
ಜೀವನ ಸಂಭ್ರಮ ಸಂಚಿಕೆ - 3
Sunday, September 12, 2021
Edit
ಜೀವನ ಸಂಭ್ರಮ ಸಂಚಿಕೆ - 3
ಆತ್ಮ ವಿಶ್ವಾಸ
----------------------------
ಒಂದು ಊರಿನಲ್ಲಿ ರಾಮಣ್ಣ ಎಂಬ ತರುಣನಿದ್ದ. ಆತನ ಚಿಕ್ಕ ವಯಸ್ಸಿನಲ್ಲೇ ತಂದೆ ತೀರಿಕೊಂಡಿದ್ದರಿಂದ, ಶಾಲೆಗೆ ಹೋಗಿ ಹೆಚ್ಚು ಕಲಿಯಲು ಸಾಧ್ಯವಾಗಲಿಲ್ಲ. ಆತನಿಗೆ ಸ್ವಲ್ಪ ಜಮೀನು ಇತ್ತು. ಬೇರೆ ಕೆಲಸ ಬಾರದಿದ್ದುದರಿಂದ, ಅದರಲ್ಲೇ ಜೀವನೋಪಾಯ ಕಂಡುಕೊಳ್ಳಲು ತೀರ್ಮಾನಿಸಿದ. ಆತ ಜಮೀನಿನಲ್ಲಿ ಪ್ರೀತಿಯಿಂದ ಅಚ್ಚುಕಟ್ಟಾಗಿ ಬೇಸಾಯ ಮಾಡುತ್ತಿದ್ದ . ಬೇಸಾಯದ ಅನುಭವ ಹೆಚ್ಚು ಇರಲಿಲ್ಲ. ಆದರೂ ಛಲಬಿಡದೆ ಬೇಸಾಯ ಮಾಡುತ್ತಿದ್ದ. ಪ್ರಾರಂಭದಲ್ಲಿ ಇಳುವರಿ ಕಡಿಮೆ ಬರುತ್ತಿತ್ತು. ಆದರೂ ಛಲದಿಂದಲೇ ಮುಂದಿನ ಬೇಸಾಯದಲ್ಲಿ , ಈ ಬಾರಿ ಮಾಡಿದ ತಪ್ಪುಗಳನ್ನು ಮಾಡದೆ, ಬೆಳೆದ. ಇಳುವರಿ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಾಯಿತು. ಪ್ರತಿಬಾರಿಯೂ ತಪ್ಪುಗಳನ್ನು ತಿದ್ದಿಕೊಂಡು ಬೇಸಾಯ ಮಾಡುತ್ತಾ ಇದ್ದನು. ಒಳ್ಳೆ ವ್ಯವಸಾಯ ಮಾಡುವ ಬಗ್ಗೆ ಚೆನ್ನಾಗಿ ತಿಳುವಳಿಕೆ ಬಂದು, ತೃಪ್ತಿಕರವಾದ ಜೀವನ ನಡೆಸುತ್ತಿದ್ದ. ಆತನನ್ನು ಯಾರೇ ಕೇಳಿದರೂ ಬೆಳೆಯ ಬಗ್ಗೆ ಆತ್ಮವಿಶ್ವಾಸದಿಂದ ಹೇಳುತ್ತಿದ್ದ. ಆತನಿಗೆ ಪ್ರತೀ ಬೆಳೆಯಲ್ಲೂ ತಪ್ಪುಗಳು ಅರಿವಾಗುತ್ತಿದ್ದುದು ಪ್ರೀತಿಯಿಂದ ಕೆಲಸ ಮಾಡುತ್ತಿದ್ದರಿಂದ.
ಇನ್ನೊಂದು ಘಟನೆ ............
ನಮಗೆಲ್ಲ ವಿದ್ಯುತ್ ಬಲ್ಬ್ ಕಂಡುಹಿಡಿದಿದ್ದು ಥಾಮಸ್ ಅಲ್ವಾ ಎಡಿಸನ್ ಎಂಬುದು ಗೊತ್ತು. ಆತ ವಿದ್ಯುತ್ ಬಲ್ಬ್ ಅನ್ನು ಶೋಧಿಸಲು ಸುಮಾರು 2000 ಪ್ರಯೋಗ ಮಾಡಿ ಕೊನೆಗೆ ವಿದ್ಯುತ್ ಬಲ್ಪ್ ಅನ್ನು ಕಂಡುಹಿಡಿದನು. ಒಬ್ಬ ಸಂದರ್ಶಕ ಒಮ್ಮೆ ಥಾಮಸ್ ಆಲ್ವ ಎಡಿಸನ್
ರವರನ್ನು ಹೀಗೆ ಪ್ರಶ್ನಿಸಿದ.... " ನೀವು 2000 ಸಾರಿ ಪ್ರಯೋಗ ಮಾಡಿ ವಿಫಲರಾಗಿದ್ದೀರಿ ಅಲ್ಲವೇ " ಎಂದು. ಆಗ ಥಾಮಸ್ ಆಲ್ವ ಎಡಿಸನ್ ಹೇಳಿದ ಉತ್ತರ ಚಿಂತನಾಶೀಲವಾಗಿತ್ತು. " ನಾನು 2000 ಸಾರಿ ಮಾಡಿದ ಪ್ರಯೋಗದಲ್ಲಿ ಏನನ್ನು ಬಳಸಿದರೆ ವಿದ್ಯುತ್ ಬಲ್ಬ್ ಆಗುವುದಿಲ್ಲ ಎನ್ನುವುದನ್ನು ಕಲಿತೆನು " ಎಂಬುದಾಗಿ ಹೇಳಿದರು. ಅಂದರೆ 2000 ಬಾರಿ ಪ್ರಯೋಗಗಳನ್ನು ಪ್ರೀತಿಯಿಂದಲೆ ಮಾಡಿದ್ದು ದೃಢಪಡುತ್ತದೆ.
