-->
ಹಕ್ಕಿ ಕಥೆ - 18

ಹಕ್ಕಿ ಕಥೆ - 18

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                        ಹಕ್ಕಿ ಕಥೆ - 18
         ಗುಬ್ಬಚ್ಚಿ ಎಂಬ ಹಕ್ಕಿಯ ಹೆಸರು ಕೇಳದೇ ಇರುವವರು ಬಹಳ ಅಪರೂಪ. ನನ್ನ ಬಾಲ್ಯದ ದಿನಗಳಲ್ಲಿ ನಮ್ಮ ಮನೆಯ ಹತ್ತಿರ ಶೆಣೈ ಅಜ್ಜನ ದಿನಸಿ ಅಂಗಡಿ ಇರುತ್ತಿತ್ತು. ಅಲ್ಲಿಂದ ಏನಾದರೂ ವಸ್ತು ತರಲೆಂದು ನಾನು ಆಗಾಗ ಅಲ್ಲಿಗೆ ಹೋಗುತ್ತಿದ್ದೆ. ಅಜ್ಜ ವಸ್ತುಗಳನ್ನು ಕಟ್ಟುವ ಅಷ್ಟೂ ಹೊತ್ತು ನನ್ನ ಗಮನ ಇರುತ್ತಿದ್ದದ್ದು ಗುಬ್ಬಚ್ಚಿಗಳ ಮೇಲೆ. ಅಂಗಡಿಯಲ್ಲಿ ಬಿದ್ದಿರುವ ಅಕ್ಕಿ, ಕಾಳು ಮೊದಲಾದ ಆಹಾರ ಪದಾರ್ಥಗಳನ್ನು ತಿನ್ನುತ್ತಾ ಗೋಡೆಯ ಮೇಲಿನ ದೇವರ ಪೋಟೋದ ಹಿಂದಿದ್ದ ತನ್ನ ಗೂಡಿನಲ್ಲಿ ಮರಿಗಳಿಗೆ ಆಹಾರ ಕೊಡುತ್ತಾ ಓಡಾಡುತ್ತಿದ್ದರೆ ಅಂಗಡಿಗೊಂದು ಜೀವಕಳೆ. ಮುಂದೆ ನಾನು ಕಾಲೇಜು ಓದುವಾಗಲೂ ನಮ್ಮ ಕಾಲೇಜಿನ ಹಲವಾರು ಜಾಗಗಳಲ್ಲಿ ಗುಬ್ಬಚ್ಚಿಗಳು ಗೂಡು ಮಾಡುತ್ತಿದ್ದುದನ್ನು , ಓಡಾಡುತ್ತಿದ್ದುದನ್ನು ನಾವು ನೋಡುತ್ತಿದ್ದೆವು. ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಆಗ ನಮ್ಮ ಮೆಚ್ಚಿನ ಹಾಡು. ಹೀಗೇ ಕಾಲೇಜು ಮುಗಿಸಿ ನನ್ನ ವೃತ್ತಿಜೀವನ ಆರಂಭ ಮಾಡಿದ್ದು ಮಲೆನಾಡ ಮಡಿಲಿನ ಸಂಸೆ ಎಂಬ ಪುಟ್ಟ ಹಳ್ಳಿ. ಭತ್ತದ ಗದ್ದೆಗಳು ಸಾಮಾನ್ಯವಾಗಿ ಇರುತ್ತಿದ್ದ ಹಳ್ಳಿಯಲ್ಲೊಂದು ಅಂಗಡಿ, ಅದರ ಜಗಲಿಯೇ ನಮಗೆ ಬಸ್ ನಿಲ್ದಾಣ. ಶಾಲೆಯ ಮಕ್ಕಳು ಅಂಗಡಿಯಿಂದ ತಿಂಡಿ ಕೊಂಡು ತಿಂದು ಬೀಳಿಸಿದರೆ ಅದೆಲ್ಲ ಈ ಪುಟ್ಟ ಹಕ್ಕಿಗಳಿಗೆ ಹಬ್ಬದೂಟ. ಪುರ್ರೆಂದು ನಮ್ಮ ಪಕ್ಕದಲ್ಲೇ ಹಾರಿ ಹೋಗುತ್ತಿದ್ದವು. ಅಲ್ಲೇ ಇದ್ದ ದನದ ಹಟ್ಟಿ ಅಟ್ಟದಲ್ಲಿ ನೇತಾಡುವ ಹುಲ್ಲಿನಿಂದ ಒಂದು ಎಳೆಯನ್ನು ಎಳೆದುಹೊಂಡು ಬಂದು ಅಂಗಡಿಯ ಮಾಡಿನ ಸಂದಿಯಲ್ಲಿ ಗೂಡುಮಾಡುತ್ತಿದ್ದವು. ನಾವು ಕುಳಿತ ಜಗಲಿಯ ಪಕ್ಕದಲ್ಲಿ ಒಂದಿಷ್ಟು ಖಾಲಿ ಜಾಗ ಇದ್ದರೆ ನಾವು ಕುಳಿತದ್ದನ್ನೂ ಲೆಕ್ಕಿಸದೆ ಬಂದು, ಕುಪ್ಪಳಿಸಿ, ನಮ್ಮನ್ನು ನೋಡಿ ಚಿಲಿಪಿಲಿ ಎಂದು ಕೂಗುತ್ತಿದ್ದವು. ಪ್ರಾಥಮಿಕ ಶಾಲೆಯ ಪುಟಾಣಿ ಮಕ್ಕಳಂತೆ ಕೂತಲ್ಲಿ ಕೂರದೆ ಹಾರಾಡುತ್ತಾ ಕುಪ್ಪಳಿಸುತ್ತಾ ಇರುವುದನ್ನು ನೋಡುವುದೇ ಚಂದ.
