-->
ಬದಲಾಗೋಣವೇ ಪ್ಲೀಸ್......! ಸಂಚಿಕೆ -12

ಬದಲಾಗೋಣವೇ ಪ್ಲೀಸ್......! ಸಂಚಿಕೆ -12

ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಹಾಗೂ ತರಬೇತುದಾರರು

           ಬದಲಾಗೋಣವೇ ಪ್ಲೀಸ್ - 12


ಉಳಿದವರಿಗೆ ಉಳಿದರೆ ಉಪ್ಪಿನಂತೆ ಉಳಿಯೋಣ.
--------------------------------------------------
        ಅಡುಗೆ ಕೋಣೆಯೊಂದರಲ್ಲಿ  ರುಚಿ ಶ್ರೇಷ್ಠತೆಗಾಗಿ ಸಿಹಿ, ಕಹಿ , ಉಪ್ಪು, ಖಾರ , ಹುಳಿ ರುಚಿಗಳ ನಡುವೆ ಜಿದ್ದಾಜಿದ್ದಿನ ಚರ್ಚೆಗಳು ನಡೆಯುತಿತ್ತು.  "ತಾನೇ ಶ್ರೇಷ್ಠ " ಎಂದು ನಿರೂಪಿಸಲು ತನ್ನದೇ ಆದ ಸಮರ್ಥನೆಗಳನ್ನು ಸಕಾರಣವಾಗಿ ಸೋದಾಹರಣೆ ಸಹಿತ ಮಂಡಿಸುತ್ತಿದ್ದವು. ಆದರೂ ಪರಿಹಾರ ಸಿಗದೆ ರುಚಿಗಳ ಅನುಭವದಾತ ಹಾಗೂ ಅಂತಿಮ ತೀರ್ಪುಗಾರ ನಾಲಗೆಯತ್ತ ತನ್ನ ಸಮಸ್ಯೆ ಪರಿಹಾರಕ್ಕಾಗಿ  ತೆರಳಿದವು. ರುಚಿಗಳ ಚರ್ಚೆಯನ್ನಾಲಿಸಿದ ನ್ಯಾಯ ನಾಲಗೆಯು " ನೀವೆಲ್ಲರೂ ಶ್ರೇಷ್ಠರು ಆದರೆ ಉಪ್ಪು ಮಾತ್ರ ಸರ್ವಶ್ರೇಷ್ಠ " ಎಂದಿತು. ಇದಕ್ಕೆ ಉಳಿದ ರುಚಿಗಳು ಆಕ್ಷೇಪ ವ್ಯಕ್ತಪಡಿಸಿದಾಗ ನಾಲಗೆಯು " ಸಿಹಿ, ಕಹಿ, ಹುಳಿ, ಖಾರ ರುಚಿಗಳೇ, ನಿಮ್ಮಲ್ಲಿ ಯಾರೊಬ್ಬರ ಅನುಪಸ್ಥಿತಿಯಲ್ಲಿಯೂ ಪಾಕದಲ್ಲಿ ವ್ಯತಾಸವಾದರೆ ರುಚಿಯನ್ನು ತಕ್ಕಮಟ್ಟಿಗೆ ನಿರ್ವಹಿಸಬಹುದು. ಆದರೆ ಉಪ್ಪಿನ  ಅನುಪಸ್ಥಿತಿಯಲ್ಲಿ ರುಚಿಯನ್ನು ನಿರ್ವಹಿಸಲು ಸಾಧ್ಯವಿಲ್ಲ . ಉಪ್ಪಿಲ್ಲದೆ ರುಚಿಯೇ ಇಲ್ಲ. ಉಪ್ಪಿಗೆ ಉಪ್ಪೇ ಸಾಟಿ. ಇದಕ್ಕೆ ಉಪ್ಪು  ಸರ್ವ ಶ್ರೇಷ್ಠ " ಎಂದು ನಿರ್ಣಯಿಸಿ ಚರ್ಚೆಯನ್ನು ಅಂತ್ಯಗೊಳಿಸಿತು.
       ನಮ್ಮ ಬದುಕಿನಲ್ಲೂ ಹೀಗೆ ಕೆಲವು ಅಂಶಗಳಿಗೆ ಉಪ್ಪಿನಂತೆ ಪರ್ಯಾಯ ಎಂಬುದಿಲ್ಲ. ಹೆಚ್ಚಾಗಿ ಉಪ್ಪನ್ನು ಸರಳ ಹೊಂದಾಣಿಕೆ ಗುಣಕ್ಕೆ ಹೋಲಿಸಲಾಗುತ್ತದೆ. ಉಪ್ಪಿನ ಈ ಗುಣವಿಶೇಷಗಳನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿದರೆ ಬದುಕು ಬಂಗಾರವಾದೀತು.
        ಉಪ್ಪಿನ ಜೀವನ ಕ್ರಮ ಕೂಡಾ ತುಂಬಾ ವಿಚಿತ್ರ. ನೀರಿನಲ್ಲಿಯೇ ಹುಟ್ಟಿ , ನೀರಿನಲ್ಲಿಯೇ ಬೆಳೆದು, ಕೊನೆಗೆ ನೀರಿನ ಸಾಮೀಪ್ಯದಿಂದಲೇ ಅಂತ್ಯವಾಗುವುದು. ಎಷ್ಟು ಸರಳವಲ್ಲವೇ ಅದರ ಬದುಕು. ನಮ್ಮ ಜೀವನವು ಕೂಡಾ ಹೀಗೆಯೇ ಪ್ರಕೃತಿದತ್ತವಾಗಿ ಹುಟ್ಟಿ , ಪ್ರಕೃತಿ ಮಧ್ಯೆಯೇ ಬೆಳೆದು , ಪ್ರಕೃತಿಯ ಪಂಚಭೂತಗಳಲ್ಲಿ ಲೀನವಾದಾರೆ ಎಷ್ಟು ಸಾರ್ಥಕ್ಯ ಎನಿಸುತ್ತದೆ.
ಆದರೆ ಪ್ರಕೃತಿ ಸಹಜ ಬದುಕಿನ ವಿರುದ್ಧವಾಗಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವ ಅಸಹಜ ಮನುಜ ನಿರ್ಮಿತ ಸಂಕೀರ್ಣ ಬದುಕಿಗೆ ಹಾಗೂ ಕೃತಕ ಸೌಲಭ್ಯಗಳ ಭ್ರಾಂತಿಗೆ ಹಾತೊರೆದರೆ ಬದುಕಿನ ಅಂತ್ಯವು ಕೂಡಾ ಸಂಕೀರ್ಣವಾಗಿ ನರಕ ಯಾತನೆಯಾಗುವುದು. ಹಾಗಾಗಿ ಸಂಕೀರ್ಣತೆ ಬಿಟ್ಟು ಸರಳರಾಗೋಣ.
      ಉಪ್ಪಿಗಿಂತ ರುಚಿಯಿಲ್ಲ ; ತಾಯಿಗಿಂತ ಬಂಧುವಿಲ್ಲ ಎಂಬ ಗಾದೆಮಾತು ಉಪ್ಪಿನ ಬಂಧುತ್ವವನ್ನು ವಿವರಿಸುತ್ತದೆ. ಸಾವಿರಾರು ರೂಪಾಯಿಯಿಂದ ಪ್ರಾರಂಭಿಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವವರೆಗಿನ ಮೃಷ್ಟಾನ ಭೋಜನವನ್ನು , ಐಷಾರಾಮಿ ಅಡುಗೆ ಕೋಣೆಯಲ್ಲಿ ತಯಾರಿಸಿ , ಅತ್ಯಾಧುನಿಕ ಸೌಲಭ್ಯಗಳಲ್ಲಿ ಬಡಿಸಿದರೂ ಒಂದು ರೂಪಾಯಿ ಅಥವಾ ಸರಳ ಮೌಲ್ಯದ ಒಂದು ಚಿಟಿಕೆ ಉಪ್ಪನ್ನು ಹಾಕದಿದ್ದರೆ ಎಲ್ಲವೂ ವ್ಯರ್ಥ. ಇದರಿಂದ ಬದುಕಿನಲ್ಲಿ ಬೆಲೆಯ ಪ್ರಮಾಣಕ್ಕಿಂತ, ಸೌಲಭ್ಯಗಳ ಅಳವಡಿಕೆಗಿಂತ   ಸರಳ ಮೌಲ್ಯವೇ ಶ್ರೇಷ್ಠ ಎಂದು ತಿಳಿಯಬಹುದು. ಹಾಗಾಗಿ ಇಲ್ಲದ ಆಧುನಿಕ ಸೌಲಭ್ಯಕ್ಕಿಂತ ಇರುವ ಸರಳ ಸೌಲಭ್ಯದಲ್ಲಿ ಬದುಕೋಣ.
