-->
ಜೀವನ ಸಂಭ್ರಮ - 6

ಜೀವನ ಸಂಭ್ರಮ - 6

        
        
                       ಗುರುದೇವೋಭವ 
                -----------------------------
             ಇದು ನನ್ನ ಜೀವನದಲ್ಲಿ ನಡೆದ ಒಂದು ನೈಜ ಘಟನೆ. ನಾನು 1999ರಲ್ಲಿ ಕೆಇಎಸ್ ಪರೀಕ್ಷೆ ಪಾಸಾದೆ. ಮಂಡ್ಯ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ ತಿಮ್ಮನ ಹೊಸೂರಿಗೆ ಮುಖ್ಯ ಶಿಕ್ಷಕನ ಹುದ್ದೆಗೆ ನಿಯೋಜನೆಯಾದೆ. ಆಗ ನನ್ನ ಹತ್ತಿರ ಸ್ವಂತ ವಾಹನ ಇಲ್ಲದೇ ಇದ್ದುದರಿಂದ ಸ್ನೇಹಿತರ ಟೆಂಪೋದ ಸಹಾಯದಿಂದ ಕರ್ತವ್ಯಕ್ಕೆ ಹಾಜರಾದೆ. ಆ ಊರಿನ ಸುತ್ತಮುತ್ತ ಬಸ್ ವ್ಯವಸ್ಥೆ ಇದ್ದರೂ, ನನ್ನ ಶಾಲೆಯ ಊರಿಗೆ ಬಸ್ ಸೌಕರ್ಯ ಇರಲಿಲ್ಲ. ಕೆಲ ಸಮಯದ ನಂತರ ಸ್ವಂತ ವಾಹನ ಖರೀದಿಸುವ ಭಾಗ್ಯ ನನಗೊದಗಿಬಂತು.  
              ಒಮ್ಮೆ ನಾನು , ಆಂಗ್ಲಭಾಷಾ ಶಿಕ್ಷಕರ ಪಾಠ ವೀಕ್ಷಣೆ ಮಾಡುವಾಗ , ಅವರು ಮಾಡುತ್ತಿದ್ದ ಆಂಗ್ಲ ವ್ಯಾಕರಣ ಸರಿಯೋ-ತಪ್ಪೋ ತಿಳಿಯಲಿಲ್ಲ. ವಿಜ್ಞಾನ ಶಿಕ್ಷಕರಾಗಿದ್ದರೂ ನಾನೂ ಆಂಗ್ಲ ವ್ಯಾಕರಣ ಕಲಿಯಲು ತೀರ್ಮಾನಿಸಿದೆ. ನಾನು ವಿಜ್ಞಾನ ಆಯ್ಕೆ ಮಾಡಿಕೊಂಡು ಬಿಎಸ್ಸಿ , ಬಿಇಡಿ , ಎಂಇಡಿ ಆಂಗ್ಲಮಾಧ್ಯಮದಲ್ಲಿ ಮಾಡಿದ್ದರೂ ಸಹ ಇಂಗ್ಲಿಷ್ ವ್ಯಾಕರಣದಲ್ಲಿ ಅಷ್ಟು ಪ್ರಭುತ್ವ ಇರಲಿಲ್ಲ. ಇಂಗ್ಲಿಷ್ ವ್ಯಾಕರಣವನ್ನು ಕಲಿಯಬೇಕೆನ್ನುವ ತುಡಿತ ನನ್ನಲ್ಲಿ ಹೆಚ್ಚಾಗಿತ್ತು. ನನ್ನ ಸ್ನೇಹಿತರ ಜೊತೆ ಚರ್ಚಿಸಿ ನಾನು ನಿವೃತ್ತ ಶಿಕ್ಷಕರಾದ ಶ್ರೀ ಯು ವಿ ವೆಂಕಟರಮಣ ಅವರನ್ನು ಹುಡುಕಿಕೊಂಡು ಹೋದೆ. 
