
ಜಗಲಿಯ ಮಕ್ಕಳ ಕವನಗಳು ಸಂಚಿಕೆ - 2
ಹೆಣ್ಣು....
---------------------
ನಿನ್ನ ವರ್ಣನೆಯೊಂದು
ಪದಗಳಲ್ಲಿ ಮುಗಿಯದ ಕವಿತೆ...
ನೀ ಎಂದರೆ ಪ್ರತಿಯೊಂದು
ಮನೆ ಬೆಳಗುವ ಹಣತೆ..
ಸವಾಲುಗಳೊಂದಿಗೆ ನಿನ್ನ ಜೀವನ ಆರಂಭ...
ನೀನೇ ಕಾರಣವಂತೆ
ಜೀವಜಗತ್ತು ಆಗಲು ಪ್ರಾರಂಭ...
ನೀ ಎಂದರೆ ಕನಸುಗಳನ್ನು ತ್ಯಜಿಸಿ,
ಆಸೆಗಳನ್ನು ಕಷ್ಟವೆಂಬ ಅಗ್ನಿಯಲ್ಲಿ ಉರಿಸಿ, ನಿನ್ನವರ ಏಳಿಗೆಯಲ್ಲಿ ಸುಖ ಕಾಣುವವಳು...
..........................................ಚೇತನ್ .ಕೆ.
***************************************
ಮದುವೆ...
---------------------
ಹೊಸೆದ ಪ್ರೀತಿಯ ಬಂಧನ..
ಬೆಸೆದ ಜೀವ ಜೀವಗಳ ಮಿಲನ..
ಜೀವನದಲ್ಲಿ ಮರುಕಳಿಸದ ಸಂಭ್ರಮ..
ಜೀವನವನ್ನು ಇನ್ನೊಬ್ಬರ ಕೈಗೆ ಇಡುವ
ಪ್ರೇಮ - ಸಮಾಗಮ...
..........................................ಚೇತನ್ .ಕೆ.
***************************************
ಮೊದಲ ಪ್ರೀತಿ...
-----------------------------
ಭಾವನೆ ಅರಿಯದ ವಯಸ್ಸಿನಲ್ಲಿ
ಆದ ಆಕರ್ಷಣೆ ನೀನು...
ನಿನ್ನ ಅಂದವ ನೋಡಿ
ಇಳಿ ವಯಸ್ಸಿನಲ್ಲಿ
ಪ್ರೀತಿಯಲ್ಲಿ ಬಿದ್ದವನು ನಾನು...!
ನಿನ್ನ ಮುಗುಳುನಗೆ
ನಿದ್ದೆಯಲ್ಲೂ ಬರುತ್ತಿತು ಕನಸಾಗಿ...!
ಪ್ರತಿದಿನ ನಿನ್ನ ಬಳಿ ಬರುತ್ತಿದೆ
ನಿನ್ನ ಅಂದ ಸವಿಯುವ ಸಲುವಾಗಿ...!
ಕ್ಷಣಿಕ ಪ್ರೀತಿಗಳು
ಸಾವಿರ ಆದರೂ ನನಗೆ...
ಉಳಿದದ್ದು
ಮೊದಲ ಪ್ರೀತಿಯ ನೆನಪೇ ಕೊನೆಗೆ...!!
..........................................ಚೇತನ್ .ಕೆ.
***************************************
ಬಾಲ್ಯದ ಆ ದಿನಗಳು..
--------------------------------
ಶಾಲೆಗೆ ಹೋಗಬೇಕೆಂಬ
ಸಣ್ಣ ಕಾರಣಕ್ಕೆ
ಅತ್ತ ಆ ದಿನಗಳು..
ಕಾರಣವಿಲ್ಲದೆ ಅಳಿಸುತ್ತಿದೆ
ಈ ದಿನಗಳು...!
ಚಿಂತೆಗಳ ಅರಿವಿಲ್ಲದೆ
ನಿದ್ರಿಸುತ್ತಿದ್ದ ಆ ದಿನಗಳು..
