-->
ಧೈರ್ಯಂ ಸರ್ವತ್ರ ಸಾಧನಂ

ಧೈರ್ಯಂ ಸರ್ವತ್ರ ಸಾಧನಂ

ಸ್ಪೂರ್ತಿಯ ಮಾತುಗಳು 
ಸಂಚಿಕೆ - 3

                  ಧೈರ್ಯಂ ಸರ್ವತ್ರ ಸಾಧನಂ               ಭವಿಷ್ಯದ ಕಣ್ಮಣಿಗಳೇ,
ಕಂಡ ಕನಸುಗಳು ಯಶ ಕಾಣಬೇಕು, ಇಚ್ಛಿತ ಬಯಕೆ ಈಡೇರಿ ಮೊಗದ ನಗುವ ಇಮ್ಮಡಿಗೊಳಿಸಬೇಕು, ಪ್ರತಿದಿನವೂ ಸಾಧನೆಯ ಪುರಸ್ಕಾರದೊಂದಿಗೆ ಅಂತ್ಯವಾಗಬೇಕು....... ಎಂದೆಲ್ಲ ಮನದಲ್ಲೇ ಅಂದುಕೊಂಡು ಮುಂದಡಿಯಿಡಬೇಕೆಂದು ಹಂಬಲಿಸಿದಾಗಲೆಲ್ಲ ತಮ್ಮನ್ನು 'ಭಯ' ಬಂದು ಹೆದರಿಸುತ್ತಿದೆಯೇ…? ಅಂಜಿಕೆಗೆ ಅಂಜಿ ನಾದ ಹೊಮ್ಮಿಸಬೇಕಾಗಿದ್ದ ಕೊಳಲ ಬಿಸುಟು ಸುಮ್ಮನೆ ಕುಳಿತ ಘಟನೆ ನಿಮ್ಮ ಬದುಕಲ್ಲೂ ನಡೆದಿದೆಯೇ…?
        ಹೌದು ಮಕ್ಕಳೇ, ಭಯ ಎಂಬುದು ನಮ್ಮೊಳಗಿನ ಅಂತಃಶಕ್ತಿಯನ್ನು ಕುಸಿಯುವಂತೆ ಮಾಡುತ್ತದೆ. ಆತ್ಮವಿಶ್ವಾಸವನ್ನು ಕುಗ್ಗಿಸಿಬಿಡುತ್ತದೆ. ಹೇಳಬೇಕಾದ ಮಾತುಗಳನ್ನು ಮೌನ ಗೂಡಿನೊಳಗೆ ಬಚ್ಚಿಟ್ಟು ಬಿಡುತ್ತದೆ. ಇದಕ್ಕೆಲ್ಲ ಮುಖ್ಯ ಕಾರಣವೇ ನಮ್ಮೊಳಗಿರುವ ಕೀಳರಿಮೆಯ ಭಾವ ಹಾಗೂ 
ಹೋಲಿಸಿ ನೋಡುವ ಪ್ರವೃತ್ತಿ.   
        ಅದು ಊರ ಜಾತ್ರೆಯ ಸಮಯ. ದೇವಾಲಯದ ಭಜನಾ ಕಾರ್ಯಕ್ರಮವೊಂದರಲ್ಲಿ ವಿದ್ಯಾರ್ಥಿ ಸಮೂಹದೊಂದಿಗೆ ತಾಳಬದ್ಧವಾಗಿ ಸುಸ್ವರದಿಂದ ಹಾಡಿದ ಸುಮಾ ಶಾಲೆಯಲ್ಲಿ ಆಯೋಜಿಸಿದ್ದ ಸಂಗೀತ ಸ್ಪರ್ಧೆಯಲ್ಲಿ ವೇದಿಕೆ ಏರಲೇ ಇಲ್ಲ..! ಜೊತೆಗಾರರಿಗೆ ಎದುರಾಗಿ ಸ್ಪರ್ಧಿಸಲೇ ಇಲ್ಲ..! ಅತ್ಯುತ್ತಮ ಧ್ವನಿ ಇದ್ದರೂ ಸಾಮರ್ಥ್ಯವಿದ್ದರೂ ಅದನ್ನು ವೈಯಕ್ತಿಕವಾಗಿ ತೋರ್ಪಡಿಸುವ ಸಂದರ್ಭದಲ್ಲಿ ಅವಳನ್ನು ಕಾಡಿದ್ದೇ 'ಭಯ'........
      ' ಭಯ' ಯಾವಾಗ ನಮ್ಮನ್ನು ಆವರಿಸಿಕೊಂಡು ಬಿಡುವುದೋ, ಇಲ್ಲವೇ ನಾವು ಯಾವಾಗ ಭಯಕ್ಕೆ ಶರಣಾಗಿ ಬಿಡುವೆವೋ ಆಗ ಅವಕಾಶಗಳು ನಮ್ಮಿಂದ ಕೈತಪ್ಪಿ ಹೋಗುತ್ತವೆ. ನಮ್ಮೊಳಗಿನ ಪ್ರತಿಭೆ ತುಕ್ಕು ಹಿಡಿದಂತಾಗಿ ಮಸುಕಾಗಿಬಿಡುತ್ತದೆ. ಆದ್ದರಿಂದಲೇ ಹಂತಹಂತವಾಗಿ ಕೀಳರಿಮೆಯನ್ನು ಹೊಸಕಿ ಹಾಕಬೇಕಿದೆ.
         ಕೀಳರಿಮೆಯನ್ನು ಮೆಟ್ಟಿ ನಿಲ್ಲಬಲ್ಲ ಕೀಲಿಕೈ ಎಂದರೆ ಅದೇ ಜ್ಞಾನ ಸಂಪಾದನೆ. ನಮ್ಮ ಜ್ಞಾನ ಸಂಪತ್ತನ್ನು ಹೆಚ್ಚಿಸಿಕೊಳ್ಳುವ ಎಲ್ಲ ದಾರಿಗಳೆಡೆಗೆ ನಾವು ನೋಟವನ್ನು ವಿಸ್ತಾರಗೊಳಿಸಬೇಕು. ಅರಿವಿನ ಬುತ್ತಿಯನ್ನು ತುಂಬುತ್ತಾ ಸಮೃದ್ಧಗೊಳಿಸಬೇಕು. ಅನುಭವದ ಕಲಿಕೆಯು ನಮ್ಮೊಳಗಿನ ಭಯವನ್ನು ದೂರೀಕರಿಸುವುದು.  ಕೀಳರಿಮೆಯನ್ನು ತುಳಿದು ಮೇಲೆದ್ದರಿಂದಲೇ ಪತ್ರಿಕೆ ಮಾರುತ್ತಿದ್ದ ಬಾಲಕ ವಿಜ್ಞಾನಿಯಾಗಲು ಸಾಧ್ಯವಾಯಿತು. ಭಾರತದ ಹೆಮ್ಮೆಯ ರಾಷ್ಟ್ರಪತಿಯಾಗಿ ನಿಮ್ಮ ಮನಗಳಲ್ಲಿ ಸ್ಫೂರ್ತಿಯ ಚೇತನವಾಗಿ ಉಳಿಯಲು ಸಾಧ್ಯವಾಯಿತು. ಭಯವೆಂದು ಅಂಜಿ ಕುಳಿತುಕೊಳ್ಳುತ್ತಿದ್ದರೆ ಬಚ್ಚೇಂದ್ರಿಪಾಲ್ ಪರ್ವತದ ಶಿಖರವನ್ನೇರಿ ಯಶಸ್ಸಿನ ಪತಾಕೆಯನ್ನು ಹಾರಿಸಲು ಸಾಧ್ಯವಾಗುತ್ತಿತ್ತೇ ಹೇಳಿ…...? ಹಲವಾರು ಪರ್ವತಾರೋಹಿಗಳಿಗೆ ಸ್ಫೂರ್ತಿ ಕಿರಣ ವಾಗಲು ಸಾಧ್ಯವಾಗುತ್ತಿತ್ತೇ.....!?
