-->
ಹಕ್ಕಿ ಕಥೆ - 14

ಹಕ್ಕಿ ಕಥೆ - 14

ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ

                         ಹಕ್ಕಿ ಕಥೆ - 14
ನಮಸ್ತೇ ಮಕ್ಕಳೇ............   
        ಭಾರತದ ಯಾವುದೇ ಭಾಗದಲ್ಲಾದರೂ ಸಾಮಾನ್ಯವಾಗಿ ಸಿಗುವ ಮಿಂಚುಳ್ಳಿ ಇದು. ಹೆಚ್ಚಾಗಿ ಎಲೆಕ್ಟ್ರಿಕ್ ಕಂಬ ಅಥವಾ ತಂತಿಯ ಮೇಲೆ, ಮರದಮೇಲೆ, ಮನೆ ಮತ್ತು ಕಟ್ಟಡಗಳ ಮೇಲೆ ಎಲ್ಲಾ ಕಡೆ ನೋಡಲಿಕ್ಕೆ ಸಿಗುವ ಅತ್ಯಂತ ಸಾಮಾನ್ಯವಾದ ಮಿಂಚುಳ್ಳಿ ಇದು. 
        ಕಡುಕೆಂಪು ಬಣ್ಣದ ಕೊಕ್ಕು, ಕಡು ಕಂದು ಬಣ್ಣದ ದೇಹ, ಬಿಳಿ ಬಣ್ಣದ ಎದೆ, ಗಾಢನೀಲಿ ಬಣ್ಣದ ಬೆನ್ನು, ಬಾಲ ಮತ್ತು ರೆಕ್ಕೆಗಳು, ಹಾರುವಾಗ ರೆಕ್ಕೆಯ ನಡುವೆ ಕಾಣುವ ಬಿಳಿ ಬಣ್ಣ ಈ ಹಕ್ಕಿಯನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತವೆ. 
       ಗದ್ದೆಯ ಅಥವಾ ಸ್ವಲ್ಪ ಬಯಲು ಪ್ರದೇಶ ಇರುವಲ್ಲಿನ ಎತ್ತರದ ಜಾಗದಲ್ಲಿ ಕುಳಿತುಕೊಂಡು ಸುತ್ತಲೂ ಗಮನಿಸುತ್ತಾ ಇರುವ ಈ ಹಕ್ಕಿ ಎಲ್ಲಾದರೂ ಒಂದು ಓತಿಕ್ಯಾತ, ಅರಣೆ ( ಹಾವುರಾಣಿ ), ಮಿಡತೆ, ಕಪ್ಪೆ, ಹಲ್ಲಿ, ಏಡಿಗಳನ್ನು ಹಿಡಿದು ತಿನ್ನುತ್ತವೆ. ಮಾತ್ರವಲ್ಲ ಮೀನುಗಳೂ ಇದರ ಅತ್ಯಂತ ಪ್ರಿಯವಾದ ಆಹಾರ. ಒಂದು ಕಡೆಯಿಂದ ಇನ್ನೊಂದು ಕಡೆಗೆ ಹಾರುವಾಗ ಖೀ..ಖೀ..ಖೀ.. ಎಂದು ಗಟ್ಟಿಯಾಗಿ ಕೂಗುತ್ತದೆ. ಇದನ್ನು ಗುರುತಿಸುವುದೂ ಅತ್ಯಂತ ಸುಲಭ. ನೀವೆಲ್ಲಾ ಖಂಡಿತವಾಗಿ ಈ ಹಕ್ಕಿಯನ್ನು ನೋಡಿರ್ತೀರಿ.
          ಒಂದೊಂದು ಮಳೆ ಬರಲು ಪ್ರಾರಂಭವಾಗುವ ಮಾರ್ಚ್ ತಿಂಗಳಿನಿಂದ ಜುಲೈ ತಿಂಗಳಿನವರೆಗೆ ಈ ಹಕ್ಕಿಯ ಸಂತಾನೋತ್ಪತ್ತಿ ಕಾಲ. ಸಣ್ಣ ಗುಡ್ಡಗಳ ಇಳಿಜಾರುಗಳಲ್ಲಿ, ನೀರು ಹರಿಯುವ ತೋಡಿನ ಬದಿಗಳಲ್ಲಿ ಇದು ಬಹಳ ವಿಶಿಷ್ಟವಾದ ಗೂಡನ್ನು ಮಾಡುತ್ತದೆ. ಅದು ಹೇಗೆ ಅಂತ ಕೇಳ್ತೀರಾ.. ಮಣ್ಣಿನ ಒಳಗೆ ಟನಲ್ ರೀತಿಯಲ್ಲಿ ರಂಧ್ರ ಕೊರೆದು, ಒಳಗಡೆ ಪುಟ್ಟ ಜಾಗ ಮಾಡಿಕೊಂಡು, ಗೂಡು ಮಾಡಿ, ಮೊಟ್ಟೆ ಇಟ್ಟು ಮರಿ ಮಾಡುತ್ತದೆ. ಒಂದು ಬಾರಿಗೆ ಎರಡರಿಂದ ಮೂರು ಮರಿಗಳು ಇರುತ್ತವೆ ಎಂದು ಗಮನಿಸಿದವರು ಹೇಳುತ್ತಾರೆ. 
              ನಮ್ಮ ಶಾಲೆಯ ಹಿಂದೆ ಗುಡ್ಡದ ಇಳಿಜಾರಿನಲ್ಲಿ ಇದು ಗೂಡು ಮಾಡಿದ್ದನ್ನು ನಾವೂ ಒಂದು ಬಾರಿ ನೋಡಿದ್ದೆವು. ನೀವೂ ಗಮನಿಸಿ, ಈ ಹಕ್ಕಿ ನಿಮ್ಮ ಆಸುಪಾಸಿನಲ್ಲಿ ಖಂಡಿತಾ ನೋಡ್ಲಿಕ್ಕೆ ಸಿಗಬಹುದು. 
ಈ ಹಕ್ಕಿಯ
ಕನ್ನಡ ಹೆಸರು: ಗದ್ದೆ ಮಿಂಚುಳ್ಳಿ
English Name : White-throated Kingfisher
Scientific Name : Halcyon smyrnensis 
ಹಾಗಾದ್ರೆ ಮತ್ತೆ ಸಿಗೋಣ.. bye...
.......................................... ಅರವಿಂದ ಕುಡ್ಲ
ಅಧ್ಯಾಪಕ
ಮೂಡಂಬೈಲು ಹಿರಿಯ ಪ್ರಾಥಮಿಕ ಶಾಲೆ
ಬಂಟ್ವಾಳ , ದಕ್ಷಿಣ ಕನ್ನಡ ಜಿಲ್ಲೆ
+91 98448 98124
*********************************************




Ads on article

Advertise in articles 1

advertising articles 2

Advertise under the article