        ಕಾಳು, ಕೀಟ, ಹುಳ-ಹುಪ್ಪಟೆ, ಹಣ್ಣು, ಹೂವು ಹೀಗೆ ಏನನ್ನಾದರೂ ತಿಂದು ಬದುಕುವ ಈ ಹಕ್ಕಿ ಸರ್ವಭಕ್ಷಕ ಎಂದರೆ ತಪ್ಪಲ್ಲ. ಗುಬ್ಬಚ್ಚಿಗಳು ಮನುಷ್ಯನ ಜೊತೆ ಸಹಜೀವನ ಮಾಡುತ್ತಿರುವ ಅತೀ ಹಳೆಯ ಪಕ್ಷಿ ಎಂದರೂ ತಪ್ಪಲ್ಲ. ಬೇಸಾಯ ಮಾಡಲು ಕಲಿತ ಮನುಷ್ಯನಿಗೆ ನಿಧಾನವಾಗಿ ಆಹಾರ ಭದ್ರತೆ ಬರುತ್ತಾ ಹೋದಂತೆ ಆತ ವರ್ಷದ ಯಾವ ತಿಂಗಳಿನಲ್ಲಾದರೂ ಸಂತಾನೋತ್ಪತ್ತಿ ಮಾಡಬಲ್ಲ ಸಾಮರ್ಥ್ಯ ಪಡೆದ ಎಂದು ಹೇಳುತ್ತಾರೆ. ಅಂತೆಯೇ ಗುಬ್ಬಚ್ಚಿಗಳೂ ಹಾಗೇ ವರ್ಷದ ಯಾವ ಕಾಲದಲ್ಲಾದರೂ ಸಂತಾನೋತ್ಪತ್ತಿ ಮಾಡುತ್ತವೆ. ನೀವು ಜಗತ್ತಿನ ಯಾವುದೇ ದೇಶಕ್ಕೆ ಹೋದರೂ ಅಲ್ಲಿ ಗುಬ್ಬಚ್ಚಿಗಳನ್ನು ಕಾಣಲು ಸಾಧ್ಯವಂತೆ.   ಇಂತಹ ಗುಬ್ಬಚ್ಚಿಗಳು ಇತ್ತೀಚೆಗೆ ಕಾಣಲು ಸಿಗುವುದು ಸ್ವಲ್ಪ ಅಪರೂಪ. ಹೆಚ್ಚುತ್ತಿರುವ ನಗರೀಕರಣ, ನಮ್ಮ ಹೊಸರೀತಿಯ RCC ಮನೆಗಳು ಮತ್ತು ಕಟ್ಟಡಗಳು, ಅಂಗಡಿಯಲ್ಲಿ ಎಲ್ಲ ಪ್ಯಾಕೆಟ್ಗಳಲ್ಲಿ ಸಿಗುತ್ತಿರುವುದು, ಎಲ್ಲಕ್ಕೂ ಮುಖ್ಯವಾಗಿ ಕೃಷಿಯಲ್ಲಿ ಬಳಕೆಯಾಗುತ್ತಿರುವ ಅತಿಯಾದ ರಾಸಾಯನಿಕ ಗೊಬ್ಬರಗಳು ಮತ್ತು ಕೀಟನಾಶಕಗಳು ಗುಬ್ಬಚ್ಚಿಯ ಸಂಖ್ಯೆ ಕ್ಷೀಣಿಸಲು ಕಾರಣ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ. ಆದರೂ ಹುಡುಕಿದರೆ ಈ ಹಕ್ಕಿಗಳು ಖಂಡಿತಾ ನೋಡಲು ಸಿಗುತ್ತವೆ. ಇಂತಹ ಮುದ್ದಾದ ಗುಬ್ಬಚ್ಚಿಗಳು ಉಳಿಯಬೇಕೆಂದು ಹಲವಾರು ಜನ ಹಕ್ಕಿ ಪ್ರಿಯರು ಪ್ರಯತ್ನ ಮಾಡುತ್ತಿದ್ದಾರೆ. 
              ನಿಮ್ಮ ಮನೆಯಲ್ಲೂ ಗುಬ್ಬಚ್ಚಿ ಗೂಡು ಮಾಡಬೇಕೇ ? ಹಾಗಾದರೆ ಗೂಗಲ್ ನಲ್ಲಿ ಹುಡುಕಿ ಕಲವಾರು ವಿಧಾನಗಳು ಸಿಗುತ್ತವೆ. ನೀವೂ ಪ್ರಯತ್ನಿಸಿ.. 
ಕನ್ನಡ ಹೆಸರು: ಗುಬ್ಬಿ ಅಥವಾ ಗುಬ್ಬಚ್ಚಿ
 English name: House Sparrow
Scientific Name: Passer domesticus
............................................ ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*********************************************Ads on article

Advertise in articles 1

advertising articles 2

Advertise under the article