-->
ಪೂರ್ಣಗೊಳಿಸಿ ಬರೆದ ಕಥೆಗಳು ಸಂಚಿಕೆ - 2

ಪೂರ್ಣಗೊಳಿಸಿ ಬರೆದ ಕಥೆಗಳು ಸಂಚಿಕೆ - 2

ನಾದಣ್ಣನ 2ನೇ ಕಥೆ ಪೂರ್ಣಗೊಳಿಸಿ
ಮಕ್ಕಳು ಬರೆದ ಕಥೆಗಳ 
ಸಂಚಿಕೆ - 2        
      
ಕಥೆ : ಅಟ್ಟದ ಮೇಲಿನ ಗುಟ್ಟು ( ಕಥಾ ಸಾರಾಂಶ)
****************************************
          ಅಕ್ಕ ಹನಿ ಮತ್ತು  ತಮ್ಮ ತನು, ಇಬ್ಬರು ಒಂದೇ ಮನೆಯ ಮಕ್ಕಳು.  ತನುವಿನ ಏನೇನೋ ಸಾವಿರಾರು ಪ್ರಶ್ನೆಗಳಿಗೆ ಉತ್ತರ ಈ ಅಕ್ಕಳಿಂದ ಸಿಗುತ್ತಿತು. ಇವರ ಮನೇಲಿ ಅಮ್ಮ , ಅಪ್ಪ  ಮತ್ತು ಅಜ್ಜಿ  ಇದ್ದರು. ಪಕ್ರು ಎಂಬ ನಾಯಿ, ಡಿಂಕಿ ಅಂತ ಒಂದು ಬೆಕ್ಕು ಇತ್ತು.  ಪ್ರತಿ ದಿನ ಇವರ ಮನೇಲಿ ಬೆಳಗಾಗುತ್ತಿದ್ದುದೇ ಹನಿ ಹೇಳುವ ಕಥೆಗಳಿಂದ. ಒಂದು ದಿನ ಎಲ್ಲೋ ಹೊರಗೆ ಹೋಗಿ ವಾಪಾಸು ಬರುವಾಗ ಇವರ ಮನೆಯ ಅಂಗಳದ ತುಂಬಾ ಉದ್ದುದ್ದ ಹೆಜ್ಜೆಗಳು ಮೂಡಿದ್ದವು.  'ಮಂಗಳೂರು ಟೈಲ್ಸ್' ಅನ್ನುವ ಗುರುತುಗಳು ಸಿಕ್ಕವು. ರಾತ್ರಿ ಅಟ್ಟದ ಮೇಲೆ ಏನೇನೋ ಗುಸುಗುಸು... ಪಿಸುಪಿಸು...
         ಬೆಳಗ್ಗೆ ಹನಿಗೆ ಎಲ್ಲಾ ಗೊತ್ತಾಯ್ತು... ಹನಿಯ ವಿಶೇಷ ಕಥೆ ಕೇಳಲು ಕಿವಿಗಳನ್ನು ನಿಮಿರಿಸಿಕೊಂಡು, ಕಣ್ ಮಿಟುಕಿಸದೆ ಕುಳಿತರು. ಹನಿ ಕಥೆ ಶುರು ಮಾಡಿದಳು...
(ಮಕ್ಕಳು ಮುಂದುವರಿಸಿರುವ ಕತೆಗಳು ಇಲ್ಲಿವೆ ..)



       ಅಟ್ಟದ ಮೇಲಿನ ಗುಟ್ಟು: ಮೋಕ್ಷಾ
    -----------------------------------------
        "ಮಂಗಳೂರು ಟೈಲ್ಸ್'' ಎಂಬುದು ನಮ್ಮ ಮನೆಯ ಹೆಂಚಿನ ಮೇಲೆ ಬರೆದಿರುವ ಅಕ್ಷರಗಳು ನನ್ನ ಕಲ್ಪನೆಯಂತೆ ನಿನ್ನೆ ನಾವು ಮನೆಗೆ ಮರಳುವಾಗ ಯಾರೋ ನಮ್ಮ ಮನೆಯ ಹೆಂಚುಗಳನ್ನು ತೆಗೆದು ಮನೆಯೊಳಗೆ ಪ್ರವೇಶಿಸಿದ್ದಾರೆ. ನಾವು ಅದೇ ಸಮಯಕ್ಕೆ ಬಂದುದರಿಂದ ಅವರು ಮನೆಯ ಅಟ್ಟದಲ್ಲಿಯೇ ಇದ್ದರು. ರಾತ್ರಿ ನನಗೆ ಅಟ್ಟದಿಂದ ಗುಟ್ಟಿನ ಮಾತುಗಳು ಕೇಳಿಸುತ್ತಿತ್ತು. ನಿಮಗೆ ತಿಳಿಸಲೆಂದು ಮುಂದಾದೆ ಆದರೆ ನನಗೆ ನಿದ್ದೆ ಹತ್ತಿದ್ದೇ ತಿಳಿಯಲಿಲ್ಲ ಎಂದು ಹನಿಯು ಹೇಳಿ ಮುಗಿಸುವಷ್ಟರಲ್ಲಿಯೇ ಮನೆಯಲ್ಲಿದ್ದ ಎಲ್ಲರೂ ತಮ್ಮತಮ್ಮ ಬೆಲೆಬಾಳುವ ವಸ್ತುಗಳೆಲ್ಲವೂ ಇವೆಯೇ ಎಂದು ಹುಡುಕಾಡಿದರು. ಎಲ್ಲವೂ ಸರಿಯಾಗಿಯೇ ಇತ್ತು. ಈಗ ಎಲ್ಲರೂ ಧೈರ್ಯ ತಂದುಕೊಂಡು ಅಟ್ಟವನ್ನು ಸೇರಿದರು. ಅಲ್ಲಿ ಕೆಲವು ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದವು. ಒಂದುಕಡೆ ನೋಡಿದರೆ ಅಜ್ಜಿ 4-5 ತಿಂಗಳ ಹಿಂದೆ ದೊಡ್ಡ ಭರಣಿಯಲ್ಲಿ ಹಾಕಿಟ್ಟಿದ್ದ ಉಪ್ಪಿನಕಾಯಿ ಖಾಲಿಯಾಗಿತ್ತು. ಅಲ್ಲೇ ಪಕ್ಕದಲ್ಲಿ ಕೋಲು-ಕೋಲು ಕಾಲುಗಳ, ದೊಡ್ಡಹೊಟ್ಟೆಯ, ಸಣ್ಣಮುಖದ ನಿನ್ನೆ ರಾತ್ರಿಯಿಂದ ಹಸಿದು ಕೊಂಡಿದ್ದ ಜೀನಿಗಳೆರಡು ಉಪ್ಪಿನಕಾಯಿಯನ್ನು ಚಪ್ಪರಿಸಿ ತಿನ್ನುತ್ತಿದ್ದವು. ಇದನ್ನು ಕಂಡು ಅಜ್ಜಿಗೆ ತುಂಬಾ ಸಿಟ್ಟು ಬಂದಿತು. ಪಕ್ಕದಲ್ಲೇ ಇದ್ದ ಕೋಲಿನಿಂದ ಜೀನಿಗಳಿಗೆ ಎರಡು ಬಾರಿಸಿದರು. ಅಜ್ಜಿಯ ಕೈಯಿಂದ ಸಿಕ್ಕಾಪಟ್ಟೆ ಪೆಟ್ಟುತಿಂದ ಜೀನಿಗಳೆರಡೂ ಮನೆಯಿಂದ ಹೊರಗೋಡಿದವು. ಜೀನಿಗಳೆರಡನ್ನು ಕಂಡ ಹನಿಯ ಮುದ್ದಿನ ನಾಯಿ ಪಕ್ರು ಜೋರಾಗಿ ಬೊಗಳತೊಡಗಿತು. ನಾಯಿಯನ್ನು ಕಂಡು ಜೀನಿಗಳು ಭಯದಿಂದ ಓಡಿಹೋದವು. 
........................................................ಮೋಕ್ಷಾ 
10ನೇ ತರಗತಿ 
ಸರಕಾರಿ ಪ್ರೌಢಶಾಲೆ ಮಾಣಿಲ 
ಬಂಟ್ವಾಳ ತಾಲೂಕು , ದ.ಕ ಜಿಲ್ಲೆ
*********************************************



          ಅಟ್ಟದ ಮೇಲಿನ ಗುಟ್ಟು - ಅನುಲಕ್ಷ್ಮಿ 
       --------------------------------------------
        ಎಂದಿನಂತೆ ಹನಿ ಹೇಳುವ ಕಥೆಯನ್ನು ಕೇಳಲು ಮನೆಯವರೆಲ್ಲರು ಒಂದುಗೂಡಿದ್ದರು. ಹನಿಯು ಕಥೆ ಹೇಳಲು ಪ್ರಾರಂಭಿಸಿದಳು....... . 
         ಮನೆಯವರೆಲ್ಲರೂ ಹನಿ ಹೇಳಿದ ಕಥೆಯನ್ನು ಕೇಳಿ ತುಂಬಾ ಖುಷಿಪಟ್ಟರು. ಹಾಗೆಯೇ ಎಲ್ಲರೂ ಅವರವರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಅನಂತರ ಎಲ್ಲರೂ ಅವರವರ ಕೆಲಸವನ್ನು ನೋಡಿಕೊಂಡರು. ಆದರೆ ಹನಿ ಮಾತ್ರ ತನುವಿನ ತಲೆ ತಿನ್ನುತ್ತಿದ್ದಳು. ಮೊನ್ನೆ ಅಂಗಳದಲ್ಲಿ ಕಂಡ ಆ ಗುರುತುಗಳು , 'ಮಂಗಳೂರು ಟೈಲ್ಸ್' ಇದರ ಬಗ್ಗೆ ತುಂಬಾ ಗಾಢವಾಗಿ ಯೋಚಿಸುತ್ತಾ ಅಪ್ಪನಲ್ಲಿ ಸಾವಿರಾರು ಪ್ರಶ್ನೆಗಳನ್ನು ಕೇಳುತ್ತಿದ್ದಳು. ತನುವಿಗಂತೂ ಸಾಕು ಸಾಕಾಗಿ ಹೋಗುತಿತ್ತು ಹನಿಯ ಸಹವಾಸ. ಇದಲ್ಲದೆ ಅಡುಗೆ ಮನೆಗೆ ಹೋಗಿ ಅಮ್ಮನಲ್ಲೂ ಇದೇ ರೀತಿಯ ಪ್ರಶ್ನೆಗಳನ್ನು ಕೇಳಿ ತೊಂದರೆ ಕೊಡುತ್ತಿದ್ದಳು. ಅಮ್ಮ ಅಂತೂ ಏನೋ ಒಂದು ಹೇಳಿ ನಿಭಾಯಿಸುತ್ತಿದ್ದರು. ನಂತರ ತನುವಿನ ಬಳಿ ಹೋಗಿ ನಿನ್ನೆ ನಮ್ಮ ಮನೆಯ ಅಂಗಳದಲ್ಲಿ ಗುರುತೊಂದು ಕಾಣಿಸಿಕೂಂಡಿತ್ತಲ್ಲ, ಅದು ನಮ್ಮ ಮಾಡಿನ ಹಂಚಿನ ಗುರುತು ಅನ್ನಿಸುತ್ತದೆ. ನೀನೇನು ಅಂತಿಯಾ...? ಎಂದಳು ಹನಿ. ಆಗ ತನುವು ಏನು ಹೇಳದೆ ಸುಮ್ಮನೆ ನಿಂತಿದ್ದ. ತಕ್ಷಣ ತನು ಹನಿಗೆ ಏನೋ ಒಂದು ಹೇಳಿ ಅಲ್ಲಿಂದ ಹೊರಟೇ ಬಿಟ್ಟ. ಸ್ವಲ್ಪ ದೂರ ಬಂದು ನಿಟ್ಟುಸಿರು ಬಿಟ್ಟು ನಾನಂತೂ ಹನಿಯಿಂದ ಪಾರಾದೆ ಎಂದು ತನ್ನ ಕೆಲಸವನ್ನು ಮುಂದುವರೆಸಿದ. ಅಷ್ಟುಹೊತ್ತಿಗಾಗಲೇ ಅಮ್ಮ ಹನಿ ಮತ್ತು ತನುವನ್ನು ಊಟಕ್ಕೆ ಕರೆದರು. ತನುವಂತೂ ಖುಷಿಯಿಂದ ಹೋದನು. ಹನಿಯಂತೂ ಯೋಚನೆಯಲ್ಲಿ ಮಗ್ನಳಾಗಿದ್ದಳು. ಅಜ್ಜಿ ಕೇಳಿದಳು ಹನಿಯಲ್ಲಿ "ಏನಮ್ಮಾ, ಯೋಚಿಸ್ತಿದ್ದೀಯಾ...?" ಹನಿಯೂ...... "ಏನಿಲ್ಲಾ ಅಜ್ಜಿ, ಮೊನ್ನೆ ನಮ್ಮ ಅಂಗಳದಲ್ಲಿ ಗುರುತು ಕಾಣಿಸಿಕೊಂಡಿತ್ತಲ್ಲಾ ಅದನ್ನೇ ಯೋಚಿಸುತ್ತಿದ್ದೇನೆ." ಎಂದಳು. ಅಜ್ಜಿ ಅಷ್ಟೇನಾ ಎಂದಳು. ಆವಾಗ ಹನಿಯೂ ಅಷ್ಟೇ ಅಲ್ಲ ಅದರ ಜೊತೆ ಮೊನ್ನೆ ಅಟ್ಟದಲ್ಲಿ ಗುಸುಗುಸು ಪಿಸುಪಿಸು ಅಂತ ಕೇಳಿಸುತ್ತಿತ್ತು. ನಾನೇನು ಕಳ್ಳರು ಬಂದಿದ್ದಾರೆ ಎಂದು ಅಂದುಕೊಂಡೆ. ಹೌದಾ.....!! ಎಂದು ಅಮ್ಮ ಆಶ್ಚರ್ಯದಿಂದ ಕೇಳಿದರು. ಅಮ್ಮ ನನಗಂತೂ ಚೂರು ನಿದ್ರೆಯೆ ಬರಲಿಲ್ಲ ಎಂದು ಹನಿಯು ಹೇಳಿದಳು. ಅಷ್ಟುಹೊತ್ತಿಗಾಗಲೇ ಕತ್ತಲಾಗುತ್ತಾ ಬಂದಿತು. ಅಮ್ಮಾ ಹನಿಯ ಬಳಿ ನೀನು ಮಲಗಿಕೋ ಇದರ ಬಗ್ಗೆ ನಾಳೆ ಮಾತನಾಡೋಣ ಎಂದು ಹೇಳಿ ಹನಿಯನ್ನು ಮಲಗಿಸಿದಳು. ಹನಿಯೂ ಅಮ್ಮನ ಕೈಯನ್ನು ಬಿಗಿಯಾಗಿ ಹಿಡಿದು ಅಮ್ಮ ನನಗೆ 'ಮಂಗಳೂರು ಟೈಲ್'ನ ಬಗ್ಗೆ ಹೇಳು ಎಂದು ಕೇಳಿಕೊಂಡಳು. ಆಗ ನೀನೀಗ ಮಲಗು, ಇದರ ಬಗ್ಗೆ ನಾಳೆ ಮಾತನಾಡೋಣ ಎಂದು ಅಮ್ಮ ಹೇಳಿದರು.ಇಲ್ಲಾ, ಇಲ್ಲಾ ನನಗೆ ಇವತ್ತೇ ಹೇಳು ಎಂದು ಒತ್ತಾಯಿಸಿದಳು. ಸರಿ. ಮಂಗಳೂರು ಟೈಲ್ಸ್ ಅಂದರೆ ಇದೊಂದು ಹಂಚಿನ ಕಂಪನಿ.