         ಸಾಧಕರೆಲ್ಲರೂ ಅಮಿತ ಸಾಧನೆ ಮಾಡುವ ಮುನ್ನ ಹಲವು ಸೋಲುಗಳ ರುಚಿ ಕಂಡವರೇ ಆಗಿರುತ್ತಾರೆ. ಹಲವು ವೈಫಲ್ಯಗಳಿಗೆ ಒಡೆಯರಾಗಿರುತ್ತಾರೆ. ಆದರೆ ಅವರ ನಿತ್ಯ ನಿರಂತರ ಪರಿಶ್ರಮ , ಎಡೆಬಿಡದ ಛಲ ಅವರನ್ನು ಸಾಧಕರಾಗಿ ಎಲ್ಲರಿಗಿಂತ ಎತ್ತರದ ಸ್ಥಾನದಲ್ಲಿ ನಿಲ್ಲಿಸಿ ಬಿಡುತ್ತದೆ. ಭಯವನ್ನು ಅದುಮಿಟ್ಟು ನಿಂತಾಗಲೇ ಎದುರಾಗುವ ಸನ್ನಿವೇಶವನ್ನು ಎದುರಿಸುವ ಬಲ ದೊರೆಯುವುದು. ಅವಕಾಶಗಳು ನಮ್ಮನ್ನು ಅರಸಿಕೊಂಡು ಬರುವುದು.
          ಹಾಗೆಂದ ಮಾತ್ರಕ್ಕೆ ಭಯ ಪಡದೇ ಇರುವುದು ಎಂದರೆ ಅಗೌರವ ಅಥವಾ ಅನೀತಿಯ ವರ್ತನೆಯಲ್ಲ. ಗೌರವ ಭಾವ ಮಿಳಿತಗೊಂಡ ಪ್ರಾಮಾಣಿಕ ಧೈರ್ಯ ನಮ್ಮದಾಗಿರಬೇಕು. ಕಾಡಿನ ಮಧ್ಯದಲ್ಲಿ ದಾರಿ ಕಾಣದೇ ಹೋದಾಗ ಆನೆಗಳ ಗುಂಪು ಕೂಡ ತನ್ನದೇ ಆದ ರಾಜ ಮಾರ್ಗವನ್ನು ನಿರ್ಮಿಸಿ ಮುನ್ನಡೆಯುವಂತೆ ಧೈರ್ಯದಿಂದ ಸವಾಲನ್ನು ಎದುರಿಸಿ ನಡೆಯುವ ದೃಢತೆ ನಮ್ಮೊಳಗೆ ಮೂಡಬೇಕು. ವಾಹನಚಾಲನೆ ಕಲಿಯಬೇಕೆನ್ನುವವ ಬೀಳುವೆನೆಂಬ ಭಯದಿಂದ ವಾಹನವನ್ನು ಏರಲು ಮುಂದಡಿ ಇಡದೇ ಹೋದರೆ ವಾಹನ ಚಾಲಕನಾಗಲು ಸಾಧ್ಯವಾದೀತೆ ಹೇಳಿ..? 
           ಯಾವುದೇ ಅವಕಾಶಗಳು, ಮಹತ್ತರ ಕೆಲಸ ಕಾರ್ಯಗಳು ,ಯೋಜಿತ ಯೋಜನೆಗಳನ್ನು ಕಾರ್ಯಗತಗೊಳಿಸಲು ಹೊರಟಾಗ ನಮ್ಮ ಪೋಷಕರು, ಶಿಕ್ಷಕರು, ಬಂಧುಗಳು, ಸ್ನೇಹಿತರು ಬಾಹ್ಯ ಪ್ರೇರಣೆ ನೀಡುತ್ತಾರಾದರೂ ನಾವು ಕಾರ್ಯೋನ್ಮುಖ ವಾಗಬೇಕಾದರೆ ಅಂತಃಪ್ರೇರಣೆ ಜಾಗೃತವಾಗಬೇಕು.
       'ನನ್ನಿಂದ ಸಾಧ್ಯವಿಲ್ಲ', 'ನನ್ನಲ್ಲಿ ಆ ಸಾಮರ್ಥ್ಯವಿಲ್ಲ' ಅನ್ನೋ ಅಂತಃಸ್ಥೈರ್ಯವನ್ನು ಕುಂದಿಸುವ ನಂಬಿಕೆಗಳನ್ನು ತೊಡೆದು ಹಾಕಬೇಕು. 