-->
ಹಕ್ಕಿ ಕಥೆ - 10

ಹಕ್ಕಿ ಕಥೆ - 10

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                           ಹಕ್ಕಿ ಕಥೆ - 10
          ಮಕ್ಕಳೇ ಈ ಹಕ್ಕಿಯನ್ನು ಯಾವತ್ತಾದರೂ ನೋಡಿದ್ದೀರಾ....... ?  ಹಳ್ಳಿಯಾಗಲೀ ಪೇಟೆಯಾಗಲೀ ಎಲ್ಲಾ ಕಡೆ ನೋಡ್ಲಿಕ್ಕೆ ಸಿಗುವ ಹಕ್ಕಿ ಇದು. ನೆಲದಲ್ಲಿ ಸ್ವಲ್ಪ ಕಾಳುಗಳೇನಾದ್ರೂ ಬಿದ್ದಿದ್ದ್ರೆ ಸಾಕು ಅಲ್ಲಿ ಖಂಡಿತ ಈ ಹಕ್ಕಿ ಹಾಜರ್. ನೀವು ಹತ್ತಿರದ ಅಂಗಡಿಗೆ ಹೋದ್ರೆ ಖಂಡಿತ ಈ ಹಕ್ಕಿ ಕಾಣ್ಲಿಕ್ಕೆ ಸಿಗ್ತವೆ. ನಮ್ಮ ಶಾಲೆಯಲ್ಲಂತೂ ಕನಿಷ್ಠ 8-10 ಆದ್ರೂ ಇದ್ದಾವೆ. ಅಷ್ಟೆಲ್ಲಾ ದೂರ ಹೋಗೋದು ಯಾಕೆ, ನಿಮ್ಮ ಮನೆಯ ಅಂಗಳದಲ್ಲೇ ಈ ಹಕ್ಕಿಯನ್ನು ನೀವೂ ನೋಡಿರಬಹುದು.
       ಹೌದು.... ಈ ಹಕ್ಕಿ ಪಾರಿವಾಳವೇ ಸರಿ. ನಾವು ಚಿಕ್ಕವರಿದ್ದಾಗ ನನ್ನ ಗೆಳೆಯರು ಅನೇಕರು ಇದನ್ನು ಸಾಕ್ತಾ ಇದ್ರು. ಬಿಳೀಬಣ್ಣದ್ದು , ಚುಕ್ಕೆ ಚುಕ್ಕೆಯದ್ದು.. ಬೇರೆ ಬೇರೆ ತರಹದ್ದು... ಹಿಂದಿ ಭಾಷೆಯಲ್ಲಿ ಇದನ್ನು ಕಬೂತರ್ ಅಂತ ಕರೀತಾತೆ.. ಉತ್ತರಭಾರತದಲ್ಲಿ ಪಾರಿವಾಳಗಳನ್ನು ಸಾಕುವುದು ಬಹಳ ಜನರ ಮೆಚ್ಚಿನ ಹವ್ಯಾಸ. ನಮ್ಮಲ್ಲಿ ಕೋಳಿ ಅಂಕ ಇರುವ ಹಾಗೆ ಅಲ್ಲೆಲ್ಲ ಪಾರಿವಾಳಗಳ ಹಾರಾಟದ ಸ್ಪರ್ಧೆಗಳನ್ನು ನಡೆಸ್ತಾರಂತೆ. ಹಳೆಯ ಹಿಂದಿ ಸಿನೆಮಾಗಳಲ್ಲಂತು ಪಾರಿವಾಳಗಳು ,  ಅವುಗಳ ಬಗೆಗಿನ ಹಾಡು ಇದ್ದೇ ಇರುತ್ತಿತ್ತು. 