ಚಿಂತೆಗಳನ್ನೇ ತುಂಬಿಕೊಂಡು
ನಿದ್ರಿಸುತ್ತಿರುವ ಈ ದಿನಗಳು..
ಒಂದು ರೂಪಾಯಿ ಸಿಕ್ಕರೆ
ಸ್ವರ್ಗ ಸಿಕ್ಕಷ್ಟು ಸಂತೋಷ
ಕೊಡುತ್ತಿದ್ದ ಆ ದಿನಗಳು..
ನೂರು ರೂಪಾಯಿ ದಾರಿಯಲ್ಲಿ ಬಿದ್ದಿದ್ದರೂ ಹೆಕ್ಕಿಕೊಳ್ಳಲು ಹಿಂಜರಿಯುವ ಈ ದಿನಗಳು..!!
ಕಷ್ಟಗಳು ಹೆಚ್ಚಿದ್ದರೂ
ನೆಮ್ಮದಿಗೆ ಕೊರತೆ ಇಲ್ಲದಿದ್ದ
ಆ ದಿನಗಳು..
ಕಷ್ಟಗಳು ಕಡಿಮೆ ಇದ್ದರೂ
ನೆಮ್ಮದಿ ಹುಡುಕುವ ಈ ದಿನಗಳು..!!!
ಬೇಗ ಬೆಳೆಯುವ ಆಸೆ
ಹೊಂದಿದ್ದ ಆ ದಿನಗಳು..
ಮತ್ತೆ ಮಗುವಾಗುವಾಸೆ
ಮೂಡಿಸಿದೆ ಈ ದಿನಗಳು....!!!
ಪ್ರಥಮ ಪಿಯುಸಿ
ಸರಕಾರಿ ಪದವಿ ಪೂರ್ವ ಕಾಲೇಜು ವೇಣೂರು,
ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
*******************************************
ಮಹಾತ್ಮ ಗಾಂಧಿ (ಕವನ)
-------------------------------------
ಬಾಪೂಜಿ ಬಾಪೂಜಿ ಎಂದು ಕರೆಯುವರು ಇವರನ್ನು ಪ್ರೀತಿಯಿಂದಲಿ l
ಜನಮೆಚ್ಚಿದ ಆದರ್ಶ ನಡೆತೆಯುಳ್ಳ
ಧೀಮಂತ ನಾಯಕರಿವರು l
ಯಂತ್ರ ವಿರೋಧಿ ತತ್ವ,
ತೆರೆಯು ಮರೆಯದ ವಿಶಿಷ್ಟ ವ್ಯಕ್ತಿತ್ವ,
ಸತ್ಯ ಅಹಿಂಸೆಯ ಹಾದಿಯಲ್ಲಿ ಸಾಗಿ,
ಶುಭ ಶಾಂತಿಯ ಭರವಸೆ ನೀಡಿ,
ಅಹಿಂಸಾವಾದಿಯಾಗಿ ಬಾಳಿದರಿವರು
ಭಾರತಾಂಬೆಯ ಮಡಿಲಲ್ಲಿ....!
ಕರುಣೆ ತೋರಿದರಿವರು ಬಡಬಲ್ಲಿದರಲ್ಲಿ ,
ಸರಳ ವ್ಯಕ್ತಿತ್ವವುಳ್ಳ, ಸರಳತೆಯ ಸಾಕಾರ ರೂಪವೇ ಆಗಿರುವರು ಇವರು,
ಶಸ್ತ್ರ ಹಿಡಿಯದ ವೀರ,
ಯಶೋವಂತ ನಾಯಕ,
ಗಣರಾಜ್ಯದ ಸಂಸ್ಥಾಪಕ ಈ ನಮ್ಮ
ವೀರನಾಯಕ...!!!
ರೈತ (ಕವನ)
------------------
ದೇಶದ ಏಳಿಗೆ
ರೈತನಿಂದ ಕೂಡಿದೆ
ಅನ್ನ ಕೊಟ್ಟ ನಿನಗೆ
ಮನದಲುಲ್ಲಾಸ ತುಂಬಿದೆ.
