
ಬದಲಾಗೋಣವೇ ಪ್ಲೀಸ್....! ಸಂಚಿಕೆ - 9
Wednesday, September 1, 2021
Edit
ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು
ಬದಲಾಗೋಣವೇ ಪ್ಲೀಸ್....! ಸಂಚಿಕೆ - 9
--------------------------------------------------
ಆರೋಗ್ಯವೇ ಭಾಗ್ಯ. ಆಹಾರವೇ ಔಷಧ . ಆರೋಗ್ಯ ಹಾಗೂ ಆಹಾರದ ಆಯ್ಕೆ ಹೇಗಿರಬೇಕು. ಆಹಾರ ಸೇವನೆ ಮತ್ತು ಜೀರ್ಣಾಂಗ ವ್ಯೂಹ ನಿರ್ವಹಣೆ ಹೇಗಿರಬೇಕು ಎಂಬುದು ನನಗೆ ಅಜ್ಜಿ ಕಲಿಸಿದ ಪಾಠ. ಅಜ್ಜಿಯ ಮಿಕ್ಸಿ ಕಥೆಯನ್ನು ನೀವೊಮ್ಮೆ ಓದಲೇ ಬೇಕು.....
ಮೊನ್ನೆ ತವರು ಮನೆಗೆ ಹೋದಾಕೆ ಮನೆಯಲ್ಲಿಯೇ ಅಷ್ಟಮಿಯ ಹಬ್ಬದೂಟ ಮಾಡಲು ನಿರ್ಧರಿಸಿದಳು. ಎಲ್ಲ ಪೂರ್ವ ತಯಾರಿಗಳು ನಡೆದವು. ಪಲ್ಯ , ಸಾರು , ಪಾಯಸ , ಮೊಸರನ್ನ , ಎಳ್ಳುಂಡೆ ಹೀಗೆ ವಿವಿಧ ಐಟಂಗಳ ಪಟ್ಟಿ ಸಿದ್ಧವಾದವು. ಇನ್ನೇನು ಆಹಾರ ರುಬ್ಬಲು ತಯಾರಿ ಮಾಡುವ ಎನ್ನುವಾಗ ಮಿಕ್ಸಿ ಕೈಕೊಟ್ಟಿತು. ದಿನಾಲೂ ಯಾವುದನ್ನು ಹಾಕಿದರೂ ಎಲ್ಲವನ್ನು ಬೇಸರವಿಲ್ಲದೆ ರುಬ್ಬುವ ಮಿಕ್ಸಿಯು ಹಾಳಾದನ್ನು ನೋಡಿ ಅಮ್ಮ" ಛೇ ! ಇವತ್ತೇ ಮಿಕ್ಸಿ ಹಾಳಾಗಬೇಕೇ ? " ಎಂದು ಗೊಣಗಿದಳು. ತಿಂಡಿಗೆ ಜಾತಕ ಪಕ್ಷಿಯಂತೆ ಕಾಯುತ್ತಿದ ಮಕ್ಕಳಿಗೂ ನಿರಾಶೆ .
ಆದರೆ ಅಲ್ಲೇ ಇದ್ದ ಅಜ್ಜಿಯ ಬಾಯಿಂದ ಅಪರೂಪದ ಮಾತಿನ ಮುತ್ತೊಂದು ಉದುರಿತು. " ಮಗಾ.., ಈ ಮಿಕ್ಸಿ ಹಾಳಾದರೆ ಇನ್ನೊಂದು ತರಬಹುದು ಆದರೆ ದೇವರು ಕೊಟ್ಟ ನಿನ್ನ ದೇಹದೊಳಗಿನ ಜೀರ್ಣಾಂಗ ಎಂಬ ಮಿಕ್ಸಿ ಮಾತ್ರ ಹಾಳಾದರೆ ಇನ್ನೊಂದು ತರಲಾಗದು. ಅದಕ್ಕೆ ಅದನ್ನು ಜಾಗ್ರತೆ ಮಾಡು" ಎಂದು ಹೇಳಿ ಹಲ್ಲಿಲ್ಲದ ಬಾಯಿಯಲ್ಲಿ ಗೊಳ್ಳನೆ ನಕ್ಕುಬಿಟ್ಟರು.
