-->
ಪೂರ್ಣಗೊಳಿಸಿ ಬರೆದ ಕಥೆಗಳು ಸಂಚಿಕೆ - 1

ಪೂರ್ಣಗೊಳಿಸಿ ಬರೆದ ಕಥೆಗಳು ಸಂಚಿಕೆ - 1

ನಾದಣ್ಣನ ಅಪೂರ್ಣ ಕಥೆ - 2
ಪೂರ್ಣಗೊಳಿಸಿ ಬರೆದ ಕಥೆಗಳು 
ಸಂಚಿಕೆ - 1
      
ಕಥೆ : ಅಟ್ಟದ ಮೇಲಿನ ಗುಟ್ಟು ( ಕಥಾ ಸಾರಾಂಶ)
****************************************
          ಅಕ್ಕ ಹನಿ ಮತ್ತು ತಮ್ಮ ತನು, ಇಬ್ಬರು ಒಂದೇ ಮನೆಯ ಮಕ್ಕಳು. ತನುವಿನ ಏನೇನೋ ಸಾವಿರಾರು ಪ್ರಶ್ನೆಗಳಿಗೆ ಉತ್ತರ ಈ ಅಕ್ಕಳಿಂದ ಸಿಗುತ್ತಿತು. ಇವರ ಮನೇಲಿ ಅಮ್ಮ , ಅಪ್ಪ ಮತ್ತು ಅಜ್ಜಿ ಇದ್ದರು. ಪಕ್ರು ಎಂಬ ನಾಯಿ, ಡಿಂಕಿ ಅಂತ ಒಂದು ಬೆಕ್ಕು ಇತ್ತು. ಪ್ರತಿ ದಿನ ಇವರ ಮನೇಲಿ ಬೆಳಗಾಗುತ್ತಿದ್ದುದೇ ಹನಿ ಹೇಳುವ ಕಥೆಗಳಿಂದ. 
ಒಂದು ದಿನ ಎಲ್ಲೋ ಹೊರಗೆ ಹೋಗಿ ವಾಪಾಸು ಬರುವಾಗ ಇವರ ಮನೆಯ ಅಂಗಳದ ತುಂಬಾ ಉದ್ದುದ್ದ ಹೆಜ್ಜೆಗಳು ಮೂಡಿದ್ದವು. 'ಮಂಗಳೂರು ಟೈಲ್ಸ್' ಅನ್ನುವ ಗುರುತುಗಳು ಸಿಕ್ಕವು. ರಾತ್ರಿ ಅಟ್ಟದ ಮೇಲೆ ಏನೇನೋ ಗುಸುಗುಸು... ಪಿಸುಪಿಸು...
         ಬೆಳಗ್ಗೆ ಹನಿಗೆ ಎಲ್ಲಾ ಗೊತ್ತಾಯ್ತು... ಹನಿಯ ವಿಶೇಷ ಕಥೆ ಕೇಳಲು ಕಿವಿಗಳನ್ನು ನಿಮಿರಿಸಿಕೊಂಡು, ಕಣ್ ಮಿಟುಕಿಸದೆ ಕುಳಿತರು.
ಹನಿ ಕಥೆ ಶುರು ಮಾಡಿದಳು...
(ಮಕ್ಕಳು ಮುಂದುವರಿಸಿರುವ ಕತೆಗಳು ಇಲ್ಲಿವೆ ..)

