-->
ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 7

ಪದಗಳ ಆಟ ಭಾವ ಚಿತ್ರ ಪಾತ್ರ ಸಂಚಿಕೆ - 7

ಪದಗಳ ಆಟ
ಭಾವಚಿತ್ರ
ಪಾತ್ರ
ಸಂಚಿಕೆ - 7

                ಕುಣಿದು ಕುಣಿದು ಕಳಚಿಕೊಳ್ಳಿ
                 ಮಣಿದು ದಣಿದು ಒಪ್ಪಿಕೊಳ್ಳಿ
                      ಧಾರಯತೆ ಇತಿ ಧರ್ಮ
                      ******************
         ಆದರೆ ಆಗಿನ ಚಂದ್ರಮೋಹನ ಎಲ್ಲಾ ಧರ್ಮಗಳನ್ನು ಮೀರಿದ. ಆದರೂ ಭಗವತತ್ತ್ವ ಹೊಂದಿದ. ಬುದ್ಧನನ್ನು ಅರ್ಥಮಾಡಿಕೊಂಡ ಮಹಾವೀರನನ್ನು ತಿಳಿದ ಗಾಂಧಿಯನ್ನು ನಿಂದಿಸಿದ. ಆದರೆ ಯಾವ ಧರ್ಮವನ್ನು ಅನುಸರಿಸಲಿಲ್ಲ. ಎಲ್ಲಾ ಧರ್ಮಗಳನ್ನು ನಿರಾಕರಿಸಿದ. ಧ್ಯಾನ ಜಾಗೃತಿ ಪ್ರೀತಿ ಆಚರಣೆ ಧೈರ್ಯ ಸೃಜನಶೀಲತೆ ಹಾಸ್ಯ ಇವೆಲ್ಲವನ್ನೂ ಶಿಷ್ಟಾಚಾರದ ಹೆಸರಿನಲ್ಲಿ  ಅದುಮಿಡಲಾಗಿದೆ. ಇದರಿಂದ ಜೀವಂತಿಕೆ ಇಲ್ಲದ ನಂಬಿಕೆಗಳು ಧಾರ್ಮಿಕ ಅಪಭ್ರಂಶಗಳು ಸಂಪ್ರದಾಯಗಳು ಹುಟ್ಟಿಕೊಂಡಿವೆ ಎಂದ. ಆತ ಜಾಗತಿಕ ಧರ್ಮ ಸಂಬಂಧಿತ ಆಖ್ಯಾನಗಳನ್ನು ಪುರಾಣ ಗ್ರಂಥಗಳನ್ನು ಕಟುವಾಗಿ ವಿಮರ್ಶಿಸಿದ. ಉಪನಿಷತ್ತು ಗುರುಗ್ರಂಥ ಸಾಹೇಬ್ ಟಿಬೆಟಿಯನ್ ಪುರಾಣ ಗ್ರಂಥ ಮುಂತಾದವುಗಳನ್ನು ಆಳವಾಗಿ ಅಧ್ಯಯನ ಮಾಡಿದ್ದ ಭಕ್ತಿ ಕವಿಗಳನ್ನು ತತ್ವಜ್ಞಾನಿ ಗಳನ್ನು ಕಟುವಾಗಿ ಟೀಕಿಸಿದ್ದ. ಇಷ್ಟಾದರೂ ಆತನ ಹೊಸ ಹೊಸ ಆಲೋಚನೆಗಳಿಗೆ ಬೋಧನೆಗಳಿಗೆ 60 ಮಿಲಿಯನ್ ಗಿಂತ ಹೆಚ್ಚು ಜನರು ಶರಣಾದರು. ಜಗತ್ತಿನ ನೂರಾರು ದೇಶಗಳಿಗೆ ಈತ ಸುತ್ತಿದ ಪ್ರವಚನ ನೀಡಿದ. ಅಕಾಡೆಮಿಕ್ ಮಿತಿಗಳನ್ನು ಮೀರಿದ ಆತನ ಪ್ರವಚನಗಳು ಹಾಸ್ಯಮಯವಾಗಿ ಇರುತ್ತಿದ್ದವು. ಹೊಸ ಪಥಕ್ಕೆ ಪ್ರದೀಪಿಕೆ ಯಾಗಿದ್ದವು.  