-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 14

ಬದಲಾಗೋಣವೇ ಪ್ಲೀಸ್....! ಸಂಚಿಕೆ - 14

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು


             ಹಣವೇ ಎಲ್ಲಾ..... ಆದರೆ 
           ಹಣದಿಂದ ಎಲ್ಲವೂ ಅಲ್ಲ....!!
   --------------------------------------------------
    ಖ್ಯಾತ ಅಮೆರಿಕನ್ ಉದ್ಯಮಿ ಗ್ಯಾರಿ ವೇಯ್ನರ್ ಚೆಕ್ ಹೇಳುತ್ತಾರೆ , " 2000 ಕೋಟಿಗಿಂತ ಹೆಚ್ಚಿನ ಹಣವನ್ನು ಸ್ವಂತ ಶ್ರಮದಿಂದ ಗಳಿಸಿದ ಮೇಲೂ ನನಗೂ ಅರ್ಥವಾಗುವುದು ಏನೆಂದರೆ ಜೀವನದಲ್ಲಿ ಹಣವೇ ಮುಖ್ಯವಲ್ಲ , ಅದಕ್ಕಿಂತ ಮಿಗಿಲಾದದ್ದು ಈ ಜಗತ್ತಿನಲ್ಲಿ ಇದೆ. ಅದನ್ನು ಹುಡುಕಿರಿ ಮತ್ತು ಅನುಭವಿಸಿರಿ." ಎಂದು.
          ಹೌದಲ್ವ , ಹಣದ ಹಾಸಿಗೆಯಲ್ಲೇ ಮಲಗಿ , ಚಿನ್ನದ ತಟ್ಟೆಯಲ್ಲಿ ತಿಂದು ತೇಗಿ ಕೊನೆಗೆ ಯಾವುದೋ ಕಳಕೊಂಡ ಭಾವದಲ್ಲಿ " ಹಣವೇ ಎಲ್ಲಾ , ಆದರೆ ಹಣದಿಂದ ಎಲ್ಲವೂ ಅಲ್ಲ " ಎಂದು ಹೇಳುವ ಸಾವಿರಾರು ಮಂದಿ ನಮಗೆ ಈ ಜಗತ್ತಿನಲ್ಲಿ ಕಾಣಸಿಗುತ್ತಾರೆ. ಹಾಗಾದರೆ ಹಣಕ್ಕಾಗಿ ಏಕೆ ಜನರು ಈ ತರಹ ಹಪಹಪಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ...!!
     ಹಣಬೇಕು ಆದರೆ ಹೆಣವಾಗಬಾರದು. ಹಣಕ್ಕಾಗಿ ನಿರ್ಜೀವ ಭಾವದ ಹೆಣವಾದರೆ ಬದುಕು ಶೋಚನೀಯ. ಕೊರೊನಾ ಕಲಿಸಿದ ಪಾಠವೂ ಅದೇ ತಾನೆ. ಕೋಟಿಗಟ್ಟಲೆ ಹಣವಿದ್ದರೂ ಏಕಾಂಗಿಯಾಗಿ ಮರಣವನ್ನಪ್ಪಿ ಸಂಬಂಧಿಕರು, ವಿಲಾಸಿ ಕಾರು-ಬಂಗ್ಲೆ, ಬಂಧು-ಬಾಂಧವರು, ತನ್ನ ಅಗಣಿತ ಸಂಪತ್ತು ಸೌಲಭ್ಯಗಳನ್ನೆಲ್ಲ ಬಿಟ್ಟು ಏಕಾಂಗಿಯಾಗಿ 6 ಅಡಿ ಮರಣಗುಂಡಿಯೊಳಗೆ ಮಲಗಬೇಕಾದ ಪರಿಸ್ಥಿತಿ ನೋಡಿದಾಗ ಹಣ ಮತ್ತು ಹೆಣದ ವ್ಯತ್ಯಾಸ ಗೊತ್ತಾಗುತ್ತದೆ.