                ಅಟ್ಟದ ಮೇಲಿನ ಗುಟ್ಟು 
          ರಚನೆ : ತನ್ಮಯ್ ಕೃಷ್ಣ ನೇರಳಕಟ್ಟೆ
-----------------------------------------------------
      ಎಲ್ಲರೂ ಕೇಳಿ .... ಹೋದ ವರ್ಷ ಗೌರಿ ಹಬ್ಬದ ದಿನ. ನೆಂಟರೆಲ್ಲ ನಮ್ಮ ಮನೆಗೆ ಬಂದಿದ್ದರು. ಅಪ್ಪ , ಅಮ್ಮ, ಮಾವ, ಅತ್ತಿಗೆ, ಚಿಕ್ಕಮ್ಮ ,ಚಿಕ್ಕಪ್ಪ , ದೊಡ್ಡಮ್ಮ, ದೊಡ್ಡಪ್ಪ ಎಲ್ಲರೂ ಮರುದಿನದ ಚೌತಿಗೆ ಸಿದ್ಧತೆ ಮಾಡುತ್ತಿದ್ದರು. ಆದರೆ ಮಕ್ಕಳೆಲ್ಲ ಅಜ್ಜಿಯ ಸುತ್ತ ಸೇರಿ ಪಟ್ಟಾಂಗ ಹೊಡೆಯುತ್ತಿದ್ದರು. ಆಗ ಚಿಂಟು " ಅಜ್ಜಿ ನಾಳೆ ನಾವು ಮಕ್ಕಳೆಲ್ಲ ಸೇರಿ ಚೌತಿ ಹಬ್ಬದ ಆಟವನ್ನು ಆಡೋಣವೇ? "ಎಂದರು. ಅಜ್ಜಿ ಒಪ್ಪಿದರು. ಮಿಂಚು ಪೂಜೆ ಮಾಡಲು ಬೇಕಾದ ಗಣಪತಿ ದೇವರ ಮೂರ್ತಿಯನ್ನು ಮಣ್ಣಿನಿಂದ ಮಾಡಿದಳು. ಮರುದಿನ ಚೌತಿ ಬಡಿಸಿ ಪ್ರಸಾದ ತಿಂದ ನಂತರ ಮನೆಯವರಿಗೆ ಗೊತ್ತಾಗದಂತೆ ಹಿಂದಿನ ದಿನ ಮಾಡಿದ ಗಣಪತಿ ಮೂರ್ತಿಯನ್ನು ಎರಡು ಹಂಚುಗಳಲ್ಲಿ ಮಂಟಪ ಮಾಡಿ ಕೂರಿಸಿದರು. ಚಿಂಟು ಹೂವು ತಂದು ಮಾಲೆಕಟ್ಟಿ ಹಾಕಿದಳು. ಅಕ್ಕ ಕೇಪುಳ, ಪೇರಳೆ, ಬಾಳೆಹಣ್ಣುಗಳನ್ನು ಇಟ್ಟಳು. ಎಲ್ಲರೂ ಸೇರಿ ಪೂಜೆ ಮಾಡಿದರು. ಕುಂಕುಮ ಹಚ್ಚಿ ಪ್ರಸಾದ ತಿಂದು ನಂತರ ಮೆರವಣಿಗೆ ಮಾಡಿ ಗಣಪತಿ ದೇವರ ಮೂರ್ತಿಯನ್ನು ಕೆರೆಗೆ ಹಾಕಿದರು. ನಂತರ ಹೆಂಚನ್ನು ಅಪ್ಪ ಅಮ್ಮ ಬರುವ ಮೊದಲು ಸ್ವಚ್ಛಮಾಡಿ ಅಟ್ಟಕ್ಕೆ ಹತ್ತಿ ಮಾಡಿಗೆ ಇಟ್ಟರು. ಆ ದಿನ ಎಲ್ಲರೂ ಖುಷಿಯಿಂದ ಹರಟೆ ಹೊಡೆದು ಮಲಗಿದರು. ಆದರೆ ರಾತ್ರಿ ಹೊತ್ತು ದೇವರು ಪ್ರತ್ಯಕ್ಷರಾಗಿ " ಹೆಂಚುಗಳೇ ನೀವು