-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 6

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 6

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 6

ನಮಸ್ತೆ ಮಕ್ಕಳೇ,
           ಓದುವ ಕುತೂಹಲವನ್ನು ದಿನದಿಂದ ದಿನಕ್ಕೆ ಹೆಚ್ಚಿಸಿಕೊಂಡು, ಜಗಲಿಯ ತುಂಬೆಲ್ಲಾ ಪಸರಿಸಿದ ನಿಮ್ಮ ಗುರುಸ್ಮರಣೆ, ಚಿತ್ರ, ಲೇಖನ, ಕಥೆ , ಕವನಗಳೆಲ್ಲವೂ ನಿಮ್ಮೊಳಗಿನ ಅಗಾಧ ಸಾಧ್ಯತೆಯನ್ನು ಅನಾವರಣಗೊಳಿಸಿ ನಮ್ಮೆಲ್ಲರನ್ನು  ಬೆರಗುಗೊಳಿಸಿದೆ. ನಮ್ಮ ಸಂಭ್ರಮ ಇನ್ನಷ್ಟು ಹೆಚ್ಚಾಗಲು, ನಮ್ಮನ್ನು ನಾವು ನಿನ್ನೆಗಿಂತ ಉತ್ತಮಪಡಿಸಿಕೊಳ್ಳಲು  ಸಮಸ್ತ ಗುರುಬಳಗದ ಆಶೀರ್ವಾದವನ್ನು ಬೇಡೋಣ.
          ಅಂದ ಹಾಗೆ  ಬಹಳಷ್ಟು ಮಂದಿ ಪತ್ರಗಳ ಮೂಲಕ ಇನ್ನೂ ಹೆಚ್ಚು ಕಥೆಗಳನ್ನು ಹೇಳಿ ಅಂದಿದ್ದೀರಿ. ನಾನಿಲ್ಲಿ ಹೇಳ್ತಾ ಇರೋದು ನಿಜ ಬದುಕಿನ ಸಾಹಸಿಗನೊಬ್ಬನ ಬಗ್ಗೆ....
       ಒಂದು ಮಳೆಯ ಸಂಜೆ. 15 ವರ್ಷದ ಹುಡುಗನೊಬ್ಬ ಅಡುಗೆ ಮನೆಯ ಮೇಜಿನ ಮೇಲೆ ಕುಳಿತು My life list ಎಂದು paper ನಲ್ಲಿ heading ಬರೆದ. ಅದರಲ್ಲಿ ಅವನು ಪಟ್ಟಿ ಮಾಡಿದ್ದು ಕನಸುಗಳನ್ನು....! ಪಟ್ಟಿ ಮಾಡುತ್ತಲೇ ಹೋದ..127 ಆಸೆಗಳ ಉದ್ದದ ಪಟ್ಟಿ ಅದು.. ಹಾಗೆಂದು ಅದು ಸುಲಭದಲ್ಲಿ ನನಸಾಗಿಸುವ ಕನಸುಗಳಾಗಿರಲಿಲ್ಲ.  ಜಗತ್ತಿನ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟನ್ನೂ ಸೇರಿದಂತೆ, ಪೆರುವಿನ ಹುಸ್ಕರನ್ ಪರ್ವತ, ಕಿಲಿಮಂಜಾರೋ ಪರ್ವತ, ಕೆನ್ಯಾ ಪರ್ವತ, ಪುಜಿ ಪರ್ವತ.... ಹೀಗೆ ಇನ್ನೂ ಅನೇಕ  ಪರ್ವತಗಳನ್ನು ಹತ್ತುವುದು, ಅಮೆಜಾನ್, ನೈಲ್, ಕಾಂಗೋ, ನೈಗರ್, ರಿಯೋ ಕೋಕೋ ನದಿಗಳನ್ನು ಪರಿಶೋಧಿಸುವುದು, ವಿಮಾನ ಹಾರಿಸುವುದನ್ನು, ಕೊಳಲು ನುಡಿಸುವುದನ್ನು , ಒಂಟೆ ಸವಾರಿಯನ್ನು, ಸರೋವರಗಳನ್ನು ಈಜುವುದನ್ನು ಕಲಿಯುವುದು, ಅರಿಸ್ಟಾಟಲ್, ಶೇಕ್ಸ್ ಪಿಯರ್ ಪ್ಲಾಟೋ.. ಮುಂತಾದ ಪ್ರಸಿದ್ಧರ ಬಗ್ಗೆ ಕೃತಿಗಳನ್ನು ಓದುವುದು.. ಬರೆಯುವುದು, ವಿವಿಧ  ಭಾಷೆಗಳನ್ನು ಕಲಿಯುವುದು.. ಹೀಗೆ ಬರೆದಿಟ್ಟು, ಸಾಧಿಸಬೇಕು ಎಂದುಕೊಂಡದ್ದರಲ್ಲಿ 120 ಗುರಿಗಳನ್ನು ತಲುಪಿದ ಛಲಗಾರ, ಸಾಹಸಿಗ, ಅನ್ವೇಷಕ, ಬರಹಗಾರ ಜಾನ್ ಗೊಡಾರ್ಡ್ ಅಮೆರಿಕಾದ ಸಾಧಕ...! 
          ಏನೂ ಸಾಧಿಸಲಾಗದೆ ಕಳೆದ ದಿನಗಳ ಕುರಿತು ಪಶ್ಚಾತ್ತಾಪ ಪಡುತ್ತಿದ್ದ ತಂದೆಯ ಗೆಳೆಯರ ಮಾತುಗಳು ಅವನನ್ನು ಈ ಸ್ಫೂರ್ತಿಗೆ ಕಿಚ್ಚು ಹಚ್ಚುವಂತೆ 