           ಅವರಿಗೆ 91 ವರ್ಷ , ಮಲಗಿಕೊಂಡು ಪುಸ್ತಕ ಓದುತ್ತಿದ್ದರು. ನಾನು , ನನ್ನ ಪರಿಚಯ ಮಾಡಿಕೊಂಡೆ ಮತ್ತು ನನ್ನ ಅಪೇಕ್ಷೆ ತಿಳಿಸಿದೆ. ಅದಕ್ಕೆ ಅವರು ತಾತ್ಸಾರದಿಂದ , " ಇಲ್ಲಿಗೆ ಬರುವವರು ಒಂದು ವಾರದ ನಂತರ ಬರುವುದಿಲ್ಲ. ಯಾರಿಗೂ ಆಸಕ್ತಿ ಇಲ್ಲ " ಎಂದರು. ನಾನು ನನಗಾದ ಸ್ಥಿತಿ ವಿವರಿಸಿದೆ. ಶ್ರೀಯುತ ಯು.ವಿ. ವೆಂಕಟರಮಣ ಇವರು ಮೂಲತಃ ಕೊಡಿಯಾಲ ಗ್ರಾಮದವರು. ತಂದೆಯದು ನೇಕಾರಿಕೆ ವೃತ್ತಿ, ಬಟ್ಟೆ ವ್ಯಾಪಾರ ಹಾಗೂ ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಇವರು ಏಕೈಕ ಪುತ್ರ. ಅವರು ಮೈಸೂರು ಮಹಾರಾಜ ಕಾಲೇಜಿನಲ್ಲಿ ಕನ್ನಡ ಐಚ್ಚಕ ವಿಷಯದಲ್ಲಿ ಪದವಿ ಪಡೆದಿದ್ದರು. ಆಗ ಪದವಿ ಆದವರಿಗೆ ಅಮಲ್ದಾರ್ ಹುದ್ದೆ ಸಿಗುತ್ತಿತ್ತು. ತಂದೆಯ ಅಪೇಕ್ಷೆ ಮಗ ಸರ್ಕಾರಿ ಸೇವೆಗೆ ಸೇರಬೇಕೆನ್ನುವುದು. ಆದರೆ ತಂದೆಯ ಬಡ್ಡಿ ವ್ಯವಹಾರ ನೋಡಿ , ಬೇಸತ್ತು , ತಾವು ಧರಿಸಿದ ಬಟ್ಟೆಯಲ್ಲಿ ಮನೆ ಬಿಟ್ಟು ಬಂದರು. ಅವರ ಮನಸ್ಸಿನಲ್ಲಿ ಸಮಾಜಕ್ಕೆ ಏನನ್ನಾದರೂ ಮಾಡಬೇಕು ಎಂಬ ತವಕ. ಹಳ್ಳಿಹಳ್ಳಿಗೆ ತಿರುಗಿ ಕಲಿಯಲು ಇಷ್ಟವಿರುವ , ಕಷ್ಟಪಡುತ್ತಿರುವ ಮಕ್ಕಳನ್ನು ಗುರುತಿಸಿ , ಮನೆಯಲ್ಲೇ ಕಲಿಸುತ್ತಿದ್ದರು. ಮಕ್ಕಳಿಗೆ ಅವರ ಪತ್ನಿ ಅಡುಗೆ ಮಾಡಿ ಬಡಿಸುತ್ತಿದ್ದರು. ಆ ಕಾಲ ತುಂಬಾ ಜಾತೀಯತೆಯಿಂದ ಕೂಡಿತ್ತು. ಆಗ ಇವರು ಯಾವ ಜಾತಿಯನ್ನೂ ನೋಡದೆ ಎಲ್ಲಾ ಜಾತಿಯ ಮಕ್ಕಳಿಗೂ ಸಮಾನವಾಗಿ ಬೋಧಿಸುತ್ತಿದ್ದರು. ಒಂದು ದಿನ ಮಕ್ಕಳಿಗೆ ಪಾಠ ಮಾಡುತ್ತಿದ್ದಾಗ ಅವರಿಗೆ ತಂದೆ ನಿಧನರಾದ ಸುದ್ದಿ ಬರುತ್ತದೆ. ಆದರೆ ಈ ಮಕ್ಕಳನ್ನು ಬಿಟ್ಟುಹೋಗದೆ ರಾತ್ರಿ ಪಾಠ ಮಾಡಿ ಬೆಳಿಗ್ಗೆ ತಂದೆಯ ಶವಸಂಸ್ಕಾರಕ್ಕೆ ಹಾಜರಾದದ್ದು ಇವರ ಸೇವಾ ಧರ್ಮವನ್ನು ಎತ್ತಿ ಹಿಡಿಯುತ್ತದೆ. ಇವರು ವಿದ್ಯಾರ್ಥಿ ಜೀವನದಲ್ಲಿ ಮಹಾತ್ಮ ಗಾಂಧಿ ಕರೆಗೆ ಓಗೊಟ್ಟು ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ, ಜೈಲುವಾಸ ಅನುಭವಿಸಿದವರು. 