ಮಂಟಪವಾಗಿ ನನ್ನ ಸೇವೆ ಮಾಡಿದ್ದೀರಿ . ನಿಮಗೆ ಏನು ವರ ಬೇಕು ಕೇಳಿ... ನಾನು ಕೊಡುತ್ತೇನೆ " ಎಂದರು. ಆಗ ಖುಷಿಗೊಂಡ ಆ ಎರಡು ಹೆಂಚುಗಳು " ನಮಗೆ ಮಧ್ಯರಾತ್ರಿಯಿಂದ ಮುಂಜಾವಿನವರೆಗೆ ಮಾತಾಡುವ... ನಡೆಯುವ ಶಕ್ತಿ ಕೊಡುವಿರಾ ದೇವಾ? " ಎಂದರು . ಅದಕ್ಕೆ ಒಪ್ಪಿದ ದೇವರು " ತಥಾಸ್ತು. ಆದರೆ ಸೂರ್ಯನ ಬೆಳಕು ನಿಮ್ಮ ಮೇಲೆ ಬಿದ್ದರೆ ನಿಮ್ಮ ಗುರುತಿನ ಹೆಜ್ಜೆಗಳು ಕಾಣಸಿಗುತ್ತದೆ ಮತ್ತು ನಿಮ್ಮ ಶಕ್ತಿ ಕಳೆದು ಹೋಗುತ್ತದೆ ಹಾಗಾಗಿ ಜಾಗ್ರತೆಯಾಗಿರಿ " ಎಂದು ಹೇಳಿ ಮಾಯವಾದರು. ಹೆಂಚುಗಳಿಗೆ ತುಂಬಾ ಖುಷಿಯಾಯಿತು. ಆ ಎರಡು ಹಂಚುಗಳು ರಾತ್ರಿ ಎಲ್ಲರೂ ಮಲಗಿದ ನಂತರ ಮೆಲ್ಲನೆ ಎದ್ದು ....ನಡೆದಾಡಿ ಮನೆಯಿಂದ ಹೊರಗೆ ವಾಕಿಂಗ್ ಹೋಗಿ ಮುಂಜಾನೆಯೊಳಗೆ ಬಂದು ಅಟ್ಟ ಹತ್ತಿ ಮನೆ ಸೇರುತಿತ್ತು. ಹೀಗೆ ತುಂಬಾ ದಿನಗಳು ನಡೆದವು. ಒಂದು ದಿನ ಅವು ಬೇರೆ ದಾರಿಯಲ್ಲಿ ತಿರುಗಾಡಿ ಸುಸ್ತಾಗಿ ಅಲ್ಲೇ ಇದ್ದ ಪಾರ್ಕಿನಲ್ಲಿ ಮಲಗಿದವು. ಅದಕ್ಕೆ ಅಲ್ಲೇ ನಿದ್ದೆ ಬಂತು. ಎಚ್ಚರವಾದಾಗ ಬೆಳಗಾಗಿತ್ತು. ಗಾಬರಿಯಾಗಿ ಮನೆಗೆ ಓಡೋಡಿ ಬಂತು. ಆದರೆ ಸೂರ್ಯನ ಬೆಳಕು ಅದರ ಮೇಲೆ ಬಿದ್ದ ಕಾರಣ ಹೆಜ್ಜೆ ಗುರುತು ಮನೆಯ ಮುಂದೆ ಕಾಣಿಸಿತು . ಅದರ ಶಕ್ತಿ ಎಲ್ಲಾ ನಾಶವಾಯಿತು. ಮತ್ತೇ ಮಾಮೂಲಿ ಹೆಂಚು ಆಗಿ ಮಾಡಿನಲ್ಲೇ ಕೂತಿತು. ಇದುವೇ ಅಟ್ಟದ ಮೇಲಿನ ಗುಟ್ಟು. ಹಾಗಾಗಿ ನೀವು ಯಾರು ಇನ್ನು ಈ ಹೆಂಚಿನ ಗುರುತಿನ ಹೆಜ್ಜೆಗಳ ಮೇಲೆ ಹೆದರಬೇಡಿ .... ಧೈರ್ಯವಾಗಿರಿ ಎಂದಳು...... ಅಂದಿನಿಂದ ಹನಿಯ ಮನೆಯವರೆಲ್ಲ ಧೈರ್ಯದಿಂದ ಬದುಕಿದರು.