ಮಾಡಿದವು !  ಪಟ್ಟಿಮಾಡಿದ ಕನಸುಗಳನ್ನು ನಿರ್ಲಕ್ಷ್ಯ ಮಾಡಲಿಲ್ಲ. ಜೀವನಪ್ರೀತಿ ಅವನನ್ನು ನಿತ್ಯ ಹುಡುಕಾಟದ ಸಂತೃಪ್ತಿಯೆಡೆಗೆ ಮುನ್ನಡೆಸಿತು.
          ಅಬ್ಬಾ .... ! ಅದ್ಭುತ ಅಲ್ವಾ....? ಜಾನ್ ಗೊಡಾರ್ಡ್ ,  ನನಗೆ ಓದಿನ  ದಾರಿಯಲ್ಲಿ ಸಿಕ್ಕಿದ ವ್ಯಕ್ತಿ.. ನಿಮಗೂ ಇವರನ್ನು ಪರಿಚಯಿಸ ಬೇಕೆನಿಸಿತು. 29 ಜುಲೈ 1924 ರಿಂದ 2013 ಮೇ 17 ರವರೆಗೆ ಬದುಕಿದ ಗೊಡಾರ್ಡ್ ನ ಬದುಕೊಂದು ರೋಚಕ... ಓದಿದ  ನನಗೂ ಏನಾದರೂ ಹೀಗೆಯೇ ಬರೆದಿಡಬೇಕೆನಿಸಿತು. ಇದುವರೆಗೂ ಹೋಗದ ನೆರೆಹೊರೆಯ ಮನೆಗಳಿಗೊಮ್ಮೆ ಹೋಗಿ ಅವರೊಡನೆ ಮಾತನಾಡುವುದು, ನನ್ನೂರಿನ ಹತ್ತಿರವಿರುವ ಕುಮಾರ ಪರ್ವತವನ್ನೊಮ್ಮೆ ಏರುವುದು, ನನ್ನ ಶಾಲೆಯನ್ನು ಇನ್ನಷ್ಟು ಸುಂದರಗೊಳಿಸುವುದು. ಇತರರ ಬಗ್ಗೆ ಅತಿಯಾಗಿ ತಲೆಕೆಡಿಸಿ ಕೊಳ್ಳದಿರುವುದು.... ಹೀಗೆ ಏನೇನೋ ಇವೆ ನನ್ನ ಪಟ್ಟಿಯಲ್ಲಿ.. ನನಗೆ ಪ್ರತಿದಿನ ಕಾಣುವಂತೆ ಇದನ್ನು ಇಟ್ಟಿದ್ದೇನೆ... ಮರೆತು ಮೂಲೆ ಸೇರಬಾರದು ಅಲ್ವೇ...?
        ನೀವಿನ್ನೂ ಎಳೆಯರು... ಕಾಣುವ ಕನಸುಗಳನ್ನು ಸಾಧ್ಯವಾಗಿಸಲು ಬರೆದಿಡಬೇಕೆಂದು ನಿಮಗೂ ಅನಿಸಿರಬೇಕಲ್ವೇ.....? ಟಿ.ವಿ ಎದುರು ತುಂಬಾ ಹೊತ್ತು  ಕಳೆಯುವ ಸಮಯಕ್ಕೆ ಬೆಲೆ ಇಲ್ಲದಂತಾಗುತ್ತದೆ ಎಂದು ನನಗನಿಸುವುದು....! ಪುಸ್ತಕಗಳನ್ನು , ಮಹಾತ್ಮರನ್ನು, ಸಾಧಕರನ್ನು ಓದಿದಷ್ಟು ಜ್ಞಾನ ವಿಸ್ತಾರವಾಗುತ್ತದೆ.. ಬದುಕಿಗೆ ಪ್ರೇರಣೆ ನೀಡುತ್ತದೆ ಅಲ್ವಾ .....? ಗೆಳೆಯರೇ... ನನಗೆ ಗೊತ್ತಿದೆ. ಹೆಚ್ಚಿನವರು ಈಗಲೇ ಏನೋ ಯೋಜನೆ ಹಾಕಿಕೊಂಡು ಪುಸ್ತಕ ಕೈಗೆತ್ತಿಕೊಂಡಿರುತ್ತೀರಿ. ನಿಮ್ಮ ಜೊತೆ ಸೇರಿಕೊಂಡು ನನ್ನದೇ ಪಟ್ಟಿಯನ್ನು ಇನ್ನಷ್ಟು ಬೆಳೆಸಿ, ಕಷ್ಟಸಾಧ್ಯವೆಂದು ಬದಿಗೆ ಸರಿಸಿದ್ದನ್ನು ಮತ್ತೆ ಕೈಗೆತ್ತಿಕೊಳ್ಳಬೇಕಿದೆ... ನಿಮ್ಮ ಒಡನಾಟ ನನ್ನನ್ನೂ ಬೆಳೆಸುತ್ತಿದೆ...... ಬನ್ನಿ... ಜೊತೆಯಾಗಿ ಸಾಗೋಣ......  ಪುಟ್ಟ ಗೂಡಿನಲ್ಲಿ ಬಚ್ಚಿಟ್ಟ ಕನಸುಗಳಿಗೆ ಬಣ್ಣ ಹಚ್ಚಿ...... ಹಾರಿ ಸಂಭ್ರಮಿಸೋಣ.... ಏನಂತೀರಿ?ಬರೆಯುತ್ತೀರಲ್ಲಾ....
     ಅಲ್ಲಿಯವರೆಗೆ ಅಕ್ಕನ ನಮನಗಳು.
 ................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************Ads on article

Advertise in articles 1

advertising articles 2

Advertise under the article