       ಹಣದ ವ್ಯಾಮೋಹಕ್ಕೆ ಮುಖ್ಯ ಕಾರಣ ಸಮಾಜದಲ್ಲಿನ ಸ್ಥಾನಮಾನದ (ಸ್ಟೇಟಸ್ ) ಹುಚ್ಚು. ಇನ್ನೊಬ್ಬರು ನಮ್ಮನ್ನು ಮೆಚ್ಚಬೇಕು ಎನ್ನುವುದರಲ್ಲೇ ನಮ್ಮ ಬಹುತೇಕ ಸಮಯ ಶಕ್ತಿಗಳನ್ನು ಹಾಳು ಮಾಡಿಕೊಳ್ಳುತ್ತೇವೆ. ಇನ್ನೊಬ್ಬರು ಮೆಚ್ಚಬೇಕಾದರೆ ದುಬಾರಿ ಕಾರು, ದುಬಾರಿ ಮನೆ , ದುಬಾರಿ ಬಟ್ಟೆಗಳು , ಚಿನ್ನದ ಆಭರಣಗಳು , ವಿಲಾಸಿ ಜೀವನದ ಶೋಕಿ ಇತ್ಯಾದಿಗಳು ಇರಬೇಕೆಂಬ ಹುಚ್ಚು ಭ್ರಮೆಯು ನಮ್ಮಲ್ಲಿರುವ ನೆಮ್ಮದಿಯನ್ನು ಕಸಿದುಕೊಳ್ಳುತ್ತಿರುವುದು ವಿಪರ್ಯಾಸವಾಗಿದೆ. ಸದಾ ಹಣದ ಹಿಂದೆ ನಾಗಾಲೋಟದಿಂದ ಓಡುತ್ತಿರುವ ಜನರನ್ನು ನೋಡಿದಾಗ ಬೇಸರವಾಗುತ್ತದೆ. ದುಡ್ಡೇ ದೊಡ್ಡಪ್ಪ ಎಂದು ಹಣದ ಹಿಂದೆ ಓಡಿ ತನ್ನ ಸಂಸಾರ, ಮಕ್ಕಳು , ಸಂಬಂಧಿಕರು , ಸ್ನೇಹಿತರು , ಸಂಬಂಧಗಳಿಂದ ದೂರವಾಗಿ ಹಣ ಸಂಪಾದಿಸಿ ಕೊನೆಗೆ ಹಣವನ್ನು ಅನುಭವಿಸುವ ಕಾಲಕ್ಕೆ ಸಕಲ ರೋಗಗಳಿಗೆ ದಾಸರಾಗಿ ಪಶ್ಚಾತ್ತಾಪ ಪಡುವ ಜನರನ್ನು ನೋಡುವಾಗ ವ್ಯಥೆಯಾಗುತ್ತದೆ...!! ಬದುಕಲು ಬೇಕಾದ ಹಣದ ಮಿತಿಗಿಂತಲೂ ಅತಿಯಾಗಿ ಸಂಪಾದಿಸಲು ಹೋಗಿ ಅಮೂಲ್ಯವಾದ ಆರೋಗ್ಯ ಕಳೆದುಕೊಳ್ಳಬೇಕಾಗುತ್ತದೆ. ಕಳೆದ ಆರೋಗ್ಯವನ್ನು ಸರಿಮಾಡಲು ವೃದ್ಧಾಪ್ಯದಲ್ಲಿ ಹಣವನ್ನು ಕಳೆದುಕೊಳ್ಳಬೇಕಾಗುತ್ತದೆ. ಕೊನೆಗೆ ಅಂತ್ಯಕಾಲದಲ್ಲಿ ಎಲ್ಲವೂ ಶೂನ್ಯ ಎಂಬರಿವು ಉಂಟಾಗುವ ಕಾಲಕ್ಕೆ ಹಣಕ್ಕಿಂತಲೂ ಮಿಗಿಲಾದದ್ದು ಈ ಜಗದಲ್ಲಿ ಏನೋ ಇದೆ , ಹಣವೇ ಎಲ್ಲಾ.... ಆದರೆ ಹಣದಿಂದಲೇ ಎಲ್ಲವೂ ಅಲ್ಲ ಎಂಬ ಭಾವ ಆಗಾಗ ಮಿಂಚುತಿರುತ್ತದೆ..!!
        ಇದಕ್ಕಾಗಿ ನಾವು ಮೊದಲು ಬಿಡಬೇಕಾದ್ದು ಇನ್ನೊಬ್ಬರಿಂದ ಮೆಚ್ಚುಗೆ ಪಡೆಯಲೇಬೇಕೆಂಬ ಚಟ. ಈ ಚಟ ಬಿಡುವುದು ಸುಲಭದ ಮಾತಲ್ಲ. ನಿರಂತರ ಪ್ರಯತ್ನದಿಂದ ಖಂಡಿತಾ ಸಾಧ್ಯ. ನನ್ನ ಕೆಲಸವನ್ನು , ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ಶ್ರದ್ದೆಯಿಂದ ಪರಿಪೂರ್ಣವಾಗಿ ಮಾಡುತ್ತೇನೆ ಎಂಬ ಧೃಡ ನಿರ್ಧಾರ ಸದಾ ಇದ್ದರೆ ಇನ್ನೊಬ್ಬರ ಮೆಚ್ಚುಗೆ ಸಹಜವಾಗಿ ಬಂದೇ ಬರುತ್ತದೆ. ಹಾಗಾಗಿ ಚಟ ಬೇಡ... ಶ್ರದ್ದೆ ಇರಲಿ. 