ಇದರ ಹಂಚುಗಳನ್ನು ಒಳ್ಳೆಯ ಗುಣಮಟ್ಟದ ಮಣ್ಣಿನಿಂದ ಮಾಡಲಾಗುತ್ತದೆ ಎಂದಳು. ಅಷ್ಟೇ ನಾ ಎಂದುಕೊಂಡು ಮಲಗಿದಲ್ಲಿಯೇ ಯೋಚನೆ ಮಾಡುತ್ತಿದ್ದಳು. ಅಮ್ಮ ಹೋದ ನಂತರ ತಕ್ಷಣ ಅಟ್ಟದಲ್ಲಿ ಏನೋ ಗುಟ್ಟು ಅಡಗಿದೆ. ಎಂದು ಅಂದುಕೊಳ್ಳುತ್ತಾ ಮೆಲ್ಲ ಮೆಲ್ಲನೆ ಒಂದೊಂದು ಹೆಜ್ಜೆಯನ್ನಿಡುತ್ತಾ ಅತ್ತ-ಇತ್ತ ನೋಡಿದಳು. ಯಾರು ಕಾಣಿಸಲಿಲ್ಲ. ಯಾರಾಗಿರಬಹುದೆಂದು ಯೋಚಿಸ್ತಿದ್ದಳು. ಅಷ್ಟರಲ್ಲಿ ಯಾವುದೋ ಒಂದು ಮೂಲೆಯಿಂದ ಧ್ವನಿ ಕೇಳಿಸಿತು. ಯಾರು, ಯಾರು ಎಂದು ಕೇಳಿದಳು. ಆಗ ಒಂದು ಹಂಚು,..... "ಯಾಕೆ ಹನಿ ಬೇಜಾರಾಗಿದ್ದಿಯಾ?" ಎಂದು ಒಂದು ಹಂಚು ಕೇಳಿತು. ಏನಿಲ್ಲಾ ನೀನು ಯಾರೆಂದು ನನಗೆ ತಿಳಿಯಬೇಕು. ಸರಿ.... ನೀನು ಅಂದುಕೊಂಡ ಹಾಗೆ ನಾನೇನು ಮನುಷ್ಯನಲ್ಲ. ನಾನು ಬರೀ ಹಂಚು ಅಷ್ಟೇ. ನಾವೆಲ್ಲ ಇಲ್ಲಿ ಸುಮಾರು ವರ್ಷಗಳಿಂದ ಇದ್ದೇವೆ. ಹೋ,ಹೌದಾ...!! ನನಗೆ ನೀವು ಯಾರೆಂದು ಗೊತ್ತೇ ಆಗಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ. ಏನೆಂದರೆ ನೀವು ಗುಸುಗಸು, ಪಿಸುಪಿಸು ಎಂದು ಮಾತನಾಡಿಕೊಳ್ಳುತ್ತಿದ್ದರಲ್ಲ. ಹಾಗಾಗಿ ನಾನು ನಿಮ್ಮನ್ನು ತಪ್ಪಾಗಿ ತಿಳಿದುಕೊಂಡಿದ್ದೆ. ಸರಿ.... ನಾನಿನ್ನು ಹೋಗುತ್ತೇನೆ. ಅಬ್ಬಾ, ನನ್ನ ಅನುಮಾನವಂತೂ ಈಗ ಪರಿಹಾರವಾಯಿತು. ಎಂದು ಅಂದುಕೊಂಡು ತನ್ನಷ್ಟಕ್ಕೆ ನಕ್ಕು ಮಲಗಿದಳು. ತಾನು ಮಲಗಿದಲ್ಲಿಯೇ "ನಾನು ಇಷ್ಟು ಚಿಕ್ಕ ವಿಷಯಕ್ಕೆ ಮನೆಯವರೆಲ್ಲರಿಗೂ ಎಷ್ಟೊಂದು ತೊಂದರೆ ಕೊಟ್ಟಿದ್ದೇನೆ." ಎಂದು ನೆನಪಿಸುತ್ತಾ ಹಾಯಾಗಿ ಮಲಗಿದಳು. ಮರುದಿನ ಬೆಳಗ್ಗೆ ರಾತ್ರಿ ನಡೆದ ವಿಚಾರವನ್ನು ಎಲ್ಲರಿಗೂ ತಿಳಿಸಿ, ಎಲ್ಲರಲ್ಲಿಯೂ ಕ್ಷಮೆಯನ್ನು ಯಾಚಿಸಿ. ಎಲ್ಲರೊಂದಿಗೆ ಖುಷಿಯಿಂದ ಇದ್ದಳು.