ಜೀವನವನ್ನು ಒಂದು ಆಟವಾಗಿ ನೋಡುವ ಆತನ ವರಸೆ ಜನರನ್ನು ಪರಿವರ್ತನೆಗೆ ತರಲು ಆತ್ಮದಾಚೆಗಿದನ್ನು ಯೋಚಿಸಲು ಹಚ್ಚುವ ತಂತ್ರಗಳಾಗಿದ್ದವು. ಬುದ್ಧನ ಕ್ಷಾಂತಿಯನ್ನು ಮಧುರ ಧೈರ್ಯ ಎಂದ. ಇದರಲ್ಲೊಂದು ಸೊಬಗಿದೆ. ನಿಮ್ಮ ತಲೆಯ ಮೇಲೆ ನೀರು ತೊಟ್ಟಿಕ್ಕುತ್ತಿರುವಾಗಲೂ ನೀವು ನೆಟ್ಟಗೆ ಕಲ್ಲಿನಂತೆ ಕುಳಿತು ಬಿಟ್ಟಿರಿ ಎಂದರೆ ಅಲ್ಲಿ ಬುದ್ಧ ಕ್ಷಾಂತಿ  ಇದೆ. ವಿರಾಗವನ್ನು ಅಳವಡಿಸಿಕೊಂಡಾಗ ಮಾತ್ರ ಭ್ರಾಂತಿಗಳ ಬಗ್ಗೆ ವಿಜಯಶೀಲರಾಗಿ ಸತ್ಯದ ದರ್ಶನವಾಗಲು ಸಾಧ್ಯ. ಕೆಲವು ತರಂಗಗಳನ್ನು ಉಪೇಕ್ಷೆ ಮಾಡಿದಾಗ ಅದುಮಿಟ್ಟಾಗ ಅದು ವಿಕೃತ ರೂಪವನ್ನು ತಾಳುತ್ತದೆ. ಅದರ ಬದಲು ಅದರ ದಿಶೆಯನ್ನು ಬದಲಿಸಿದಾಗ ಆರೋಗ್ಯಕರವಾದ ಬೆಳವಣಿಗೆ ಉಂಟಾಗುತ್ತದೆ. ಆತ ಬೋಧಿಸತ್ವ ಪದಕ್ಕೆ ಸುಂದರವಾದ ಅರ್ಥವನ್ನು ಕೊಟ್ಟ. ಯಾರು ಪ್ರಜ್ಞೆಯ ದ್ವಾರದಲ್ಲಿ ನಿಂತು ಜಗತ್ತಿನ ಕಡೆಗೆ ಮುಖ ಮಾಡುವರೋ ಅವರು ಎಂದು. ಆತ ಪ್ರಸಿದ್ಧ ಮನೋವಿಜ್ಞಾನಿ ಸಿಗ್ಮಂಡ್ ಫ್ರಾಯ್ಡ್ ಗ್ರಂಥಗಳನ್ನು ಓದಿ ಮನನ ಮಾಡಿಕೊಂಡು ತನ್ನ ಧ್ಯಾನದ ನಂತರದ ಮನೋ ಚಿಕಿತ್ಸೆಗಳಲ್ಲಿ ಬಳಸುತ್ತಿದ್ದ. ನಮ್ಮ ಆಕಾಂಕ್ಷೆಗಳೆಲ್ಲಾ ಕ್ಷಣಭಂಗುರತೆಗಳೇ. ಅವುಗಳಿಗೆ ಯಾವ ವಾಸ್ತವಿಕ ಮೌಲ್ಯ ಸಹ ಇಲ್ಲ. ಅದರ ಮೌಲ್ಯ ಕಾಲ್ಪನಿಕವಾದುದು. ಅದರ ಮೌಲ್ಯ ನಿಂತಿರುವುದು ಒಪ್ಪಂದದ ಮೇಲೆ. ಮಗು ಕೂಗಬೇಕು. ಕಿರುಚಾಡ ಬೇಕು. ಅದು ಆರೋಗ್ಯದಾಯಕ. ಮಕ್ಕಳು ಬಾಲ್ಯದಲ್ಲೇ ಕಿರುಚಾಡದೆ,  ಗಲಾಟೆ ಮಾಡದೆ, ತಂಟೆ ಮಾಡದೆ ಇದ್ದರೆ,  ಬೇಸರವನ್ನು,  ಕೋಪವನ್ನು ವ್ಯಕ್ತಪಡಿಸದೆ ಇದ್ದರೆ ತದನಂತರ ಅವರು ಮಾನಸಿಕವಾಗಿ ರೋಗಿಗಳಾಗಿ ಇರುತ್ತಾರೆ. ಇದು ದುಃಖದ ವಿಸರ್ಜನೆಯ ಉಪಾಯ.  ಮಕ್ಕಳನ್ನು ಶಾಂತತೆಯಿಂದ ಪ್ರೇಮದಿಂದ  ಧ್ಯಾನಪೂರ್ವಕವಾಗಿ ನೋಡುತ್ತಿರಬೇಕು. ಆಗ ಮುಂದಿನ ಪೀಳಿಗೆಯ ಜಗತ್ತಿನಲ್ಲಿ ವಿಕ್ಷಿಪ್ತತೆ ಆತ್ಯಂತಿಕವಾಗಿ ಕಡಿಮೆಯಾಗುವುದು. ಅದಕ್ಕಾಗಿಯೇ ಆತ ತನ್ನ ಚಿಕಿತ್ಸೆಗಳಲ್ಲಿ ಅಳುವುದಕ್ಕೆ,  ನಗುವುದಕ್ಕೆ, ಕೂಗಾಡುವುದಕ್ಕೆ,  ಕುಣಿಯುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದ.
               ಪ್ರತಿಯೊಬ್ಬ ಮಾನವ ಬುದ್ಧ. ಎಲ್ಲರಿಗೂ ಭಗವತ್ ತತ್ವ ಹೊಂದುವ ಸಾಮರ್ಥ್ಯ ಇದೆ. ಪರಿಪೂರ್ಣತೆಯ ಆದರ್ಶವನ್ನೇ ತಿರಸ್ಕರಿಸಿದ. ಅದು ಅಮಾನವೀಯ ಎಂದ. ಆದರ್ಶಗಳು ಮನುಷ್ಯನನ್ನು ವಿಕಲಾಂಗನನ್ನಾಗಿ ಮಾಡುತ್ತವೆ. ಇದರಿಂದ ಜನರು ದಾಸ್ಯ, ಬಂಧನಕ್ಕೆ ಒಳಗಾಗುತ್ತಾರೆ. ಮಾನವನಿಗೆ ಯಾವುದೇ ಆದರ್ಶಗಳಿಲ್ಲ. ಕೇವಲ ಆದರ್ಶ ನಾಶಮಾಡುತ್ತದೆ. ಆದರ್ಶವಾದಿಗಳು ಮಾನವೀಯತೆಗೆ ವಿಷ ಹಾಕುತ್ತಾರೆ. ಸರಳವಾದ ಸಾಧಾರಣ ಜೀವನವನ್ನು ಬದುಕಿ. ಹಸಿವಾದಾಗಲೆಲ್ಲಾ ತಿನ್ನಿ. ನಿದ್ದೆ ಬಂದಾಗ ಮಲಗಿ. ಪ್ರೀತಿಸ ಬೇಕೆಂದರೆ ಪ್ರೀತಿಸಿ. ಪರಿಶುದ್ಧತೆ ಪರಿಪೂರ್ಣತೆಯ ಭ್ರಮೆ ಬೇಡ. ಅದು ಸಾಧ್ಯವೂ ಇಲ್ಲ.
