-->
ಪರಿಸರದಿಂದ ಕಲಿತ ಪಾಠ

ಪರಿಸರದಿಂದ ಕಲಿತ ಪಾಠ


              ಪರಿಸರದಿಂದ ಕಲಿತ ಪಾಠ 
       -------------------------------------------
             ಮಕ್ಕಳೇ ಪರಿಸರ ಎಂದರೆ ಸುಂದರ ರಮಣೀಯ. ಇದು ನಮ್ಮ ಜೀವನಕ್ಕೆ ಬೇಕಾದ ಪಾಠವನ್ನು ಹೇಳುತ್ತದೆ. ಇದಕ್ಕೆ ಒಂದು ಘಟನೆ. ನಾನು ಒಂದು ಮನೆಯಲ್ಲಿ ವಾಸವಾಗಿದ್ದೇನೆ. ಮನೆಯ ಹಿಂದೆ ಖಾಲಿ ಜಾಗ ಇದ್ದು ಅದರಲ್ಲಿ ಬೇಡವಾದ ಗಿಡಗಳು ಆಗಾಗ್ಗೆ ಬೆಳೆಯುತ್ತಿತ್ತು. ಇದನ್ನು ನಾವು ಕಳೆ ಎಂದು ಕರೆಯುತ್ತೇವೆ. ಈ ಗಿಡ ತೆಗೆಯಲು ಪ್ರತಿಬಾರಿ ರೂ 500 ನೀಡುತ್ತಿದ್ದೆ. ಇದು ಹೀಗೆ ವರ್ಷಕ್ಕೆ ಕನಿಷ್ಠ ನಾಲ್ಕು ಬಾರಿಯಾದರೂ ಆಗುತ್ತಿತ್ತು. ಹೀಗೆ ನಡೆಯುತ್ತಿರಬೇಕಾದರೆ ಒಮ್ಮೆ ಒಬ್ಬ ವ್ಯಕ್ತಿ , ಹೆಸರು ಮೋಹನ್, ಕಳೆ ತೆಗೆದು ಸ್ವಚ್ಛ ಮಾಡಲು ಬಂದ. ಆತ ಆಟೋ ಮೆಕಾನಿಕ್. ಕೋವಿಡ್ - ಲಾಕ್ ಡೌನ್ ಇದ್ದುದರಿಂದ ಕೆಲಸವಿಲ್ಲದೆ ಜೀವನೋಪಾಯಕ್ಕಾಗಿ ಬಂದವನು. ಕಳೆಯನ್ನು ತೆಗೆದು ಸ್ವಚ್ಛ ಮಾಡಿ ಅಲ್ಲಿದ್ದ ಕಲ್ಲುಗಳಿಂದ ಸುಂದರವಾಗಿ ಅಲಂಕಾರಿಕವಾಗಿ ಪಾತಿ ಮಾಡಿದ. ಆಗ ನನಗೆ ಒಂದು ವಿಚಾರ ಹೊಳೆಯಿತು. ನಾನ್ಯಾಕೆ ಇಲ್ಲಿ ಚಿಕ್ಕ ಕೈತೋಟ ಮಾಡಬಾರದು ಎಂದು. ನನ್ನಲ್ಲಿದ್ದ ಕೊತ್ತಂಬರಿ , ಮೆಂತೆ ಸೊಪ್ಪು ಬೆಳೆಯಲು ಪಾತಿ ಮಾಡಿ ಹಾಕಿದವು. ಬೆಂಡೆ , ಹರಿಶಿನ , ಹೀರೇಕಾಯಿ , ಅಲಸಂಡೆ , ನುಗ್ಗೆ , ಬಸಳೆ ಮತ್ತು ಚಪ್ಪರದವರೆ ಬೀಜ ಹಾಕಿ , ಗೊಬ್ಬರ ಹಾಕಿ , ಕೈತೋಟ ಮಾಡಿದೆವು. ಬೀಜ ಮೊಳಕೆ ಚಿಗುರಿತು. ಆದರೆ ಆ ಗಿಡಗಳ ನಡುವೆ ಕಳೆ ವಿಪರೀತ ಬೆಳೆದುಬಂದಿತ್ತು. ಆಗ ನನ್ನನ್ನು ಕಾಡಿದ ಪ್ರಶ್ನೆ. ಬೇಡದ ಕಳೆ ನಾವು ಹಾಕಿದ್ದಲ್ಲ. ಅದಕ್ಕೆ ನಾವು ಯಾವುದೇ ಗೊಬ್ಬರ ಹಾಕಿಲ್ಲ. ಆದರೆ ಪದೇ ಪದೇ ಬೆಳೆಯುತ್ತದೆ. ಇದನ್ನು ಆಗಾಗ್ಗೆ ತೆಗೆಯಬೇಕು. ಇಲ್ಲದಿದ್ದರೆ ನಾವು ಅಪೇಕ್ಷಿಸಿದ ಗಿಡಕ್ಕೆ ಬೇಕಾದ ಗೊಬ್ಬರ ನೀರು ಸಿಗದಂತೆ ಮಾಡಿ ಇವು ಬೆಳೆಯುತ್ತವೆ. ಅದೇ ರೀತಿ ನಮ್ಮ ಜೀವನದಲ್ಲಿ ನಕಾರಾತ್ಮಕ ಅಂಶಗಳಾದ ಭಯ , ದ್ವೇಷ , ಮತ್ಸರ , ಅಸೂಯೆ ಮತ್ತು ಮೋಸ ಮುಂತಾದವುಗಳು ನಾವು ನೆಡದೆ , ಗೊಬ್ಬರ ಹಾಕದೆ , ನೀರು ಹಾಕದೆ ತನಗೆ ತಾನೇ ಬೆಳೆಯುವ ಕಳೆಯಂತೆ ಬೆಳೆಯುತ್ತದೆ. ಅಪೇಕ್ಷಿತ ಗಿಡಗಳನ್ನು ಬೆಳೆದು ಸುಂದರ ತೋಟವನ್ನು ಮಾಡಬಹುದು. ಹಾಗೆಯೇ ಧನಾತ್ಮಕ ಅಂಶಗಳಾದ ಪ್ರೀತಿ , ಸಹನೆ , ಅನುಕಂಪ , ಸಹಕಾರ , ಪ್ರೇಮ ಮತ್ತು ದಯೆ ಮುಂತಾದವುಗಳನ್ನು ಅಪೇಕ್ಷಿತ ಗಿಡಗಳಂತೆ ನಾವೇ ಬೆಳೆಸಿ ಕೊಳ್ಳಬೇಕಾಗುತ್ತದೆ. ಇದಕ್ಕೆ ಪೋಷಕಾಂಶವಾಗಿ ಸ್ಪೂರ್ತಿನೀಡುವ ಪುಸ್ತಕಗಳನ್ನು ಓದುವುದು , ಸ್ಪೂರ್ತಿದಾಯಕ ಮಾತು , ಭಾಷಣಗಳು ಹಾಗೂ ಒಳ್ಳೆಯ ನೋಟ , ಒಳ್ಳೆಯ ಮಾತುಗಳು , ಒಳ್ಳೆಯ ಅಂಶಗಳ ಕೇಳುವಿಕೆ ಹಾಗೂ ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಧನಾತ್ಮಕ ಅಂಶಗಳು ಬೆಳೆಯುತ್ತವೆ. ಹೀಗೆ ಮಾಡದಿದ್ದರೆ ನಕಾರಾತ್ಮಕ ಅಂಶಗಳು ತನಗೆ ತಾನೆ ಬೆಳೆಯುತ್ತವೆ. ಧನಾತ್ಮಕ ಅಂಶಗಳಿಂದ ಜೀವನ ಸುಂದರವಾಗುತ್ತದೆ. ಮನಸ್ಸಿನಲ್ಲಿ ಶಾಂತಿ ತುಂಬಿ , ಸಮಾಜ ಸಮೃದ್ಧಿಯಾಗುತ್ತದೆ. ನಕಾರಾತ್ಮಕ ಅಂಶಗಳಿಂದ ಜೀವನ ದುಃಖ , ಅಶಾಂತಿಯಿಂದ ಕೂಡಿರುತ್ತದೆ. ಇದರಿಂದ ಸಮಾಜದಲ್ಲಿ ಅಹಿಂಸೆ ಕೊಲೆ , ಅತ್ಯಾಚಾರ ಮತ್ತು ಕಳ್ಳತನ ತುಂಬಿ ಶೋಕದಿಂದ ಮುಳುಗುತ್ತದೆ. ಮಾನವ ಜೀವನ ಶ್ರೇಷ್ಠ. ಇನ್ನೊಂದು ಜೀವನ ಇದೆಯೋ ಇಲ್ಲವೋ ಗೊತ್ತಿಲ್ಲ. ಇರುವ ಜೀವನ ಸುಂದರವಾಗಿರಲು ಧನಾತ್ಮಕ ಅಂಶಗಳು ಅಗತ್ಯ ಇದೆಯಲ್ಲವೇ...? ಪ್ರಕೃತಿಯಿಂದ ನೋಡಿ ಕಲಿಯಬೇಕಾದ ಪಾಠಗಳು.!
...........................................ಎಂ.ಪಿ. ಜ್ಞಾನೇಶ್ 
ಕ್ಷೇತ್ರ ಶಿಕ್ಷಣಾಧಿಕಾರಿ
ಬಂಟ್ವಾಳ ತಾಲೂಕು
ದಕ್ಷಿಣ ಕನ್ನಡ ಜಿಲ್ಲೆ
******************************************


Ads on article

Advertise in articles 1

advertising articles 2

Advertise under the article