-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 15

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 15       ಗೋವಿಂದನ ದಯೆಯೊಂದಿದ್ದರೆ ಸಾಕೆಂದಾ..
                  ರಮಾರಮಣಗೋವಿಂದಾ..
       ಭಾರತ ಅದ್ಭುತಗಳ ನಾಡು. ಬಹಿರಂಗದ ಪ್ರಾಕೃತಿಕ ಸೌಂದರ್ಯದ ಈ ಬೀಡು ತನ್ನ ಅಂತರಂಗದ ಆಧ್ಯಾತ್ಮಿಕ ಚೆಲುವಿನಿಂದಾಗಿಯೂ ವಿಶಿಷ್ಟ ಜಾಗತಿಕ ಮನ್ನಣೆಯನ್ನು, ಅಸ್ಮಿತೆಯನ್ನು ಪಡೆದಿದೆ. ಇಲ್ಲಿ ಋಷಿಗಳ, ತಾಪಸಿಗಳ, ಸಂತರ, ದ್ವೈತ -ಅದ್ವೈತ ಸಿದ್ಧಾಂತ ಸಾಧಕರ, ಸೂಫಿಗಳ, ತತ್ವಪದಕಾರರ, ಶರಣರ ಅನುಭವ -ಅನುಭಾವ ಸಿದ್ಧಿಯ ರೋಚಕ, ಕೌತುಕ ಕಥೆಗಳನ್ನು ಕೇಳಿದರೆ ಮೈನವಿರೇಳುತ್ತದೆ. ನಾವು ಯಾವುದೊ ನೂತನ ಲೋಕದಲ್ಲಿ ವಿಹರಿಸುತ್ತಾ, ತೇಲುತ್ತಾ ಅಗೋಚರವಾದ, ದಿವ್ಯವಾದ ಅನುಭೂತಿಯನ್ನು ಪಡೆದಂತಾಗುತ್ತದೆ. 
     ದೇವರನ್ನು ಹುಡುಕುತ್ತಾ ಅರಸುತ್ತ ಹೋದ ಬಾಲ ಧ್ರುವನ ಪುರಾಣ ಕತೆಯನ್ನು ನಾವು ಬಲ್ಲೆವು. ಆದರೆ ಇದೇ ನಾಡಿನಲ್ಲಿ 19ನೇ ಶತಮಾನದಲ್ಲಿ 12 ವರ್ಷದ ಬಾಲಕನೊಬ್ಬ ನಾನು ಯಾರು ಎಂಬ ಜಿಜ್ಞಾಸೆಯಿಂದ ಅಂತರಂಗದ ಬೆಳಕನ್ನು ಅರಸುತ್ತಾ ಅರುಣಾಚಲ ಪರ್ವತದ ಗುಹೆಯಲ್ಲಿ ಏಕಾಂತವಾಗಿ ತಪವನ್ನಾಚರಿಸುವುದು ಎಂದರೆ ಅನೂಹ್ಯ. ತನ್ನ ಮೈಮೇಲಿನ ಪರಿವೆಯಿಲ್ಲದೆ ಧ್ಯಾನಸ್ಥನಾದ ಈ ಬಾಲಕನ ದೇಹದ ಮೇಲೆಲ್ಲಾ ಹುಳಹುಪ್ಪಟೆ ಇರುವೆಗಳು ಹರಿದಾಡುತ್ತಿರುವಾಗ ಬೇರೆ ತಾಪಸಿಗಳು ಅವನನ್ನು ಎತ್ತಿ ಬೇರೆ ಕಡೆ ಕುಳ್ಳಿರಿಸಿ ಶುಚಿಗೊಳಿಸಿದರಂತೆ. ಬಾಲ್ಯದಲ್ಲಿ ಚಾಮರಸನ ಪ್ರಭುಲಿಂಗಲೀಲೆ, ಅಲ್ಲಮಪ್ರಭುವಿನ ವಚನಗಳು, ಪೆರಿಯ ಪುರಾಣವನ್ನು ಓದಿ ಅದರಿಂದ ಪ್ರಭಾವಿತರಾದವರು. ತಮಿಳಿನ ಅರವತ್ತಮೂರು ನಾಯನ್ ಮಾರುಗಳ ಜೀವನ ಇವರ ಮೇಲೆ ಮಹಾ ಪ್ರಭಾವ ಬೀರಿದವು. ಮಧುರೆ ಮೀನಾಕ್ಷಿ ದೇವಾಲಯದಲ್ಲಿ ನಾಯನ್ ಮಾರ್ ಗಳು ಅಂದ್ರೆ ತಮಿಳು ಸಂತರ ಮೂರ್ತಿಗಳ ಮುಂದೆ ನಿಂತು ಅವರಂತಹ ಭಕ್ತಿ ತನ್ನಲ್ಲೂ ಮೂಡಬೇಕೆಂದು ಭಾವುಕರಾಗಿ ಅತ್ತು ಬಿಡುತ್ತಿದ್ದರು. 