ದೇಶಸೇವೆ ಮಾಡುವ ರೈತನಿಗೆ
ಕೊಡಬೇಕು ನಾವು ಗೌರವ
ಇಲ್ಲದಿದ್ದರೆ ಅದಾಗುವುದು
ತೊರೆದಂತೆ ಭಾವೈಕ್ಯವ
ಕೋಟಿ ವಿದ್ಯೆಗಳಲ್ಲಿ
ಮೇಟಿ ವಿದ್ಯೆಯೇ ಮೇಲು
ನೀ ಜೊತೆಗಿದ್ದರೆ ಹಸನು
ನಮ್ಮ ಈ ಬಾಳು
ಆಹಾರ ಕೊಟ್ಟ ರೈತನೇ
ನಿನಗಿದೋ ಕೋಟಿ ನಮನ
ನನ್ನ ಬೆಳೆಸಿದ ನಿನಗೆ
ಇದೋ ನನ್ನ ವಂದನಾ
ಪ್ರಥಮ ಪಿ. ಯು. ಸಿ
ಕ್ರೈಸ್ಟ್ ಕಿಂಗ್ ಕಾರ್ಕಳ
ಕಾರ್ಕಳ ತಾಲೂಕು ಉಡುಪಿ ಜಿಲ್ಲೆ
*******************************************
*******************************************
ವೀರ ಯೋಧರು - ಕವನ
---------------------------------------
ದೇಶವ ಕಾಯುವ ವೀರ ಯೋಧರು
ಅವರೇ ನಮ್ಮಯ ಕಾವಲುಗಾರರು
ಕುಟುಂಬವ ತೊರೆದು ಬದುಕುವ
ಪ್ರೀತಿಯ ದೇಶದ ವೀರರು
ಕ್ರೂರರೊಡನೆ ಸಮರ ಮಾಡಿ
ಗೆದ್ದು ಬರುವ ಸಾಧಕರು
ತನ್ನ ಜೀವವನ್ನು ಪಣಕಿಟ್ಟು
ಧೈರ್ಯದಿ ಸಾಗುವ ಶಕ್ತಿವಂತರು
ಹಿಮಾಲಯದ ತಪ್ಪಲಲಿ ಹೋರಾಡುವವರು
ಮಳೆ ಚಳಿ ಗಾಳಿಯೆನ್ನದ ದೇಶವ ರಕ್ಷಿಸುವರು
ರಾತ್ರಿ ಹಗಲೆನ್ನದೆ ನಮಗಾಗಿ ಹೋರಾಡುವ
ವೀರಯೋಧರಿಗೆ ನಾವೆಂದೂ ವಂದಿಸುವ
................................................ ಯಶ್ಮಿತಾ
*********************************
ಮಳೆ-ಕವನ
----------------------
ಮಳೆಯ ಹನಿಯ ಸದ್ದು
ಗಿಡಗಳಿಗೆ ಆಯಿತು ಮದ್ದು
ಹಕ್ಕಿಗಳು ಕೂಗುವ ಇಂಪು
ನನ್ನ ಕಿವಿಗೆ ಆಯಿತು ತಂಪು
ಧರೆಗೆ ಮಳೆ ಬಂತು
ರೈತನಿಗೆ ಫಸಲಾಯಿತು
ಮಕ್ಕಳು ನೆನೆದರು ಮಳೆಯಲಿ
ಖುಷಿಯು ಮಕ್ಕಳ ಮುಖದಲಿ
ಅಮ್ಮನ ಪೆಟ್ಟು ಬಿಸಿ ಬಿಸಿ..
ಪುಸ್ತಕ ಕೊಟ್ಟು ಕೂರಿಸಿ
10ನೇ ತರಗತಿ
ಸರಕಾರಿ ಪ್ರೌಢಶಾಲೆ ಮಂಚಿ ಕೊಳ್ನಾಡು
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
******************************************** ********************************************
ಪುಟ್ಟ ತಂಗಿ
-----------------------
ನನ್ನಯ ತಂಗಿ ಪುಟ್ಟ ತಂಗಿ
ಕಿಟ ಕಿಟ ನಕ್ಕು ನಲಿಯುವಳು
ನನ್ನಯ ತಂಗಿಯ ಗೆಜ್ಜೆಯ ನಾದವು
ಗಿಜಿ ಗಿಜಿ ಎಂದು ಕೇಳುವುದು..!