             ಹೀಗೆ ಕನ್ನಡ ಶಿಕ್ಷಕರಾಗಿ ಕೆಲಸ ಮಾಡುತ್ತಿರಬೇಕಾದರೆ, ಸಿಂಗಾನಲ್ಲೂರು ಎಂಬ ಊರಿನ ಪ್ರೌಢಶಾಲೆಯಲ್ಲಿ ರಾಗಿ ಲಕ್ಷ್ಮಣಯ್ಯ ಎಂಬ ಮುಖ್ಯಶಿಕ್ಷಕರು ಇದ್ದರು. ಬಹಳಷ್ಟು ವರ್ಷಗಳಿಂದ 10 ನೇ ತರಗತಿಯಲ್ಲಿ ಇಂಗ್ಲಿಷ್ ನಲ್ಲಿ ಶೇಕಡ 100 ರಷ್ಟು ಫಲಿತಾಂಶ ತರಿಸುತ್ತಿದ್ದುದು ಸುದ್ದಿಯಾಗಿತ್ತು. ಯು.ವಿ. ವೆಂಕಟರಮಣ ಅವರಿಗೆ ಆಸಕ್ತಿ ಉಂಟಾಗಿ , ಅವರಿಂದ ಇಂಗ್ಲಿಷ್ ಭಾಷೆಯ ಪಾಂಡಿತ್ಯವನ್ನು ಗಳಿಸಿದರು. ನಂತರ ಮೈಸುಗರ್ ಪ್ರೌಢಶಾಲೆಯಲ್ಲಿ ತನ್ನ ಪ್ರಯತ್ನದಿಂದ ಇಂಗ್ಲಿಷ್ ಭಾಷೆಯಲ್ಲಿ ಉತ್ತಮ ಫಲಿತಾಂಶ ಬರಲು ಪ್ರಾರಂಭವಾಯಿತು. ಇವರ ಹೆಸರು ಎಲ್ಲಾ ಕಡೆ ಹಬ್ಬಿತು. ನಂತರ ಬಿನ್ನಾಭಿಪ್ರಾಯವಾಗಿ ತಾವೇ ಒಂದು ಗೀತಾ ಪ್ರೌಢ ಶಾಲೆಯನ್ನು ಮಂಡ್ಯದಲ್ಲಿ ಪ್ರಾರಂಭಿಸಿದರು. ಇವರೇ ಇಂಗ್ಲಿಷ್ ಮತ್ತು ಕನ್ನಡ ಬೋಧನೆ ಮಾಡುತ್ತಿದ್ದರು. ಇಲ್ಲಿಯೂ ನಿಲ್ಲದೆ ಹೊರಬಂದ ನಂತರ ಇಂಗ್ಲೀಷ್ ಗ್ರಾಮರ್ ಪುಸ್ತಕವನ್ನು ಬರೆದು , ಹಳ್ಳಿ ಹಳ್ಳಿ ಶಾಲೆಗೆ ಹೋಗಿ, ಇಂಗ್ಲಿಷ್ ಕಲಿಸಿ , ಪುಸ್ತಕ ಮಾರಿ ಜೀವನ ನಡೆಸುತ್ತಿದ್ದರು. 
        ನಾನು ಒಂದು Wren and martin ಇಂಗ್ಲೀಷ್ ಗ್ರಾಮರ್ ಪುಸ್ತಕ ಖರೀದಿ ಮಾಡಿ, ಅವರ ಮನೆಗೆ ಹೋಗುವ ಮುನ್ನ , ಸ್ವಲ್ಪ ಓದಿಕೊಳ್ಳುವುದು, ಚರ್ಚಿಸ ಬೇಕಾದದ್ದು , ಕಠಿಣ ವಾದದ್ದನ್ನು ಗುರುತು ಮಾಡಿಕೊಂಡು ಹೋಗುತ್ತಿದ್ದೆ. ಎರಡು ಗಂಟೆಯ ನಂತರ ಅದನ್ನು ಎಷ್ಟು ಸುಲಭವಾಗಿ ಹೇಳುತ್ತಿದ್ದರು ಎಂದರೆ ಎಂಥವರಿಗೂ ಅರ್ಥವಾಗುವಂತೆ ಹೇಳಿಕೊಡುತ್ತಿದ್ದರು. ಇಂಗ್ಲಿಷಿನ ಪ್ರತಿ ವಿಷಯಕ್ಕೂ ಸೂತ್ರ ಮಾಡಿಕೊಂಡಿದ್ದರು. ಇಂಗ್ಲೀಷಿನ ಗುಳಿಗೆಗಳನ್ನು ನೀಡುವುದು ಇವರ ಪಾಠದ ವೈಶಿಷ್ಟ್ಯತೆ. ಒಂದೊಂದು ಗುಳಿಗೆಗಳು ಇಂಗ್ಲಿಷಿನ ಶ್ರೀಮಂತಿಕೆಯನ್ನು ಗಳಿಸಿಕೊಡುತ್ತಿತ್ತು.  
            ನನ್ನಲ್ಲಿ ವಿಶ್ವಾಸ ಬಂದಮೇಲೆ , ಒಮ್ಮೆ ನನ್ನ ಶಾಲೆಗೆ ಯು.ವಿ. ವೆಂಕಟರಮಣ ಅವರನ್ನು ಕರೆದುಕೊಂಡು ಹೋದೆ. ನಮಗೆ ಇಂಗ್ಲಿಷ್ ಗ್ರಾಮರ್ ಮಾಡುವ ವಿಧಾನ ತೋರಿಸಿದರು. ಅವರು ಹೇಳಿದ್ದು," Teaching is making the subject easy even to the dullest boy. " ಶಾಲೆಯಲ್ಲಿ ಕಟ್ಟಕಡೆಯ ವಿದ್ಯಾರ್ಥಿಗೂ ಅರ್ಥವಾಗುವಂತೆ , ಸರಳ ಭಾಷೆ , ಸರಳ ವಾಕ್ಯದಲ್ಲಿ ಸುಲಭವಾಗುವಂತೆ ಪಾಠ ಮಾಡಬೇಕು. ಹೀಗೆ ನನ್ನಲ್ಲೊಬ್ಬ ಒಳ್ಳೆಯ ಶಿಕ್ಷಕನನ್ನು ರೂಪಿಸಲು ಪ್ರಯತ್ನಿಸಿದರು. ಒಮ್ಮೆ ಉಪಾಹಾರಕ್ಕೆಂದು ಹೋಟೆಲ್ ಗೆ ಹೋಗಿ ತಿಂಡಿ ಕೇಳಿದಾಗ , " ಎರಡು ಇಡ್ಲಿ ಸಾಕು " ಎಂದರು . "ಸರ್ , ಬೇರೆ ಏನಾದರೂ ತೆಗೆದು ಕೊಳ್ಳಿ ಸಾರ್ " ಎಂದೆ... ಮೇಷ್ಟ್ರೇ, " ನಮ್ಮ ಜಠರಕ್ಕೆ ಅರ್ಧಭಾಗ ಊಟ, ಇನ್ನು ಉಳಿದ ಅರ್ಧಭಾಗ ಗಾಳಿ ಮತ್ತು ನೀರಿಗೆ ಜಾಗ ಖಾಲಿ ಬಿಡಬೇಕು " ಎಂದು ಹೇಳಿದರು. ಆಗ ಅವರಿಗೆ 97 ವರ್ಷವಾದರೂ, ಯಾವುದೇ ಕಾಯಿಲೆ ಇರಲಿಲ್ಲ. ನಡೆಯಲು ಕೋಲಿನ ನೆರವನ್ನು ಪಡೆಯುತ್ತಿರಲಿಲ್ಲ. ಅವರು ನನಗೆ ಜೀವನದ ಪಾಠವನ್ನು ಹೇಳಿಕೊಟ್ಟಿದ್ದರು. 