........................... ತನ್ಮಯ್ ಕೃಷ್ಣ ನೇರಳಕಟ್ಟೆ
9 ನೇ ತರಗತಿ
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪುತ್ತೂರು , 
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
*********************************************


                ಅಟ್ಟದ ಗುಟ್ಟು : ಶ್ರಾವ್ಯ ಮಂಚಿ
         ---------------------------------------
               ಹನಿ , ಕಥೆ ಆರಂಭಿಸಿದಳು...... ಮನೆಯ ಎಲ್ಲಾ ಕಿವಿಗಳು ನೆಟ್ಟಗೆ ಕತೆ ಆಲಿಸಲು ಸಜ್ಜಾದವು. ಕಥೆ ಹೇಳುವ ವಿಶೇಷ ಕೌಶಲ್ಯ ಹೊಂದಿರುವ ಹನಿ ಸುಂದರವಾಗಿ ಕತೆ ಹೊರಹೊಮ್ಮಿಸಲು ಆರಂಭಿಸಿದಳು. ರಾತ್ರಿ ಇಡೀ ತಾನು ಕಂಡ ಗುರುತಿನ ಬಗ್ಗೆ ಯೋಚಿಸುತ್ತ ಮಲಗಲು ಹೋದಾಗ ಸುಮಾರು ಹೊತ್ತು ಕಣ್ಣಿಗೆ ನಿದ್ದೆಯೇ ಹತ್ತಲಿಲ್ಲ. ನಿಶ್ಶಬ್ಧ ರಾತ್ರಿಯಲ್ಲಿ ದಿಟ್ಟ ಗಮನದಿಂದ ಅದರ ಬಗ್ಗೆ ಯೋಚಿಸುತ್ತಿದ್ದ ಹನಿಗೆ ಅಟ್ಟದ ಮೇಲಿನಿಂದ ಕೇಳಿಬಂದ ಎರಡು ದ್ವನಿಗಳು ಏನೇನೋ ಯೋಚನೆ ಮೂಡಿಸಲು ಆರಂಭಿಸಿತು. ರಾತ್ರಿ ವೇಳೆ ಬೇರೆ, ಯಾರೋ ಇಬ್ಬರು ಕಳ್ಳರು ಏನೋ ಕದಿವ ಯೋಜನೆ ರೂಪಿಸುತ್ತಿದ್ದಾರೆ ಅನ್ನುವಂತೆ ಭಾಸವಾಯಿತು. ಅಸ್ಪಷ್ಟವಾಗಿ ಕೇಳುತ್ತಿದ್ದ ಮಾತುಗಳನ್ನು ಮಲಗಿದ್ದಲ್ಲಿಂದಲೇ ಇನ್ನೂ ಸ್ಪಷ್ಟವಾಗಿ ಕೇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಳು ಹನಿ. ಅವಳು ಕೇಳಿಸಿಕೊಂಡ ಮಾತು ಅಬ್ಬ "ಅವರಿಗಿನ್ನೂ ಗೊತ್ತಾಗಿಲ್ಲ ಗೊತ್ತಾದರೂ ನಂಬುವುದಿಲ್ಲ ಬಿಡಿ" ಎಂದ ಮಾತು ಅವಳಲ್ಲಿ ಇನ್ನೂ ಭಯ ಹುಟ್ಟಿಸಿತು. ಇವರು ನಿಜವಾಗಿಯೂ ಕಳ್ಳರೇ ಇರಬೇಕು, ಮನೆ ದೋಚಲು ತಯಾರಿ ನಡೆಸುತ್ತಿದ್ದಾರೆ. ನಾನು ಇವರ ಯೋಜನೆ ತಡೆಯಬೇಕು , ಅವರನ್ನು ಎದುರಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ...... ಹೀಗೆಲ್ಲ ಯೋಚಿಸುತ್ತಿದ್ದಳು. ಯೋಚನೆಯಲ್ಲಿ ನಿದ್ದೆಗೆ ಜಾರಿದ್ದು ಸ್ವತ ಹನಿಗೆ ತಿಳಿಯಲಿಲ್ಲ. ಬೆಳಗ್ಗೆ ಕನ್ನಡಿಯಲ್ಲಿ ರಾತ್ರಿ ಗೋಡೆಗೆ ಅಂಟಿಸಿರುವ ಗುರುತುಗಳ ಪ್ರತಿಬಿಂಬ ಕಂಡಾಗ ಅದು ಮಂಗಳೂರು ಟೈಲ್ಸ್ ಎಂದು ತಿಳಿದಾಗ ಹೋ ಗೊತ್ತಾಯ್ತು ಗೊತ್ತಾಯ್ತು ಎಂದು ಮನೆ ತುಂಬಾ ಕುಣಿದಾಡಿದಳು. ಅಸಲಿಗೆ ರಾತ್ರಿ ಅವಳು ಕೇಳಿಸಿಕೊಂಡು ಇರುವ ಧ್ವನಿ ಅವಳ ಸ್ನೇಹಿತರದ್ದೇ ಕಳ್ಳರದ್ದಲ್ಲ ಎಂದು ತಿಳಿಯಿತು. ಕತೆ ಮುಂದುವರಿಸುತ್ತ ಹನಿ ಯಾವಾಗಲೂ ತನ್ನ ಗೆಳೆಯ ಗೆಳತಿಯರೊಂದಿಗೆ ಆಟವಾಡಲು ಮನೆಯ ಹೊರಾಂಗಣದಲ್ಲಿ ಸೇರಿಕೊಳ್ಳುತ್ತಾಳೆ. ಹೀಗೆ ಹಿಂದಿನ ದಿನ ಗೆಳೆಯರೊಂದಿಗೆ ಆಟವಾಡುತ್ತಿರುವಾಗ ಹನಿಯ ಮನೆಯ ಹತ್ತಿರದಲ್ಲಿರುವ ಮಾವಿನಮರ ಅವರ ಕಣ್ಣಿಗೆ ಬೀಳುತ್ತದೆ. ಗೆಳೆಯರೆಲ್ಲ ಒಂದಾಗಿ ಮಾವಿನ ಮರದಿಂದ ಮಾವಿನ ಹಣ್ಣನ್ನು ಕೊಯ್ಯಬೇಕೆಂದು ಒಬ್ಬೊಬ್ಬರಾಗಿ ಕಲ್ಲು ಎಸೆಯಲು ಆರಂಭಿಸುತ್ತಾರೆ. ಹಾಗೆ ಎಸೆದ ಕಲ್ಲು ಹನಿಯ ಮನೆಯ ಹಂಚಿಗೆ ಬಿದ್ದು ಹಂಚು ತೂತಾಗುತ್ತದೆ. ಈ ವಿಚಾರ ಮನೆಯವರಿಗೆ ತಿಳಿದರೆ ಎಲ್ಲಿ ಗದರುತ್ತಾರೆ ಎಂದು ತಿಳಿದು ಎಲ್ಲಾ ಗೆಳೆಯರು ಒಟ್ಟಾಗಿ ತೂತಾದ ಹಂಚನ್ನು ಬದಲಿಸುವ ಯೋಜನೆ ರೂಪಿಸುತ್ತಾರೆ. ಹನಿಯ ಸ್ನೇಹಿತರ ಗುಂಪಿನಲ್ಲಿ ಇರುವ ಇಬ್ಬರು ಹನಿಗಿಂತ ಹಿರಿಯರು. ಕತ್ತಲು ಅವರಿಸುತ್ತಾ ಬರುವ ಹೊತ್ತಿಗೆ ಹನಿಯ ಮನೆ ಅಂಗಳದಲ್ಲಿ ಯಾರು ಇಲ್ಲದ ಹೊತ್ತಿಗೆ ಹೋಗಿ ಸರಿಪಡಿಸುವುದಾಗಿ ನಿರ್ಧಾರ ಮಾಡಿ, ಎಲ್ಲರೂ ತಮ್ಮ ತಮ್ಮ ಮನೆಗೆ ತೆರಳಿದರು. ಮುಸು ಮುಸು ಕತ್ತಲು ಆವರಿಸುತ್ತಿದ್ದಂತೆ ಇಬ್ಬರು ಗೆಳೆಯರು ಹನಿಯ ಅಂಗಳದಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ಮನೆಯ ಅಂಗಳ ಪ್ರವೇಶಿಸಿ ತೂತಾದ ಹಂಚನ್ನು ಬದಲಿಸಿದರು. ಇದರ ನಡುವೆ ಹನಿಯ ಮನೆಯವರು ಅಂಗಣದಲ್ಲಿ ಕಾಣಿಸಿದ ಗುರುತನ್ನು ಪರಿಶೀಲಿಸಿದಾಗ ಅವರಿಗೆ ಏನೆಂದು ತಿಳಿಯದೆ ಮತ್ತೆ ಪರಿಶೀಲಿಸದೆ ತಮ್ಮ ತಮ್ಮ ಕೆಲಸದಲ್ಲಿ ತೊಡಗಿದರು. ಅಂಗಳದಲ್ಲಿ ಕಂಡ ಗುರುತಿನ ಬಗ್ಗೆ ತೀರಾ ಯೋಚಿಸುತ್ತಿದ್ದ ಹನಿಗೆ ಮಲಗಿದ್ದಾಗ ಅಟ್ಟದ ಮೇಲಿಂದ ಕೇಳಿದ ಮಾತು ಭಯ ಹುಟ್ಟಿಸಿದ್ದು ಮಾತ್ರ ಸತ್ಯ. ಆದರೆ ಅದು ನಿಜವಾಗಿ ಅವಳದೇ ಸ್ನೇಹಿತರು. ಹಂಚು ಸರಿಪಡಿಸಿಕೊಳ್ಳುವ ಸಂದರ್ಭದಲ್ಲಿ ಆಡಿದ ಮಾತು. ಮನೆಯವರಿಗೆ ಹಂಚು ತೂತಾಗಿದ್ದು ಇನ್ನೂ ಗೊತ್ತಾಗುವುದಿಲ್ಲ. ಗೊತ್ತಾದರೂ ಮಕ್ಕಳು ಇದನ್ನು ಸರಿ ಮಾಡಲು ಸಾಧ್ಯ ಅನ್ನೋದು ನಂಬೋದಿಲ್ಲ. ಈ ಮಾತಿನ ಅರ್ಥ ತಿಳಿಯದೆ ರಾತ್ರಿ ಇಡೀ ಅವಳು ನಿದ್ದೆಗೆಡಿಸಿಕೊಂಡಿದ್ದಳು. ಈಗ ಯೋಚಿಸಿದಾಗ ಮನೆಯವರಿಂದ ಸಿಗಬೇಕಾದ ಬೈಗುಳ ತಪ್ಪಿದೆ ಹಂಚಿನ ತೂತು ರಾತ್ರೋರಾತ್ರಿ ಸರಿಹೊಂದಿದೆ. ರಾತ್ರಿ ಕೇಳಿಸಿಕೊಂಡ ಮಾತಿನ ಅರ್ಥ ಈಗ ತಿಳಿಯಾಗಿದೆ. ಹನಿಯ ಮತ್ತು ಅವಳ ಸ್ನೇಹಿತರ ಕತೆ ಕೇಳಿ ಮನೆಯವರು ಸುಸ್ತಾದರು. 