ಮೇಲಿನ ಎರಡು ಉದಾಹರಣೆಗಳನ್ನು ನೋಡಿದರೆ..... ಯಾವುದೇ ಕೆಲಸವನ್ನಾದರೂ ಪ್ರೀತಿಯಿಂದ ಅಚ್ಚುಕಟ್ಟಾಗಿ ಎಚ್ಚರಿಕೆಯಿಂದ ಮಾಡಿದರೆ ಜ್ಞಾನ ಬೆಳೆಯುತ್ತದೆ ಎನ್ನುವುದು ಸ್ಪಷ್ಟವಾಯಿತು. ಜ್ಞಾನದಿಂದ ಆತ್ಮವಿಶ್ವಾಸ ಉಂಟಾಗುತ್ತದೆ.
ವಿಜ್ಞಾನ, ತಂತ್ರಜ್ಞಾನ , ಕೃಷಿ , ವೈದ್ಯಕೀಯ ಮತ್ತು ಬಾಹ್ಯಾಕಾಶ ಸೇರಿದಂತೆ ವಿಜ್ಞಾನ ಪುಸ್ತಕದಲ್ಲಿ , ವಿಜ್ಞಾನಿಗಳು ಹಾಗೂ ಸಾಧಕರು ಮಾಡಿದ ಅಷ್ಟು ವರ್ಷಗಳ ವೈಫಲ್ಯಗಳನ್ನು ನಮೂದಿಸದೆ , ನೇರವಾಗಿ ಯಶಸ್ಸಿನ ಫಲಿತಾಂಶವನ್ನು ನಮೂದಿಸಿರುತ್ತಾರೆ. ಇದರಿಂದ ಕಲಿಕಾರ್ಥಿಗಳು ಕನಿಷ್ಠ ಕಾಲಾವಧಿಯಲ್ಲಿ ಗರಿಷ್ಠ ಕಲಿಕೆಯನ್ನು ಮಾಡಬಹುದು. ಹಾಗೆಯೇ ಇತಿಹಾಸ , ಚರಿತ್ರೆ , ಪೌರನೀತಿ ಮುಂತಾದ ಸಾಮಾಜಿಕ ವಿಷಯಗಳು, ನಡೆದ ಘಟನೆಗಳ ಒಳ್ಳೆಯ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಸಹಕಾರಿ ಯಾಗುತ್ತದೆ. ಹಿಂದೆ ಮಾಡಿದ ತಪ್ಪನ್ನು ನಾವು ಪುನಃ ಮಾಡದಂತೆ ಮಾರ್ಗದರ್ಶನ ಮಾಡುತ್ತವೆ.
ವಿದ್ಯಾರ್ಥಿಗಳೇ...... ನಾವು ಯಾವುದೇ ವಿಷಯವನ್ನು ಪರೀಕ್ಷೆ , ಮಾರ್ಕಿಗಾಗಿ ಕಲಿತರೆ ಆತ್ಮವಿಶ್ವಾಸ ಬರುವುದಿಲ್ಲ. ಪ್ರೀತಿಯಿಂದ ಕಲಿತರೆ ಅದು ಪರೀಕ್ಷೆಗೂ ಮತ್ತು ಜೀವನಕ್ಕೂ ಸಹಕಾರಿಯಾಗುತ್ತದೆ. ಪುಸ್ತಕಗಳು ನೀಡುವ ಮಾರ್ಗದರ್ಶನ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಯಾರಾದರೂ ತಿಳಿದವರು ಹೇಳಿದ ಘಟನೆ, ಪ್ರಸಂಗಗಳನ್ನು ಮುಕ್ತ ಮನಸ್ಸಿನಿಂದ ಅನುಭವಿಸಬೇಕು. ನಮ್ಮಲ್ಲಿ ಒಂದು ಹೊಸ ಕಲಿಕೆ ಉಂಟಾಗಿ, ಆತ್ಮವಿಶ್ವಾಸ ಮೂಡುತ್ತದೆ. ಸಣ್ಣ ಸಣ್ಣ ಘಟನೆಗಳು, ಸಂಗತಿಗಳು ನಮ್ಮಲ್ಲಿ ಚೈತನ್ಯ , ಸೌಂದರ್ಯ ತುಂಬಿ ಜೀವನವನ್ನು ಸಂತೋಷವಾಗಿಸುತ್ತದೆ. ಆತ್ಮವಿಶ್ವಾಸ ಜೀವನಪರ್ಯಂತ ನೆಲೆಸಿ ಜೀವನ - ಸಂಭ್ರಮವಾಗುತ್ತದೆ
..........................................ಎಂ.ಪಿ. ಜ್ಞಾನೇಶ್
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************