    ಇವರು ಏಕಾಂತ ಬಯಸಿದರು. ಆದರೆ ಇವರ ತಪೋ ಮಹಿಮೆಯನ್ನು ತಿಳಿದು, ಕಂಡು ಜನರು ಇವರಿಂದ ಆಕರ್ಷಿತರಾಗಿ ಮತ್ತೆ, ಮತ್ತೆ ದರ್ಶನ ಮಾಡಲು ಬರುತ್ತಿದ್ದರಂತೆ. ಇವರೊಡನೆ ಅನೇಕ ಪ್ರಶ್ನೆಗಳನ್ನು, ಸಂದೇಹಗಳನ್ನು, ಜಿಜ್ಞಾಸೆಯನ್ನು, ಭಿನ್ನವಿಸಿಕೊಂಡು ಪರಿಹಾರ ಪಡೆಯುತ್ತಿದ್ದರು. ಇದರಿಂದ ಅವರ ಮಹಿಮೆ ಲೋಕಾಂತ ವಾಯಿತು. 
        ಈ ಸಂತ ತನ್ನ 16ನೇ ವಯಸ್ಸಿನಲ್ಲಿ ಮರಣದ ವಿಶಿಷ್ಟ ಅನುಭವ ಪಡೆದರು. ಅವರೇ ಹೇಳುವಂತೆ ಒಂದು ದಿವ್ಯ ಪ್ರವಾಹಕ್ಕೆ, ಆವೇಶಕ್ಕೆ ಅವರು ಒಳಗಾದರು. ಅದನ್ನು ನಂತರ ಅವರೇ ಆತ್ಮ ಸೆಲ್ಫ್ ಎಂದು ಗುರುತಿಸಿದರು. ಆನಂತರ ಶಿವನ ಅಥವಾ ಜ್ಞಾನಿಯ ಮನಸ್ಥಿತಿಯನ್ನು ಹೊಂದಿದರು. ಆರು ವಾರಗಳ ಬಳಿಕ ಮಧುರೈ ಯನ್ನು ಬಿಟ್ಟು ಅರುಣಾಚಲಕ್ಕೆ ಇವರು ಪಾದ ಬೆಳೆಸಿದರು. ಭಕ್ತರು ಅವರನ್ನು ದೇವರ ಅವತಾರ ಎಂದು ನಂಬಿದರು. ಸಾವಿರಾರು ಭಾವುಕರು ದರ್ಶನಕ್ಕಾಗಿ ಬರತೊಡಗಿದರು. ಇವರಲ್ಲಿ ಪಂಡಿತ-ಪಾಮರರು ಪಾಶ್ಚಿಮಾತ್ಯ ತತ್ವಜ್ಞಾನಿಗಳು, ಭಾಷಾ ಅಧ್ವರ್ಯುಗಳು, ಕಾವ್ಯ ಶಾಸ್ತ್ರಜ್ಞರು ಸೇರುತ್ತಿದ್ದರು. ಪ್ರತಿದಿನ ಅವರು ಭಕ್ತರೊಂದಿಗೆ ನಡೆಸುತ್ತಿದ್ದ ಸಂವಾದದಿಂದ ಮೂಡಿಬರುತ್ತಿದ್ದ ಪ್ರಶ್ನೋತ್ತರಗಳನ್ನು ಮಹಾ ಪಂಡಿತರು, ಸಂತರು ಬರೆದುಕೊಂಡು ಸಂಗ್ರಹಿಸಿಡುತ್ತಿದ್ದರು. ಅದೊಂದು ಆತ್ಮೋನ್ನತಿಯ ಸನ್ಮಾರ್ಗ, ಅನುಸಂಧಾನ. ಆತ್ಮಜ್ಞಾನ, ಸ್ವ-ಜಿಜ್ಞಾಸೆಯ ಮಾರ್ಗ ಇವರು ತೋರಿದ ವಿಶಿಷ್ಟ ಮುಕ್ತಿಪಥವಾಗಿತ್ತು. 
        ಕಾವ್ಯಕಾಂತ ಶ್ರೀಗಣಪತಿ ಶಾಸ್ತ್ರಿ ಸಕಲ ವೇದ-ಪಾರಂಗತರು ಶೃತಿ, ತಂತ್ರ, ಯೋಗ ಆಗಮ ಜ್ಞಾನಿಗಳು, ಪ್ರಕಾಂಡ ಪಂಡಿತರು. ಶಿವದರ್ಶನ ಸಾಧ್ಯವಾಗದೆ ಈ ಸಂತರ ಉಪದೇಶ ಕೇಳಿದ ಮೇಲೆ ಆನಂದತುಂದಿಲರಾಗಿ ಅವರನ್ನೇ ಭಗವಾನ್ ಎಂದು ಕರೆದುಬಿಟ್ಟರು. 
