-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ-5

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ-5

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 5


        ಜಗಲಿಯ ಬಳಗದ ಮಕ್ಕಳೆಲ್ಲರಿಗೂ ನನ್ನ ಪ್ರೀತಿಯ ವಂದನೆಗಳು....
        ಅಬ್ಬಾ...! ಎಷ್ಟು ಮುಗ್ಧ ನಿಮ್ಮ ಮಾತು...!ನೀವು ಬರೆದ ಪತ್ರಗಳು ತಲುಪಿದವು... ಓದುತ್ತಾ ಹೋದಂತೆ ನಿಮ್ಮ ಮನಸ್ಸೆಷ್ಟು ಚಂದ ಅನ್ನಿಸಿತು....! ಪತ್ರ ಓದುತ್ತಿರುವ ಎಲ್ಲರ ಆಂತರ್ಯದೊಳಗಿನ ಮಗುಭಾವ ಬೆಚ್ಚಗಿರಲಿ.....! ಕಲಿಯುವ ಕುತೂಹಲ ನಿರಂತರ ಓದಿಗೆ ಮುನ್ನುಡಿಯಾಗಲಿ....! ಪುಟ್ಟ ಹೃದಯದ ಪ್ರಬುದ್ಧತೆ ನಿತ್ಯ ಬೆರಗಾಗಲಿ...!
       ಇವರೊಬ್ಬ ಹಾಸ್ಯ ಕಲಾವಿದ.....! ವಿಶಿಷ್ಟವಾದ ಅಭಿನಯದ ಮೂಲಕ ಜಗತ್ತಿನ ಹೃದಯ ಗೆದ್ದ ದೈತ್ಯ ಪ್ರತಿಭೆ ಇಂಗ್ಲೆಂಡ್ ನ‌ ರೋವನ್‌ ಆ್ಯಟ್ಕಿನ್ಸನ್...!
        ಯಾರಪ್ಪಾ ಇವರು? ನಿಮ್ಗೆ ಮಿಸ್ಟರ್ ಬೀನ್ ಗೊತ್ತಾ? ಹೌದು...ಅವರೇ ಇವರು....! ಅತ್ಯಂತ ಕೆಟ್ಟ ದಿನಗಳನ್ನು ಯಶಸ್ವಿಯಾಗಿ ದಾಟಿದ ಈ ಛಲಗಾರನಿಗೆ ಬಾಲ್ಯದಿಂದಲೇ ಮಾತಿನ ನ್ಯೂನತೆ ಇತ್ತು ಎಂದರೆ ಆಶ್ಚರ್ಯವಾಗುತ್ತದೆ ಅಲ್ವೇ? ಇವರಿಗೆ ಸಣ್ಣಂದಿನಿಂದಲೇ ನಮ್ಮ ನಿಮ್ಮೆಲ್ಲರಂತೆ ನಿರರ್ಗಳವಾಗಿ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ...! ಮಾತನಾಡಲು ಪ್ರಾರಂಭಿಸಿದರೆ.... ಪದಗಳನ್ನು ಉಚ್ಚರಿಸಲು ತೊದಲುತ್ತಿದ್ದರು....! ಜೊತೆಯಲ್ಲಿದ್ದವರೆಲ್ಲಾ ನಗುತ್ತಿದ್ದರು...! ಆಗೆಲ್ಲಾ ರೋವನ್, ಮೂಕಾಭಿನಯದ ಮೂಲಕ‌ ತಮ್ಮ‌ ಮನದ ಮಾತುಗಳನ್ನು ಸ್ವಲ್ಪ ಹಾಸ್ಯವಾಗಿಯೇ ಉಳಿದವರಿಗೆ ತಲುಪಿಸುತ್ತಿದ್ದರು...! ಎಲ್ಲರ ನಗು ಇವರಿಗೆ ಇನ್ನಷ್ಟು ಸ್ಫೂರ್ತಿಯಾಯಿತು....!ಹೌದು...! ಎಲ್ಲ ಬಗೆಯ ನಗುವಲ್ಲಿಯೂ‌ ರೋವನ್ ಆಯ್ದುಕೊಂಡದ್ದು ತನ್ನ ಪ್ರತಿಭೆಯನ್ನು‌ ಆನಂದಿಸಿದವರ ನಗುವನ್ನು ಮಾತ್ರ....!
        ಇದೊಂದು ಸರಿಪಡಿಸಲಾಗದ ಬಹಳ ವಿರಳವಾದ ಸಮಸ್ಯೆಯೆಂದು ವೈದ್ಯರು ಹೇಳಿದ ಮಾತನ್ನು , ಅಪ್ಪ- ಅಮ್ಮ ಮಗನಿಗೆ ತಿಳಿಸಿರಲಿಲ್ಲ....! ಅಭಿನಯ‌ ಅಭ್ಯಾಸವಾಗಿ‌ ಆಸಕ್ತಿಯನ್ನು ಹುಟ್ಟಿಸಿತು...! ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ‌ನಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿರುವ ಸಂದರ್ಭದಲ್ಲಿ ಇವರ ನಟನೆಗೆ ಅವಕಾಶ ಸಿಕ್ಕರೂ , ಸರಿಯಾಗಿ ಮಾತನಾಡಲಾಗುತ್ತಿಲ್ಲ ಎನ್ನುವ ಕಾರಣ ನೀಡಿ ಇವರನ್ನು ದೂರವಿಟ್ಟರು...! ಇವರ ಅಭಿನಯ ನೋಡಿ‌, ಅನೇಕ ಟಿ.