        ನೂತನ ಮಾನವ ಅತ್ಯಂತ ಸಾಮಾನ್ಯ ವ್ಯಕ್ತಿ. ಅವನು ವಿಶೇಷನಲ್ಲ ಪರಮಾತ್ಮನಲ್ಲ. ಅವನು ಮಾನವನಾಗಿರುವುದು ಸಾಕು ಎಂದು ಗುರುತಿಸುವವ. ಹಾಗೆಯೇ ಆನಂದವನ್ನು ಹೊಂದುತ್ತಾನೆ. ಜಾಗೃತನಾಗಿರುತ್ತಾನೆ. ಆತನಿಗೆ ಸೂಪರ್ ಮ್ಯಾನ್ ಆಗುವ ಅಗತ್ಯವಿಲ್ಲ. ದೇವ ದೇವತೆಯಾಗುವುದು ಬೇಕಿಲ್ಲ. ಮಹತ್ವಾಕಾಂಕ್ಷೆ ಇಲ್ಲದೆ ಸಾಮಾನ್ಯ ಮನುಷ್ಯನಾಗಿರುವುದೇ ಪೂರ್ಣತೆ. ನೂತನ ಮಾನವ ಗೌತಮ ಬುದ್ಧನ ಆಧ್ಯಾತ್ಮಿಕತೆ ಹಾಗೂ ನಿಕೊಸನ ಝೋರ್ಬ ವಿಜ್ಞಾನಿಯಂತೆ ವಸ್ತುನಿಷ್ಠ ನಿಖರ. ಕವಿಯಂತೆ ಹೃದಯವಂತ ಸೂಕ್ಷ್ಮಸಂವೇದಿ. ಜೀವನಪ್ರೀತಿಯ ಸಮಾಗಮ ಸಂಯುಕ್ತತ್ವ  ಹೊಸಮನುಷ್ಯ ಕುಟುಂಬ,  ಮದುವೆ, ರಾಜಕಾರಣ,  ಧರ್ಮದಲ್ಲಿ ನಿರ್ಬಂಧಿತನಲ್ಲ.
            ಆತನ 10 ಬೋಧನೆಗಳು :
           ನಿನ್ನೊಳಗಿನ ಬಾರದೆ ಯಾರ 
           ಬೋಧನೆಯನ್ನು ಪಾಲಿಸಬೇಕು.
           ಜೀವನಕ್ಕಿಂತ ದೊಡ್ಡ ದೇವರಿಲ್ಲ.
           ಸತ್ಯ ನಿನ್ನೊಳಗೆ ಇದೆ. ಹೊರಗೆ ಅರಸ ಬೇಡ.
           ಪ್ರೀತಿಯೇ ಪ್ರಾರ್ಥನೆ.
           ಏನು ಆಗದಿರುವುದೇ ಸತ್ಯಕ್ಕೆ ದಾರಿ.
          ಜೀವನ ಈಗ ಮತ್ತು ಇಲ್ಲಿದೆ.
            ಜಾಗೃತವಾಗಿ ಬದುಕಿ.
           ಈಜಬೇಡಿ ತೇಲುತ್ತಿರಿ.
           ಪ್ರತಿಕ್ಷಣ ಸಾಯಿರಿ. 
          ಹೊಸತಾಗಿರಬಹುದು ಪ್ರತಿಕ್ಷಣ.