ಬೆಕ್ಕು ಬಂದದು ಅವಳಿಗೆ ಕಂಡರೆ
ಆಟವು ಆಗಲೇ ಪ್ರಾರಂಭ
ಅವಳ ಜೊತೆಗೆ ಆಡುವ ಬೆಕ್ಕಿಗೆ
ಸಂಕಟವಾಗಲೆ ಆರಂಭ
ಪಾಠವ ಬರೆಯಲು ಹೊರಟರೆ
ನಾನು ಜಾಗ್ರತೆಯಾಗಿ ಇರಬೇಕು
ನನ್ನಯ ಪುಸ್ತಕ ಅವಳಿಗೆ ಕಂಡರೆ
ಪುಸ್ತಕ ಹೋಯಿತು ಎನಬೇಕು
ನನ್ನಯ ತಂಗಿಯ ಆಟವು ನೋಡಲು
ನನಗದು ಬಹಳ ಸಂತೋಷ
ಶಾಲೆಯ ಕಥೆಯನು ಕೇಳಲು ಅವಳಿಗೆ
ತುಂಬಾ ತುಂಬಾ ಉತ್ಸಾಹ
9ನೆ ತರಗತಿ
ಮಹಾಜನ ಸಂಸ್ಕೃತ ಕಾಲೇಜ್ ಹೈಸ್ಕೂಲ್ ಪೆರಡಾಲ ನೀರ್ಚಾಲ್
ಕಾಸರಗೋಡು ಜಿಲ್ಲೆ
*******************************************
*******************************************
ಅಪ್ಪ
----------------
ಅಪ್ಪ ಅಪ್ಪ
ನೀ ತಿದ್ದಿ ತೀಡುವೆ ತಪ್ಪ
ನಿನಗಿದೆ ತುಂಬಾ ಕಷ್ಟ
ಇದು ತಿಳಿವುದು ನನಗೆ ಸ್ಪಷ್ಟ
ನಿನಗೆ ಬರುವುದೊಮ್ಮೊಮೆ ಕೋಪ
ನಾ ತಿಳಿಯಲಾರೆ ನಿನ್ನ ತಾಪ
ನೀ ಹೇಳಿಕೊಡುವೆ ಏನೆಂದು ಪ್ರೀತಿ
ಹಾಗೆ ಹೇಳಿಕೊಡುವೆಯೂ ನೀತಿ
ನನ್ನಲ್ಲಿದೆ ತುಂಬಾ ಅಧೈರ್ಯ
ನೀ ತುಂಬಿದೆ ನನಗೆ ಧೈರ್ಯ
ನೀ ತುಂಬಿದೆ ನನಗೆ ಸ್ಪೂರ್ತಿ
ನಾ ತರುವೆ ನಿನಗಾಗಿ ಕೀರ್ತಿ
.................................ವೀಣಾ ಎಲ್ ಗಾಣಿಗೇರ
****************************************
ಕರುನಾಡು - ಕನ್ನಡಾಂಬೆ
_____________________
ನಮ್ಮಯ ನಾಡು ಕರುನಾಡು
ಇಲ್ಲಿಯ ಸೊಬಗನು ನೋಡು
ಕನ್ನಡಾಂಬೆಯ ಮನವು ನಿರ್ಮಲವು
ಕರುನಾಡು ನಮಗೆ ಸ್ವರ್ಗವು
ಕನ್ನಡ ತಾಯಿಯ ಮಕ್ಕಳು ನಾವು
ಕನ್ನಡ ತಾಯಿಯ ಮಡಿಲ ಮರೆಯದಿರಿ
ನಾವು - ನೀವು
ನಾಡಿನ ಸಸ್ಯರಾಶಿಗಳ ಬಣ್ಣವೇ ಹಸಿರು
ಹಸಿರಿನಲ್ಲಿರುವುದು ನಮ್ಮುಸಿರು
ನಾಡಿನ ಒಳಿತಿಗಾಗಿ ಶ್ರಮಿಸಿರಿ
ತಾಯ ನಾಡಿಗೆ ಎಂದೂ ವಿದಾಯ
ಹೇಳದಿರಿ...