        ನಾನೊಮ್ಮೆ ಮುಂಬಯಿಗೆ ಹೋಗಿದ್ದೆ ಅಲ್ಲಿ ದಾದ್ರಾ ಅನ್ನುವ ಜಾಗದಲ್ಲಿ ಪಾರಿವಾಳಗಳಿಗಾಗಿಯೇ ದೊಡ್ಡ ಜಾಗ ಇದೆ. ಗೇಟ್ ವೇ ಆಫ್ ಇಂಡಿಯಾದ ಬಳಿ ಸಾವಿರಾರು ಸಂಖ್ಯೆಯ ಪಾರಿವಾಳಗಳನ್ನು ನೋಡಿದ್ದೇನೆ. ನೀವು ಕೈಯಲ್ಲಿ ಅವಕ್ಕೇನಾದರೂ ಆಹಾರ ಹಿಡಿದರೆ ಧೈರ್ಯವಾಗಿ ನಿಮ್ಮ ಕೈಯಮೇಲೆ ಬಂದು ಕೂತು ನಿಮ್ಮ ಕೈಯಿಂದ ಆಹಾರ ತಿನ್ನುತ್ತವೆ. ಹಾಂ... ನಿಮ್ಮ ಮನೆಯ ಹತ್ರಾನೂ ನಿಮಗೂ ಹೀಗೇ ಪಾರಿವಾಳಗಳ ಜೊತೆ ಸ್ನೇಹ ಇದೆಯಾ....? 
            ಪೇಟೆಗಳಲ್ಲಿ ಮತ್ತು ದೊಡ್ಡ ನಗರಗಳಲ್ಲಿ ಪಾರಿವಾಳ ಅತ್ಯಂತ ಸಾಮಾನ್ಯ ಹಕ್ಕಿ. ದೊಡ್ಡ ಕಟ್ಟಡಗಳಲ್ಲಿ , ಅಪಾರ್ಟಮೆಂಟ್ ಗಳಲ್ಲಿ , ಶಾಪಿಂಗ್ ಮಾಲ್ ಗಳಲ್ಲಿ ಎಲ್ಲ ಕಡೆ ಇವು ಇರುತ್ತವೆ. ಕಟ್ಟಡಗಳ ಸಂದಿಯಲ್ಲಿ, ಅಂಗಡಿಯ ಶಟರ್ ಗಳ ಮೇಲೆ, ಎಸಿ ಡಕ್ಟ್ ಮೇಲೆ ಸಿಗುವ ಜಾಗಗಳಲ್ಲಿ ಹುಲ್ಲು , ಕಡ್ಡಿ , ಮೊದಲಾದವನ್ನು ಸೇರಿಸಿ ಗೂಡುಮಾಡುತ್ತವೆ. ಮನುಷ್ಯನ ವಾಸದ ಸಮೀಪ ಗೂಡುಮಾಡುವುದರಿಂದ ಮತ್ತು ಮನುಷ್ಯನಿಂದಾಗಿ ಸದಾ ಆಹಾರದ ಲಭ್ಯತೆ ಇರುವುದರಿಂದ ವರ್ಷದ ಯಾವ ಕಾಲದಲ್ಲಾದರೂ ಗೂಡು ಕಟ್ಟಿ ಮೊಟ್ಟೆ ಇಟ್ಟು ಮರಿಮಾಡುತ್ತವೆ.. 
         ಪಾರಿವಾಳಗಳು ಇಂದು ಜಗತ್ತಿನ ಎಲ್ಲ ಭಾಗಗಳಲ್ಲೂ ಕಾಣಲು ಸಿಗ್ತವಂತೆ. ಮನುಷ್ಯ ಸಾಕುವ ಸುಮಾರು 1000ಕ್ಕೂ ಹೆಚ್ಚು ಪ್ರಬೇಧದ ಪಾರಿವಾಳಗಳಿಗೆ  ಬೂದುಬಣ್ಣದ COMMON PIGEON ಅಥವಾ BLUE ROCK PIGEON ಎಂದು ಇಂಗ್ಲೀಷ್ ನಲ್ಲಿ ಕರೆಸಿಕೊಳ್ಳುವ ಈ ಹಕ್ಕಿಯೇ ಮೂಲವಂತೆ. 
ಇದರ ವೈಜ್ಙಾನಿಕ ಹೆಸರು : Columba livia 
                ಇದರ ಬಗ್ಗೆ ನಿಮಗೆ ಗೊತ್ತಿರುವ ಕಥೆಗಳು , ಮಾಹಿತಿಗಳನ್ನು ನಮಗೂ ಹೇಳ್ತೀರಲ್ಲಾ......
...........................................ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article