           ಹೀಗಿರಬೇಕಾದರೆ ನನ್ನ ಅಜ್ಜಿ ತೀರಿಕೊಂಡರು. ನಾನು ಒಂದು ವಾರ ಅವರ ಮನೆಗೆ ಹೋಗಲಿಲ್ಲ. ಒಂದು ದಿನ , ನಡೆದುಕೊಂಡು ನನ್ನ ಮನೆ ಹುಡುಕಿ ಬಂದರು. ನನಗಾಶ್ಚರ್ಯ.....! ಬಂದವರೇ ನನಗೆ ಯೋಗಾಸನ , ಪ್ರಾಣಾಯಾಮವನ್ನು ಹೇಳಿಕೊಟ್ಟರು. ನಾನವರಿಗೆ ತುಂಬಾನೇ ಆಪ್ತವಾದೆ. ಒಂದು ಭಾನುವಾರ ಬೆಳಿಗ್ಗೆ ಅವರನ್ನು ನೋಡಲು ಅವರ ಮನೆಗೆ ಹೋದವನು ತರಕಾರಿ ಮಾರುಕಟ್ಟೆಗೆ ಬೈಕಲ್ಲಿ ಹೋದೆವು. ಅವರು ಹಚ್ಚ ಹಸಿರಾದ ತರಕಾರಿಗಳನ್ನು ಆ ದಿನಕ್ಕೆ ಬೇಕಾದಷ್ಟು ಮಾತ್ರ ತೆಗೆದುಕೊಂಡರು . ನಾನು ಹೇಳಿದೆ , " ಸರ್ , ಒಂದು ವಾರಕ್ಕೆ ಬೇಕಾದ ಸೊಪ್ಪುತರಕಾರಿಗಳು ತೆಗೆದುಕೊಳ್ಳಬಹುದಲ್ಲ " ಎಂದೆ. ಅದಕ್ಕೆ ಅವರು , "ಪ್ರತಿದಿನವೂ ಹಚ್ಚ ಹಸಿರಾದ ಸೊಪ್ಪು ತರಕಾರಿಯನ್ನು ಖರೀದಿಸಬೇಕು ಮತ್ತು ಪ್ರತಿದಿನ ನಡೆದುಕೊಂಡು ಹೋಗುವುದರಿಂದ ನನಗೆ ವ್ಯಾಯಾಮವಾಗುತ್ತದೆ. ನಮ್ಮ ಮನೆಯಲ್ಲಿ ತಂಗಳು ಪೆಟ್ಟಿಗೆ (ಪ್ರಿಡ್ಜ್)ಇಲ್ಲ , ವಾಷಿಂಗ್ ಮಷೀನ್ ಇಲ್ಲ , ನನ್ನಷ್ಟು ಶ್ರೀಮಂತರು ಈ ಪ್ರಪಂಚದಲ್ಲಿ ಯಾರಾದರೂ ಇದ್ದಾರ......? ಎಂದು ಪ್ರಶ್ನಿಸಿದರು. ನಾನು ಆಶ್ಚರ್ಯದಿಂದ ಅದು ಹೇಗೆ ಸರ್ ಎಂದು ಕೇಳಿದೆ.ಅದಕ್ಕೆ ಅವರು ಹೇಳಿದ್ದು, " Every man had needs and wants. needs are essentials to lead life.but it needs less. those who have no wants he became rich.but I have no wants." ನನ್ನ ಹತ್ತಿರ 4 ಶರ್ಟ್ಸ್ ಮತ್ತು 4 ಪಂಚ ಇದೆ. ನನ್ನ ಪತ್ನಿ ಹತ್ತಿರ ನನಗಿಂತ ಜಾಸ್ತಿ ಸುಮಾರು 10 ಸೀರೆಗಳು ಇರಬಹುದು. ಇವುಗಳ ನಿರ್ವಹಣೆಗೆ ಹೆಚ್ಚು ಹಣ ಬೇಡ. ನನಗೆ ರೂ ಸಾವಿರದ ಐನೂರು ಸ್ವತಂತ್ರ ಯೋಧರ ಪಿಂಚಣಿ ಬರುತ್ತೆ. ನನ್ನ ಹತ್ತಿರ ಬರುವವರಿಗೆ ಕಲಿಸುತ್ತಾ ಸಂತೋಷವಾಗಿದ್ದೇನೆ. ನನ್ನ ಸಂತೋಷದ ಮುಂದೆ ಯಾವ ಶ್ರೀಮಂತ ಸಾಟಿ ......? ಎಂದರು. ಆಗ ನನಗೆ ಅರ್ಥವಾದದ್ದು , ಜೀವನ ಸಂಭ್ರಮ.....!!! ಸಂತೋಷದ ಮುಂದೆ ಯಾವ ಶ್ರೀಮಂತಿಕೆಯೂ ಸಮವಲ್ಲ ಎಂದು.  