9 ನೇ ತರಗತಿ
ಕೆ.ಎಸ್.ಪಿ.ಎಂ.ಪಿ. ಜಿ. ಎಚ್. ಎಸ್
ಪೆರುವಾಜೆ ಕಾರ್ಕಳ ತಾಲೂಕು
ಉಡುಪಿ ಜಿಲ್ಲೆ
****************************************
****************************************
ನಮ್ಮ ನಾಡು
-----------------------------
ನಮ್ಮ ನಾಡಿನ ಜನರ ನಡತೆ
ನೋಡಿ ಲೋಕವನ್ನೇ ಮರೆತೆ
ಇಲ್ಲಿಯ ಜನರ ಸನ್ನಡತೆ
ನೋಡಿ ಬರೆದೆನೊಂದು ಕವಿತೆ
ಇಲ್ಲಿ ಎಲ್ಲರು ಅಹಿಂಸೆಯ ಮೂರ್ತಿ
ತಂದಿರುವರು ದೇಶಕೆ ಕೀರುತಿ
ಕನ್ನಡ ಭಾಷೆಯೆ ನಮಗೆಲ್ಲ ಸ್ಪೂರ್ತಿ
ಇಲ್ಲಿ ಯಾರು ಇಲ್ಲ ಸ್ವಾರ್ಥಿ
ಇಲ್ಲಿಯ ಕವಿಗಳಾದ ಪಂಪ ರನ್ನ ಪೊನ್ನ
ಇವರ ಕೃತಿಗಳೆಷ್ಟು ಚೆನ್ನ
ಓದುವಾಗ ತುಂಬಿ ಬರುವುದು ಮನ
ಈ ಕನ್ನಡ ಭಾಷೆ ತೆರೆಯಿತು ನನ್ನ ಕಣ್ಣ.
..................................................ಪೃಥ್ವಿ ಶೆಟ್ಟಿ
10 ನೇ ತರಗತಿ
ಕೆ.ಎಸ್.ಪಿ.ಎಂ.ಪಿ. ಜಿ. ಎಚ್. ಎಸ್
ಪೆರುವಾಜೆ ಕಾರ್ಕಳ ತಾಲೂಕು
ಉಡುಪಿ ಜಿಲ್ಲೆ
****************************************
****************************************
ದೋಸೆ
--------------------
ದೋಸೆ ದೋಸೆ ದೋಸೆ
ಬಗೆ ಬಗೆ ದೋಸೆ
ಕಂದು ಬಣ್ಣದ ರಾಗಿ ದೋಸೆ
ಕೆಂಪು ಬಣ್ಣದ ಟೊಮೇಟೊ ದೋಸೆ
ಗುಲಾಬಿ ಬಣ್ಣದ ಬೀಟ್ರೂಟ್ ದೋಸೆ
ಕೇಸರಿ ಬಣ್ಣದ ಕ್ಯಾರೆಟ್ ದೋಸೆ
ಹಸಿರು ಬಣ್ಣದ ಪಾಲಾಕ್ ದೋಸೆ
ಸ್ವಾತಂತ್ರ್ಯ ದಿನಕೆ
ಕೇಸರಿ ಬಿಳಿ ಹಸಿರಿನ ದೋಸೆ
ತಿನ್ನಲು ನನಗೆ ಬಲು ಆಸೆ
ನಂತರ ತಿಳಿಯಿತು
ಇದು ಬರೀ ನನ್ನ ಕನಸೇ...... !!!
.............................................ಕಾವ್ಯ. ಬಿ. ಕೆ
***************************************
ಬಣ್ಣದ ಗಿಳಿ
--------------------
ಗಿಳಿ ಗಿಳಿ ಗಿಳಿ
ಮರದಿಂದ ಇಳಿ
ಬಾರೆ ನನ್ನ ಬಳಿ
ಯಾರು ಹಚ್ಚಿದರು?
