-->
ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 4

ಜಗಲಿಯ ಮಕ್ಕಳಿಗೆ ಅಕ್ಕನ ಪತ್ರ - 4

ಜಗಲಿಯ ಮಕ್ಕಳಿಗೆ 
ಅಕ್ಕನ ಪತ್ರ - 4


ನಮಸ್ತೆ ಮಕ್ಕಳೇ.....
       ಈ ದಿನ.....!
 ಸ್ವಾತಂತ್ರ್ಯ ಸಂಭ್ರಮಕ್ಕೆ 75 ರ ಹರೆಯ...
ಸುತ್ತಲೂ ಸುಂದರತೆಯನ್ನು ತುಂಬಿಕೊಂಡು ಬೆಳಗುತ್ತಿರುವ ಭಾರತ ಮಾತೆಯ ಮಕ್ಕಳಾದ ನಾವೆಲ್ಲರೂ ಅಭಿಮಾನ ಗೌರವಗಳಿಂದ ಸ್ಮರಣೀಯವಾಗಿಸುವ ದಿನ....!
ಶುಭಾಶಯಗಳು ಎಲ್ಲರಿಗೂ.....
       ದೇಶ ನನ್ನದೆನ್ನುವ ಪ್ರೀತಿಯನ್ನು ಜಾಗೃತಗೊಳಿಸೋಣ...!
          ಮೊನ್ನೆ ಮೊನ್ನೆಯಷ್ಟೇ ನಮ್ಮ ದೇಶದ ಹೆಮ್ಮೆಯ ಕ್ರೀಡಾಳುಗಳ ಸಾಧನೆಗೆ ಬೆರಗಾಗಿದ್ದೇವೆ... ಬಹಳ ಅಭಿಮಾನದಿಂದ ಕೊಂಡಾಡಿದ್ದೇವೆ... ಇನ್ನೂ ಕೆಲವರಿಗೆ ಜಪಾನಿನ ಟೋಕಿಯೋ ದಲ್ಲಿ ಇಂತಹದ್ದೊಂದು ಕ್ರೀಡಾ ಹಬ್ಬ ನಡೆದಿರುವುದು ಗೊತ್ತಿಲ್ಲದೇ ಇರಬಹುದು...! ಯಾಕೆ ಹೀಗೆ... ? ಹೌದು... ಓದುವುದನ್ನು ಮರೆಯುತ್ತಿದ್ದೇವೆ... ದಿನಪತ್ರಿಕೆ, ವಾರ್ತೆಗಳನ್ನು ನೋಡುವುದು ಅಥವಾ ಹಿರಿಯರ ಮಾತುಗಳನ್ನು ಆಲಿಸಿಕೊಳ್ಳುವ ತಾಳ್ಮೆ.... ಇದ್ಯಾವುದರ ಮೂಲಕವಾದರೂ ನಮ್ಮ ತಿಳಿವಳಿಕೆಯನ್ನು ವಿಸ್ತರಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ...! ಅಷ್ಟಕ್ಕೂ ಇಂತಹ ಮಾಹಿತಿಗಳಿಂದ ನಮಗೇನು ಪ್ರಯೋಜನ... ? ಎನ್ನುವ ಭಾವನೆಗಳೂ ಕೆಲವರಲ್ಲಿರಬಹುದು....
    ನನ್ನ ಪ್ರೀತಿಯ ತಮ್ಮ, ತಂಗಿಯಂದಿರೇ...... ನಾವು ಎಲ್ಲಾ ಆಯಾಮಗಳಲ್ಲಿಯೂ ಪಕ್ವತೆಯನ್ನು ಸಾಧಿಸಬೇಕಾದರೆ ಕಲಿಕೆಗೆ ತೆರೆದುಕೊಳ್ಳಬೇಕು... ಪ್ರತಿಯೊಂದು ಘಟನೆಗಳೂ , ವ್ಯಕ್ತಿತ್ವಗಳೂ ಪಾಠವಾಗುವುದು ನಾವು ಅದನ್ನು ಧನಾತ್ಮಕವಾಗಿ ಯೋಚಿಸಿದಾಗ...!
          ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಒಲಿಂಪಿಕ್ ಪಂದ್ಯಾಟ ಈ ಬಾರಿ ಹಲವು ಹೊಸತನಗಳಿಗೆ ಸಾಕ್ಷಿಯಾಯಿತು...!! ಇಲ್ಲಿ ಉಂಟಾದ ಸಂದರ್ಭವೊಂದನ್ನು ಇಲ್ಲಿ ಪ್ರಸ್ತಾಪಿಸ ಬಯಸುತ್ತೇನೆ... ಇಟಲಿಯ ಜಿಯಾನ್‌ ಮಾರ್ಕೋ ತಂಬರಿ ಮತ್ತು ಕತಾರ್ ದೇಶದ‌ ಮುತಾಜ್ ಈಸಾ ಬಾರ್ಶಿಮ್ ಇವರಿಬ್ಬರೂ ‌ಪುರುಷರ ಹೈ ಜಂಪ್ ಸ್ಪರ್ಧೆಯಲ್ಲಿ ಸಮಾನ ಎತ್ತರವನ್ನು ಹಾರಿದರು.. ಮೂರು ಬಾರಿ ಅವಕಾಶ ಕೊಟ್ಟರೂ ಮೊದಲು ಜಿಗಿದ ‌2.37 ಮೀಟರ್ ಎತ್ತರಕ್ಕಿಂತ ಹೆಚ್ಚು ಸಾಧಿಸಲು ಸಾಧ್ಯವಾಗಲಿಲ್ಲ.....! ಕೊನೆಗೊಂದು ಅವಕಾಶ ನೀಡಿದಾಗ ಇಟಲಿಯ ಸ್ಪರ್ಧಿ ಕಾಲು ನೋವೆಂದು ಹಿಂದೆ ಸರಿದರು.. ಈಗ ಗೆಲುವು ಯಾರದು?
       ಹೌದು ... ಕತಾರಿನ ಬಾರ್ಶಿಮ್ ಇವರೇ ಚಿನ್ನದ ಪದಕಕ್ಕೆ ಕೊರಳೊಡ್ಡಬಹುದಾದವರು....!
ಆದರೆ! ಇಲ್ಲಿದೆ ನೋಡಿ ವಿಶೇಷ...! ಬಾರ್ಶಿಮ್ ಅವರು ಅಲ್ಲಿದ್ದ ಒಲಿಂಪಿಕ್ ಅಧಿಕಾರಿಗಳತ್ತ ತೆರಳಿ, "ನಾನು ಕೂಡಾ ಕೊನೆಯ ಅವಕಾಶವನ್ನು ಬಳಸಿಕೊಳ್ಳುವುದಿಲ್ಲ.... ನಮಗಿಬ್ಬರಿಗೂ ಬಂಗಾರದ ಪದಕವನ್ನು ಹಂಚುವ ಅವಕಾಶ ಇದೆಯೇ... ?" ಎಂದರು. ಆಗ ಅಧಕಾರಿಗಳು ಪರಸ್ಪರ ಚರ್ಚಿಸಿ "ಹೌದು.. ನೀವಿಬ್ಬರೂ ವಿಜೇತರು" ಎಂದರು. ಬಾರ್ಶಿಮ್ ತಡಮಾಡದೆ ಸ್ಪರ್ಧೆಯಿಂದ ಹಿಂದೆ ಸರಿದರು...!
     ಇಟಲಿಯ ಪ್ರತಿಸ್ಪರ್ಧಿ ಜಿಯಾನ್ ಮಾರ್ಕೋ ತಂಬರಿ ಅತ್ಯಂತ ಸಂತಸದಿಂದ ಬಾರ್ಶಿಮ್ ನನ್ನು ಅಪ್ಪಿಕೊಂಡ ದೃಶ್ಯ ಎಲ್ಲ ಕಡೆ ಸುದ್ದಿಯಾಗಿತ್ತು...!
            ಸಾಧಕರ ಸರಳತೆಗಳು ನಮಗೆ ನಿತ್ಯ ಕಲಿಕೆಯಾಗಬೇಕು..!. ಕೇಳಿ ಕಲಿಯುವುದು, ನೋಡಿ ಕಲಿಯುವುದು, ತಿಳಿದು ಕಲಿಯುವುದು, ಮಾಡಿ ಕಲಿಯುವುದು..... ಎಲ್ಲದಕ್ಕೂ ಮುಕ್ತವಾಗಿರಬೇಕು ನಾವು...! ಬಹಳಷ್ಟು ಸಂದರ್ಭಗಳಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೂ ದೊಡ್ಡವರಂತೆ ನಮ್ಮ ವರ್ತನೆಗಳಿರುತ್ತವೆ...! ಸಾಮಾನ್ಯವಾಗಿ ಎಲ್ಲರಲ್ಲಿಯೂ ಒಳ್ಳೆಯ ಹಾಗೂ ಕೆಟ್ಟ ಗುಣಗಳಿರುತ್ತವೆ...! ಆಯ್ಕೆ ಮಾಡುವಾಗ ಮಾತ್ರ ಆಲೋಚನೆ ಮಾಡಬೇಕು... ಅಲ್ವಾ? ಯಾವ ವರ್ತನೆ ಸರಿ ? ಯಾವುದು ಸರಿಯಲ್ಲ ?ಎನ್ನುವ ತಿಳಿವಳಿಕೆಯನ್ನು ಬೆಳೆಸಿಕೊಳ್ಳೋಣ.... ಗುರುಗಳು, ಹಿರಿಯರನ್ನು ಕಂಡೊಡನೆ ಕೈ ಜೋಡಿಸಿ ನಮಸ್ಕರಿಸುವ ಸುಂದರ ಸಂಸ್ಕೃತಿ ನಮ್ಮದು... ನಾವು ಯಾವತ್ತು ಎಲ್ಲರಿಗೂ ಗೌರವ ಕೊಡುವುದನ್ನು ಮರೆಯಬಾರದು... ! ಹಣಕ್ಕಿಂತಲೂ ಗುಣದಲ್ಲಿ ಶ್ರೀಮಂತರಾಗೋಣ.......!