          ಒಂದು ಸಲ ಶಿಷ್ಯರ ಸಂಘದಲ್ಲಿರುವಾಗಲೇ ಈ ಸಂತರು ಮೂರ್ಛೆ ತಪ್ಪಿ, ದೃಷ್ಟಿ ಕಳೆದುಕೊಂಡು, ತಲೆತಿರುಗಿ ಹೃದಯ ಸ್ತಂಭನವಾಗಿ ಉಸಿರು ಕಳೆದುಕೊಂಡರು. ಚರ್ಮ ನೀಲಿಯಾಗಿ ಹತ್ತು ಹದಿನೈದು ನಿಮಿಷಗಳ ನಂತರ ದೇಹದಲ್ಲಿ ಒಂದು ಪ್ರವಾಹ ಸಂಚರಿಸಿ ಎಲ್ಲವೂ ಮರು ಆರಂಭವಾಯಿತು. ಭಕ್ತರಿಂದ ದೂರವಿರಲು ಬಯಸಿದಷ್ಟು ಇವರು ಹತ್ತಿರವಾದರು. ತನ್ನನ್ನು ಅನುಸರಿಸಬಾರದು ಬೇರೆ ಪಂಥ ಮಾಡಬಾರದು ಎಂದು ಆಗ್ರಹಿಸಿದರು. ಕಾಲಾನುಭಾಗದಲ್ಲಿ ಜನರಿಗೆ ದರ್ಶನ ಕೊಡುವುದು ತನ್ನ ಕಾಯಕ ಎಂದು ಪರಿಭಾವಿಸಿದರು. ಆತ್ಮ ಅಂದರೆ ಸತ್ ಚಿತ್ ಆನಂದ, ಸಮಗ್ರ ಅರಿವು. ಅದು ಅವ್ಯಕ್ತ, ಅವ್ಯಾಹತ. ಆತ್ಮ ಶಾಶ್ವತ ನಿರಂತರ. ಅದು ನಮ್ಮ ಮನೋಭಾವದ ಇರುವಿಕೆ ಹಾಗೂ ಯೋಚನಾ ಮುಕ್ತತೆ. 
         ಅವರ ಇಷ್ಟದ ಸಂಗತಿ ಮೌನ. ಮೌನವು ಮಾತಾಡುತ್ತದೆ ಅನ್ನುತ್ತಿದ್ದರು. ಮೌನದಲ್ಲೇ ಸ್ವಅರಿವು ಸಿದ್ಧಿಸುವುದು. ಉನ್ನತ ಜ್ಞಾನಿಗೆ ಮೌನದ ಮಹತ್ವ ವೇದ್ಯ. ಅದರ ಶಕ್ತಿ ಪ್ರಭಾವದ ಅರಿವಿಲ್ಲದವರು ಮಾತ್ರ ಶಬ್ದಾಡಂಬರಕ್ಕೆ ಮರುಳಾಗುವರು. ಸತ್ಯ ಎಂಬುವುದು ಪದಾತೀತ ವಾದುದು. ಅದು ವಿವರಣೆ ಬಯಸುವುದಿಲ್ಲ. ಭಕ್ತಿಮಾರ್ಗದಲ್ಲಿ "ಅನ್ಯಥಾ ಶರಣಂ ನಾಸ್ತಿ " ಎಂದು ಸಂಪೂರ್ಣ ಶರಣಾಗುವುದು. ಶರಣಾಗತಿಯೂ ನಿರಪೇಕ್ಷ ಮನೋಭಾವಯುಕ್ತ ವಾಗಿರುತ್ತದೆ. ಅಲ್ಲಿ ಮುಕ್ತಿಯ ಅಪೇಕ್ಷೆಯೂ ಇರದು. ಏನೇ ಬರಲಿ ಗೋವಿಂದನ ದಯೆಯೊಂದಿರಲಿ ಎನ್ನುವ, ಏನೇ ಆದರೂ, ಘಟಿಸಿದರೂ, ಸಂಭವಿಸಿದರೂ ಒಪ್ಪುವ ಮನಸ್ಥಿತಿಯೇ ಶರಣಾಗತಿ. ಭಗವಂತನ ಮೇಲೆ ನಿರ್ವ್ಯಾಜ ಪ್ರೇಮ, ಅದಮ್ಯ ಪ್ರೀತಿ ಅನಿರ್ಬಂಧಿತ ಅನುರಾಗವೇ ಮುಕ್ತತೆ. 
