-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 16

ಬದಲಾಗೋಣವೇ ಪ್ಲೀಸ್....! ಸಂಚಿಕೆ - 16

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು



     ಹಣೆಪಟ್ಟಿ ಸಾಕು.... ಹಿಮ್ಮಾಹಿತಿ ಬೇಕು
               (ಮುಂದುವರಿದ ಭಾಗ)
 ---------------------------------------------
ಘಟನೆ - 1:
ಅಂದು ಶನಿವಾರ. ಎಂದಿನಂತೆ ಕೆಲಸ ಮುಗಿಸಿ ಸಂಜೆ ಮನೆಗೆ ತಲುಪಿದಾಗ ಮುದ್ದಿನ ಮಗಳು ಚಿನ್ಮಯಿ ಕಾಣಿಸಲಿಲ್ಲ. ಎದುರುಗೊಂಡ ಹೆಂಡತಿಯಲ್ಲಿ ," ಲೇ ...! ಚಿನ್ಮಯಿ ಎಲ್ಲಿ ? " ಎಂದು ಕೇಳಿದಾಗ ಆಕೆ ಬೇಸರ ಭರಿತ ಮುಖದಿಂದ " ಶಾಲೆಯಿಂದ ಮಧ್ಯಾಹ್ನ ಬಂದವಳು ಊಟ ಮಾಡದೆ ಸೀದಾ ಕೋಣೆಯೊಳಗೆ ಹೋಗಿದ್ದಾಳೆ. ಏನೂ ಅಂತಾ ಹೇಳ್ತಿಲ್ಲ. ಒಂದೇ ಸವನೆ ಅಳುತ್ತಿದ್ದಾಳೆ. ಹೊರಗೆ ಬರುತ್ತಿಲ್ಲ. ತುಂಬಾನೇ ನೊಂದುಕೊಂಡಿದ್ದಾಳೆ... ಹೋಗಿ ಸಮಧಾನ ಪಡಿಸಿ" ಎಂದಳು.
        ನೇರಾ ಕೋಣೆಯೊಳಗೆ ಪ್ರವೇಶಿಸಿದಾಗ ಮಂಚದ ಮೂಲೆಯಲ್ಲಿ ಅಳುತ್ತಾ ಕೂತಿದ್ದ ಚಿನ್ಮಯಿ ಕಾಣಿಸಿದಳು...... " ಮಗಳೇ ಚಿನ್ಮಯಿ " ಎಂದು ಕರೆದಾಗ ಅಲ್ಲಿಂದಲೇ ಎದ್ದು ಓಡಿಕೊಂಡು ನನ್ನ ತಬ್ಬಿಕೊಂಡು ಒಂದೇ ಸಮನೇ ಅಳತೊಡಗಿದಳು. ಹಾಗೋ ಈಗೋ ಸ್ವಲ್ಪ ಸಮಧಾನಪಡಿಸಿದ ನಂತರ ಗದ್ಗದಿತ ಸ್ವರದಿಂದ... "ಅಪ್ಪಾ ..ನಾನು ನಿನಗೆ ಹೇಗೆ ಕಾಣಿಸುತ್ತೇನೆ . ನಾನು ನಾಲಾಯಕ್ ಹುಡುಗಿಯೇ... ಪೆದ್ದಿಯೇ.... ವೇಸ್ಟ್ ಬಾಡಿಯೇ .... ಶಾಲೆಗೆ ಭಾರವೇ ..... ಹೇಳಪ್ಪ ಪ್ಲೀಸ್...! ಹೇಳಪ್ಪ" ಎಂದು ತಬ್ಬಿಕೊಂಡು ಮತ್ತೆ ರೋದಿಸತೊಡಗಿದಳು. ಒಂದು ಕ್ಷಣ ಮೌನವಾದೆ. ಮನೆಯಲ್ಲಿ ಸದಾ ಚುರುಕಾಗಿದ್ದ ಎಲ್ಲಾ ಕೆಲಸಗಳಲ್ಲಿ ನನಗೆ ಜತೆಗಾತಿಯಾಗಿ ಸಾಥ್ ಕೊಡುತ್ತಿದ್ದ ಕ್ರಿಯಾಶೀಲ ಹುಡುಗಿ ಚಿನ್ಮಯಿ ಯಾಕೆ ಈ ರೀತಿ ರೋದಿಸುತ್ತಿದ್ದಾಳೆ ಎಂದು ಚಿಂತಾಕ್ರಾಂತನಾದೆ. ಮಗಳನ್ನು ಸಮಧಾನಪಡಿಸಿ ವಿಷಯ ಕೇಳಿದಾಗ ದಿಗಿಲುಗೊಂಡೆ. ಶಾಲಾ ಗಣಿತ ಅವಧಿಯಲ್ಲಿ ಕರಿಹಲಗೆ ಮೇಲೆ ಭಿನ್ನರಾಶಿ ಲೆಕ್ಕ ಮಾಡುವಾಗ ತಪ್ಪಿದ್ದಕ್ಕೆ ಶಿಕ್ಷಕಿಯು ಎಲ್ಲರೆದುರು ಮೇಲಿನ ಎಲ್ಲಾ ಹಣೆಪಟ್ಟಿ ಕೊಟ್ಟ ಕಾರಣ ವೈಯಕ್ತಿಕವಾಗಿ ನೊಂದು ಈ ರೀತಿ ವರ್ತಿಸುತ್ತಿದ್ದಳು. ಅವಳನ್ನು ಪುನಃ ಮೊದಲ ಸ್ಥಿತಿಗೆ ತರುವುದು ಹೇಗೆ?...... ತಂದೆಯ ಸ್ಥಾನದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ...!!