 ....................................... ಶ್ರಾವ್ಯ ಮಂಚಿ
ಪ್ರಥಮ ಪಿಯುಸಿ 
ಶ್ರೀ ರಾಮ ವಿದ್ಯಾಕೇಂದ್ರ , ಕಲ್ಲಡ್ಕ
ಬಂಟ್ವಾಳ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
****************************************


              ಅಟ್ಟದ ಮೇಲಿನ ಗುಟ್ಟು: ಸುನೀತಾ
         ----------------------------------------
              ಹನಿ ತನ್ನ ಮನೆಯವರಿಗೆ  ಕಥೆಯ ಹೆಸರು  'MANGALORE TILES'  ಎನ್ನುತ್ತಾಳೆ. ಇದನ್ನು ಕೇಳಿದ ತಾಯಿ ಒಮ್ಮೆ ಆಶ್ಚರ್ಯ ಚಕಿತಳಾದಳು, ಅವಳು ಹನಿ ಬಳಿ ಹೇಳಿದಳು "ಇದು ಅಂಗಳದಲ್ಲಿ ಸಿಕ್ಕ ಗುರುತನ್ನು ಕನ್ನಡಿಯಲ್ಲಿ ನೋಡಿದಾಗ ದೊರೆತ ಹೆಸರು ತಾನೇ??! " ಎಂದಳು. ಹನಿ ಹೌದೆಂದು  ತಲೆಯಾಡಿಸಿ, ಕಥೆಯನ್ನು ಪ್ರಾರಂಭಿಸಿದಳು.... ಒಂದಾನೊಂದು ಊರಿನಲ್ಲಿ ಒಬ್ಬಳು ಅಜ್ಜಿ ತನ್ನ ಗುಡಿಸಲಿನಲ್ಲಿ ಒಂಟಿಯಾಗಿ  ಜೀವಿಸುತ್ತಾ ಇದ್ದಳು, ಅವಳು ಗುಡಿಸಲಿನಲ್ಲಿ ಮಳೆಗಾಲ ಶುರುವಾದರೆ ತುಂಬಾನೇ ಕಷ್ಟವಾಗುತಿತ್ತು. ಕಾರಣ ಜೋರಾಗಿ ಗಾಳಿ ಬೀಸಿದರೆ ಅಥವಾ ಜೋರಾಗಿ ಮಳೆ ಬಂದರೆ ಗುಡಿಸಲು ಸೋರುತ್ತಿತ್ತು. ಹಾಗೇ ಎಲ್ಲಿ ಗಾಳಿಗೆ ಗುಡಿಸಲು ಹಾರಿ ಹೋಗುವುದೋ ಎನ್ನುವ ಭಯದಿಂದ ಜೀವನ ಸಾಗಿಸುತ್ತಾ ಇದ್ದಳು. ಇದನ್ನು ಕಂಡ ಅಲ್ಲೇ ಹತ್ತಿರದಲಿದ್ದ ಶ್ರೀಮಂತನೊಬ್ಬ ಮುದುಕಿಗೆ  'MANGALORE TILES'  ಎನ್ನುವ ಹೆಸರಿನ  ಹೆಂಚು ತಂದು  ಕೊಡುತ್ತಾನೆ. ಇವುಗಳು ವಿಶೇಷ ಗುಣವುಳ್ಳ  ಹೆಂಚುಗಳು, ಮಾತನಾಡಬಲ್ಲವು ಆದರೆ  ಈ ವಿಷಯ ಶ್ರೀಮಂತ ನಿಗಾಗಲಿ  ಮುದುಕಿಗಾಗಲಿ ತಿಳಿದಿರಲಿಲ್ಲ. ವಿಶೇಷ ಹೆಂಚುಗಳಿಗೆ  ಮುದುಕಿಯ ಪಾಡು ನೋಡಿ ಅಯ್ಯೋ ಎನಿಸಿತು, ಏನೇ ಆದರೂ  ನಾವು ಮುದುಕಿಗೆ ಉತ್ತಮವಾದ  ರಕ್ಷಣೆ ಒದಗಿಸಬೇಕೆಂದು   ಅವುಗಳಲ್ಲಿಯೇ ಮಾತನಾಡಿಕೊಂಡವು, ಮಾತಿನ ರೀತಿಯೇ ರಕ್ಷಣೆ ನೀಡಿ ಮಳೆಗೂ ಜಗ್ಗದೆ  ಒಗ್ಗಟ್ಟಿನಿಂದ ಇದ್ದು ಮುದುಕಿಗೂ ಆಸರೆ ನೀಡಿದವು... 'MANGALORE TILES ' ಬಹಳ ಉಪಕಾರಿ ಎನ್ನುತ್ತಾ  ಕಥೆ ಮುಗಿಸಿದಳು ಹನಿ. ಹೀಗೆ ಎಲ್ಲರೂ ಕಥೆಯನ್ನು ಮೆಚ್ಚಿಕೊಳ್ಳುತ್ತಾ ತಮ್ಮ -ತಮ್ಮ ಕೆಲಸದತ್ತ ಸಾಗಿದರು.