        ಬದುಕಿನ ಪಾಕಕ್ಕೆ ಕೆಲವರು ಉಪ್ಪಿನಂತೆ ಸದಾ ರುಚಿಯನ್ನು ಕೊಟ್ಟು ಸಂತಸದಾಯಕ ಬದುಕಿಗೆ ಕಾರಣರಾಗುತ್ತಾರೆ. ಅವರನ್ನು ಎಂದೂ ಮರೆಯಬಾರದು. ಉಪ್ಪಿಗೆ ಸಿಹಿಯಂತೆ ಇರುವೆಗಳು ಮುತ್ತಲಾರವು , ಖಾರದಂತೆ ಬಣ್ಣ ಬಣ್ಣದ ಮಸಾಲೆ ಗುಣಗಳಿರಲಾರವು, ಕಹಿಯಂತೆ ಸಿಂಡರಿಸಲಾರವು , ಹುಳಿಯಂತೆ ಮನ ಹಿಂಡಲಾರವು. ಉಪ್ಪಿಗೆ ಉಪ್ಪೇ ಸಾಟಿ. ಬನ್ನಿ ಉಳಿದವರ ಬದುಕಿಗೆ ಉಪ್ಪಿನ ರುಚಿ ನೀಡೋಣ.
       ಉಪ್ಪು ಅತಿಯಾದರೂ ಕಷ್ಟ. ಕಡಿಮೆ ಯಾದರೂ ನಷ್ಟ. ಸರಿಯಾಗಿದ್ದರೆ ಮಾತ್ರ ಸಮತೋಲನ. ಬದುಕಿನಲ್ಲೂ ಯಾವುದೂ ಕೂಡಾ ಅತಿ ಅಥವಾ ಕಡಿಮೆಯಾಗದೆ   ಸಮವಾಗಿದ್ದರೆ ಸುಮನೋಲ್ಲಾಸದ ಸಮಚಿತ್ತ ಸಾಧ್ಯ. ಬನ್ನಿ ಸಮಚಿತ್ತದಿಂದ ಬದುಕೋಣ.
         ಉಪ್ಪು ಹುಟ್ಟುವುದು ನೀರಿನ ಸಂಕುಚಿತ ಮೂಲಗಳಾದ ಕೆರೆ, ಕುಂಟೆ , ಬಾವಿ, ನದಿಗಳಲ್ಲಿ ಅಲ್ಲ. ಅದು ಹುಟ್ಟುವುದು ವಿಶಾಲವೂ, ವಿಸ್ತಾರವೂ , ನಿಗೂಢ ಆಳವೂ ಆದ ಸಮುದ್ರ, ಸಾಗರಗಳಲ್ಲಿ. ಹಾಗಾಗಿ ಸರಳ ಗುಣಗಳು ಹೊಂದಾಣಿಕೆ ಭಾವಗಳು ಸಂಕುಚಿತ ಭಾವದಿಂದ ಮೂಡಲಾರದು. ಅದೇನಿದ್ದರೂ ಮುಕ್ತ ಹೃದಯ ವೈಶಾಲ್ಯತೆಯಿಂದ , ಅನುಭವದ ಆಳದಿಂದ ಮೂಡಲು ಸಾಧ್ಯ. ಬನ್ನಿ ಸರಳರಾಗೋಣ
            ಬನ್ನಿ , ಇಂತಹ ಸರಳ ಬದುಕಿಗೆ ಸಾಕ್ಷಿಯಾಗೋಣ. ಉಳಿದವರಿಗೆ ಉಳಿದರೆ ಉಪ್ಪಿನಂತೆ ಉಳಿಯೋಣ. ಉಪ್ಪಿನಲ್ಲೂ ಕೆಲವು ಋಣಾತ್ಮಕ ಅಂಶಗಳಿದ್ದರೂ ಅದನ್ನು ನಿರ್ಲಕ್ಷಿಸಿ ಅದು ಕಲಿಸುವ ಧನಾತ್ಮಕ ಪಾಠಗಳಿಗೆ ಧ್ವನಿಯಾಗಿ ಬದುಕೋಣ. ಈ ಬದಲಾವಣೆಗೆ ಯಾರನ್ನು ಕಾಯದೆ ನಾವೇ ಬದಲಾಗೋಣ. ಬದಲಾಗೋಣವೇ ಪ್ಲೀಸ್....
ಏನಂತೀರಿ.
...........................  ಗೋಪಾಲಕೃಷ್ಣ ನೇರಳಕಟ್ಟೆ
ಶಿಕ್ಷಕರು ಮತ್ತು ತರಬೇತುದಾರರು 
Mob: +91 99802 23736
*******************************************


Ads on article

Advertise in articles 1

advertising articles 2

Advertise under the article