      ಈ ಬದುಕಿನಲ್ಲಿ ಸ್ವಂತ ಕಾರು , ಮನೆ , ಜಿಮ್, ಆಧುನಿಕ ಸೌಲಭ್ಯಗಳು ಮತ್ತು ಐಷಾರಾಮಿ ಜೀವನ ಸಾಧನಗಳು ತುಂಬಾ ದುಬಾರಿ. ಆದರೆ ಸದಾ ಬಯಸುವ ನಗು , ತೃಪ್ತ ಭಾವ , ಹೊಂದಾಣಿಕೆ , ತಾಳ್ಮೆ ಹಾಗೂ ಸುಖ ಜೀವನವು ಇವೆಲ್ಲವೂ ಉಚಿತವಾಗಿ ಸಿಗುತ್ತದೆ. ನೆಮ್ಮದಿಗಾಗಿ ಸಾವಿರಾರು ರೂಪಾಯಿ ದುಬಾರಿ ಖರ್ಚಿಗಿಂತ ಉಚಿತವಾಗಿ ಸಿಗುವುದನ್ನು ಪಡೆಯುವ ಕೌಶಲ ಗಳಿಸಬೇಕಾಗಿದೆ. ಆ ದಾರಿಯತ್ತ ಹೆಜ್ಜೆಯಿಡಬೇಕಾಗುತ್ತದೆ.
         ನಾವು ಹಣ ಮಾಡಲು ಹೊರಟರೆ ಕೇವಲ ಹಣ ಮಾತ್ರ ಮಾಡಬಹುದು. ಹೆಸರು ಮಾಡಲು ಹೊರಟರೆ ಕೇವಲ ಹೆಸರು ಮಾತ್ರ ಮಾಡಬಹುದು. ಆದರೆ ಸಾಧನೆಯ ಕೆಲಸ ಮಾಡಲು ಹೊರಟರೆ ಹಣ ಹಾಗೂ ಹೆಸರು ಎರಡನ್ನೂ ಸಹಜವಾಗಿ ಪಡೆಯಬಹುದು. ಹಣದ ಬಗ್ಗೆ ಜ್ಞಾನ ಬೇಕು ಆದರೆ ಅಹಂಕಾರವಿರಬಾರದು. ಹಣದ ಮಿತಿ ಗೊತ್ತಿರಬೇಕು , ಆದರೆ ವ್ಯರ್ಥ ಖರ್ಚು ಮಾಡಬಾರದು. ಹಣದ ಮೌಲ್ಯ ಗೊತ್ತಿರಬೇಕು ಆದರೆ ವ್ಯಾಮೋಹವಿರಬಾರದು. ಅತಿಯಾದರೆ ಅಮೃತವು ವಿಷ ಎಂಬಂತೆ ಹಣವು ಅತಿಯಾದರೆ ಸ್ವಸ್ಥ ಬದುಕಿಗೆ ಕೊಳ್ಳಿಯಿಡುವುದು ಖಚಿತ. ಹಾಗಾಗಿ ಹಣಕ್ಕೆ ಮರ್ಯಾದೆ ಕೊಡಬೇಕೆ ಹೊರತು ಮರ್ಯಾದೆ ಬಿಡಬಾರದು.....!! ಕಂತೆ ಕಂತೆ ನೋಟುಗಳ ರಾಶಿಯನ್ನು ಅಕ್ರಮವಾಗಿಟ್ಟುಕೊಂಡು ಏಳೇಳು ತಲೆಮಾರಿಗಾಗುವಷ್ಟು ಮೋಸದಿಂದ ಹಣ ಮಾಡಿಟ್ಟ ಭ್ರಷ್ಟ ಜನರು ಹಣದ ವ್ಯಾಮೋಹಕ್ಕೊಳಗಾಗಿ , ಅರಿಷಡ್ವೈರಿಗಳಿಗೆ ದಾಸರಾಗಿ ಇಂದಿಗೂ ಸಮಾಜ ಕಂಟಕರಾಗಿ ಮಾನವೀಯತೆ ಮರೆತು ನಿರ್ಜೀವ ಹೆಣದಂತೆ ಬದುಕುತ್ತಿರುವುದನ್ನು ಕಾಣಬಹುದು. ಅವರು ಎಂದಿಗೂ ಹೀರೋಗಳಾಗಳು ಸಾಧ್ಯವಿಲ್ಲ. ಅವರೇನಿದ್ದರೂ ಪಕ್ಕಾ ವಿಲನ್ ಗಳು...!!?
