-->
ಬದಲಾಗೋಣವೇ ಪ್ಲೀಸ್....! ಸಂಚಿಕೆ - 13

ಬದಲಾಗೋಣವೇ ಪ್ಲೀಸ್....! ಸಂಚಿಕೆ - 13

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು


                        ಬದುಕಿನ ಗಡಿಯಾರ
               --------------------------------
           ಗಡಿಯಾರದಂಗಡಿಯಲ್ಲಿ ಕಾಲಸೂಚಕ ಸಮಯವನ್ನು ತೋರಿಸುವ ಉತ್ತಮ ಗಡಿಯಾರವನ್ನು ಆಯ್ಕೆ ಮಾಡಲು ನಿಂತಾಗ ಆಶ್ಚರ್ಯ ಕಾದಿತ್ತು. ವಿಧ ವಿಧ ವಿನ್ಯಾಸದ, ಬಗೆ ಬಗೆ ಬೆಲೆಯ, ಹಿರಿದು ಕಿರಿದೆಂಬ ಗಾತ್ರದ ನೂರಾರು ಗಡಿಯಾರಗಳು ಅಲ್ಲಿತ್ತು. ನನಗಲ್ಲಿಂದಲೇ ಆಯ್ಕೆಗೊಂದಲ ಪ್ರಾರಂಭವಾಯಿತು. ಅಲ್ಲಿರುವ ನೂರಾರು ಗಡಿಯಾರಗಳ ಮುಂದೆ ನಿಂತು ಸರಿಯಾದ ಗಂಟೆ ಎಷ್ಟೆಂದು ತಿಳಿಯ ಹೊರಟ ನನಗೆ ಮತ್ತೆ ಗೊಂದಲಗಳ ಮೂಟೆಯೇ ತಲೆ ಏರಿದಂತಾಯಿತು. ಅಲ್ಲಿನ ಒಂದೊಂದು ಗಡಿಯಾರವೂ ಒಂದೊಂದು ವೈರುಧ್ಯ ಸಮಯವನ್ನು ಸೂಚಿಸುತಿತ್ತು. ಸುತ್ತಲೆಲ್ಲ ದುರ್ಬೀನು ಹಾಕಿ ಹುಡುಕಿದರೂ ನಿಖರವಾಗಿ ಗಂಟೆ ತೋರಿಸುವ ಗಡಿಯಾರವನ್ನು ಆಯ್ಕೆ ಮಾಡಲಾಗದೆ ಒದ್ದಾಡುತ್ತಿದ್ದೆ. ಆಗ ಮಾಲೀಕರು ನನ್ನ ಬಳಿ ಬಂದು ಬ್ಯಾಟರಿ ಹಾಕಿ ನಿರ್ಜೀವ ಗಡಿಯಾರದ ಮುಳ್ಳನ್ನು ತಿರುಗಿಸಿ ಜೀವಂತ ಗಡಿಯಾರವನ್ನಾಗಿಸಿ ನನ್ನ ಕೈಯಲ್ಲಿ ಕೊಟ್ಟಾಗ ಗೊಂದಲಗಳೆಲ್ಲ ಮಾಯವಾಯಿತು. 
          ಈ ವಿಸ್ಮಯ ಭುವಿಯಲ್ಲಿ ಬದುಕುತಿರುವ ನಮ್ಮದು ಕೂಡಾ ಗಡಿಯಾರದಂಗಡಿ. ಅಲ್ಲಿ ನೂರಾರು ಗಡಿಯಾರದ ಮಧ್ಯೆ ನಿಖರ ಸಮಯದ ಗಡಿಯಾರವನ್ನು ಆಯ್ಕೆ ಮಾಡುವ ಗೊಂದಲವಿದ್ದರೆ , ಇಲ್ಲಿ ಬಗೆ ಬಗೆಯ ಮಾರ್ಗದರ್ಶನ ಸಲಹೆ ನೀಡುವ ನೂರಾರು ಜನರ ಮಧ್ಯೆ ಯಾರನ್ನು ನಂಬುವುದು , ಯಾರನ್ನು ನಂಬದಿರುವುದು ಎಂಬ ದ್ವಂದ ಪರಿಸ್ಥಿತಿ. ನೂರಾರು ಗಡಿಯಾರದಲ್ಲಿ ಒಂದೆರಡು ಮಾತ್ರ ಸರಿಯಾದ ಸಮಯವನ್ನು ಸೂಚಿಸಿದಂತೆ ನಮ್ಮ ಬಾಲ್ಯದಿಂದ ಇಲ್ಲಿಯವರೆಗೆ ಸಂಪರ್ಕಕ್ಕೆ ಬಂದಿರುವ ಸಂಬಂಧಿಕರು , ಗೆಳೆಯರು , ಸಂದರ್ಭಕ್ಕನುಗುಣವಾಗಿ ಸಿಗುವ ಪರಿಚಿತರು ಅಥವಾ ಅಪರಿಚಿತರುಗಳಲ್ಲಿ ಕೆಲವರು ಮಾತ್ರ ನಮ್ಮ ಬದುಕಿನ ಬಗ್ಗೆ ನೈಜ ಕಾಳಜಿಯನ್ನು ಹೊಂದಿದ ಹಿತೈಷಿಗಳಾಗಿರುತ್ತಾರೆ. ಬಣ್ಣ ಬಣ್ಣದ ಈ ಲೋಕದಲ್ಲಿ ಅಂಥವರನ್ನು ಗುರುತಿಸುವುದಾದರೂ ಹೇಗೆ ? ಹುಡುಕಿ ತನ್ನದಾಗಿಸಿಕೊಳ್ಳುವುದಾದರೂ ಹೇಗೆ......?.