       ಇದರಿಂದ ತಿಳಿಯುವುದೇನೆಂದರೆ "ಅನುಮಾನವೆಂಬುದು ಪೆಡಂಭೂತವಿದ್ದಂತೆ" ಆದ್ದರಿಂದ ನಾವು ಯಾವಾಗಲೂ ಒಂದು ವಿಷಯದ ಬಗ್ಗೆ ಸರಿಯಾಗಿ ತಿಳಿಯದೆ ಅನುಮಾನ ಪಡುವುದು ಸರಿಯಲ್ಲ ಎನ್ನುವುದು ಇದರ ಅರ್ಥವಾಗಿದೆ.
....................................................... ಅನುಲಕ್ಷ್ಮಿ 
10ನೇ ತರಗತಿ 
ಮಂಚಿ - ಕೊಳ್ನಾಡು ಪ್ರೌಢಶಾಲೆ 
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*******************************************


          ಅಟ್ಟದ ಮೇಲಿನ ಗುಟ್ಟು: ಲಹರಿ ಜಿ.ಕೆ.
------------------------------------------------
       ಹನಿಯ ಸುತ್ತ ಮನೆಯವರೆಲ್ಲರೂ ಸೇರಿದರು. ಹನಿ ಬಹಳ ಸಂಭ್ರಮ ಮತ್ತು ಉತ್ಸಾಹದಿಂದ ಕಥೆ ಹೇಳಲು ಪ್ರಾರಂಭಿಸಿದಳು. ಒಂದು ಮನೆಯಲ್ಲಿ ಇಬ್ಬರು ಮಕ್ಕಳು ತಮ್ಮ ಗೆಳೆಯರೊಂದಿಗೆ ಆಟವಾಡುತ್ತಾ ಖುಷಿಯಾಗಿದ್ದರು. ಒಂದು ದಿನ ಇದ್ದಕ್ಕಿದ್ದಂತೆ ಜೋರಾಗಿ ಮಳೆ ಸುರಿಯಲಾರಂಭಿಸಿತು. ಗಾಳಿ ಮಳೆಗೆ ಅವರ ಅಂಗಳದಲ್ಲಿದ್ದ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾದವು. ಮನೆಯ ಹೆಂಚು ಹಾರಿ ಹೋದವು. ಮಕ್ಕಳ ತಂದೆ ಮಳೆ ನಿಂತ ಮೇಲೆ ಹೆಂಚುಗಳನ್ನು ಸರಿಪಡಿಸಿದರು. ಅಮ್ಮ , ಮಕ್ಕಳು ಎಲ್ಲಾ ಸೇರಿ ಚೆಲ್ಲಾಪಿಲ್ಲಿಯಾದವುಗಳೆಲ್ಲವನ್ನು ಚೊಕ್ಕ ಗೊಳಿಸಿದರು. ಮಕ್ಕಳು ಮತ್ತೆ ಆಟಕ್ಕೆ ಅಂಗಳದಲ್ಲಿ ಸೇರಿದರು. ಕೆಸರಾದ ಮಣ್ಣಲ್ಲಿ ಆಟ ಬಲು ಉತ್ಸಾಹದಿಂದ ಸಾಗಿತು. ಗಾಳಿ ಮಳೆಗೆ ತುಂಡಾಗಿ ಬಿದ್ದ ಹೆಂಚಿನ ತುಂಡುಗಳು ಮಕ್ಕಳಿಗೆ ಲಗೋರಿ, ಕುಂಟೆ ಬಿಲ್ಲೆ ಆಟಕ್ಕೆ ಸಹಾಯಕವಾದವು. ಸಂಜೆ ಆಯಿತು, ಆಟ ಮುಗಿಯಿತು. ಒಂದು ವಾರದ ನಂತರ ಮನೆಯವರೆಲ್ಲರೂ ಸಮಾರಂಭವೊಂದಕ್ಕೆ ಹೋದರು. ಮನೆಯವರು