........................................................ ಸುನೀತಾ
ಪ್ರಥಮ PUC
ಎಕ್ಸೆಲ್ ಪಿ.ಯು.ಕಾಲೇಜ್ , ಗುರುವಾಯನಕೆರೆ
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
**********************************************


         ಅಟ್ಟದ ಮೇಲಿನ ಗುಟ್ಟು : ಸಾತ್ವಿಕ್ ಗಣೇಶ್
          ------------------------------------------------------------
    ಹನಿಯು ಅಂಗಳದ ಮೇಲೆ ಮೂಡಿದ್ದ ಹೆಜ್ಜೆಯ ಗುರುತಿನ ಕತೆಯನ್ನು ಸಂತಸದಿಂದ ಹೇಳಲು ಆರಂಭಿಸಿದಳು. ನಮ್ಮ ಮನೆಯ ಮೇಲೆ ಹಂಚು ಇದೆಯಲ್ಲಾ ಅದರದ್ದು. ಅದು ಮಳೆ ಬೀಳುವಾಗ ನೆಲದಲ್ಲಿ ಹಾಗೆ ಕಂಡಿತು. ಇದನ್ನು ಕೇಳಿದ ತನು , " ಹಂಚು ಎಂದರೆ ಏನು? ". ಎಂದು ಕೇಳಿದ. ಆಗ ಅವನ ಅಜ್ಜಿಯು," ಹಂಚು ಎಂದರೆ ನಮಗೆ ಬಿಸಿಲು ಮಳೆ ಬೀಳದ ಹಾಗೆ ನಮ್ಮ ಮನೆ ಮಾಡಿಗೆ 
 ಹಾಕುವ ವಸ್ತು ". ಎಂದರು. " ಅದು ನಮಗೆ ಎಲ್ಲಿ ಸಿಗುತ್ತದೆ ...? " ಎಂದು ತನು ಕುತೂಹಲದಿಂದ ಕೇಳಿದನು. ಆಗ ಹನಿಯು " ಅದು ಹಂಚಿನ ಕಾರ್ಖಾನೆಯಲ್ಲಿ ಸಿಗುತ್ತದೆ " ಎಂದಳು. ಹಂಚು ಹೇಗೆ ತಯಾರಿಸುವುದು ಗೊತ್ತೇ ...? ಎಂದನು ತನು. ಆಗ ಹನಿಯು " ಅಂಟು ಮಣ್ಣು ಮತ್ತು ಹೊಯ್ಗೆ ಮಿಶ್ರ ಮಾಡಿ ಅದನ್ನು ಆಯತಾಕಾರದ ಅಚ್ಚಿನ ಮಿಶನಿಗೆ ಹಾಕಿ ತೆಗೆದು ಅದನ್ನು ಬಿಸಿ ಮಾಡಿ ತಯಾರಿಸುವುದು " ಎಂದು ತಾನು ಪ್ರವಾಸ ಹೋಗಿದ್ದಾಗ ಕಂಡ ಅನುಭವ ಹೇಳುವಳು. "ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗುವೆಯಾ ಅಕ್ಕಾ? " ಖಂಡಿತಾ.... ನಾವೆಲ್ಲರೂ ಒಂದು ದಿನ ಹಂಚಿನ ಕಾರ್ಖಾನೆಗೆ ಹೋಗೋಣ. ಎಂದು ಮನೆಯ ಹಿರಿಯರನ್ನು ಕೇಳಿಕೊಂಡರು. ಇದನ್ನು ಕೇಳಿ ಎಲ್ಲರಿಗೂ ಸಂತೋಷವಾಯಿತು. ಆ ನಂತರ ಅವರೆಲ್ಲರೂ ತಮ್ಮ ತಮ್ಮ ದಿನಚರಿಯನ್ನು ಮಾಡಲು ಹೊರಟರು.
 ........................................ಸಾತ್ವಿಕ್ ಗಣೇಶ್
7ನೆ ತರಗತಿ
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಜಿರೆ 
ಬೆಳ್ತಂಗಡಿ ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ
********************************************




Ads on article

Advertise in articles 1

advertising articles 2

Advertise under the article