಗಳನ್ನು ನೋಡಿ, ಸಂತೋಷದಿಂದ ಬಂದು ನಮಸ್ಕರಿಸಿ , ಮುಂದೆ ನಿಂತ. ಆಗವನ ವೇಷಭೂಷಣ ಬದಲಾಗಿತ್ತು. ಕನ್ನಡಕ ಧರಿಸಿದ್ದ. ಗುರುಗಳ ಬಳಿ, ಸರ್ ನಾನು ಪಂಚಲಿಂಗ ಎಂದು ಪರಿಚಯಿಸಿದ. ಗುರುಗಳಿಗೆ ನೆನಪಾಗಿ , "ಏನಪ್ಪಾ ಹೇಗಿದ್ದೀಯ" ಎಂದರು. ಸರ್ ತಮ್ಮ ಆಶೀರ್ವಾದದಿಂದ ಚೆನ್ನಾಗಿದ್ದೇನೆ, ಅಂಗಡಿ ಇದೆ , ತಾವು ನೋಡಲು ಬರಬೇಕು ಎಂದು ಬೇಡಿಕೊಂಡ. ಆಗ ಗುರುಗಳು ಸಭೆ ಇದೆ , ಮಧ್ಯಾಹ್ನ ಸಭೆ ಬೇಗ ಮುಗಿದರೆ ಬರುವುದಾಗಿ ಹೇಳಿದರು. ಅದೇ ಶಿಷ್ಯ ತನ್ನ ಕಾರಿನಲ್ಲಿ ಮಧ್ಯಾಹ್ನದವರೆಗೂ ಕಾದು, ಗುರುಗಳು ಸಭೆ ಮುಗಿಸಿ ಹೊರಬಂದಾಗ , ಪಂಚಲಿಂಗ ಗುರುಗಳನ್ನು ಕಂಡೊಡನೆ ತನ್ನ ಕಾರಿನಲ್ಲಿ ಊರಿನಲ್ಲಿರುವ ಅಂಗಡಿಗೆ ಕರೆದುಕೊಂಡು ಹೋದ. ಅಂಗಡಿ ದೊಡ್ಡದಾಗಿತ್ತು. ವಸ್ತುಗಳನ್ನು ಕ್ರಮಬದ್ಧವಾಗಿ ಜೋಡಿಸಿ , ಅಂದವಾಗಿ ಇಡಲಾಗಿತ್ತು. ಅಂಗಡಿ ನೋಡಿ ಗುರುಗಳಿಗೆ ಆಶ್ಚರ್ಯ, ಏನಪ್ಪಾ ಎಲ್ಲರೂ ನಿನ್ನನ್ನು ದಡ್ಡ ಅನ್ನುತ್ತಿದ್ದರು , ನೀನು ಜಾಣ ಎಂಬುದನ್ನು ತೋರಿಸಿದೆ, ವೆರಿಗುಡ್ ಎಂದರು. ನಂತರ ಅಂಗಡಿಯಲ್ಲಿದ್ದ ಜೂಸ್ ಕುಡಿಸಿ, ಬಾಳೆಹಣ್ಣುಗಳನ್ನು ನೀಡಿದ. ತನ್ನ ಕಾರಿನಲ್ಲಿ ಗುರುಗಳು ತಲುಪಬೇಕಾದ ಸ್ಥಳಕ್ಕೆ ಬಿಟ್ಟು ಬಂದನು .
        ಪಂಚಲಿಂಗ ಕನ್ನಡ , ಇಂಗ್ಲಿಷ್ , ಹಿಂದಿ , ಗಣಿತ , ವಿಜ್ಞಾನ ಮತ್ತು ಸಮಾಜದಲ್ಲಿ ಆಸಕ್ತಿ ಇರಲಿಲ್ಲ, ಹಾಗಾಗಿ ಎಲ್ಲರೂ ಆತನನ್ನು ದಡ್ಡ ಎಂದು ಭಾವಿಸಿದರು. ಆತ ದಡ್ಡನೆ....? ಇಲ್ಲ. ಏಕೆಂದರೆ ಈ ವಿಷಯದಲ್ಲಿ ಆತನಿಗೆ ಆಸಕ್ತಿ ಇರಲಿಲ್ಲ ಹಾಗಾಗಿ ಶಾಲಾ ವಿಷಯದಲ್ಲಿ ದಡ್ಡನಾಗಿದ್ದ. ಆದರೆ ಆತನಿಗೆ ವ್ಯಾಪಾರದಲ್ಲಿ ಆಸಕ್ತಿ ಇದ್ದುದರಿಂದ ವ್ಯಾಪಾರದಲ್ಲಿ ಬುದ್ಧಿವಂತನಾಗಿದ್ದ.
       ಮಕ್ಕಳೇ , ಗುರುಗಳು ಅಧಿಕಾರಿಯಾಗಿದ್ದರೂ , ಅವರ ಹತ್ತಿರ ಕಾರಿರಲಿಲ್ಲಿ. ಈ ಘಟನೆಯಿಂದ ಕಲಿಯಬೇಕಾದದ್ದು ಏನೆಂದರೆ ಇಂದಿನ ಕಾಲಘಟ್ಟದಲ್ಲಿ ಕಡಿಮೆ ಅಂಕ ಬಂದರೆ, ಫೇಲಾದರೆ , ತಮ್ಮ ಅಪೇಕ್ಷೆಗೆ ತಕ್ಕಂತೆ ಹುದ್ದೆ ದೊರಕದಿದ್ದರೆ ತಪ್ಪು ನಿರ್ಧಾರ ತೆಗೆದುಕೊಳ್ಳುವ ಮಕ್ಕಳಿಗೆ ಪಂಚಲಿಂಗ ಮಾರ್ಗದರ್ಶಿ ಅಲ್ಲವೇ...? ಎಲ್ಲದಕ್ಕೂ ಮಿಗಿಲಾಗಿ ಜೀವನವೇ ದೊಡ್ಡದು ಎನ್ನುವ ಸಂದೇಶ ಘಟನೆಯಿಂದ ತಿಳಿದುಬರುತ್ತದೆ
.............................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************Ads on article

Advertise in articles 1

advertising articles 2

Advertise under the article