       ಇದೇ ರೀತಿ ನಾವು ಶಾಲೆ ಅಥವಾ ಮನೆಯಲ್ಲಿ ಮಕ್ಕಳನ್ನು ಮಕ್ಕಳಂತೆ ನೋಡದೆ ಬೇರೆ ಬೇರೆ ಕಾರಣಗಳಿಗೆ ಹಣೆಪಟ್ಟಿ ಕೊಟ್ಟಾಗ ಮುಗ್ಧ ಮಕ್ಕಳ ನೋವನ್ನು ಪರಿಹರಿಸುವವರು ಯಾರು ?
ಘಟನೆ - 2 :
       ನಮ್ಮ ಪಕ್ಕದ ಮನೆಯ ಮಗುವಿಗೆ ಬೆಳಗ್ಗೆ ಶಾಲೆಗೆ ಹೋಗುವ ಸಮಯ ಎಂದರೆ ತುರ್ತುಪರಿಸ್ಥಿತಿಯ ವಾತಾವರಣ. ಒಂದೆಡೆ ಮನೆಯ ಹೊರಗಡೆ ಗೇಟ್ ಹತ್ತಿರ ಹಾರ್ನ್ ಮಾಡಿ ಕರೆಯುತ್ತಿರುವ ಶಾಲಾ ವಾಹನ . ಇನ್ನೊಂದೆಡೆ ಮಗುವನ್ನು ಬೈದುಕೊಂಡು ಸೋಮಾರಿ , ದಂಡ ಪಿಂಡ, ವೇಸ್ಟ್ ಬಾಡಿ ಎಂದು ಹಣೆಪಟ್ಟಿ ಕಟ್ಟುತಾ ಆತುರಾತುರವಾಗಿ ಸ್ನಾನ ಮಾಡಿಸಿ , ಬಟ್ಟೆಹಾಕಿ , ತಿಂಡಿಯನ್ನು ಬಾಯಿಗೆ ತುರುಕಿ ಕೈಯಲ್ಲಿ ಎಳೆದುಕೊಂಡು ಹೋಗಿ ಶಾಲಾ ವಾಹನದೊಳಗೆ ತಳ್ಳಿಬಿಟ್ಟು ನಿಟ್ಟುಸಿರು ಬಿಡುವ ತಂದೆ- ತಾಯಿ. ಇದರ ಮಧ್ಯೆ ಸಾವರಿಸಕೊಂಡು ಇನ್ನೇನೂ ಶಾಲಾ ವಾಹನದೊಳಗೆ ಕುಳಿತುಕೊಳ್ಳುವ ಎನ್ನುವಾಗಲೇ ಚಾಲಕ ಹಾಗೂ ನಿರ್ವಾಹಕರಿಂದ ಬೈಗುಳ.. ಅಂತೂ ಇಂತೂ ಶಾಲೆ ತಲುಪಿದಾಗ ಹೈರಾಣಾದ ಮಗು ಆ ದಿನದ ಕಲಿಕೆಗೆ ಯಾವ ರೀತಿ ಉತ್ಸಾಹ ಹೊಂದಿರಬಹುದು....! ಆತ ಆ ದಿನ ಏನನ್ನು ಕಲಿಯಬಹುದು....!! ಇದು ಹೆಚ್ಚಿನ ಮಕ್ಕಳ ಅವಸ್ಥೆ...!!! ಈ ಪ್ರಕ್ರಿಯೆಯಲ್ಲಿ ಕೊನೆಗೆ ರೆಡಿಮೇಡ್ ಹಣೆಪಟ್ಟಿ ಕೊಟ್ಟು ಕೈತೊಳೆದುಕೊಂಡು ಹಿರಿಯರು ತಮ್ಮ ಕೆಲಸ ಮುಗಿಸುತ್ತಾರೆ. ಇಲ್ಲಿ ಯಾರಲ್ಲಿ ತಪ್ಪುಹುಡುಕುವುದು. ಸಮಯಕ್ಕೆ ಸರಿಯಾಗಿ ಶಾಲೆಗೆ ಸಿದ್ಧನಾಗಿರಲು ಕಲಿಸದ ತಂದೆ- ತಾಯಿಗಳದ್ದೇ ಅಥವಾ ಸಿದ್ಧವಿರಲು ಕಲಿಯದ ಮಗುವಿನದ್ದೇ ?... ನಿಮ್ಮ ಅಭಿಪ್ರಾಯವೇನು..?