            ನನಗೆ 3 ವರ್ಷಗಳ ಕಾಲ Wren and martin ಗ್ರಾಮರ್ ನ ಶೇಕಡ 75ರಷ್ಟು ಕಲಿಸಿದರು. ಆ ವಯಸ್ಸಿನಲ್ಲಿಯೂ ಅವರಿಗೆ ಕಲಿಸುವ ತುಡಿತವಿತ್ತು. ಒಮ್ಮೆ ಶಾಲೆಗೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದರು. ಅವರ ಪತ್ನಿ ನಿಮಗೆ ವಯಸ್ಸಾಯ್ತು ಬೇಡ ಎಂದಿದ್ದಕ್ಕೆ , ಕೋಪದಿಂದ " ನಾನು ಉಮಾ ಹೇ (ಊಟ, ಮಲಗುವುದು ,ಹೇಸಿಗೆ ) ಮಾಡಿಕೊಂಡು ಇರುವುದಿಲ್ಲ. ನಾನು ಪಾಠಮಾಡಿ ಸಾಯುತ್ತೇನೆ " ಎಂದರು. ಆಗವರಿಗೆ 99 ವರ್ಷ. ಇದಾದ ಮೇಲೆ ಒಂದು ವಾರ ನಾನು ಇಲಾಖೆಯ ತರಬೇತಿಗಾಗಿ ಬೇರೆ ಸ್ಥಳದಲ್ಲಿ ನಿಯೋಜನೆಯಾಗಿದ್ದೆ. ತರಬೇತಿ ಮುಗಿಸಿ ನೆಚ್ಚಿನ ಶಿಕ್ಷಕರನ್ನು ನೋಡಬೇಕೆಂದು ಸಂತೋಷದಿಂದ ಮನೆಗೆ ಬರುತ್ತೇನೆ..... ನನಗೆ ಆಘಾತವಾಯಿತು.....!! ಸ್ವರ್ಗಸ್ಥರಾಗಿದ್ದರು ನನ್ನ ನೆಚ್ಚಿನ ಶಿಕ್ಷಕ. ನನ್ನ ಪ್ರೀತಿಯ ಗುರುವಿನ ಅಂತಿಮ ದರ್ಶನ ಭಾಗ್ಯವೂ ಸಿಗಲಿಲ್ಲ. 
       ಗುರುಗಳು ನನಗೆ ಇಂಗ್ಲೀಷ್ ಗ್ರಾಮರ್ ಮಾತ್ರವಲ್ಲ ನಡವಳಿಕೆ ಮೂಲಕ ಜೀವನ ಪಾಠವನ್ನು ಕಲಿಸಿದರು , ಬದುಕಿನ ಸಂಭ್ರಮವನ್ನು ಅನುಭವಿಸುವುದನ್ನು ಕಲಿಸಿದರು. ನಾನು ವೃತ್ತಿಪರ ಶಿಕ್ಷಕನಾದ, ನಂತರ ನನಗೆ ಸಿಕ್ಕ ಗುರುಗಳಿವರು. ಮಕ್ಕಳೇ, ಜ್ಞಾನ ಎಲ್ಲಿದಿಯೋ ಅಲ್ಲಿಗೆ ನಾವೇ ಹುಡುಕಿಕೊಂಡು ಹೋಗಬೇಕು. ಇಂಥ ಗುರುಗಳು ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ ನಾನು ಬದುಕಿರುವವರೆಗೂ ಅವರು ನನ್ನ ಜೊತೆ ಜೀವಂತವಾಗಿರುತ್ತಾರೆ. ಇವರ ಬದುಕು ಎಲ್ಲರಿಗೂ ಸ್ಪೂರ್ತಿಯಾಗಿ ಚಿರಸ್ಥಾಯಿಯಾಗಿ ಇರಬೇಕೆಂಬುದು ನನ್ನ ಬಯಕೆ....!!
.............................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article