     ದೊಡ್ಡವರು ಕೂಡಾ ತಪ್ಪುಗಳನ್ನು ಮಾಡುತ್ತಾರೆ...! ಬೇಸರ ಆಗ್ತದೆ ಅಲ್ವಾ ....? ಆದರೆ ಮಕ್ಕಳು ಈ ವಿಚಾರದಲ್ಲಿ ಬಹಳ ಬೇಗ ತಿದ್ದಿಕೊಳ್ತಾರೆ...! ಇತರರ ತಪ್ಪುಗಳಿಂದ ನಾವು ಪಾಠ ಕಲಿಯೋಣ... ನಮ್ಮಲ್ಲಿ ಒಳ್ಳೆಯ ಬದಲಾವಣೆಯಾಗಲಿ...! ಎಲ್ಲರನ್ನೂ ಪ್ರೀತಿಯಿಂದ ಕಾಣುವ, ಜಗಳ, ಕೋಪ ಮರೆತ ಸಹಬಾಳ್ವೆ ನಮ್ಮದಾಗಲಿ...! ಯಾರೊಂದಿಗಾದರೂ ಕೋಪ‌ ಮಾಡಿ ಮಾತು ಬಿಟ್ಟಿದ್ದರೆ ಅವರ ತಪ್ಪಿಗೊಂದು ಕ್ಷಮೆ ನೀಡೋಣ... ನಾವು ತಪ್ಪಿದ್ದರೆ ತಿದ್ದಿಕೊಳ್ಳೋಣ...!ಹೀಗೆ ಮಾಡಿದಾಗ ನಮಗರಿವಿಲ್ಲದೆಯೇ ಎಲ್ಲರೂ ನಮ್ಮನ್ನು ಗೌರವಿಸುತ್ತಾರೆ...!
     ಸಣ್ಣ ಸಣ್ಣ ವಿಚಾರಕ್ಕೂ ಜಗಳ ಮಾಡಿಕೊಂಡು ಸ್ವಾರ್ಥ ಮೆರೆಸುವ ಈ ಕಾಲಕ್ಕೆ , ಮಾನವತೆಯ ಬೆಳಕು ಚೆಲ್ಲಿದ , ಹಂಚಿ ಬದುಕುವ ಮೂಲಕ ಕಲಿಸಿದ ಹೃದಯ ವೈಶಾಲ್ಯತೆಯ ಪಾಠ ನನಗಂತೂ ಬಹಳ ಇಷ್ಟ ಆಯಿತು...!
     ಮೊನ್ನೆಯ ಪತ್ರಕ್ಕೆ ನಿಮ್ಮ ಪ್ರತಿಕ್ರಿಯೆ ನಮ್ಮನ್ನು ತಲುಪಿತು....! ಜಗಲಿಯ ಎಲ್ಲರೂ ನಿಮ್ಮ ತೊಡಗಿಸಿಕೊಳ್ಳುವಿಕೆಯನ್ನು ಸಂಭ್ರಮಿಸಿದೆವು.....! ಬರೆಯುತ್ತಿರಿ ಇನ್ನೂ ಹೆಚ್ಚು ಹೆಚ್ಚು...ಕಾಯುತ್ತಿದ್ದೇವೆ ...! ಮುಂದಿನ ಪತ್ರದೊಂದಿಗೆ ಮತ್ತೆ ಭೇಟಿಯಾಗೋಣ.. 
        ಅಲ್ಲಿಯವರೆಗೆ ಅಕ್ಕನ ನಮನಗಳು.
 ........................................ ತೇಜಸ್ವಿ ಅಂಬೆಕಲ್ಲು
ಶಿಕ್ಷಕಿ
ದ.ಕ.ಜಿ.ಪಂ.ಹಿ.ಪ್ರಾ .ಶಾಲೆ,
ಗೋಳಿತ್ತಟ್ಟು, ಪುತ್ತೂರು ತಾಲ್ಲೂಕು
ದಕ್ಷಿಣ ಕನ್ನಡ ಜಿಲ್ಲೆ

****************************************


Ads on article

Advertise in articles 1

advertising articles 2

Advertise under the article