       ನಿಸ್ಸಂದೇಹವಾಗಿ ಇಲ್ಲಿ ತಪ್ಪು ಮಕ್ಕಳಿಗಿಂತ ಹಿರಿಯರದ್ದೆ ಎಂಬುವುದು ನೂರಕ್ಕೆ ನೂರು ಸತ್ಯ. ಚಿಕ್ಕ ಮಗುವನ್ನು ಅತಿಯಾಗಿ ಮುದ್ದಿಸಿ ಎಲ್ಲದಕ್ಕೂ ಅಪ್ಪ ಅಮ್ಮನನ್ನೇ ಅವಲಂಬಿತರನ್ನಾಗಿ ಬೆಳೆಸಿದ ಪಾಲಕರು ಕೊನೆಗೆ "ಮಗು ಏನೇನು ಕಲಿತಿಲ್ಲ" ಎಂದು ಬೈದು ಸಮಧಾನಗೊಳ್ಳುವುದು. ಇಲ್ಲಿ ಮಗುವು ಸಮಯಕ್ಕೆ ಸರಿಯಾಗಿ ಸ್ವಂತವಾಗಿ ಶಾಲೆಗೆ ಸಿದ್ಧರಾಗಿರುವುದನ್ನು ಕಲಿಸದಿರುವುದು ಹೆತ್ತವರ ತಪ್ಪು...! ಇಂಥಹಾ ಮಕ್ಕಳ ಸರಳ ಸಮಸ್ಯೆಗಳನ್ನು ಪ್ರತಿಯೊಂದು ಮಗುವಿನಲ್ಲೂ ಕಾಣಬಹುದು. 
        ಇಂತಹ ಹಲವಾರು ವಿಭಿನ್ನ ಘಟನೆಗಳಿಗೆ ಪರಿಹಾರವೇ ಹಣೆಪಟ್ಟಿ ಬಿಟ್ಟು ಹಿಮ್ಮಾಹಿತಿ ನೀಡುವುದು. ತಪ್ಪುಗಳನ್ನು ಗುರುತಿಸಲು ಕಲಿಸಿ ಸರಿಪಡಿಸಲು ಅವಕಾಶ ನೀಡುವುದು. ಒಂಥರಾ ಹಸಿದವನಿಗೆ ಮೀನು ಕೊಡುವುದಕ್ಕಿಂತ ಮೀನು ಹಿಡಿಯಲು ಕಲಿಸಿದಂತೆ. ಸುತ್ತಲೆಲ್ಲ ಕತ್ತಲು ತುಂಬಿದ ಕೋಣೆಯಲ್ಲಿ ಅಯ್ಯೋ ಕತ್ತಲು ಎನ್ನುವ ಬದಲು ಬೆಳಕಿನ ದೀಪವನ್ನು ಹಚ್ಚುವಂತೆ.
