
ಬಾಲ್ಯದ ಓದು
Sunday, August 22, 2021
Edit
--------------------------------
"ಅಂಕಲ್..... ಈ ಪುಸ್ತಕ ಕೊಡ್ತೀರಾ..... ಓದಿ ನಾಳೆ ತರ್ತೇನೆ" ಎಂದು ಅವಿನಾಶ್ ಕೇಳಿದಾಗ... ನಾನು "ಸರಿ " ಅಂದೆ.
ಅವಿನಾಶ್ ಪ್ರೌಢ ಶಾಲಾ ವಿದ್ಯಾರ್ಥಿ. ಅವನ ಮನೆ ನಮ್ಮ ಮನೆಯಿಂದ ಹೆಚ್ಚು ದೂರವೇನಲ್ಲ. ನಮ್ಮ ಮನೆಗೆ ಬಂದಾಗಲೆಲ್ಲಾ ಯಾವುದಾದರೊಂದು ಪುಸ್ತಕ ಪಡೆದು ಓದುವುದು ಆತನ ಪ್ರೀತಿಯ ಹವ್ಯಾಸ.
ಟಿ.ವಿ, ಮೊಬೈಲ್ ಹೊರತುಪಡಿಸಿ ಹೀಗೆ ಪುಸ್ತಕ ಓದುವ ಮಕ್ಕಳು ಕಾಣಸಿಗುವುದೇ ಅಪರೂಪ. ಈ ಕಾರಣದಿಂದ ನಾನು ಆತನ ಇಷ್ಟದ ಪುಸ್ತಕಗಳ ಬಗ್ಗೆ , ಸಾಹಿತಿಗಳ ಬಗ್ಗೆ ಚರ್ಚಿಸುತ್ತೇನೆ. ಒಳ್ಳೆಯ ಪುಸ್ತಕಗಳು ಸಿಕ್ಕಿದಲ್ಲಿ ಓದಲು ಕೊಡುತ್ತೇನೆ. ಬಾಲ್ಯದ ಇಂತಹ ಹವ್ಯಾಸಗಳು ಮುಂದಿನ ದಿನಗಳಲ್ಲಿ ಆತನಿಗೆ ನೆರವಾಗುವುದರಲ್ಲಿ ಸಂದೇಹವಿಲ್ಲ.
ನಾನು ಚಿಕ್ಕವನಿದ್ದಾಗ ಅಮ್ಮ ನನಗೆ ಕಥೆ ಹೇಳುತ್ತಿದ್ದರು. ಅಜ್ಜ, ಅಜ್ಜಿ, ಮೊಲ, ಆಮೆ, ನರಿ, ನಾಯಿ, ಕರಡಿ, ಹುಲಿ, ಸಿಂಹ.... ಹೀಗೆ ಕಥೆಗಳಲ್ಲಿ ನೂರಾರು ಪಾತ್ರಗಳು. ಶಾಲೆ ಸೇರಿದ ಬಳಿಕ ಅಲ್ಲಿ ಶಿಕ್ಷಕರು ನಮಗೆ ಕಥೆ ಹೇಳುತ್ತಿದ್ದರು. ಓದಲು ಬರೆಯಲು ತಿಳಿಯುವ ಹೊತ್ತಿಗೆ ಎಲ್ಲಿಂದಲೋ ಚಂದಮಾಮ, ಬಾಲಮಿತ್ರದಂತಹ ಪುಸ್ತಕಗಳನ್ನು ಅಮ್ಮ ತಂದು ನಮಗೆ ಓದಲು ಕೊಡುತ್ತಿದ್ದರು. ಶಾಲಾ ಗ್ರಂಥಾಲಯದಿಂದ ನಾವೇ ಪುಸ್ತಕಗಳನ್ನು ತಂದು ಬಿಡುವಿನಲ್ಲಿ ಓದಿ ಹಿಂತಿರುಗಿಸುತ್ತಿದ್ದೆವು. ಹೀಗೆ ಆರಂಭವಾದ ನನ್ನ ಓದಿನ ಹವ್ಯಾಸ ಮುಂದೆ ಶಾಲಾ ಪಠ್ಯಗಳ ಓದಿಗೂ ನೆರವಾಯಿತು. ಪ್ರಬಂಧ, ಕಥೆ ರಚನೆಯಂತಹ ಸ್ಪರ್ಧೆಗಳಿದ್ದಾಗ ನಾವೇ ಮೊದಲಿಗರಾಗುತ್ತಿದ್ದೆವು.
ನಾನೀಗ ಉದ್ಯೋಗದಲ್ಲಿದ್ದರೂ ಓದುವ ಹವ್ಯಾಸ ಮುಂದುವರಿಸಿದ್ದೇನೆ. ದಿನಪತ್ರಿಕೆ, ವಾರಪತ್ರಿಕೆಗಳು ಮತ್ತು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳನ್ನು ಬಿಡುವಿದ್ದಾಗಲೆಲ್ಲ ಓದುತ್ತಿರುತ್ತೇನೆ. ನಮ್ಮ ಅರಿವನ್ನು ವಿಸ್ತರಿಸಲು, ಉತ್ತಮ ಗುಣನಡತೆಯನ್ನು ಮೈಗೂಡಿಸಿಕೊಳ್ಳಲು ಓದು ಖಂಡಿತ ಸಹಾಯ ಮಾಡುತ್ತದೆ.
ಓದುವುದು, ಚಿತ್ರಬಿಡಿಸುವುದು, ಸಂಗೀತ, ಭಾಷಣ .. ಹೀಗೆ ಸೃಜನಾತ್ಮಕ ಚಟುವಟಿಕೆಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡಾಗ ಇತರ ಕೆಟ್ಟ ಹವ್ಯಾಸಗಳಂತೂ ನಮ್ಮ ಬಳಿ ಸುಳಿಯುವುದೇ ಇಲ್ಲ.
................................ಚಂದ್ರಶೇಖರ ಪಾತೂರು
(ಪಂಚಾಯತ್ ಅಭಿವೃದ್ಧಿ ಅಧಿಕಾರಿ)
ಶಾಸಕರ ಆಪ್ತಸಹಾಯಕರು,
ಶಾಸಕರ ಕಚೇರಿ,
ಮಂಗಳೂರು ಕ್ಷೇತ್ರ
*******************************************