'ನಾನು ಮಾಡಬಲ್ಲೆ', 'ಇದು ನನ್ನಿಂದ ಸಾಧ್ಯ 'ಎಂಬ ಸಕಾರಾತ್ಮಕ ಚಿಂತನೆಗಳಿಂದ ಮನಸ್ಸನ್ನು ಅಣಿಗೊಳಿಸಬೇಕು. ಪ್ರತಿಬಾರಿ ಸಾಧಿಸಿದಾಗಲೂ ನಮ್ಮ ಹಿಂದಿನ ಕಲಿಕೆಗಿಂತ ಇಂದಿನ ಪ್ರಯತ್ನದಲ್ಲಾದಂತಹ ಪ್ರಗತಿಯ ಕುರಿತು ಸಿಂಹಾವಲೋಕನ ಮಾಡಬೇಕು. ಎಡವಿದರೆ ಕಾರಣಗಳ ವಿಮರ್ಶೆ ಮಾಡಿ ಮತ್ತೆ ಪ್ರಯತ್ನಶೀಲರಾಗಬೇಕು. ಆಗ ಯಶಸ್ಸು ಎನ್ನುವುದು ನಮ್ಮನ್ನು ಅರಸಿ ಬರುವುದು ಮಕ್ಕಳೇ......
            ಹೊಸಕಿ ಹಾಕಿದ ಹುಲ್ಲು ಮತ್ತೆ ಚಿಗುರಿ ನಳನಳಿಸುವಂತೆ , ಯುದ್ಧದಲ್ಲಿ ಪ್ರಾಣ ಹೋಗುವ ಕೊನೆಕ್ಷಣದವರೆಗೂ ಯೋಧನೊಬ್ಬ ಹೋರಾಡುವಂತೆ, ಬತ್ತದ ಉತ್ಸಾಹ ಹಾಗೂ ಕುಂದದ ಆಸಕ್ತಿಯೊಂದಿಗೆ ಗುರಿ ಸಾಧಿಸುವ ಛಲದೊಡೆಯರು ನಾವಾಗಬೇಕು.
ಕಲ್ಪನೆಯ ಊಹಾಪೋಹಗಳಿಗೆ ಶಿರಬಾಗದೆ ನೈಜ ಅನುಭವದಿಂದ ಮುನ್ನಡೆದರೆ ಭಯವೂ ನಮ್ಮ ಬಳಿ ಸುಳಿಯಲು ಭಯಪಟ್ಟೀತು ಅಲ್ಲವೇ…?
ಧೈರ್ಯದ ಅಸ್ತ್ರವ ಕರದಲಿ ಹಿಡಿದು ಪರಿಶ್ರಮ ಹಾಗೂ ಆಸಕ್ತಿಯನ್ನು ಮೈಗೂಡಿಸಿಕೊಂಡರೆ ಜೀವನದ ಸವಾಲನ್ನು ಎದುರಿಸಲು ನಾವು ಶಕ್ತರಾಗುವೆವು. ಭಾರತಾಂಬೆಯ ಬಸಿರಲಿ ಜನಿಸಿದ ಭಾರತೀಯರೆಲ್ಲರೂ ಸೃಜನಶೀಲರು, ಪ್ರತಿಭಾನ್ವಿತರು ಅನ್ನೋದನ್ನು ಮರೆಯದೆ ನಮ್ಮೊಳಗಿನ ಪ್ರತಿಭೆಗೆ ಕನ್ನಡಿ ಹಿಡಿಯೋಣವೇ…? ಏನಂತೀರಿ ಮಕ್ಕಳೇ…!?
.................................................ಹರಿಣಾಕ್ಷಿ. ಕೆ
ಸಹಶಿಕ್ಷಕಿ
ಸ.ಮಾ.ಉ.ಹಿ.ಪ್ರಾ.ಶಾಲೆ, ಉಪ್ಪಿನಂಗಡಿ
ಪುತ್ತೂರು ತಾಲೂಕು , ದಕ್ಷಿಣ ಕನ್ನಡ ಜಿಲ್ಲೆ 
*********************************************


Ads on article

Advertise in articles 1

advertising articles 2

Advertise under the article