         ಭಗವಾನ್ ಉನ್ನತ ವ್ಯಾಸಂಗ ಮಾಡದಿದ್ದರೂ ತಮ್ಮ ಸುಶಿಕ್ಷಿತ ಪಂಡಿತೋತ್ತಮ ವೇದ-ಪಾರಂಗತ ಶಿಷ್ಯರ ಮೂಲಕ ಅದ್ವೈತ ವೇದಾಂತವನ್ನು ಮನನ ಮಾಡಿಕೊಳ್ಳುತ್ತಿದ್ದರು. ಭಗವದ್ಗೀತೆಯ ಶ್ಲೋಕಗಳನ್ನು ಕೇಳಿದ ಮಾತ್ರಕ್ಕೆ ಅದರ ಅರ್ಥ ವ್ಯಾಪ್ತಿ ಅವರಿಗೆ ನಿಲುಕುತ್ತಿತ್ತು ಗ್ರಾಹ್ಯವಾಗುತಿತ್ತು, ವೇದ್ಯವಾಗುತ್ತಿತ್ತು . ನಮ್ಮ ಪವಿತ್ರ ಗ್ರಂಥಗಳು, ಪುರಾಣಗಳು, ಸ್ಮೃತಿಗಳು ಹೇಳುವುದೆಲ್ಲ ಅವರಲ್ಲಿ ಸಾಕ್ಷಾತ್ಕಾರವಾದಂತಿರುತಿತ್ತು. 
             ಆದಿ ಶಂಕರಾಚಾರ್ಯರ ವಿವೇಕ ಚೂಡಾಮಣಿಯನ್ನು ತಿಳಿದುಕೊಂಡು ಎಲ್ಲವನ್ನು ಪರಾಮರ್ಶೆ ಮಾಡಿ ಉಪಾದೇಯವಾದುದನ್ನು ಮಾತ್ರ ಸ್ವೀಕರಿಸಿದರು. ಆದರೆ ಸ್ವಂತ ಅನುಭವಕ್ಕೆ ಪ್ರಾಶಸ್ತ್ಯ ವಿತ್ತರು. ಪುರಾಣಗಳ ಅಧ್ಯಯನ ಹಾಗೂ ತಾತ್ವಿಕ ಚರ್ಚೆಗಳ ಬದಲು ಅವು ಸಾರಿದ ತಿರುಳನ್ನು ಅನುಭವದಿಂದ ಒಪ್ಪಿಕೊಂಡರು. ಇವರ ಅದ್ವೈತವು ಅನುಭವ- ಅದ್ವೈತ. ಅದು ಶಂಕರರಿಗಿಂತ ಭಿನ್ನ. ಇವರನ್ನು ಪಾಶ್ಚಿಮಾತ್ಯರು ನವ ವೇದಾಂತಿ ಎಂದು ಕರೆದರು. ಶಂಕರರ ಅದ್ವೈತ ನೇತಿ ಸಿದ್ದಾಂತವನ್ನು ಸಾರುತ್ತದೆ. ಇದಲ್ಲ, ಇದಲ್ಲ. ಆದರೆ ಇವರದು ಅದಲ್ಲ. ಇವರು ಆಧ್ಯಾತ್ಮಿಕ ಸಾಧನೆಗಾಗಿ ಸಂಸಾರ ತ್ಯಾಗವನ್ನು ಒಪ್ಪಲಿಲ್ಲ. ಜವಾಬ್ದಾರಿಯಿಂದ ಕಳಚಿಕೊಳ್ಳುವುದು ಸರಿಯಲ್ಲ ಎಂದರು. ತನ್ನನ್ನು ಎಂದೂ ಗುರುವೆಂದು ಪ್ರಚಾರ ಮಾಡಿಕೊಳ್ಳಲಿಲ್ಲ,, ಶಿಷ್ಯರಿದ್ದಾರೆ ಎನ್ನಲೂ ಇಲ್ಲ. ಉತ್ತರಾಧಿಕಾರಿಗಳನ್ನು ನೇಮಿಸಲಿಲ್ಲ. ಮರ್ಯಾದೆ, ಒಣಪ್ರತಿಷ್ಠೆ, ಇಭ್ರತಿಗಾಗಿ ಯೋಚಿಸಲೇ ಇಲ್ಲ. ಲುಪ್ತ ಮೋಹಿಗಳಾಗಿ, ತಿತಿಕ್ಷೆಯಿಂದ ಏಕನಿಷ್ಠೆಯಿಂದ ಆತ್ಮೋನ್ನತಿಯ ಮೂಲಕ ಶಿವೈಕ್ಯರಾದರು. ಭಾರತದ ಆಧ್ಯಾತ್ಮಿಕ ವಿಸ್ಮಯ ಎನಿಸಿಕೊಂಡರು.
ಇಂಥವರು ನಿಮ್ಮೊಳಗಿಲ್ಲವೇ ...............?
...................................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
********************************************Ads on article

Advertise in articles 1

advertising articles 2

Advertise under the article