      ಹಣವೆಂಬುದು ಮಾಯೆಯಂತೆ. ಹಣದಿಂದ ಮನೆಯನ್ನು ಖರೀದಿಸಬಹುದು , ಆದರೆ ನೆಮ್ಮದಿಯನ್ನಲ್ಲ. ಹಣದಿಂದ ಹಾಸಿಗೆ ಖರೀದಿಸಬಹುದು ಆದರೆ ನಿದ್ದೆಯನ್ನಲ. ಹಣದಿಂದ ಕಂಪ್ಯೂಟರ್ ಖರೀದಿಸಬಹುದು ಆದರೆ ಮೆದುಳನ್ನಲ್ಲ. ಹಣದಿಂದ ಆಹಾರವನ್ನು ಖರೀದಿಸಬಹುದು ಆದರೆ ಹಸಿವನ್ನಲ್ಲ. ಹಣದಿಂದ ಪ್ರಸಾಧನ (ಮೇಕಪ್) ಸಾಮಾಗ್ರಿಗಳನ್ನು ಖರೀದಿಸಬಹುದು ಆದರೆ ಸೌಂದರ್ಯವನ್ನಲ್ಲ. ಹಣದಿಂದ ವ್ಯಕ್ತಿಗಳನ್ನು ಖರೀದಿಸಬಹುದು ಆದರೆ ಪ್ರೀತಿಯನ್ನಲ್ಲ. ಹಣದಿಂದ ಪುಸ್ತಕಗಳನ್ನು ಖರೀದಿಸಬಹುದು ಆದರೆ ಜ್ಞಾನವನ್ನಲ್ಲ. ಹಣದಿಂದ ಗಡಿಯಾರ ಖರೀದಿಸಬಹುದು ಆದರೆ ಸಮಯವನ್ನಲ್ಲ...... ಹಾಗಾಗಿ ಹಣದಿಂದ ಎಲ್ಲಾ ಖರೀದಿಸಬಹುದು ಎಂಬುದು ಅಹಂ - ಭಾವವಾಗುತ್ತದೆ. ಹಾಗಾಂತ ಹಣವಿಲ್ಲದೆ ಬದುಕುತ್ತೇನೆ ಎಂಬುವುದು ನಂಬಲಾಗದ ಮಾತು. ಹಣವನ್ನು ಅದರದ್ದೆ ಸ್ಥಾನದಲ್ಲಿಟ್ಟು ಗೌರವ ಕೊಟ್ಟು ಬದುಕುವುದೇ ಜಾಣ ಆಯ್ಕೆ. ವ್ಯಕ್ತಿಯನ್ನು ಹಣದಿಂದ ಅಳೆಯುವ ಬದಲು ವ್ಯಕ್ತಿಯ ಸಾಧನೆಗಳು, ಹವ್ಯಾಸಗಳು , ಮೌಲ್ಯಗಳು , ಶಿಸ್ತು, ಮಾನವೀಯ ಗುಣಗಳಿಂದ ಅಳೆಯಬೇಕು. ಜೀವನದಲ್ಲಿ ಹಣದ ಕೊರತೆಯಿದ್ದರೂ ಗುಣದ ಕೊರತೆ ಇರಬಾರದು. ಹಣವನ್ನು ಬೇರೆಯವರಿಂದ ಕೇಳಿ ಪಡೆಯಬಹುದು ಆದರೆ ಸಾಧನೆಯನ್ನು ಇನ್ನೊಬ್ಬರಿಂದ ಕೇಳಿ ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಬದುಕುವ ಕೌಶಲ ಪಡೆಯಲು ಬದಲಾಗೋಣ. ಈ ಧನಾತ್ಮಕ ಬದಲಾವಣೆಗೆ ಯಾರನ್ನೂ ಕಾಯದೆ , ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್......! ಏನಂತೀರಿ...?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
********************************************






Ads on article

Advertise in articles 1

advertising articles 2

Advertise under the article