            ನೂರಾರು ನಿರ್ಜೀವ ಗಡಿಯಾರಗಳಲ್ಲಿ ಜೀವಂತಿಕೆ ತುಂಬುವ ಮಾಲೀಕನಂತೆ ನಮ್ಮ ನಿರ್ಜೀವ ಬದುಕಿಗೂ ಜೀವಂತಿಕೆ ತುಂಬುವ ಮಾಲೀಕರಿರುವುದು ಖಂಡಿತಾ. ಆ ಬಗ್ಗೆ ಭರವಸೆ ನಮಗಿರಲಿ. ನಮ್ಮಲ್ಲಿನ ಗೊಂದಲಗಳ ಪೊರೆ ಸರಿಸುವ ಸ್ಪೂರ್ತಿಯ ಮಾಲೀಕನ ಹುಡುಕಾಟದಲ್ಲಿ ನಿರತರಾದಾಗ ಪರದಾಡುವ ಪಥದಿಂದ ಮೆರೆದಾಡುವ ಪಥಕ್ಕೆ ಪಥಿಸುವ ಪಥಿಕ ಸಿಗುವುದು ಕಷ್ಟವೇನಲ್ಲ.
            ಅಂಗಡಿಗಳಲ್ಲಿ ನೂರಾರು ಗಡಿಯಾರವಿದ್ದರೂ ನಮಗೆ ಬೇಕಾದುದು ಒಂದೆರಡು ಮಾತ್ರ. ಬಾಲ್ಯದಿಂದ ಇಲ್ಲಿಯವರೆಗೂ ನಮ್ಮ ಜತೆ ನೂರಾರು ಆದರ್ಶಗಳು, ತತ್ವಗಳು, ಚಿಂತನೆಗಳು , ವ್ಯಕ್ತಿತ್ವಗಳು ಬಂದು ಹೋಗಿರುತ್ತದೆ. ಆದರೆ ಈ ನೂರಾರುಗಳ ಮಧ್ಯೆ ಹಂಚಿ ಹೋಗದೆ ನಮ್ಮ ಆಸಕ್ತಿಗೆ ಅನುಗುಣವಾಗಿರುವ ಒಂದೆರಡುಗಳನ್ನು ಆಯ್ಕೆ ಮಾಡಿ ಅದರಲ್ಲಿಯೇ ಪೂರ್ಣ ಪ್ರಯತ್ನವನ್ನು ಮಾಡಿ ಸಾಧಿಸಿದರೆ ಕಾಲ ನಮ್ಮನ್ನು ಸ್ವೀಕರಿಸಬಹುದು ಹಾಗೂ ಶಾಶ್ವತವಾಗಿ ಸ್ಮರಿಸಬಹುದು. ಒಂದೆರಡು ಸಾಧನೆಗಳಲ್ಲಿ ಸಮರ್ಥರಾದರೆ ಸಾವಿರಾರು ಸಾಧಕರಿಗೆ ಸ್ಪೂರ್ತಿಯಾಗಬಹುದು....!! 
           ಗಡಿಯಾರದಂಗಡಿಯಲ್ಲಿದ್ದ ನಿರ್ಜೀವ ಗಡಿಯಾರಗಳು ಕೂಡಾ ದಿನಕ್ಕೆರಡು ಬಾರಿ ನಿಖರ ಸಮಯವನ್ನು ಸೂಚಿಸುತ್ತದೆ. ಅಂದರೆ ಯಾವುದೂ ಕೂಡಾ ನಿಷ್ಟ್ರಯೋಜಕವಲ್ಲ. ಆ ಗಡಿಯಾರಗಳಿಗೆ ಬೇಕಾದದ್ದು ಸ್ಪೂರ್ತಿಯ ಬ್ಯಾಟರಿ ಹಾಗೂ ಸಮಯದ ಮುಳ್ಳುಗಳನ್ನು ಸರಿಯಾಗಿ ತಿರುಗಿಸುವ ಮಾಲೀಕನ ಆಪ್ತತೆ. ಅದೇ ರೀತಿ ನಮ್ಮಲ್ಲಿ ಯಾರೂ ಕೂಡಾ ಅಪ್ರಯೋಜಕರಿಲ್ಲ. ನಮ್ಮೊಳಗೆ ನಾವೇ ಅಥವಾ ಇನ್ನಾರೋ ಧನಾತ್ಮಕ ಸ್ಪೂರ್ತಿಯ ಬ್ಯಾಟರಿ ತುಂಬಿದರೆ ಸದಾ ನಗುಮೊಗದ ಬದುಕು ಸಾಗಿಸಬಹುದು.