       ಮಕ್ಕಳನ್ನು ಅತಿಯಾಗಿ ಮುದ್ದಿಸದೆ ಬಾಲ್ಯದಲ್ಲಿಯೇ ಮಕ್ಕಳು ಪಾಲಿಸಬಹುದಾದ ಸರಳ ನಿಯಮಗಳನ್ನು ರೂಪಿಸಿ ಅದನ್ನು ಗೌರವದಿಂದ ಪಾಲಿಸಲು ಪ್ರೇರೆಪಿಸಬೇಕು. ಉದಾಹರಣೆಗಾಗಿ ಬೇಗನೆ ಏಳುವುದು , ವೈಯಕ್ತಿಕ ಸ್ವಚ್ಚತೆ ಮಾಡಿ ತಿಂಡಿ ತಿನ್ನುವುದು , ಶಾಲಾ ಬ್ಯಾಗ್ ಸಿದ್ದಪಡಿಸುವುದು , ಶಾಲೆಗೆ ಹೊರಡುವುದು , ಶಾಲಾ ಕೆಲಸಗಳನ್ನು ಆಯಾ ದಿನವೇ ಮುಗಿಸುವುದು... ಇತ್ಯಾದಿ ನಿಯಮಗಳನ್ನು ನಿಯಮಿತವಾಗಿ ಹಾಗೂ ಪ್ರೀತಿಯಿಂದ ಪುನಾರಾವರ್ತನೆ ಮಾಡಿದಲ್ಲಿ ಅವು ಮಕ್ಕಳ ಮೇಲೆ ಶಾಶ್ವತ ಪರಿಣಾಮ ಬೀರುತ್ತದೆ. ದೈಹಿಕ ದಂಡನೆಗಿಂತಲೂ ಮಾನಸಿಕ ಬದಲಾವಣೆ ಪ್ರಭಾವಶಾಲಿಯಾಗಿರುತ್ತದೆ. ಮಕ್ಕಳಿಗಾಗಿ ಮನೆಯಲ್ಲಿ ಅಥವಾ ಶಾಲೆಯಲ್ಲಿ ಕಠಿಣ ನಿಯಮಗಿಂತ ಅನುಸರಿಸಬಹುದಾದ ಸರಳ ನಿಯಮಗಳನ್ನು ರೂಪಿಸಬೇಕು. ನಿಯಮಗಳ ಮಹತ್ವವನ್ನು ಹಾಗೂ ಲಾಭಗಳನ್ನು ವಿವರಿಸಿ ಅರ್ಥೈಸುವ ಅಗತ್ಯವಿದೆ. ಮಕ್ಕಳು ಅನುಕರಣೆಯಿಂದ ಹೆಚ್ಚಾಗಿ ಕಲಿಯುವುದರಿಂದ ಹಿರಿಯರಾದ ನಾವು ಆ ನಿಯಮಗಳನ್ನು ಮೊದಲು ಮಾದರಿಯಾಗಿ ಅನುಸರಿಸಿ ತೋರಿಸುವ ಅಗತ್ಯವಿದೆ (ಮಕ್ಕಳಿಗೆ ನಿಯಮ ಮಾಡುವವರೇ ಹೆಚ್ಚಾಗಿದ್ದಾರೆ ಹೊರತು ಮಾದರಿಯಾಗಿ ಪಾಲಿಸಿ ತೋರಿಸುವವರಿಲ್ಲ).
ನಮ್ಮ ನಿರೀಕ್ಷೆಗಳು ಮಗುವಿನ ಮಟ್ಟಕ್ಕಿರಬೇಕೇ ಹೊರತು ನಮ್ಮ ಮಟ್ಟಕ್ಕಿರಬಾರದು. ಪ್ರತಿಯೊಂದು ಮಗುವು ಭಿನ್ನ ಹಾಗೂ ಪ್ರತಿಭಾಶಾಲಿ ಎಂಬುದನ್ನು ಮನಗಂಡು ಮಗುವಿನ ಪ್ರಾಯ , ದೈಹಿಕ ಸಾಮರ್ಥ್ಯ, ಪರಿಸರ ಹಾಗೂ ಲಭ್ಯ ಸೌಲಭ್ಯಗಳ ಮೇಲೆ ನಿರೀಕ್ಷೆಗಳನ್ನು ಇಡಬೇಕು. ನಮ್ಮ ನಿರೀಕ್ಷೆ ಅತಿಯಾದರೆ (ಹೆಚ್ಚಿನ ಅಂಕಗಳು , ಪ್ರಶಸ್ತಿಗಳು, ಬಹುಮಾನಗಳು ಇತ್ಯಾದಿ) ಮತ್ತು ಮಗುವು ಅದನ್ನು ಈಡೇರಿಸದಿದ್ದರೆ ನಮಗೆ ಹತಾಶೆ ನೋವು ಉಂಟಾಗಿ ಮಗುವಿಗೆ ಹೊಡೆಯುವುದು ಬೈಯುವುದು ಉಂಟಾಗುತ್ತದೆ. ಮತ್ತದೇ ಹಣೆಪಟ್ಟಿ ನೀಡುವ ಕೆಲಸ ಪ್ರಾರಂಭವಾಗುತ್ತದೆ...!!
        ಹಿಮ್ಮಾಹಿತಿ ನೀಡುವಾಗ ನಕರಾತ್ಮಕ ಪದಗಳಾದ ನಿಲ್ಲು , ಬೇಡ , ಸಾಧ್ಯವಿಲ್ಲ.. ಇತ್ಯಾದಿ ಪದಗಳನ್ನು ಬಳಸದೆ ಧನಾತ್ಮಕ ಪದಗಳಾದ ನಿನ್ನಿಂದ ಸಾಧ್ಯ. you can do , ನೀನೇ ಇದಕ್ಕೆ ಸಮರ್ಥ .... ಇತ್ಯಾದಿಗಳನ್ನು ಬಳಸಿದರೆ ಪರಿಣಾಮ ಹೆಚ್ಚು. ಓಡಬೇಡ ಬೀಳುತ್ತಿಯಾ ಅನ್ನುವ ಬದಲು ನಿಧಾನವಾಗಿ ನಡೆ ಎಂದೂ, ಊಟದ ಜತೆ ಆಟವಾಡಬೇಡ ಎನ್ನುವ ಬದಲು ನಿಧಾನವಾಗಿ ಊಟ ಮಾಡು ಎಂದೂ, ವಸ್ತುಗಳನ್ನು ಬೀಳಿಸಬೇಡ ಜಾಗ್ರತೆ ಎನ್ನುವ ಬದಲು ಗಟ್ಟಿಯಾಗಿ ಹಿಡಿದಿಕೋ ಎಂದು ಹೇಳಬೇಕು. ಮನೋ ವೈಜ್ಞಾನಿಕವಾಗಿಯೂ ಮಕ್ಕಳು ಯಾವುದನ್ನು ಹೆಚ್ಚು ಕೇಳುತ್ತಾರೋ ಅದೇ ಗಟ್ಟಿಯಾಗುತ್ತದೆ.
        ಧನಾತ್ಮಕ ಪದಗಳಾದ ಗುಡ್ , ಜೀನಿಯಸ್, ಬುದ್ಧಿವಂತ ಇತ್ಯಾದಿಗಳನ್ನು ನೇರವಾಗಿ ಹೇಳುವುದಕ್ಕಿಂತಲೂ ಯಾವ ಕಾರಣಕ್ಕಾಗಿ ಈ ಪದಗಳನ್ನು ಬಳಸುತ್ತೇವೆ ಎಂದು ನಿರ್ದಿಷ್ಟವಾಗಿ ಹೇಳಿದರೆ ಫಲಿತಾಂಶ ಹೆಚ್ಚಾಗುತ್ತದೆ. ನಿನ್ನ ವಿವರಣೆ ಶೈಲಿ ಜೀನಿಯಸ್ , ನಿನ್ನ ಅಕ್ಷರ ಸೂಪರ್ , ನಿನ್ನ ಭಾಗವಹಿಸುವಿಕೆಯ ಉತ್ಸಾಹ ನೋಡಿ ಖುಷಿಯಾಯಿತು ಗುಡ್...... ಇತ್ಯಾದಿಗಳು ಕೇವಲ ಗುಡ್ , ಜಿನಿಯಸ್... ಪದಗಳಿಗಿಂತ ಹೆಚ್ಚು ಪರಿಣಾಮಕಾರಿ. 
        ಹಿಮ್ಮಾಹಿತಿ ಪೂರ್ವಗ್ರಹ ಪೀಡಿತವಾಗಿರಬಾರದು, ವಸ್ತುನಿಷ್ಠವಾಗಿರಬೇಕು. ಹಿಮ್ಮಾಹಿತಿಯನ್ನು ಸಂದರ್ಭಕ್ಕನುಗುಣವಾಗಿ ಗುಂಪು ಅಥವಾ ವೈಯಕ್ತಿಕವಾಗಿ ನೀಡಬೇಕು. ಎಲ್ಲದಕ್ಕೂ ತಾಳ್ಮೆ ಮುಖ್ಯ. ನೆಟ್ಟ ಸಸಿಯು ಫಲ ಬರುವವರೆಗೆ ಕಾಯಬೇಕು. ಈಗ ತಾನೇ ನೆಟ್ಟ ಮಾವಿನ ಗಿಡದಲ್ಲಿ ಹಣ್ಣನ್ನು ನಿರೀಕ್ಷಿಸುವುದು ಮುರ್ಖತನ. ಅದಕ್ಕೆ ಅದರದ್ದೆ ಆದ ಸಮಯ ಬರುವವರೆಗೆ ಕಾಯಬೇಕಲ್ಲವೆ...... ಹಿಮ್ಮಾಹಿತಿ ನೀಡುವ ಕ್ರಿಯೆಗೆ ಬದಲಾಗೋಣ. ಬದಲಾಗೋಣವೇ ಪ್ಲೀಸ್..! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*******************************************


Ads on article

Advertise in articles 1

advertising articles 2

Advertise under the article