ವಿ ಚಾನೆಲ್ ಗಳು ಕರೆದರೂ , ಮೌಖಿಕ ಸಂದರ್ಶನದಲ್ಲಿ ಸೋಲುತ್ತಿದ್ದರು...! ಹೀಗೆ ಎಲ್ಲ ಕಡೆಯಿಂದಲೂ ತಿರಸ್ಕರಿಸಲ್ಪಡುತ್ತಿದ್ದ ರೋವನ್ ಗೆ,The cheating ಎನ್ನುವ ಟಿ.ವಿ.ಶೋನಲ್ಲಿ Mr.Bean ಪಾತ್ರ ಸೃಷ್ಟಿಯಾಯಿತು...! ಕ್ರಮೇಣ ಅದೇ ಹೆಸರಿನಿಂದ ನಿರೀಕ್ಷೆಗೂ ಮೀರಿ ಪ್ರಸಿದ್ಧಿ ಪಡೆದು , ಆ ಕಾಲದ ವೀಕ್ಷಕರು ಹಾಗೂ ಇಂದಿನ ನಮ್ಮೆಲ್ಲರ ಮನದಲ್ಲಿ ಹಸಿರಾಗಿರುವ ಯಶಸ್ಸಿನ‌ ಪಯಣವೊಂದು ಪಾಠವಾಗುವ ಇತಿಹಾಸ...!
      ತನ್ನ ನೋವನ್ನು ಮರೆತು ಎಲ್ಲರನ್ನು ನಗಿಸುತ್ತಾ ಖುಷಿ ಪಡಿಸುತ್ತಿದ್ದ ಅದ್ಭುತ ಚಾರ್ಲಿ ಚಾಪ್ಲಿನ್ ಕೂಡಾ ಯಾಕೋ ತುಂಬಾನೇ ನೆನಪಾಗುತ್ತಿದ್ದಾರೆ..!
        ಎಲ್ಲ‌ ಅಡೆತಡೆಗಳನ್ನೂ ಮೀರಿ ಅದಮ್ಯ‌ ಆತ್ಮ ವಿಶ್ವಾಸದೊಂದಿಗೆ ಬದುಕಿನ ಖುಷಿಯನ್ನು ಗೆದ್ದ ಮೋಡಿಗಾರ, Rowan Atkinson ಹುಟ್ಟಿದ್ದು ಇಂಗ್ಲೆಂಡ್ ನಲ್ಲಿ 1955 ರ ಜನವರಿ 6 ರಂದು.. ಅದೆಷ್ಟು ಸ್ಪಷ್ಟವಾಗುತ್ತಾ ಹೋಯಿತು ಅವರ ಮಾತು!!!
         ಇದೆಲ್ಲಾ ಸಾಧ್ಯವಾದದ್ದು ಹೇಗೆ ?ತನ್ನ ಸಮಸ್ಯೆಯ ಬಗ್ಗೆ ಚಿಂತಿಸುತ್ತಾ , ಬದುಕಿನಿಂದ ಹಿಂದೆ ಸರಿಯುತ್ತಿದ್ದರೆ ?.... ಆಲೋಚನೆಗಳು ಶಕ್ತಿ ತುಂಬಬೇಕು....! ಜೀವನ ಪ್ರೀತಿಯೊಂದಿದ್ದರೆ ಯಾವುದೂ ಸಮಸ್ಯೆಯಾಗುವುದಿಲ್ಲ......! ಗೆಲ್ಲುವ ಛಲವೊಂದೇ ಅವರನ್ನು ಯಶಸ್ಸಿನ ತುದಿಗೇರಿಸಿದ್ದು...! ಯಾರ ಸುಖದೊಂದಿಗೂ, ಸೌಲಭ್ಯಗಳೊಂದಿಗೂ‌ ತನ್ನನ್ನು ಹೋಲಿಸಿಕೊಳ್ಳದೆ ತನ್ನೊಳಗಿನ ಸಾಧ್ಯತೆಯನ್ನು‌ ಅನಾವರಣಗೊಳಿಸಿ ಸಾಧಕನಾದ್ದು Mr.Bean...!
       ಎಷ್ಟುದ್ದದ ಕಥೆ ಅಲ್ವಾ? ....!!! ಪ್ರತಿಯೊಬ್ಬ‌ ಸಾಧಕರ ಹಿಂದೆ ,ಕಷ್ಟದಿಂದ ಕಟ್ಟಿಕೊಂಡ ಬದುಕಿನ‌ ನೆನಪುಗಳ‌ ಸಾಲು ಇದೆ...! ನಿಮ್ಮೊಂದಿಗೆ ಹಂಚಿಕೊಂಡಷ್ಟೂ ಖುಷಿ ನನಗೆ...! ಓದಿ ಪ್ರತಿಕ್ರಿಯಿಸುವ ನಿಮ್ಮ‌ ಪ್ರೀತಿ, ಆಸಕ್ತಿ ...ಇರಲಿ ಹೀಗೆಯೇ...!
      ಮತ್ತೆ ನನ್ನ ನಿಮ್ಮ ಭೇಟಿ ...ಮುಂದಿನ ಪತ್ರದೊಂದಿಗೆ...!        
        ಅಲ್ಲಿಯವರೆಗೆ ಅಕ್ಕನ ನಮನಗಳು.
 ................................... ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ
********************************************


Ads on article

Advertise in articles 1

advertising articles 2

Advertise under the article