          ಗಡಿಯಾರದಂಗಡಿಯಲ್ಲಿದ್ದ ಜೀವಂತ ಗಡಿಯಾರವು ಬಡವ - ಬಲ್ಲಿದ , ಮೇಲು - ಕೀಳು ಸೋಮಾರಿ - ಸಾಧಕ ....ಹೀಗೆ ಎಲ್ಲರಿಗೂ ಬೇಧಭಾವ ಇಲ್ಲದೆ ದಿನಕ್ಕೆ 24 ಗಂಟೆಯನ್ನು ತೋರಿಸುತ್ತದೆ. ಆದರೆ ಲಭ್ಯವಿರುವ 24 ಗಂಟೆಗಳಲ್ಲಿ ನಾವೆಷ್ಟು ಸಮಯವನ್ನು ಉಪಯುಕ್ತವಾಗಿ ಬಳಸುತ್ತೇವೆಯೋ ಅದು ನಮ್ಮ ಕೈಯಲ್ಲಿದೆ.
             ಓರ್ವ ವ್ಯಕ್ತಿಯು ತಾನೆಷ್ಟು ಕಾರ್ಯನಿರತನಾದರೂ ತನ್ನವರಿಗಾಗಿ ಸಮಯವನ್ನು ಮೀಸಲಿಡಬೇಕು.ನಾವು ಕಾಯುತ್ತಿರುವಾಗ ಸಮಯವು ಬಲು ನಿಧಾನಿ ಎನಿಸುತ್ತದೆ. ನಾವು ಸ್ವಲ್ಪ ತಡವಾದರೆ ಸಮಯವು ತುಂಬಾವೇಗಿ ಎನಿಸುತ್ತದೆ. ನಾವು ದುಃಖದಲ್ಲಿದ್ದರೆ ಸಮಯವು ತುಂಬಾ ಕ್ರೂರಿ ಎನಿಸುತ್ತದೆ. ನಾವು ಸುಃಖದಲ್ಲಿದ್ದರೆ ಸಮಯವು ತುಂಬಾ ಸುಂದರ ಎನಿಸುತ್ತದೆ. ನಾವು ನೋವಿನಲ್ಲಿದ್ದರೆ ಸಮಯವು ಅಂತ್ಯವಿಲ್ಲದ್ದು ಎನಿಸುತ್ತದೆ. ನಮಗೆ ಇಷ್ಟವಿಲ್ಲದಿದ್ದರೆ ಸಮಯವು ತುಂಬಾ ಬೋರ್ ಎನಿಸುತ್ತದೆ. ನಮಗೆ ಕ್ರಿಯೆಯು ಇಷ್ಟವಿದ್ದರೆ ಸಮಯವು ತುಂಬಾ ಬ್ಯುಟಿಫುಲ್ ಎನಿಸುತ್ತದೆ.
         ಹಾಗಾಗಿ ಪ್ರತಿಯೊಂದು ಕ್ಷಣ , ನಿಮಿಷ ಹಾಗೂ ಗಂಟೆಯ ಭಾವವು ನಮ್ಮ ಬದುಕಿನ ಭಾವನೆಗಳಿಂದ ನಿರ್ಧರಿಸಲ್ಪಡುತ್ತದೆಯೋ ಹೊರತು ನಮ್ಮ ದೈಹಿಕ ಸ್ಥಿತಿಯಿಂದಲ್ಲ. ಬದುಕಿನ ರೇಸ್ ನಲ್ಲಿ ವೇಗದಲ್ಲಿ ಚಲಿಸುವುದರಿಂದ ವಿಜಯಶಾಲಿಯಾಗಲಾರೆವು. ಸಮಯಕ್ಕೆ ತಕ್ಕಂತೆ ವೇಗದಲ್ಲಿ ಬದಲಾವಣೆ ತಂದರೆ ಮಾತ್ರ ವಿಜಯಶಾಲಿಯಾಗಬಹುದು. ನಮ್ಮ ಬದುಕಿನ ವಿಜಯಕ್ಕಾಗಿ ಸಮಯವನ್ನು ಸರಿಯಾಗಿ ಅರ್ಥೈಸೋಣ ಹಾಗೂ ಬಳಸೋಣ. ಗಡಿಯಾರದಂಗಡಿಯಲ್ಲಿರುವ ನಾವು ಸೂಕ್ತ ಗಡಿಯಾರವನ್ನು ಆಯ್ಕೆ ಮಾಡೋಣ. ಈ ಧನಾತ್ಮಕ ಬದಲಾವಣೆಗೆ ನಾವು ಯಾರನ್ನು ಕಾಯದೇ ನಾವೇ ಬದಲಾಗೋಣ. 
ಬದಲಾಗೋಣವೇ ಪ್ಲೀಸ್ ......! ಏನಂತೀರಿ.
........................... ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*******************************************





Ads on article

Advertise in articles 1

advertising articles 2

Advertise under the article