ಹೋದ ಸ್ವಲ್ಪ ಸಮಯದಲ್ಲೆ ಅಂಗಳದಲ್ಲಿ ಹಾವೊಂದು ಕಾಣಿಸಿಕೊಂಡಿತು. ಹಾವನ್ನು ನೋಡಿದ ಮನೆಯ ನಾಯಿ ಮತ್ತು ಬೆಕ್ಕು ಹಾವನ್ನು ಅಟ್ಟಾಡಿಸಿದವು. ಕೊನೆಗೂ ಹಾವು ಅಲ್ಲಿಂದ ಓಡಿಹೋಯಿತು. ಮನೆಗೆ ಬಂದ ಮಕ್ಕಳು , ಹಿರಿಯರು ಅಂಗಳದಲ್ಲಿ ನಾಯಿ, ಬೆಕ್ಕು, ಹಾವಿನ ಹೆಜ್ಜೆ ಗುರುತು ನೋಡಿ ಕಂಗಾಲಾದರು. ಕಳ್ಳರು ಬಂದಿರಬಹುದೇನೋ ಎಂದು ದೊಡ್ಡವರು ಮಾತಾಡಿಕೊಂಡರು. ಇದನ್ನು ಕೇಳಿ ಮಕ್ಕಳು ಕಳ್ಳರು ಮನೆಯೊಳಗಿರಬಹುದೇನೋ, ಅಟ್ಟದ ಮೇಲಿರಬಹುದೇನೋ ಎಂದು ಯೋಚಿಸತೊಡಗಿದರು. ಅಟ್ಟದಲ್ಲಿ ಯಾರೋ ಮಾತಾಡುವಂತೆ ಕೇಳತೊಡಗಿತು. ಬೆಳಗ್ಗಿನವರೆಗೂ ಕಳ್ಳರ ಪತ್ತೆ ಇಲ್ಲ.... ಮತ್ತೇನದು.... ಹೆಜ್ಜೆ ಗುರುತು.... ಅಕ್ಷರಗಳ ಬಿಲ್ಲೆಗಳೂ ಇದ್ದವಲ್ಲ...! ಹೋ......ಮಕ್ಕಳು ಮಾಡಿನ ಹೆಂಚು ನೋಡಿದರು.... ಬಿಲ್ಲೆಯಲ್ಲಿದ್ದ ಅಕ್ಷರಗಳು.... Mangalore Tiles..... ಹಾಗಾದರೆ ಕುಂಟೆ ಬಿಲ್ಲೆ ಆಡಿದ ಹೆಂಚಿನ ತುಂಡುಗಳು ಅವು.... ಹಾಗಾದರೆ ಮಾತನಾಡಿದ್ದು ಯಾರು ಅಟ್ಟದ ಮೇಲೆ.... ಓ....ಹೆಂಚುಗಳು.... ಎಲ್ಲಾ ಭಯದಿಂದಾದ ಭ್ರಮೆ..... ಹನಿ ಕಥೆ ನಿಲ್ಲಿಸಿದಳು. ಎಲ್ಲಾ ಮುಖ ಮುಖ ನೋಡಿಕೊಂಡರು....ನಮ್ಮದೇ ಕಥೆ... ಹನಿ ಜೋರಾಗಿ ನಕ್ಕಳು....ಎಲ್ಲರೂ ಅವಳ ನಗುವಲ್ಲಿ ನಗುವಾಗಿ ಸಂತೋಷಗೊಂಡರು.
....................................................ಲಹರಿ ಜಿ.ಕೆ.
7 ನೇ ತರಗತಿ
ತುಂಬೆ ಸೆಂಟ್ರಲ್ ಸ್ಕೂಲ್ , ತುಂಬೆ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ  
********************************************


       
      

Ads on article

Advertise in articles 1

advertising articles 2

Advertise under the article