ತುಟಿಗೆ ಬಣ್ಣ
ಮೈ ತುಂಬಾ ತಿಳಿ
ಹಸಿರು ಬಣ್ಣ
ಕುಕ್ಕಿ ತಿನ್ನುವೆ ಮೆಣಸಿನ ಹಣ್ಣ
ಮರದಲಿ ಸೀಬೆಹಣ್ಣ
ಕಣ್ಣು ಯಾಕೆ ಕೆಂಪು ಮಣಿ?
ದೇವರು ಮಾಡಿದ ಸುಂದರಿ
ಗುಟುಕು ಕೊಡು ನಿನ್ನ ಮರಿಗೆ
ಮತ್ತೆ ಬಾ ನನ್ನ ಬಳಿಗೆ.
.............................................ಕಾವ್ಯ. ಬಿ. ಕೆ
***************************************
ಅಮ್ಮ ಅಮ್ಮ
ನನ್ನಮ್ಮ
ಭೂಮಿಗೆ ತಂದ ದೇವತೆ
ನೀನಮ್ಮ
ನಾನು ಮಾಡುವ,
ತಪ್ಪನ್ನೆಲ್ಲ ಕ್ಷಮಿಸಮ್ಮ,
ಓದಲು,ಬರೆಯಲು,
ಕಲಿಸಮ್ಮ...!!!
.............................................ಕಾವ್ಯ. ಬಿ. ಕೆ
***************************************
ಕಾ...ಕಾ... ಕಾಗೆ
ಬಾರೆ
ಹಾರುತ ಮೆಲ್ಲಗೆ,
ಕೋಗಿಲೆ
ರಾಗ ನಿನಗಿಲ್ಲ,
ನೋಡಲು
ಒಂದೇ ತರವಲ್ಲ?
7 ನೇ ತರಗತಿ
ಶ್ರೀ ರಾಮ ಶಾಲೆ ವೇದಶಂಕರ ನಗರ,
ನಟ್ಟಿಬೈಲು, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************
*******************************************
ಅಮ್ಮ - ( ಕವನ )
----------------------------
ನನ್ನ ಪ್ರೀತಿಯ ಅಮ್ಮ
ಕೊಟ್ಟೆ ನನಗೆ ಜನ್ಮ
ಒಂಬತ್ತು ತಿಂಗಳ ಜಾಗ
ಹೇಗೆ ಮರೆಯಲಿ ಈ ತ್ಯಾಗ
ನೀನು ನಕ್ಕರೆ
ನನ್ನ ಜೀವನ ಸಕ್ಕರೆ
ಬದುಕಿನ ಬಂಗಾರ
ನೀನಮ್ಮ
ಹೇಗೆ ಮರೆಯಲಿ ನಿನ್ನ ನೆನಪಮ್ಮ
...................................................... ಶ್ರದ್ಧಾ
****************************************
ನಾವು ಬಾಳುವ - ಕವನ
------------------------------------
ಹಸಿರೇ ನಮ್ಮ ಉಸಿರು
ಕಾಡು ಬೆಳೆಸಿ ನಾಡನೆಲ್ಲ
ಹಚ್ಚ ಹಸಿರಾಗಿಸಿ
ನಾವು ಬಾಳುವ
ಗಿಡ ಮರ ನೆಟ್ಟು
ಕೃಷಿಯನು ಮಾಡಿ
ನಾವು ಬಾಳುವ
ಹಚ್ಚ ಹಸಿರನ್ನು ಇಟ್ಟು
ಪ್ರಾಣಿ ಪಕ್ಷಿಗಳಿಗೆ
ಆಶ್ರಯ ಕೊಟ್ಟು
ನಾವು ಬಾಳುವ
ಪರಿಸರ ಉಳಿಸಿ
ಗಿಡ ಮರ ಬೆಳೆಸಿ
ಸುಖದಿಂದ
ನಾವು ಬಾಳುವ
7ನೇ ತರಗತಿ
ಶಾರದಾ ಗಣಪತಿ ವಿದ್ಯಾಕೇಂದ್ರ ಕೈರಂಗಳ,
ಬಂಟ್ವಾಳ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ
*******************************************
*******************************************