ಅಜ್ಜಿಯ ಅನುಭವದ ಮಾತು ದಿನವಿಡಿ ನನ್ನನ್ನು ಚಿಂತಿಸುವಂತೆ ಮಾಡಿತು. ಅಯ್ಯೋ! ದೇವರೇ , ಹಲವಾರು ವರ್ಷದಿಂದ ತಿಂಡಿಪೋತರಾಗಿರುವ ನಮ್ಮ ಮಿಕ್ಸಿಯ ಕತೆ ಏನಾಗಿರಬಹುದು ; ಮದುವೆ ಮನೆಯಲ್ಲಿ ಸಿಕ್ಕಿದ್ದೇ ಲಾಭ ಎಂದು ಇದ್ದದ್ದೆಲ್ಲವನ್ನು ಒಂದು ವಾರಕ್ಕೆ ಸಾಕಾಗುವಷ್ಟು ಲೋಡ್ ಮಾಡಿ ತಿನ್ನುವ ತಿಮ್ಮನ ಚಿತ್ರ ಮನಸಿಗೆ ಬಂತು ; ಹಬ್ಬ ಹರಿದಿನಗಳಲ್ಲಿ ಎಲ್ಲರ ಮನೆಗೆ ಹೋಗಿ ನಾಲ್ಕೈದು ದಿನಗಳದ್ದನ್ನು ಒಂದೇ ದಿನ ತಿಂದು ಲೋಡ್ ಮಾಡುವ ಪುಟ್ಟನ ನೆನಪಾಯಿತು ; ಇದರ ಜತೆ ದಿನವಿಡಿ ಗುಟ್ಕಾ , ಪಾನ್ ಪರಾಗ್ , ಮದ್ಯಪಾನ ಮಾಡುವ ಚಿಗುರು ಮೀಸೆಯ ಯುವ ಶಕ್ತಿಯ ನೆನಪಾಯಿತು. ಬರ್ಗರ್ ಪಿಜ್ಜಾ ತಿನ್ನುವ ಮೀಸೆ ಮೂಡದ ಮಕ್ಕಳ ದೃಶ್ಯ ತುಂಬಿ ಬಂತು. ಇವರೆಲ್ಲರ ಮಿಕ್ಸಿ ಹೇಗಿರಬಹುದು ಎಂಬ ಯೋಚನೆಯು ರಾತ್ರಿಯಿಡಿ ತಲೆಯಲ್ಲಿ ಸುತ್ತಲಾರಂಭಿಸಿತು.
ಬೆಳಗಾದ ಕೂಡಲೇ ಕುತೂಹಲ ತಡೆಯಲಾರದೆ ಅಜ್ಜಿಯಲ್ಲಿ ಮಿಕ್ಸಿ ಪುರಾಣ ಕೇಳಿದೆ. ವಾವ್! ಅವರದ್ದು ಅದ್ಭುತ ಸರಳ ವಿವರಣೆ. ನನ್ನನ್ನೇ ನೋಡುತ್ತಾ " ಹೆಚ್ಚೆಚ್ಚು ಹಣ ಕೊಟ್ಟು ದೊಡ್ಡ ದೊಡ್ಡ ಬ್ರಾಂಡಿನ ಮಿಕ್ಸಿ ಖರೀದಿಸಬಹುದು. ಆದರೆ ಆರೋಗ್ಯ ಖರೀದಿಸಲಾಗದು. ಬ್ರಾಂಡ್ ಗಿಂತ ಬಾಳಿಕೆ ಮುಖ್ಯ. ಕಂಪೆನಿಗಿಂತ ನಿರ್ವಹಣೆ ಮುಖ್ಯ. ಮಿಕ್ಸಿಯನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಮೇಲೆ ಅದರ ಕೆಲಸ , ರಿಪೇರಿ ಹಾಗೂ ಬಾಳಿಕೆ ನಿಂತಿದೆ. ಮಿಕ್ಸಿಯಲ್ಲಿ ನಾವು ಅರ್ಧದಷ್ಟು ಆಹಾರ ವಸ್ತು , ಕಾಲು ಭಾಗ ನೀರು , ಕಾಲು ಭಾಗ ಖಾಲಿ ಜಾಗ ಬಿಟ್ಟರೆ ಮಾತ್ರ ಮಿಕ್ಸಿಯು ತುಂಬಾ ನಯವಾಗಿ ರುಬ್ಬುತ್ತದೆ. ಇದರಿಂದ ತುಂಬಾ ಸಮಯ ಹಾಳಾಗದೇ ಬಾಳಿಕೆ ಬರುತ್ತದೆ. ಕೆಲವರು ತಮ್ಮ ಅರ್ಜೆಂಟಿಗೂ, ಅವಸರಕ್ಕೂ ಅಥವಾ ಬೇಗ ಕೆಲಸವಾಗಲಿ ಎಂಬ ಭಾವಕ್ಕೂ, ಮಿಕ್ಸಿ ಸಾಮರ್ಥ್ಯ ನೋಡದೆ ಪೂರ್ತಿ ತುಂಬಿ ರುಬ್ಬುವವರಿದ್ದಾರೆ. ಇನ್ನು ಕೆಲವರು ಮಿಕ್ಸಿಗೆ ವಿಶ್ರಾಂತಿ ಕೊಡದೆ ಕಾಲಕಾಲಕ್ಕೆ ನಿರ್ವಹಣೆ ಮಾಡದೇ ಉಪಯೋಗಿಸುವವರಿದ್ದಾರೆ. ಈಗಾಗಿ ಮಿಕ್ಸಿಯು ಬೇಗನೇ ಹಾಳಾಗುತ್ತದೆ. ಮತ್ತೆ ದುರಸ್ತಿ ಮಾಡಿದರೂ ಮೊದಲಿನಂತಹ ಕಾರ್ಯವೈಖರಿ ಇರದು. ನಾವು ಆಹಾರ ಸೇವಿಸುವಾಗ ಒಮ್ಮೆಲೆ ತಿನ್ನದೆ ಪಾಲು ಮಾಡಿ 1/4 ಭಾಗ ನೀರು ಮತ್ತು 1/4 ಭಾಗ ಖಾಲಿ ಜಾಗಕ್ಕೆ ಅವಕಾಶ ನೀಡಿ ಉಳಿದರ್ಧ ಭಾಗ ಮಾತ್ರ ಆಹಾರ ಸೇವಿಸಿದರೆ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ " ಎಂದರು. ಅಜ್ಜಿಯ ಅನುಭವದ ಮಾತಿಗೆ ಸೋತು ಹೋದೆ.
ಹೌದು ನಾವು ನಮ್ಮ ಮಿಕ್ಸಿಯನ್ನು ಚೆನ್ನಾಗಿ ನಿರ್ವಹಿಸಲೇಬೇಕು. ವೈದ್ಯಲೋಕ ಕೂಡಾ ಎಲ್ಲಾ ರೋಗಗಳಿಗೂ ಕಾರಣ ಜೀರ್ಣಾಂಗ ವ್ಯವಸ್ಥೆ ಅಂದರೆ ಮಿಕ್ಸಿಯ ಅಸಮರ್ಪಕ ನಿರ್ವಹಣೆ ಎಂದಿದೆ. ನಾವು ಬಾಯಿರುಚಿಯ ಚಟಕ್ಕೆ ಬಿದ್ದು ದೇಹ ಬೇಡ ಬೇಡವೆಂದರೂ , ದೇಹಕ್ಕೆ ವಿಷ ಎಂದು ಗೊತ್ತಿದ್ದರೂ , ಪೌಷ್ಟಿಕಾಂಶ ರಹಿತವಾದದ್ದು ಎಂದು ಗೊತ್ತಿದ್ದರೂ , ಕುರುಕುರು ತಿಂಡಿಗಳು , ಹಳಸಿದ ಎಣ್ಣೆಯ ಕರಿದ ತಿಂಡಿಗಳು, ರಾಸಾಯನಿಕವಾಗಿ ರುಚಿಭರಿಸಿದ ತಿಂಡಿಗಳು, ಕೃತಕ ಬಣ್ಣಗಳ ಆಕರ್ಷಣೆಯ ತಿಂಡಿಗಳು, ಮೈದಾಭರಿತ ತಿಂಡಿಗಳು, ಗಾಂಜಾ - ಕೊಕೆನ್ ಪಾನ ಪರಾಗ್ ಇತ್ಯಾದಿ ಮಾದಕ ವಸ್ತುಗಳು, ಅಮಲುಭರಿತ ಪಾನೀಯಗಳು ..., ಹೀಗೆ ಹಲವಾರು ಅನಾರೋಗ್ಯ ಹೆಚ್ಚಿಸುವ ವಿಷ ಆಹಾರಗಳನ್ನು ಜೀರ್ಣಾಂಗಕ್ಕೆ ಬಲತ್ಕಾರವಾಗಿ ಹಾಕಿ ಮಿಕ್ಸಿಯ ಸಾಮರ್ಥ್ಯ ವನ್ನು ಬಲಿ ನೀಡುತ್ತಿದ್ದೇವೆ. ದೇಹಕ್ಕೆ ವಿಷಕಾರಿಯಾದ ಮತ್ತು ಕರಗಿಸಲಾಗದ ಹಾಗೂ ಆಹಾರವಲ್ಲದ ಅನೇಕ ಅಂಶಗಳನ್ನು ತಿನ್ನುತ್ತಿದ್ದೇವೆ. ಆಹಾರವನ್ನು ಬೆಳಗ್ಗೆ ಮಧ್ಯಾಹ್ನ ಮತ್ತು ರಾತ್ರಿ ಈ ಮೂರು ಹೊತ್ತಿನಲ್ಲಿ ಅಥವಾ ಹೊತ್ತಲ್ಲದ ಹೊತ್ತಿನಲ್ಲಿ ಮಿತಿಗಿಂತ ಹೆಚ್ಚಾಗಿ ಸೇವಿಸಿ ರೋಗಕ್ಕೆ ಕಾರಣರಾಗುತ್ತಿದ್ದೇವೆ. ಹಾಗಾಗಿ ಆಹಾರವನ್ನು ಕನಿಷ್ಟ ಎರಡು ಗಂಟೆಗಳಿಗೆ ಒಮ್ಮೆಯಾದರೂ ಕಂತು ಕಂತುಗಳಲ್ಲಿ ನಿರಂತರವಾಗಿ ಸೇವಿಸಿದರೆ ಮಿಕ್ಸಿಗೆ ಒತ್ತಡ ಕಡಿಮೆಯಾಗಿ ದೀರ್ಘ ಕಾಲ ಬಳಕೆ ಮಾಡುವಂತೆ ಮಾಡಬಹುದು. ಇಲ್ಲದಿದ್ದರೆ ಗ್ಯಾಸ್ಟ್ರಿಕ್ , ಅಲ್ಸರ್, ಶುಗರ್ , ಬಿ.ಪಿ ಎಂದು ರೋಗಗಳ ಹೆಸರು ಜಪಿಸುತ್ತಾ ಸದಾ ಚಡಪಡಿಸುತ್ತಾ ಇರಬೇಕಾಗುತ್ತದೆ. ಉತ್ತಮ ಆರೋಗ್ಯಕ್ಕಾಗಿ ಆಹಾರವೇ ಔಷಧಿಯಾಗಲಿ. ನಮ್ಮ ದೇಹದ ಮಿಕ್ಸಿಯ ಬಾಳಿಕೆಗಾಗಿ ಹಾಗೂ ಗೆಲುವಿಗಾಗಿ ಬದಲಾಗಬೇಕಾಗಿದೆ. ಇದಕ್ಕಾಗಿ ಯಾರನ್ನು ಕಾಯದೇ ನಾವೇ ಬದಲಾಗೋಣ. ಧನಾತ್ಮಕ ಬದಲಾವಣೆಯು ನಿತ್ಯ ನಿರಂತರವಾಗಿರಲಿ. ಬದಲಾಗೋಣವೇ ಪ್ಲೀಸ್...... ಏನಂತೀರಿ.....?
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು
Mob: +91 99802 23736
*********************************************