          ಅರಸುತ್ತ ಇರಬೇಡಿ ನಿಂತು ನೋಡಿ
ಗುರು ನಿಮಗೆ ಪ್ರಕಾಶವನ್ನು ಕೊಡಲಾಗುವುದಿಲ್ಲ ಆದರೆ ನಿಮ್ಮ ಅಂಧಕಾರವನ್ನು ಕಸಿದುಕೊಳ್ಳಲು ಅವರಿಂದ ಆಗುವುದು.   ನಿಮಗೆ ಸ್ವಾಸ್ಥ್ಯವನ್ನು ಕೊಡಲಾಗುವುದಿಲ್ಲ ಆದರೆ ನಿಮ್ಮ ರೋಗಗಳನ್ನು ಕಸಿದುಕೊಳ್ಳಲಾಗುವುದು. ಜಗತ್ತಿನ ಬೇರಾವ ಭಾಷೆಯಲ್ಲೂ _ಗುರು_ ಎಂಬ ಪದವೇ ಇಲ್ಲ. ಟೀಚರ್, ಮಾಸ್ಟರ್,  ಶಿಕ್ಷಕ ಗುರುವಿನ ಮಹಿಮೆ ಹೊಂದಿರುವುದಿಲ್ಲ. ಗುರುವಿನ ಮೂಲಕ ಗೊತ್ತಾಗುವುದು ನಾವೇನೋ ಆದೆವು. ನಾವೇನು ಕಲಿಯಲಿಲ್ಲ.. ನಾವು ಬದಲಾದೆವು. ನಾವೇ ಬೆಳೆದೆವು. ಅಸ್ತಿತ್ವ ರೂಪಾಂತರವಾಯಿತು. ಹಾಗೆಯೇ ಟಿಬೆಟಿಯನ್ ಭಾಷೆಯಲ್ಲಿ ಲಾನು ಪದದ  ಅರ್ಥ ಶಿಷ್ಯ ವ್ಯಾಪ್ತಿಯನ್ನು  ಮೀರಿದ್ದು.
           ಲಾನುವಿನಲ್ಲೂ ಅಸ್ತಿತ್ವ ರೂಪಾಂತರಗೊಳಿಸುವ ವಿಶಿಷ್ಟತೆ ಇದೆ. ಆತ  ಜ್ಞಾನ ಮಾತ್ರಕ್ಕಾಗಿ ಬರುವುದಿಲ್ಲ. ತನ್ನನ್ನು ಬದಲಾಯಿಸಿಕೊಳ್ಳಲು ಬರುವನು. ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವವನು  ಎಂದರ್ಥ. ಶೋಧಕರು ನೀರಿನಾಳಕ್ಕೆ ಇಳಿಯುತ್ತಾರೆ. ದಡದ ಮೇಲೆ ಸುರಕ್ಷೆ ಇದೆ. ನದಿಯಲ್ಲಿ ಅಪಾಯವಿದೆ. ಈ ದಡದಿಂದ ಆ ದಡದಲ್ಲಿರುವುದು ಕಾಣುವುದಿಲ್ಲ. ಈ  ದಡ ಪೂರ್ತಿಯಾಗಿ ಕಾಣದಾದಾಗ ಮಾತ್ರ ಆ ದಡ ಕಾಣಲು ಶುರು ಆಗುವುದು. ಅಪರಿಚಿತ ದಡದೆಡೆಗೆ ಯಾತ್ರಿಸುವ ನಿರ್ಣಯವನ್ನು ತೆಗೆದುಕೊಳ್ಳುವ ವ್ಯಕ್ತಿ ಲಾನು. ಅಂತವನೇ ಶಿಷ್ಯ ಭಾರತದಲ್ಲಿ.
ಇಂಥವರು ನಿಮ್ಮೊಳಗಿಲ್ಲವೇ .........?
.....................................ಸುಮಾಡ್ಕರ್
ಸ್ವರೂಪ ಅಧ್ಯಯನ ಸಂಸ್ಥೆ 
ಮಂಗಳೂರು
Mob: +91 99016 38372
*****************************************

Ads on article

Advertise in articles 1

advertising articles 2

Advertise under the article